ಗಲ್ಫ್ ಪ್ರದೇಶದಲ್ಲಿ ಸಂಭವಿಸಿದ ಸ್ಫೋಟಗಳ ಹಿನ್ನೆಲೆಯಲ್ಲಿ ಪ್ರಾರ್ಥನೆಗೆ ಕರೆ ನೀಡಿದ ಪ್ರೇಷಿತ ಪ್ರತಿನಿಧಿ
ವ್ಯಾಟಿಕನ್ ವರದಿ
ಪ್ರಾದೇಶಿಕ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆ, ಬಹ್ರೇನ್, ಕುವೈತ್ ಮತ್ತು ಕತಾರ್‌ನ ಕೆಲವು ಭಾಗಗಳಲ್ಲಿ ಸ್ಫೋಟಗಳು ವರದಿಯಾಗಿರುವುದರಿಂದ, ಉತ್ತರ ಅರೇಬಿಯಾದ ಧರ್ಮಕ್ಷೇತ್ರದ ವ್ಯಾಪ್ತಿಯಲ್ಲಿನ ಎಲ್ಲಾ ಧರ್ಮಸಭಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ.
ದುಬೈ, ದೋಹಾ, ಬಹ್ರೇನ್, ಕುವೈತ್ ಮತ್ತು ಅಮೆರಿಕಾ ಸೇನಾ ನೆಲೆಗಳಿರುವ ಅಥವಾ ಅಮೆರಿಕಾಗೆ ಸಂಬಂಧಿಸಿದ ಪ್ರದೇಶಗಳಲ್ಲಿ ಇರಾನಿನ ದಾಳಿಗಳು ನಡೆದಿರುವುದಾಗಿ ವರದಿಯಾಗಿದೆ. ಅಮೆರಿಕಾ ಮತ್ತು ಇಸ್ರಾಯೇಲ್ ಇರಾನಿನಾದ್ಯಂತ ಸಂಯುಕ್ತ ದಾಳಿಗಳನ್ನು ನಡೆಸಿದ ನಂತರ ಈ ದಾಳಿಗಳು ಸಂಭವಿಸಿವೆ. ದಾಳಿಗಳಲ್ಲಿ ಇರಾನಿನ ಆಡಳಿತದ ಹಲವಾರು ಹಿರಿಯ ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಎಂದು ಇಸ್ರಾಯೇಲ್ ಹೇಳಿದೆ. ಇರಾನ್ ರಾಜ್ಯ ಮಾಧ್ಯಮ ವರದಿಗಳ ಪ್ರಕಾರ, ದೇಶದ ದಕ್ಷಿಣ ಭಾಗದ ಮಿನಾಬ್ ನಗರದಲ್ಲಿರುವ ಬಾಲಕಿಯರ ಶಾಲೆಯಲ್ಲಿ ಕನಿಷ್ಠ 53 ಮಂದಿ ಮೃತಪಟ್ಟಿದ್ದಾರೆ.
ಉತ್ತರ ಅರೇಬಿಯಾದ ಪ್ರೇಷಿತ ಪ್ರತಿನಿಧಿಯಾದ ಧರ್ಮಾಧ್ಯಕ್ಷ ಅಲ್ಡೋ ಬೆರಾರ್ಡಿ ಅವರು ವಿಶ್ವಾಸಿಗಳನ್ನು ಶಾಂತಿಗಾಗಿ ಪ್ರಾರ್ಥನೆಗೆ ಕರೆ ನೀಡಿದ್ದು, ಶಾಂತಿ ಮತ್ತು ವಿವೇಕದಿಂದ ವರ್ತಿಸಲು ಮನವಿ ಮಾಡಿದ್ದಾರೆ.
ವ್ಯಾಟಿಕನ್ ಫಿಡೆಸ್ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಧರ್ಮಾಧ್ಯಕ್ಷ ಬೆರಾರ್ಡಿ, “ಈ ಕ್ಷಣದಲ್ಲಿ ನಮಗೆ ಹೆಚ್ಚಿನ ಮಾಹಿತಿ ಇಲ್ಲ. ನಾವು ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದೇವೆ. ಈ ಸಂಜೆ ಸ್ಥಳೀಯ ಸಮಯ ಸಂಜೆ 7 ಗಂಟೆಗೆ ಶಾಂತಿಗಾಗಿ ಪವಿತ್ರ ಬಲಿಪೂಜೆ ಆಚರಿಸಲು ಧರ್ಮಕ್ಷೇತ್ರದ ಧರ್ಮಗುರುಗಳನ್ನು ನಾನು ಆಹ್ವಾನಿಸಿದ್ದೇನೆ,” ಎಂದು ತಿಳಿಸಿದ್ದಾರೆ.
