VESCO-Card.-Jean-Paul-O.P.__11364_07122024.jpg VESCO-Card.-Jean-Paul-O.P.__11364_07122024.jpg 

ಪ್ರಧಾನ ಗುರು ಜಾನ್-ಪಾಲ್ ವೆಸ್ಕೋ: ಪೂಜ್ಯ ಜಗದ್ಗುರುಗಳ ಅಲ್ಜೀರಿಯಾ ಭೇಟಿ ‘ತೆರೆದ ಮನಸ್ಸಿನ ಸುಂದರ ಸಂಕೇತ’

ಅಲ್ಜಿಯರ್ಸ್‌ನ ಪೂಜ್ಯ ಧರ್ಮಾಧ್ಯಕ್ಷರಾಗಿರುವ ಪ್ರಧಾನ ಗುರು ಜಾನ್-ಪಾಲ್ ವೆಸ್ಕೋ ಅವರು, ಪೂಜ್ಯ ಜಗದ್ಗುರುಗಳು 14ನೇ ಲಿಯೋ ಅವರ ಏಪ್ರಿಲ್‌ನಲ್ಲಿ ನಡೆಯಲಿರುವ ಅಲ್ಜೀರಿಯಾ ಪ್ರವಾಸದ ಅಧಿಕೃತ ಘೋಷಣೆಯ ನಂತರ ವ್ಯಾಟಿಕನ್ ಸುದ್ದಿ ಸಂಸ್ಥೆಗೆ ಮಾತನಾಡಿದರು.

ಲೇಖಕರು: ಜೀನ್ -ಚಾರ್ಲ್ಸ್ ಪುಟ್ಝೋಲು

2021ರಲ್ಲಿ ಪೂಜ್ಯ ಜಗದ್ಗುರು ಫ್ರಾನ್ಸಿಸ್ ಅವರು ಅಲ್ಜಿಯರ್ಸ್‌ನ ಪೂಜ್ಯ ಧರ್ಮಾಧ್ಯಕ್ಷರಾಗಿ ನೇಮಿಸಿದ ಪ್ರಧಾನ ಗುರು ಜಾನ್-ಪಾಲ್ ವೆಸ್ಕೋ, ಒರಾನ್ ಧರ್ಮಕ್ಷೇತ್ರವನ್ನು ಒಂಬತ್ತು ವರ್ಷಗಳ ಕಾಲ ಮುನ್ನಡೆಸಿದ ಬಳಿಕ, 14ನೇ ಲಿಯೋ ಪೂಜ್ಯ ಜಗದ್ಗುರುಗಳು ನಾಲ್ಕು ಆಫ್ರಿಕಾ ದೇಶಗಳ ಪ್ರವಾಸದ ಮೊದಲ ಹಂತವಾಗಿ ಏಪ್ರಿಲ್ 13ರಂದು ಅಲ್ಜೀರಿಯಾಗೆ ಆಗಮಿಸುವ ಸಂದರ್ಭದಲ್ಲಿ ಅವರನ್ನು ಸ್ವಾಗತಿಸಲಿದ್ದಾರೆ.

ವ್ಯಾಟಿಕನ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, ಡೊಮಿನಿಕನ್ ಪ್ರಧಾನ ಗುರು ಈ ಭೇಟಿ ದೀರ್ಘಕಾಲ ಸಂಕಷ್ಟ ಅನುಭವಿಸಿದ ದೇಶಕ್ಕೆ ತರುವ ಸಂತೋಷವನ್ನು ಚಿಂತಿಸಿದರು. ಈ ಭೇಟಿ ಗಾಢವಾದ ಸಂಕೇತಾತ್ಮಕ ಮಹತ್ವ ಹೊಂದಿದ್ದು, ಪೂಜ್ಯ ಜಗದ್ಗುರುಗಳು ಸಂತ ಆಗಸ್ಟಿನ್ ಅವರ ಹೆಜ್ಜೆ ಗುರುತುಗಳಲ್ಲಿ ನಡೆಯುವಂತೆಯೇ, ಅಲ್ಜೀರಿಯಾದ ರಕ್ತಸಾಕ್ಷಿಗಳಾದ  ಪಿಯರ್ ಕ್ಲಾವೇರಿ ಹಾಗೂ ಟಿಬ್ಹಿರಿನ್ ಮಠದ ಸನ್ಯಾಸಿಗಳ ಸ್ಮರಣೆಯನ್ನೂ ಗೌರವಿಸುವಂತಾಗಿದೆ.

