ಹುಡುಕಿ

SWITZERLAND-FIRE-ACCIDENT-TOURISM SWITZERLAND-FIRE-ACCIDENT-TOURISM  (� KEYSTONE / LAURENT GILLIERON)

ಕ್ರಾನ್ಸ್–ಮೋಂಟಾನಾ ದುರಂತದಲ್ಲಿ ಪ್ರಾಣ ಕಳೆದುಕೊಂಡ ಕುಟುಂಬಗಳ ಜೊತೆ ಧರ್ಮಸಭೆ ನಿಂತಿದೆ:ಸ್ವಿಟ್ಜರ್ಲ್ಯಾಂಡ್ ಧರ್ಮಾಧ್ಯಕ್ಷರು

ಸ್ವಿಟ್ಜರ್ಲ್ಯಾಂಡ್‌ನ ಸಿಯೋನ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಜಾನ್–ಮೇರಿ ಲೋವೇ, ಜನವರಿ 1ರ ರಾತ್ರಿ ಸಂಭವಿಸಿದ ಅಗ್ನಿದುರಂತದ ಕುರಿತು ಮಾತನಾಡುತ್ತಾ, “ಧರ್ಮಸಭೆ ದುಃಖವನ್ನು ಹಂಚಿಕೊಳ್ಳಬೇಕು ಮತ್ತು ನೊಂದವರೊಂದಿಗೆಹಾಜರಾತಿಯನ್ನು ತೋರಿಸಬೇಕು. ಕುಟುಂಬಗಳು ಬೆಳಕಿನ ಮೇಲೆ ನಂಬಿಕೆ ಇಡಬೇಕು” ಎಂದು ಹೇಳಿದ್ದಾರೆ. — ಡೆಲ್ಫಿನ್ ಅಲೈರ್

“ಸ್ಥಳೀಯ ಸಮುದಾಯವನ್ನು ಆಳವಾಗಿ ಕದಲಿಸಿದ ಈ ದುರಂತದ ಮುಂದೆ, ಧರ್ಮಸಭೆಯ ಮೊದಲ ಕರ್ತವ್ಯ ಮೌನವಾಗಿ ಜೊತೆಯಲ್ಲಿ ಇರುವುದಾಗಿದೆ.”

ಜನವರಿ 1ರ ರಾತ್ರಿ ಸ್ವಿಟ್ಜರ್ಲ್ಯಾಂಡ್‌ನ ಕ್ರಾನ್ಸ್–ಮೋಂಟಾನಾದಲ್ಲಿ ಸಂಭವಿಸಿದ ಅಗ್ನಿದುರಂತದಲ್ಲಿ , 40ಕ್ಕಿಂತ ಹೆಚ್ಚು ಮಂದಿ ಮೃತಪಟ್ಟು, ನೂರಾರು ಮಂದಿ ಗಾಯಗೊಂಡ ಹಿನ್ನೆಲೆಯಲ್ಲಿ, ಧರ್ಮಾಧ್ಯಕ್ಷ ಜಾನ್–ಮೇರಿ ಲೋವೇ ವ್ಯಾಟಿಕನ್ ಸುದ್ದಿ ಸಂಸ್ಥೆಗೆ ಈ ಮಾತುಗಳನ್ನು ಹೇಳಿದರು. ದುರಂತದ ನಂತರ, ಸ್ವಿಸ್ ಪಟ್ಟಣದ ದೇವಾಲಯದಲ್ಲಿ ಮೃತರಿಗೆ ಸಮರ್ಪಿತ ಬಲಿಪೂಜೆಯನ್ನು ಧರ್ಮಾಧ್ಯಕ್ಷರು ಆಚರಿಸಿದರು. 400ಕ್ಕೂ ಹೆಚ್ಚು ಮಂದಿ ಬಲಿಪೂಜೆಯಲ್ಲಿ ಭಾಗವಹಿಸಿದ್ದರು. ಬಲಿಪೂಜೆಯ ನಂತರ ಅವರು ಅಗ್ನಿ ದುರಂತಸಂಭವಿಸಿದ ಸ್ಥಳಕ್ಕೆ ತೆರಳಿ ಹೂಗಳನ್ನು ಅರ್ಪಿಸಿದರು.