ಉತ್ತರ ಅರೇಬಿಯಾದ ಧರ್ಮಕ್ಷೇತ್ರದಲ್ಲಿ ಬಹ್ರೇನ್, ಕುವೈತ್, ಕತಾರ್ ಮತ್ತು ಸೌದಿ ಅರೇಬಿಯಾ ದೇಶಗಳು ಒಳಗೊಂಡಿವೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಬಹ್ರೇನ್‌ನಲ್ಲಿ ದಾಖಲಾಗಿರುವ ಸ್ಫೋಟದ ನಿಖರ ಸ್ಥಳದ ಕುರಿತು ಸ್ಪಷ್ಟತೆ ಇಲ್ಲ. ಅಲ್ಲಿ ಅಮೆರಿಕಾ ನೌಕಾಪಡೆ ಕೇಂದ್ರದ ಆಜ್ಞಾಪಡೆ ಮತ್ತು ಅಮೆರಿಕದ ಐದನೇ ನೌಕಾಪಡೆಯ ಪ್ರಧಾನ ಕಚೇರಿ ಸ್ಥಾಪಿತವಾಗಿದೆ. ಇದೇ ವೇಳೆ, ಅಮೆರಿಕಾ ಮತ್ತು ಇಸ್ರಾಯೇಲ್ ಇತ್ತೀಚೆಗೆ ನಡೆಸಿದ ಸಂಯುಕ್ತ ಸೈನಿಕ ದಾಳಿಗೆ ಪ್ರತಿಯಾಗಿ, ಇರಾನಿನ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಕುವೈತ್‌ನಲ್ಲಿರುವ ಅಮೆರಿಕಾ ಸೇನಾ ನೆಲೆಯನ್ನು ಗುರಿಯಾಗಿಸಿಕೊಂಡಿವೆ ಎಂಬ ವರದಿಗಳೂ ಬಂದಿವೆ.
ವಿಶ್ವಾಸಿಗಳಿಗೆ ಉದ್ದೇಶಿಸಿ ಬರೆದ ಪತ್ರದಲ್ಲಿ ಧರ್ಮಾಧ್ಯಕ್ಷ ಬೆರಾರ್ಡಿ, ಪ್ರಾರ್ಥನೆಗೆ ಮೊರೆ ಹೋಗುತ್ತಾ ಸಮುದಾಯಗಳು ಶಾಂತವಾಗಿಯೂ, ಸುರಕ್ಷತಾ ಕ್ರಮಗಳಿಗೆ ಎಚ್ಚರಿಕೆಯಿಂದಿರಲೂ ಕರೆ ನೀಡಿದ್ದಾರೆ. “ಈ ಅನಿಶ್ಚಿತತೆಯ ಕ್ಷಣದಲ್ಲಿ,ಧರ್ಮಕ್ಷೇತ್ರದ ಎಲ್ಲಾ ವಿಶ್ವಾಸಿಗಳು ಶಾಂತವಾಗಿಯೂ, ಪ್ರಾರ್ಥನೆಯಲ್ಲಿ ಏಕಮನಸ್ಕರಾಗಿಯೂ, ಎಲ್ಲರ ಸುರಕ್ಷತೆಯ ಕಡೆ ಗಮನಹರಿಸಬೇಕೆಂದು ಕೇಳಿಕೊಳ್ಳುತ್ತೇನೆ. ನಾಗರಿಕ ಅಧಿಕಾರಿಗಳ ಸೂಚನೆಗಳನ್ನು ಜಾಗರೂಕತೆಯಿಂದ ಪಾಲಿಸಿ, ನಿಮ್ಮ ಮನೆಗಳಲ್ಲಿ, ಕೆಲಸದ ಸ್ಥಳಗಳಲ್ಲಿ ಮತ್ತು ದೇವಾಲಯಗಳಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಿರಿ” ಎಂದು ಧರ್ಮಾಧ್ಯಕ್ಷರು ಬರೆದಿದ್ದಾರೆ.
ಧರ್ಮಕೇಂದ್ರಗಳ ಗುರುಗಳು ಮತ್ತು ಮುಖ್ಯಾಧಿಕಾರಿಗಳಿಗೆ, ತಮ್ಮ ಆತ್ಮೀಯ ಆರೈಕೆಗೆ ಒಪ್ಪಿಸಲ್ಪಟ್ಟವರ ಸುರಕ್ಷತೆಗಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಮತ್ತು ವಿವೇಕಪೂರ್ಣ, ಜವಾಬ್ದಾರಿಯುತ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ವಯೋವೃದ್ಧರು, ರೋಗಿಗಳು ಮತ್ತು ಅತಿದೌರ್ಬಲ್ಯಗೊಳಗಾದವರ ಕಡೆ ವಿಶೇಷ ಗಮನ ಹರಿಸಬೇಕೆಂದು ಅವರು ತಿಳಿಸಿದ್ದಾರೆ. ಧರ್ಮಸಭಾ ಚಟುವಟಿಕೆಗಳಲ್ಲಿ ಆಗುವ ಯಾವುದೇ ಬದಲಾವಣೆಗಳನ್ನು ಅಧಿಕೃತ ಮಾರ್ಗಗಳ ಮೂಲಕ ತಿಳಿಸಲಾಗುವುದೆಂದು ಅವರು ಹೇಳಿದ್ದಾರೆ.
“ಪ್ರಭು ನಿಮ್ಮನ್ನೂ ನಿಮ್ಮ ಕುಟುಂಬಗಳನ್ನೂ ರಕ್ಷಿಸಲಿ. ಅರೇಬಿಯಾದ ಮಾತೆ ನಮ್ಮನ್ನೆಲ್ಲ ಕಾಪಾಡಲಿ,” ಎಂದು ಧರ್ಮಾಧ್ಯಕ್ಷ ಬೆರಾರ್ಡಿ ತಮ್ಮ ಸಂದೇಶದ ಅಂತ್ಯದಲ್ಲಿ, ಶಾಂತಿಗಾಗಿ ಅಂತರರಾಷ್ಟ್ರೀಯ ಸಮುದಾಯಕ್ಕೂ ಪ್ರಾರ್ಥನೆಗೆ ಕರೆ ನೀಡಿದ್ದಾರೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).