ವ್ಯಾಟಿಕನ್ ಸುದ್ದಿ ಸಂಸ್ಥೆ: ಪೂಜ್ಯ ಜಗದ್ಗುರುಗಳ ಆಗಮನದ ಸುದ್ದಿಯನ್ನು ನೀವು ಹೇಗೆ ಸ್ವೀಕರಿಸಿದಿರಿ?

ಪ್ರಧಾನ ಗುರು ಜಾನ್-ಪಾಲ್ ವೆಸ್ಕೋ: ಇದು ನಾವು ಬಹುಕಾಲದಿಂದ ನಿರೀಕ್ಷಿಸಿದ್ದ ಸುದ್ದಿ. ಅವರ ಭೇಟಿಯನ್ನು ಎಂದು ನಾವು ಬಹಳ ದಿನಗಳಿಂದ ಆಶಿಸುತ್ತಿದ್ದೆವು. ಪೂಜ್ಯ ಜಗದ್ಗುರು ಫ್ರಾನ್ಸಿಸ್ ಅವರನ್ನು ನಾವು ಅನೇಕ ಬಾರಿ ಆಹ್ವಾನಿಸಿದ್ದೆವು, ಮತ್ತು 14ನೇ ಲಿಯೋ ಪೂಜ್ಯ ಜಗದ್ಗುರುಗಳು ತಕ್ಷಣವೇ ಒಪ್ಪಿಕೊಂಡರು. ಇದರಲ್ಲಿರುವ ಸುಂದರ ಅಂಶವೆಂದರೆ, ಇದು ಅವರ ಮೊದಲ ಪ್ರವಾಸಗಳಲ್ಲಿ ಒಂದಾಗಿದೆ; ಆರಂಭದಲ್ಲೇ ತಮ್ಮ ಕಾರ್ಯಯೋಜನೆಗೆ ಅವರು ಇದನ್ನು ಸೇರಿಸಿಕೊಂಡರು.

ನನ್ನ ಅನಿಸಿಕೆಗೆ, ಇದು ಪೂಜ್ಯ ಜಗದ್ಗುರುಗಳು, ಅಧಿಕಾರಿಗಳು ಮತ್ತು ಎಲ್ಲರಲ್ಲಿಯೂ ತೆರೆದ ಮನಸ್ಸಿನ ಅತ್ಯಂತ ಸುಂದರ ಸಂಕೇತವಾಗಿದೆ. ನಮಗೆ ಇದೇ ಬೇಕಾಗಿದೆ. ಟರ್ಕಿಯೆಂಬ ಮುಸ್ಲಿಂ ದೇಶದ ಭೇಟಿಯ ನಂತರ, ಬಹುಮುಸ್ಲಿಂ ಜನಸಂಖ್ಯೆ ಹೊಂದಿರುವ ಲೆಬನಾನ್ ದೇಶದ ನಂತರ, ಇದೀಗ ಮೂರನೇ ದೇಶವಾಗಿ ಅಲ್ಜೀರಿಯಾ ಬರುತ್ತದೆ.

ಇದು 14ನೇ ಲಿಯೋ ಪೂಜ್ಯ ಜಗದ್ಗುರುಗಳ ಅಧಿಕಾರದ ಬಗ್ಗೆ   ಹೇಳುತ್ತದೆ. ಈ ವಿಷಯದಲ್ಲಿ ಅವರು ತಮ್ಮ ಪೂರ್ವಸ್ಥರಾದ ಪೂಜ್ಯ ಜಗದ್ಗುರು ಫ್ರಾನ್ಸಿಸ್ ಅವರ ಚಳವಳಿಯನ್ನೇ ಮುಂದುವರಿಸುತ್ತಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ; ಹಾಗೆಯೇ ಎಲ್ಲಾ ಪೂರ್ವ ಜಗದ್ಗುರುಗಳ ಪರಂಪರೆಯನ್ನೂ ಅನುಸರಿಸುತ್ತಿದ್ದಾರೆ. ಇದು ಧರ್ಮಸಭೆಯ ಬಗ್ಗೆ ಒಂದು ಸುಂದರ ಸಂದೇಶ ನೀಡುತ್ತದೆ. ಇದೇ ಧೋರಣೆ ಪೂಜ್ಯ ಜಗದ್ಗುರು ಬೆನೆಡಿಕ್ಟ್ ಮತ್ತು ಪೂಜ್ಯ ಜಗದ್ಗುರು ದ್ವಿತೀಯ ಜಾನ್ ಪಾಲರಲ್ಲಿಯೂ ಕಾಣಿಸಿಕೊಂಡಿತ್ತು.