ಈ ಸಂದರ್ಶನದಲ್ಲಿ, “ದೇವಾಲಯ ಸಂಪೂರ್ಣವಾಗಿ ಜನರಿಂದ ತುಂಬಿತ್ತು” ಎಂಬುದನ್ನು ಧರ್ಮಾಧ್ಯಕ್ಷರು ವಿಶೇಷವಾಗಿ ಉಲ್ಲೇಖಿಸಿದರು. ಸಮುದಾಯವು ಮತ್ತೆ ಒಟ್ಟುಗೂಡಬೇಕೆಂಬ ಅಗತ್ಯದಿಂದ ಬಂದ ಧಾರ್ಮಿಕ ಸೇವಾ ಪ್ರತಿಕ್ರಿಯೆಯಿದು ಎಂದು ಅವರು ಹೇಳಿದರು. “ಇಂತಹ ಸಂದರ್ಭಗಳಲ್ಲಿ ಒಂಟಿತನ ಅತಿಯಾಗಿ ಭಾರವಾಗಿರುತ್ತದೆ, ನೊಂದವರೊಂದಿಗೆ ನಮ್ಮ ಹಾಜರಾತಿಯೇ ನಂಬಿಕೆಯ ಹೃದಯವೆಂದು ಅವರು ವಿವರಿಸಿದರು: “ಒಂಟಿಯಾಗಿರುವವರ ಜೊತೆ ಇರುವುದೇ, ಅವರನ್ನು ಸಾಂತ್ವನಗೊಳಿಸುವುದೇ ದೇವರ ಸ್ವರೂಪ.”

ಧರ್ಮಾಧ್ಯಕ್ಷರೇ, ಈ ದುರಂತದ ನಂತರ ಧರ್ಮಕ್ಷೇತ್ರದಲ್ಲಿ ಯಾವ ರೀತಿಯ ವಾತಾವರಣ ಇದೆ?

ವಾತಾವರಣ ತುಂಬಾ ಭಾರವಾಗಿದೆ. ಭಾವನೆಗಳು, ಗೊಂದಲ, ಪ್ರಶ್ನೆಗಳು ತುಂಬಿವೆ. ಗುರುವಾರ ಸಂಜೆ ನಾನು ಮೊಂಟಾನಾದಲ್ಲಿ ಬಲಿಪೂಜೆಯಲ್ಲಿ ಭಾಗವಹಿಸಿದ್ದೆ. ಜನರು ‘ಇದು ಹೇಗೆ ಸಂಭವಿಸಿತು? ಏನಾಯಿತು?’ ಎಂದು ಕೇಳುತ್ತಿದ್ದಾರೆ. ಸ್ಪಷ್ಟತೆ ಬೇಕೆಂಬ ಬೇಡಿಕೆ ಹೆಚ್ಚಿದೆ. ಇದು ತುಂಬಾ ನೋವು ತಂದಿದೆ.

ಈ ನಿರಾಶೆಯ ನಡುವೆ ನೀವು ಹೇಗೆ ಹಾಜರಾತಿ ತೋರಿಸುತ್ತಿದ್ದೀರಿ?

ನಾನು ತಕ್ಷಣ ಧರ್ಮಕೇಂದ್ರದ ಗುರುಗಳನ್ನು ಸಂಪರ್ಕಿಸಿ ಸೇವಾ ನಿಟ್ಟಿನಲ್ಲಿ ಏನು ನಡೆಯುತ್ತಿದೆ ಎಂದು ವಿಚಾರಿಸಿದೆ. ತಕ್ಷಣ ಸ್ಥಳಕ್ಕೆ ಹೋಗುವುದು ಸೂಕ್ತವಲ್ಲ. ಪೊಲೀಸರು, ಸಾರ್ವಜನಿಕ ಅಧಿಕಾರಿಗಳು, ಆಸ್ಪತ್ರೆಗಳು ಮತ್ತು ಕುಟುಂಬಗಳಿಗೆ ಅವಕಾಶ ನೀಡಬೇಕು.

ಮೊದಲ ಕ್ರಮವಾಗಿ ಗುರುವಾರ ಸಂಜೆ 6 ಗಂಟೆಗೆ ಬಲಿಪೂಜೆ ನಡೆಯಿತು. ನಾನು ಅದರಲ್ಲಿ ಭಾಗವಹಿಸಿದೆ. ದೇವಾಲಯ ಜನರಿಂದ ತುಂಬಿತ್ತು. ಜನರಿಗೆ ಒಟ್ಟಾಗಿ ಸೇರಬೇಕೆಂಬ ಅಗತ್ಯವಿತ್ತು.

ಬಲಿಪೂಜೆಯ ನಂತರ, ಮೊಂಟಾನಾದ ರಿಫಾರ್ಮ್ಡ್ ಧರ್ಮಸಭೆಯ ಗುರು, ಸ್ವಿಸ್ ಸೀನೋಡ್ ಅಧ್ಯಕ್ಷರು ಹಾಗೂ ವಾಲೈಸ್ ಧರ್ಮಸಭೆಯ ಪ್ರತಿನಿಧಿಗಳ ಜೊತೆ, ಈ ಭಾನುವಾರ ಮತ್ತೊಂದು ಸಮೂಹ ಪ್ರಾರ್ಥನೆಯನ್ನು ಆಯೋಜಿಸಲಾಗಿದೆ.

