ಸಿರಿಯಾ: ‘ಅಲೆಪ್ಪೊದಲ್ಲಿ ಮತ್ತಷ್ಟು ಯುದ್ಧ ಮತ್ತು ಸ್ಥಳಾಂತರವಾಗಬಾರದು’
14 ವರ್ಷಗಳ ನಾಗರಿಕ ಯುದ್ಧದ ನಂತರ ಸಿರಿಯಾಗೆ ಸ್ಥಿರತೆ ಅಗತ್ಯವಿದೆ. ಆದರೆ ಅಲೆಪ್ಪೊದಲ್ಲಿ “ಪರಿಸ್ಥಿತಿ ಚೆನ್ನಾಗಿಲ್ಲ” ಎಂದು ಧರ್ಮಾಧ್ಯಕ್ಷರಾದ ಪೂಜ್ಯ ಹನ್ನಾ ಜಲ್ಲೂಫ್ ಅವರು ಹೇಳಿದರು.
ಉತ್ತರ ಸಿರಿಯಾದ ಅಲೆಪ್ಪೊ ನಗರದಿಂದ ಅವರು ವ್ಯಾಟಿಕನ್ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿ, ಮಂಗಳವಾರದಿಂದ ಸರ್ಕಾರದ ಪಡೆಗಳು ಮತ್ತು ಕುರ್ದಿಶ್ ಬಹುಸಂಖ್ಯಾತ ಸೇನಾಪಡೆಯಾಗಿರುವ ಸಿರಿಯನ್ ಡೆಮಾಕ್ರಟಿಕ್ ಫೋರ್ಸಸ್ (SDF) ನಡುವೆ ತೀವ್ರ ಹೋರಾಟ ಮತ್ತೆ ಆರಂಭವಾಗಿದೆ.
“ಕಷ್ಟದ ಸಮಯದಲ್ಲಿ ಕುರಿಗಾಹಿಯು ತನ್ನ ಕುರಿಗಳೊಂದಿಗೆ ಇರಬೇಕು,” ಎಂದು ಧರ್ಮಾಧ್ಯಕ್ಷರು ಹೇಳಿದರು. ಅಲೆಪ್ಪೊದಲ್ಲಿನ ಪರಿಸ್ಥಿತಿ “ಇನ್ನಷ್ಟು ಕೆಟ್ಟದಾಗುತ್ತಿದೆ” ಎಂದು ಅವರು ವಿಷಾದಿಸಿದರು.
ಈ ಹೋರಾಟದಲ್ಲಿ ಕನಿಷ್ಠ ಐದು ಮಂದಿ ಮೃತಪಟ್ಟಿದ್ದಾರೆ. ಡಜನ್‌ಗಟ್ಟಲೆ ಜನ ಗಾಯಗೊಂಡಿದ್ದಾರೆ, ಅವರಲ್ಲಿ ನಾಗರಿಕರೂ ಸೇರಿದ್ದಾರೆ. ಸಂಯುಕ್ತ ರಾಷ್ಟ್ರಗಳ ಸಂಸ್ಥೆಯ ಅಂದಾಜಿನ ಪ್ರಕಾರ ಈಗಾಗಲೇ 30,000ಕ್ಕೂ ಹೆಚ್ಚು ಜನರು ನಗರದಿಂದ ಪಲಾಯನ ಮಾಡಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಒಂದು ವೀಡಿಯೋವನ್ನು ಧರ್ಮಾಧ್ಯಕ್ಷರಾದ ಪೂಜ್ಯ ಜಲ್ಲೂಫ್ ಉಲ್ಲೇಖಿಸಿದರು. ಅದರಲ್ಲಿ ರಸ್ತೆಗಳಲ್ಲಿ ಕಾರುಗಳ ಕೆಳಗೆ ಮೃತದೇಹಗಳು ಬಿದ್ದಿರುವುದು ಕಂಡುಬರುತ್ತದೆ ಎಂದು ಅವರು ಹೇಳಿದರು.
ಸಿರಿಯನ್ ಸೇನೆ ಶೇಖ್ ಮಾಕ್ಸೂದ್ ಮತ್ತು ಅಶ್ರಫಿಯೆಹ್ ಪ್ರದೇಶಗಳಲ್ಲಿ ಕರ್ಫ್ಯೂ ಘೋಷಿಸಿದೆ. SDF ವಿರುದ್ಧದ ದಾಳಿಗೆ ಮುನ್ನ ಕುರ್ಡ್ ಪ್ರಾಬಲ್ಯವಿರುವ ಹಲವು ಪ್ರದೇಶಗಳ ನಿವಾಸಿಗಳಿಗೆ ಮನೆಗಳನ್ನು ತೊರೆಯುವಂತೆ ಆದೇಶಿಸಿದೆ.