ವ್ಯಾಟಿಕನ್ ಸುದ್ದಿ ಸಂಸ್ಥೆ: ಈ ಪ್ರವಾಸಕ್ಕೆ ಗಾಢವಾದ ಸಂಕೇತಾತ್ಮಕ ಮಹತ್ವವಿದೆ, ಏಕೆಂದರೆ ಪೂಜ್ಯ ಜಗದ್ಗುರುಗಳು ಸಂತ ಆಗಸ್ಟಿನ್‌ಗೆ ಸಂಬಂಧಿಸಿದ ಸ್ಥಳಗಳನ್ನು ಭೇಟಿ ಮಾಡುವರು…

ಪ್ರಧಾನ ಗುರು ಜಾನ್-ಪಾಲ್ ವೆಸ್ಕೋ: ಈ ಪ್ರವಾಸದಲ್ಲಿ ಅಪಾರ ಸಂಕೇತಾರ್ಥ ಅಡಕವಾಗಿದೆ. ಒಂದೆಡೆ ಇದು ಸರಳ ಪ್ರವಾಸ. ಕ್ರೈಸ್ತ ಸಮುದಾಯ ಇಲ್ಲಿ ಅಲ್ಪಸಂಖ್ಯಾತರಾಗಿದ್ದರೂ ಜಗದ್ಗುರುಗಳು ಸಂತ ಆಗಸ್ಟಿನ್ ಅವರ ಹೆಜ್ಜೆ ಗುರುತುಗಳಲ್ಲಿ ನಡೆಯಲಿದ್ದಾರೆ. ಆಗಸ್ಟಿನಿಯನ್ ಸಂಘದ ಪ್ರಧಾನಾಧಿಕಾರಿಯಾಗಿ ಅವರು ಈಗಾಗಲೇ ಎರಡು ಬಾರಿ ಇಲ್ಲಿ ಬಂದಿದ್ದಾರೆ; ಆದರೆ ಈಗ ಅವರು ಪೂಜ್ಯ ಜಗದ್ಗುರುಗಳಾಗಿ ಬರುತ್ತಿದ್ದಾರೆ.

ಕ್ರಿ.ಶ. 430ರಲ್ಲಿ ಸಂತ ಆಗಸ್ಟಿನ್ ಅಸ್ವಸ್ಥರಾಗಿದ್ದಾಗ, ವಿಧ್ವಂಸಕರು ನಗರದ ಬಾಗಿಲಿನ ಬಳಿಗೆ ಬಂದಿದ್ದಾಗ ಮತ್ತು ಹಿಪ್ಪೋ ನಗರ ದಾಳಿ ಎದುರಿಸುತ್ತಿದ್ದಾಗ, 16 ಶತಮಾನಗಳ ನಂತರ ಅವರಿಂದ ಪ್ರೇರಿತನಾದ ಒಬ್ಬ ಪೂಜ್ಯ ಜಗದ್ಗುರು ಇದೇ ಹಿಪ್ಪೋ ನಗರಕ್ಕೆ — ಇಂದಿನ ಅನ್ನಾಬಾಗೆ — ಬರುತ್ತಾರೆ ಎಂದು ಯಾರು ಊಹಿಸಬಹುದಿತ್ತು? ದೀರ್ಘಕಾಲದ ದೃಷ್ಟಿಯಲ್ಲಿ ಇದು ಅಪಾರ ನಿರೀಕ್ಷೆಯ ಮೂಲವಾಗಿದೆ.

