ಹುಡುಕಿ

2026.01.02 Messaggio Papa SEEK Conference 2026.01.02 Messaggio Papa SEEK Conference  

SEEK 2026: ಅಮೇರಿಕಾದ ಯುವ ಧರ್ಮಸಭೆಯ ಬಲವಾದ ಧ್ವನಿ

SEEK 2026 ಕಾರ್ಯಕ್ರಮವು ಅಮೇರಿಕಾದ ಮೂರು ನಗರಗಳಲ್ಲಿ ನಡೆಯಿತು. 26,000ಕ್ಕಿಂತ ಹೆಚ್ಚು ಕಥೋಲಿಕ ಯುವಜನರು ಇದರಲ್ಲಿ ಭಾಗವಹಿಸಿದರು. ಇದು ಅಮೇರಿಕಾದಲ್ಲಿ ಯುವ ಧರ್ಮಸಭೆಯ ಚೈತನ್ಯ ಮತ್ತು ಸ್ಥೈರ್ಯವನ್ನು ಸ್ಪಷ್ಟವಾಗಿ ತೋರಿಸಿದೆ. ಈ ಅತಿ ದೊಡ್ಡ ಸಮಾವೇಶ ಒಹಾಯೋ ರಾಜ್ಯದ ಕೊಲಂಬಸ್ ನಗರದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಪೂಜ್ಯ ಜಗದ್ಗುರುಗಳಾದ 14ನೆಯ ಲಿಯೋ ಅವರು ಸಂದೇಶ ಕಳುಹಿಸಿದರು.

SEEK 2026 ಜನವರಿ 1ರಿಂದ 5ರವರೆಗೆ ಒಂದೇ ಸಮಯದಲ್ಲಿ ಮೂರು ನಗರಗಳಲ್ಲಿ(ಕೊಲಂಬಸ್, ಡೆನ್ವರ್ ಮತ್ತು ಟೆಕ್ಸಾಸ್‌ನ ಫೋರ್ಟ್ ವರ್ತ್) ನಡೆಯಿತು. ಒಟ್ಟಾರೆ 26,000ಕ್ಕೂ ಹೆಚ್ಚು ಯುವಜನರು ಭಾಗವಹಿಸಿದ್ದರು. ಭಾಗವಹಿಸಿದವರ ಸಂಖ್ಯೆ ಕಳೆದ ವರ್ಷದಿಗಿಂತ 24 ಶೇಕಡಾ ಹೆಚ್ಚಳವಾಗಿದೆ. ಕೊಲಂಬಸ್ ನಗರದಲ್ಲಿ ಮಾತ್ರವೇ 16,000ಕ್ಕೂ ಹೆಚ್ಚು ಯುವಜನರು ಸೇರಿದ್ದರು.ಕೊಲಂಬಸ್ ನಗರದ ಸಮಾವೇಶ SEEK 2026ರ ಮುಖ್ಯ ಕೇಂದ್ರವಾಗಿತ್ತು.

ಭಾಗವಹಿಸಿದವರಲ್ಲಿ ಬಹುಪಾಲು ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಮತ್ತು ಯುವಜನರು ಇದ್ದರು. ಇವರೊಂದಿಗೆ ಗುರುಗಳು, ಧಾರ್ಮಿಕ ಜೀವನಕ್ಕೆ ಅರ್ಪಿತರಾದವರು, ಸಾಮಾನ್ಯ ನಾಯಕರು ಮತ್ತು ಧರ್ಮಾಧ್ಯಕ್ಷರೂ ಇದ್ದರು. ಅಮೇರಿಕಾದಾದ್ಯಂತದಿಂದ 58 ಧರ್ಮಾಧ್ಯಕ್ಷರು ಭಾಗವಹಿಸಿದ್ದರು. ಗುರು ತರಬೇತಿ ಪಡೆಯುತ್ತಿರುವವರ ಸಂಖ್ಯೆ 43 ಶೇಕಡಾ ಹೆಚ್ಚಳ ಕಂಡಿತು.

ಜಗದ್ಗುರುಗಳ ಸಂದೇಶ

ಈ ಸಮಾವೇಶದ ಪ್ರಮುಖ ಕ್ಷಣವೆಂದರೆ ಪೂಜ್ಯ ಜಗದ್ಗುರುಗಳಾದ  14ನೆಯ ಲಿಯೋ ಅವರ ಸಂದೇಶ. SEEK 2026ರ ಹೃದಯವೆಂದರೆ ಪ್ರಭುಯೇಸುವಿನೊಂದಿಗೆ ವೈಯಕ್ತಿಕ ಭೇಟಿ ಎಂಬುದನ್ನು ಅವರು ಒತ್ತಿ ಹೇಳಿದರು.