ಸ್ಥಳಾಂತರಗೊಂಡವರಿಗೆ ಸಹಾಯ
“ನಿನ್ನೆ ಮಧ್ಯಾಹ್ನ ಮೂರೂವರೆ ಗಂಟೆಯವರೆಗೆ ಜನರು ಸುರಕ್ಷಿತವಾಗಿ ತೆರಳಲು ಎರಡು ಮಾನವೀಯ ಮಾರ್ಗಗಳನ್ನು ತೆರೆಯಲಾಗಿತ್ತು,” ಎಂದು ಧರ್ಮಾಧ್ಯಕ್ಷರಾದ ಪೂಜ್ಯ ಜಲ್ಲೂಫ್ ಹೇಳಿದರು. “ಕ್ರೈಸ್ತ ಧರ್ಮಸಭೆಯಿಂದ ಸ್ಥಳಾಂತರಗೊಂಡವರಿಗೆ ಮೂರು ಆಶ್ರಯಧಾಮಗಳನ್ನು ತೆರೆಯಲಾಗಿದೆಲ್-ಯಾಟಿನ್ ಧರ್ಮಾಧ್ಯಕ್ಷರ ಕೇಂದ್ರದಲ್ಲಿ ಎರಡು (ಒಂದು ಪವಿತ್ರ ಭೂಮಿ ಕಾಲೇಜಿನಲ್ಲಿ, ಮತ್ತೊಂದು ಘೋಷಣೆಯ ದೇವಾಲಯದಲ್ಲಿ).”
ಸಿರಿಯಾಕ್ ಆರ್ಥೋಡಾಕ್ಸ್ ಧರ್ಮಸಭೆಯೂ ತಮ್ಮ ಧರ್ಮಾಧ್ಯಕ್ಷರ ಕೇಂದ್ರದಲ್ಲಿ ಒಂದು ಆಶ್ರಯ ಕೇಂದ್ರವನ್ನು ತೆರೆದಿದೆ. ಮುಸ್ಲಿಮರು ನಾಲ್ಕು ಮಸೀದಿಗಳನ್ನು ತೆರೆದಿದ್ದಾರೆ.
“ಈಗಾಗಲೇ ಸುಮಾರು 3,500 ಜನರಿಗೆ ಆಶ್ರಯ ನೀಡಲಾಗಿದೆ. ಇತರರು ಖಾಸಗಿ ಮನೆಗಳಲ್ಲಿ ಅಥವಾ ಬೇರೆ ಸ್ಥಳಗಳಲ್ಲಿ ತಂಗಿದ್ದಾರೆ,” ಎಂದು ಅವರು ಹೇಳಿದರು. “ಆಶ್ರಯದ ಜೊತೆಗೆ ನಾವು ಹಾಸಿಗೆ ಚಾದರುಗಳು ಮತ್ತು ಅಗತ್ಯ ವಸ್ತುಗಳನ್ನು ಕೂಡ ಒದಗಿಸಿದ್ದೇವೆ.”
“ಪ್ರಭು ನಮಗೆ ಶಕ್ತಿ, ಧೈರ್ಯ ಮತ್ತು ಶಾಂತಿಯನ್ನು ನೀಡಲಿ,” ಎಂದು ಧರ್ಮಾಧ್ಯಕ್ಷರಾದ ಪೂಜ್ಯ ಜಲ್ಲೂಫ್ ಹೇಳಿದರು. 14 ವರ್ಷಗಳ ಯುದ್ಧದ ನಂತರ ದೀರ್ಘಕಾಲಿಕ ಸ್ಥಿರತೆ ಸಿಗಲಿ ಎಂಬುದು ಅವರ ಆಶಯವಾಗಿದೆ.
“ನಾವು ಈಗಾಗಲೇ ಸಾಕಷ್ಟು ಕಷ್ಟ ಅನುಭವಿಸಿದ್ದೇವೆ,” ಎಂದು ಅವರು ಹೇಳಿದರು. “ಇನ್ನು ರಕ್ತಪಾತವೂ ಭಯವೂ ಇರಬಾರದು. ಈಗಾಗಲೇ 11 ಮಿಲಿಯನ್ ಸಿರಿಯನ್ನರು ವಿದೇಶಗಳಲ್ಲಿ ಬದುಕುತ್ತಿದ್ದಾರೆ. ಇನ್ನಷ್ಟು ಸ್ಥಳಾಂತರವಾಗಬಾರದು” ಎಂದು ಪ್ರಾರ್ಥಿಸಿದರು