ಅಲ್ಜೀರಿಯಾದ 19 ಧನ್ಯರು (Blessed) ಕೂಡ ಈ ಪ್ರವಾಸಕ್ಕೆ ಮತ್ತೊಂದು ಅರ್ಥವನ್ನು ನೀಡುತ್ತಾರೆ. ಅವರ ಸ್ಮರಣಾ ಹಬ್ಬದ ದಿನವೇ 14ನೇ ಲಿಯೋ ಪೂಜ್ಯ ಜಗದ್ಗುರುಗಳು ಆಯ್ಕೆಯಾಗಿದ್ದರು. ಅಲ್ಜೀರಿಯಾಗೆ ಬರುವಂತೆ ನಾವು ಕಾಯುತ್ತಿದ್ದೇವೆ ಎಂದು ಹೇಳುವಾಗ ನಾನು ಅವರಿಗೆ ಇದನ್ನು ನೆನಪಿಸಿದೆ. ಟಿಬ್ಹಿರಿನ್ ಸನ್ಯಾಸಿಗಳು, ಕ್ರಿಸ್ತಿಯನ್ ಡೆ ಶರ್ಜೇ — ಇವೆಲ್ಲವೂ ಅವರಿಗೆ ವಿಶೇಷ ಅರ್ಥವನ್ನು ಹೊಂದಿವೆ.

ವಿಶ್ವ ಶಾಂತಿ ದಿನದ ಜನವರಿ 1 ಸಂದೇಶದಲ್ಲಿ, ಟಿಬ್ಹಿರಿನ್ ಮಠದ ಗುರು ಕ್ರಿಸ್ತಿಯನ್ ಡೆ ಶರ್ಜೇ ಅವರ ಮಾತನ್ನು ಅವರು ಉಲ್ಲೇಖಿಸಿ, “ಪ್ರಭುವೇ, ಅವನನ್ನು ನಿರಾಯುಧಗೊಳಿಸು, ನನ್ನನ್ನು ನಿರಾಯುಧಗೊಳಿಸು, ನಮ್ಮನ್ನೆಲ್ಲ ನಿರಾಯುಧಗೊಳಿಸು” ಎಂದು ಪ್ರಾರ್ಥಿಸಿದ್ದರು. ಅವರು ಪುನಃ ಪುನಃ ಉಲ್ಲೇಖಿಸಿದ ವಾಕ್ಯ ಇದೇ.

ಅಲ್ಜೀರಿಯಾ ತನ್ನದೇ ಆದ ಮಹತ್ವ ಹೊಂದಿದೆ, ಏಕೆಂದರೆ ಧರ್ಮಾಧ್ಯಕ್ಷರಾದ  ವಂ. ಪಿಯರ್ ಕ್ಲಾವೇರಿ ಹೇಳಿದಂತೆ ವಿಭಜನೆಗಳ ರೇಖೆಗಳ ಮಧ್ಯೆ, ಹಲವು ಸಂಧಿಸ್ಥಳಗಳ ನಡುವೆ ನಿಂತಿದೆ . ಇದು ಉತ್ತರ ಮತ್ತು ದಕ್ಷಿಣದ ಸಂಗಮ; ವಲಸೆ ಸಮಸ್ಯೆಗಳ ಮಧ್ಯದ ಪ್ರಶ್ನೆಗಳ ಕೇಂದ್ರ; ಪಾಶ್ಚಾತ್ಯ ಜಗತ್ತು ಮತ್ತು ಅರಬ್-ಮುಸ್ಲಿಂ ಜಗತ್ತಿನ ಸಂಪರ್ಕ ಬಿಂದು; ಆಫ್ರಿಕಾದ ಪ್ರವೇಶ ದ್ವಾರವೂ ಹೌದು. ಆದ್ದರಿಂದ ಆಫ್ರಿಕಾ ಪ್ರವಾಸದ ಮೊದಲ ಹೆಜ್ಜೆಯಾಗಿ ಈ ತಂಗುದಾಣ ಮಹತ್ವಪೂರ್ಣವಾಗಿದೆ.

ನೋಟ್ರ್-ಡಾಮ್ ದ್’ಆಫ್ರಿಕ್ ಧರ್ಮಕೇಂದ್ರದಲ್ಲಿ ಕ್ರೈಸ್ತ ಸಮುದಾಯ ಮತ್ತು ಅವರ ಸ್ನೇಹಿತರೊಂದಿಗೆ ಭೇಟಿಯಾಗುವ ಕಾರ್ಯಕ್ರಮವೂ ಇದೆ. ಇಲ್ಲಿಂದಲೇ ವೈಟ್ ಫಾದರ್ಸ್ ಮತ್ತು ವೈಟ್ ಸಿಸ್ಟರ್ಸ್ ಶುಭಸಂದೇಶ ಪ್ರಚಾರ ಕಾರ್ಯಕ್ಕೆ ಹೊರಟಿದ್ದರು; ಸುವಾರ್ತೆಯು ಆಫ್ರಿಕಾದತ್ತ ಹರಡಿದ ಪ್ರಮುಖ ದ್ವಾರಗಳಲ್ಲಿ ಒಂದೂ ಅದೇ.