ಪ್ರಭುಯೇಸುವನ್ನು ಮೊದಲ ಬಾರಿಗೆ ಭೇಟಿಯಾಗುತ್ತಿರುವವರಾಗಲಿ ಅಥವಾ ಈಗಾಗಲೇ ಆತನೊಂದಿಗೆ ಸಂಬಂಧ ಹೊಂದಿರುವವರಾಗಲಿ—ಎಲ್ಲರೂ ಪ್ರಭುಯೇಸುವಿನೊಂದಿಗೆ ಸಮಯ ಕಳೆಯಬೇಕೆಂದು ಅವರು ಯುವಜನರನ್ನು ಆಹ್ವಾನಿಸಿದರು.

ವಾಟಿಕನ್ ಸುದ್ದಿ ಸಂಸ್ಥೆಗೆ ಮಾತನಾಡಿದ ಕೊಲಂಬಸ್‌ನ ಧರ್ಮಾಧ್ಯಕ್ಷ ಎರಲ್ ಫೆರ್ನಾಂಡಿಸ್ ಅವರು, ಜಗದ್ಗುರುಗಳ ಮಾತುಗಳು ಈ ಸಮಾವೇಶದ ಉದ್ದೇಶಕ್ಕೆ ಅತ್ಯಂತ ಮುಖ್ಯವೆಂದು ಹೇಳಿದರು.

“ಜಗದ್ಗುರುಗಳ  ಚಿತ್ರ ಪರದೆಯ ಮೇಲೆ ಬಂದೊಡನೆಯೇ, ಸಭಾಂಗಣದಲ್ಲಿ ಅಪಾರ ಉತ್ಸಾಹ ಕಂಡುಬಂತು. ಅವರು ಕೇವಲ ಒಂದು ನಿಮಿಷವಲ್ಲ, ಐದು ನಿಮಿಷ ಮಾತನಾಡಿದರು,” ಎಂದು ಧರ್ಮಾಧ್ಯಕ್ಷರು ಹೇಳಿದರು. “ಅನೇಕ SEEK ಆಯೋಜಕರು ಮತ್ತು FOCUS ಸದಸ್ಯರು, SEEK ಅರ್ಥವನ್ನು ಜಗದ್ಗುರುಗಳು ತಾವೇ ಅತ್ಯಂತ ಚೆನ್ನಾಗಿ ವಿವರಿಸಿದರು ಎಂದು ಹೇಳಿದರು. ಅವರು ಅನೇಕ ಯುವಜನರ ಹೃದಯಗಳಲ್ಲಿ ಬೀಜ ಬಿತ್ತಿದರು. ‘ನೀವು ಏನನ್ನು ಹುಡುಕುತ್ತೀರಿ?’ ಎಂಬ ಪ್ರಭುಯೇಸು ಕೇಳಿದ ಪ್ರಶ್ನೆಯ ಬಗ್ಗೆ ಯುವಜನರು ತಮ್ಮ ಕರೆಯ ಬಗ್ಗೆ ಚಿಂತಿಸಲು ಪ್ರೇರಿತರಾದರು.”

SEEK 2026 ಅಮೇರಿಕಾದ ಕಥೋಲಿಕ ಧರ್ಮಸಭೆಯ ಕುರಿತು ಇರುವ ತಪ್ಪು ಕಲ್ಪನೆಗಳನ್ನು ಕೂಡ ಪ್ರಶ್ನಿಸಿದೆ ಎಂದು ಅವರು ಹೇಳಿದರು. ಇಲ್ಲಿ ಕಂಡದ್ದರಿಂದ ಧರ್ಮಸಭೆ ಯುವ ಮತ್ತು ಜೀವಂತವಾಗಿದೆ ಎಂಬುದು ಸ್ಪಷ್ಟವಾಗಿದೆ. ಯುವಕರು ಇಂದಿನ ಧರ್ಮಸಭೆಯ ಕೇಂದ್ರದಲ್ಲಿದ್ದಾರೆ ಎಂಬ ಸಂದೇಶವನ್ನು ಈ ಸಮಾವೇಶ ಬಲಪಡಿಸಿದೆ.