ಈ ಪ್ರವಾಸದಲ್ಲಿ ಅನೇಕ ಸರಳ ಸಂಕೇತಗಳು ಇರುತ್ತವೆ. ಆದರೆ ಅದಕ್ಕಿಂತ ಮುಖ್ಯವಾದುದು ಮಾನವೀಯ ಭೇಟಿ ಮತ್ತು ಸಹೋದರತ್ವ.

ಅಲ್ಜೀರಿಯಾದ ಜನರೊಂದಿಗೆ, ಕ್ರೈಸ್ತರು ಮತ್ತು ಮುಸ್ಲಿಮರು   ಸಂಬಂಧ ಉಳಿಸಿಕೊಳ್ಳಲು ಪ್ರಯತ್ನಿಸುವ ನಮ್ಮ ಧರ್ಮಸಭೆಗೆ ಇದು ಗೌರವದ ಸಂಕೇತವಾಗಿದೆ. ನನ್ನ ಅನಿಸಿಕೆ, ಈ ಪ್ರವಾಸ ಸಹೋದರತ್ವದ ಗುರುತಾಗಿ ಉಳಿಯಲಿದೆ.

ವ್ಯಾಟಿಕನ್ ಸುದ್ದಿ ಸಂಸ್ಥೆ: ಹಿಂದಿನ ಜಗದ್ಗುರುಗಳ ಸೇವೆಯೊಂದಿಗೆ ಇರುವ ನಿರಂತರತೆಯನ್ನು ನೀವು ಉಲ್ಲೇಖಿಸಿದ್ದೀರಿ. ಅಲ್ಜೀರಿಯಾ ಮೆಡಿಟೆರೇನಿಯನ್ ಪ್ರದೇಶದಲ್ಲಿದೆ — ಈ ಪ್ರದೇಶವು ಪೂಜ್ಯ ಫ್ರಾನ್ಸಿಸ್ ಅವರಿಗೆ ಅತ್ಯಂತ ಮಹತ್ವದ್ದಾಗಿತ್ತು. ಪೂಜ್ಯ ಜಗದ್ಗುರು14ನೇ ಲಿಯೋ ಇದೇ ಮಾರ್ಗವನ್ನು ಮುಂದುವರಿಸುತ್ತಿದ್ದಾರೆಯೇ?

ಪ್ರಧಾನ ಗುರು ಜಾನ್-ಪಾಲ್ ವೆಸ್ಕೋ: ಹೌದು, ಖಂಡಿತವಾಗಿಯೂ. ಇದು ಮೆಡಿಟೆರೇನಿಯನ್ ಪ್ರದೇಶದ ಕುರಿತಾದ ವಿಷಯವೇ. ಈ ಮಾರ್ಗವನ್ನು ಇನ್ನಷ್ಟು ಆಳವಾಗಿ ಸಾಗಿಸಿದಂತೆ, ಮಹತ್ವದ ಫಲಗಳು ಮೂಡಲಿವೆ. ಮೆಡಿಟೆರೇನಿಯನ್ ನಾಗರಿಕತೆ ಒಂದು ಶ್ರೀಮಂತ ಪರಂಪರೆ. ಮಾರೆ ನೋಸ್ಟ್ರಮ್ ಎಂದು ಕರೆಯಲ್ಪಡುವ ಈ ಸಮುದ್ರವು ಗಡಿಯಾಗಿ ಇರಬೇಕಾದದ್ದು ಅಲ್ಲ.

ಆದರೆ ಇಂದು ಅದು ಗಡಿಯಾಗಿರುವುದಷ್ಟೇ ಅಲ್ಲ, ಕೆಲವೊಮ್ಮೆ ಸಮಾಧಿಯಂತೆಯೂ ಕಾಣಿಸುತ್ತದೆ — ಅದು ಅದರ ಉದ್ದೇಶವಲ್ಲ. ಮೆಡಿಟೆರೇನಿಯನ್ ಸುತ್ತಲಿನ ಜನರು ಒಂದೇ ರೀತಿಯ ಸಂಸ್ಕೃತಿ, ಜೀವನಶೈಲಿ ಮತ್ತು ಆಧ್ಯಾತ್ಮಿಕ ಸ್ಪಂದನೆಯನ್ನು ಹಂಚಿಕೊಳ್ಳುತ್ತಾರೆ. ಮುಸ್ಲಿಮರಾಗಿರಲಿ ಕ್ರೈಸ್ತರಾಗಿರಲಿ, ಜನಪ್ರಿಯ ಭಕ್ತಿ ಮತ್ತು ಧಾರ್ಮಿಕ ಅಭಿವ್ಯಕ್ತಿಗಳಲ್ಲಿ ಒಂದು ಸಾಮ್ಯತೆ ಕಾಣಿಸುತ್ತದೆ. ಸ್ವಲ್ಪ ದೂರ ಉತ್ತರ, ದಕ್ಷಿಣ, ಪೂರ್ವ ಅಥವಾ ಪಶ್ಚಿಮಕ್ಕೆ ಸಾಗಿದರೆ ಬೇಧಗಳು ಸ್ಪಷ್ಟವಾಗುತ್ತವೆ; ಆದರೂ ಮೆಡಿಟೆರೇನಿಯನ್ ಒಂದು ಏಕತೆಯ ಭಾವವನ್ನು ಉಳಿಸಿಕೊಂಡಿದೆ.

ಈ ಸಂಸ್ಕೃತಿ ಇತರ ಸಂಸ್ಕೃತಿಗಳೊಂದಿಗೆ ಬೆರೆತು ಮೃದುತ್ವವನ್ನೂ ಸಹಭಾವವನ್ನೂ ಹೊತ್ತುಕೊಂಡಿದೆ. ಪೂಜ್ಯ ಜಗದ್ಗುರುಗಳ ಮುಂದಿನ ಪ್ರವಾಸ ಮೊನಾಕೋಗೆ — ಅದು ಸಹ ಮೆಡಿಟೆರೇನಿಯನ್ ಕರಾವಳಿಯಲ್ಲಿಯೇ.

ಆಫ್ರಿಕಾ ಪ್ರವಾಸದ ನಂತರ ಅವರು ಬಾರ್ಸಿಲೋನಾ ಮತ್ತು ಮ್ಯಾಡ್ರಿಡ್ ನಗರಗಳಿಗೆ ತೆರಳಲಿದ್ದಾರೆ, ಅಲ್ಲಿ ಮೆಡಿಟೆರೇನಿಯನ್ ಪ್ರದೇಶದ ಧರ್ಮಾಧ್ಯಕ್ಷರ ಸಭೆ ನಡೆಯಲಿದೆ. ಈ ಅರ್ಥದಲ್ಲಿಯೂ ಪೂಜ್ಯ ಜಗದ್ಗುರು14ನೇ ಲಿಯೋ, ಪೂಜ್ಯ ಫ್ರಾನ್ಸಿಸ್ ಅವರ ಹೆಜ್ಜೆಗುರುತುಗಳನ್ನು ಅನುಸರಿಸುತ್ತಿದ್ದಾರೆ.

ವ್ಯಾಟಿಕನ್ ಸುದ್ದಿ ಸಂಸ್ಥೆ:  ಅಲ್ಜೀರಿಯಾದ ಧರ್ಮಸಭೆ ರಕ್ತಸಾಕ್ಷಿಗಳ ಧರ್ಮಸಭೆಯೂ ಆಗಿದೆ; ಶುಭಸಂದೇಶವನ್ನು ಘೋಷಿಸುವ ತನ್ನ ನಿಶ್ಚಯಕ್ಕಾಗಿ ಅದು ತನ್ನ ರಕ್ತವನ್ನೇ ಅರ್ಪಿಸಿದೆ. ಈ ಹಿನ್ನೆಲೆಯಲ್ಲೂ ಈ ದೇಶದಲ್ಲಿ ಅಂತರ್ಧರ್ಮ ಸಂವಾದ ತನ್ನ ಸ್ಥಾನವನ್ನು ಸಂಪೂರ್ಣವಾಗಿ ಉಳಿಸಿಕೊಳ್ಳಬಹುದೇ?