ಯುವಜನರ ಧ್ವನಿ

ಭಾಗವಹಿಸಿದವರಲ್ಲಿ ಮಿಚಿಗನ್‌ನ ಹಿಲ್ಸ್ಡೇಲ್ ಕಾಲೇಜಿನ ವಿದ್ಯಾರ್ಥಿನಿ ಮೇರಿ ಬ್ರಿಕೌಂಟ್ ಇದ್ದರು. ಅವರು ಕೊಲೊರಾಡೋ ರಾಜ್ಯದ ಜೇಮ್ಸ್‌ಟೌನ್‌ನ ಕ್ಯಾಂಪ್ ವೊಯ್ಟಿಲಾದ ಸ್ವಯಂಸೇವಕರಾಗಿದ್ದಾರೆ. ವ್ಯಾಟಿಕನ್ ಸುದ್ದಿ ಸಂಸ್ಥೆಗೆ ಮಾತನಾಡಿದ ಅವರು, ಈ ಸಮಾವೇಶದ ಆಧ್ಯಾತ್ಮಿಕ ಅರ್ಥವನ್ನು ವಿವರಿಸಿದರು.

“ಇಂದಿನ ಯುವಜನರು ಜೀವನದ ಉದ್ದೇಶವನ್ನು ತಿಳಿಯಲು ಹಸಿವಿನಿಂದಿದ್ದಾರೆ. ದೇವರ ಹೃದಯವನ್ನು ತಿಳಿಯಬೇಕೆಂಬ ಬಯಕೆ ಅವರಲ್ಲಿ ಇದೆ. 17,000 ವಿದ್ಯಾರ್ಥಿಗಳು ಒಟ್ಟಾಗಿ ನಿಜವಾದ ತೃಪ್ತಿಯನ್ನು ಹುಡುಕುತ್ತಿರುವುದನ್ನು ನೋಡುವುದು ಅದ್ಭುತ ಅನುಭವ,” ಎಂದು ಅವರು ಹೇಳಿದರು. “SEEK ನಮ್ಮನ್ನು ಕ್ರಿಸ್ತನ ಹುಡುಕಾಟದಲ್ಲಿ ಒಬ್ಬರೇ ಅಲ್ಲ, ಜೀವಂತ ಮತ್ತು ನಿಷ್ಠಾವಂತ ಸಮುದಾಯದ ಭಾಗವೆಂದು ನೆನಪಿಸಿತು.”

ಜಗದ್ಗುರುಗಳ ಅವರ ಸಂದೇಶವನ್ನು ಕುರಿತು ಮಾತನಾಡಿದ ಅವರು, ಅದನ್ನು ಧರ್ಮಸಭೆಯ ಏಕತೆಯನ್ನು ನೆನಪಿಸುವ ತಂದೆಯ ಮಾತುಗಳೆಂದು ವಿವರಿಸಿದರು.

“ನಾವು ಧರ್ಮಸಭೆಯ ಭವಿಷ್ಯ ಮಾತ್ರವಲ್ಲ. ನಾವು ಈಗಲೇ ಅದರ ಜೀವಂತ ಹೃದಯ. ಇದು ದೂರದ ಸಂಗತಿಯಲ್ಲ—ಇದು ಈಗ ನಡೆಯುತ್ತಿದೆ,” ಎಂದು ಅವರು ಹೇಳಿದರು.

ಸಮುದಾಯ ಮತ್ತು ನಿರಂತರತೆ

FOCUS ಸಮುದಾಯ ಆಯೋಜಿಸಿದ SEEK ಸಮಾವೇಶದಲ್ಲಿ ಧರ್ಮಬೋಧನೆ, ಬಲಿಪೂಜೆ, ಆರಾಧನೆ, ಪಶ್ಚಾತ್ತಾಪ ಸ್ವೀಕಾರ ಮತ್ತು ಕರೆಯ ಗುರುತಿಸುವ ಕುರಿತು ಅಧಿವೇಶನಗಳು ನಡೆದವು.

2027ರ SEEK ಸಮಾವೇಶವು ಮತ್ತೆ ಕೊಲಂಬಸ್ ನಗರದಲ್ಲಿಯೂ ಮತ್ತು ಅದೇ ಸಮಯದಲ್ಲಿ ಟೆಕ್ಸಾಸ್‌ನ ಸ್ಯಾನ್ ಆಂಟೋನಿಯೊದಲ್ಲಿಯೂ ನಡೆಯಲಿದೆ ಎಂದು ಆಯೋಜಕರು ಘೋಷಿಸಿದ್ದಾರೆ.

07 ಜನವರಿ 2026, 14:47