ಪ್ರಧಾನ ಗುರು ಜಾನ್-ಪಾಲ್ ವೆಸ್ಕೋ: ಇದು ಜೀವನದ ಸಂವಾದ. ನಮಗೆ ಅಂತರ್ಧರ್ಮ ಸಂವಾದ ಅಗತ್ಯ. ಮೂಲತಃ ನಾವು ತವಕಿಸುವುದೂ ಲೋಕಕ್ಕೆ ಅಗತ್ಯವಿರುವುದೂ ಜೀವನದ ಸಂವಾದವೇ. ಅದು ಜನರು ಪರಸ್ಪರ ಭೇಟಿಯಾಗುವುದರ ಬಗ್ಗೆ. ಧಾರ್ಮಿಕ ಭಿನ್ನತೆಗಳು ಅಡ್ಡಿಯಾಗದೆ, ಹೆಚ್ಚುವರಿ ಶ್ರೀಮಂತಿಕೆಯಾಗಬಹುದು. ಅವು ಅಡ್ಡಿಯಾಗುವುದಾದರೆ, ನಾವು ನೀಡುವ ಮಹತ್ವದಷ್ಟೇ ಅವು ಅಡ್ಡಿಯಾಗುತ್ತವೆ.

ಇಂದು ನಮ್ಮ ಧರ್ಮಸಭೆ ಜನರೊಂದಿಗೆ ಉಳಿಯಬೇಕೆಂಬ ತನ್ನ ಇಚ್ಛೆಗೆ ರಕ್ತದ ಬೆಲೆ ಕಟ್ಟಿದೆ. ಸಂಕಷ್ಟದಲ್ಲಿದ್ದ ಜನರ ಮಧ್ಯೆ ನಿಲ್ಲಲು ಅದು ತಯಾರಾಗಿತ್ತು.

ಅಲ್ಜೀರಿಯಾ ಜನರೂ ಕತ್ತಲೆಯ ದಶಕದಲ್ಲಿ, ವಿಮೋಚನಾ ಯುದ್ಧದ ಸಮಯದಲ್ಲಿ ರಕ್ತಸಾಕ್ಷಿಗಳಾದ ಜನರು. ಅದು ರಕ್ತಸಾಕ್ಷಿಗಳ ಜನಾಂಗ, ಆದರೆ ಜೊತೆಗೆ ಧೈರ್ಯಶಾಲಿ ಮತ್ತು ಸ್ಥೈರ್ಯಪೂರ್ಣ ಜನಾಂಗವೂ ಹೌದು.

ನಮ್ಮ ಧರ್ಮಸಭೆಯೂ ಅದೇ; ಅದು ಸಂಕಟಗಳನ್ನು ದಾಟಿ ಇಂದು ಸ್ಥೈರ್ಯದಿಂದ ನಿಂತಿದೆ. 19 ಮಂದಿಯ ಜೀವಗಳನ್ನು ಕಳೆದುಕೊಂಡರೂ, ಅವರ ಧನ್ಯಘೋಷಣೆ ಧರ್ಮಸಭೆಯ ನಿಷ್ಠೆಯ ಸಾಕ್ಷಿಯಾಯಿತು. ಜನರೊಂದಿಗೆ ಉಳಿಯಲು ಮತ್ತು ಶುಭಸಂದೇಶಕ್ಕೆ ಸಾಕ್ಷಿಯಾಗಲು ಅದು ಅಪಾಯವನ್ನೇ ಅಪ್ಪಿಕೊಂಡಿತು.

ಆ ಕಾರಣದಿಂದಲೇ ಆ ಸಾಕ್ಷಿ ಇಂದಿಗೂ ಜೀವಂತವಾಗಿದೆ. ಸಂಕಷ್ಟದ ವೇಳೆಯಲ್ಲಿ ಪರಸ್ಪರ ಜೊತೆಯಾಗಿ ನಿಲ್ಲೋಣ; ಏಕತೆಯಲ್ಲಿ ಉಳಿಯೋಣ. ಇದು ಇಂದಿನ ಲೋಕಕ್ಕೆ ಸುಂದರ ಸಾಕ್ಷಿ — ಅದರ ಬಗ್ಗೆ ನನಗೆ ಅಪಾರ ಹೆಮ್ಮೆ ಇದೆ. 

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

27 ಫೆಬ್ರವರಿ 2026, 00:07