ಇದೇ ಸಮಯದಲ್ಲಿ, ಮೊಂಟಾನಾದ ದೇವಾಲಯಗಳು ಜನರಿಗೆ ಪ್ರಾರ್ಥನೆ, ಸ್ಮರಣಾ ಪುಸ್ತಕದಲ್ಲಿ ಸಹಿ, ಹೂ ಅಥವಾ ದೀಪ ಇಡುವ ಅವಕಾಶ ನೀಡಿವೆ. ಕೇಳಲು ಸಿದ್ಧವಾದ ಹೃದಯವೂ ಅಲ್ಲಿ ಇದೆ.

ಗುರುವಾರ ಸಂಜೆ, ಬಲಿಪೂಜೆಯ ಬಳಿಕ, ಶ್ರೇಷ್ಠ ಗುರುಗಳು ಪಟ್ಟಣದ ಕೇಂದ್ರಕ್ಕೆ ತೆರಳಿದರು. ಅಲ್ಲಿ ಯುವಕರು ಮೌನದಲ್ಲಿ ಹೂಗಳು ಮತ್ತು ದೀಪಗಳನ್ನು ಇಟ್ಟು ತಮ್ಮ ನೋವನ್ನು ವ್ಯಕ್ತಪಡಿಸಿದರು.

ಭಕ್ತರಲ್ಲಿ ಸಾಂತ್ವನದ ಅಗತ್ಯ ಹೆಚ್ಚಿದೆಯೇ?

ಹೌದು. ಇಂತಹ ಸಂದರ್ಭಗಳಲ್ಲಿ ಒಂಟಿತನ ಅತಿಯಾಗಿ ನೋವು ನೀಡುತ್ತದೆ. ಕ್ರೈಸ್ತ ಸೇವೆಯ ಮುಖ್ಯ ಕರ್ತವ್ಯ ಎಂದರೆ

ಒಂಟಿಯಾಗಿರುವವರ ಜೊತೆ ಇರುವುದು ಮತ್ತು ದುಃಖದಲ್ಲಿರುವವರಿಗೆ ಧೈರ್ಯ ನೀಡುವುದು. ಹಾಜರಾತಿಯೇ ದೇವರ ಸ್ವರೂಪ. ದೇವರು ತನ್ನನ್ನು “ನಾನು ಜೊತೆಗಿದ್ದೇನೆ” ಎಂದು ಪರಿಚಯಿಸುತ್ತಾನೆ. ಇದರಿಂದ ಜನರಲ್ಲಿ ದೊಡ್ಡ ನಿರೀಕ್ಷೆ ಇದೆ, ಕೆಲವೊಮ್ಮೆ ಅದು ಮಾತಿನಲ್ಲಿ ವ್ಯಕ್ತವಾಗದಿದ್ದರೂ. ಗಾಯಗೊಂಡ ಕುಟುಂಬಗಳು ತಮ್ಮ ನೋವನ್ನು ಒಂದು ಮಾತು, ಒಂದು ದೃಷ್ಟಿ, ಒಂದು ಮೌನದ ಮೂಲಕವಾದರೂ

ಗುರುತಿಸಬೇಕೆಂದು ಬಯಸುತ್ತಿವೆ.

ಕ್ರಾನ್ಸ್–ಮೋಂಟಾನಾದ ಧಾರ್ಮಿಕ ಸ್ವರೂಪ ಹೇಗಿದೆ?

ಇದು ಕ್ರೀಡೆ ಮತ್ತು ಪ್ರವಾಸಿ ಸ್ಥಳ. ಈಗಿನ ಹಂಗಾಮಿನಲ್ಲಿ ವಿವಿಧ ದೇಶಗಳಿಂದ ಜನ ಬರುತ್ತಾರೆ. ಅನೇಕ ಇಟಾಲಿಯನ್ ಪ್ರವಾಸಿಗರೂ ಇದ್ದಾರೆ. ಹಲವಾರು ಕುಟುಂಬಗಳು ಈ ದುರಂತದಿಂದ ಗಂಭೀರವಾಗಿ ದುಃಖಿತವಾಗಿವೆ.

ನಾನು ಹಲವು ಬಾರಿ ಇಲ್ಲಿ ಬಲಿಪೂಜೆ ಆಚರಿಸಿದ್ದೇನೆ. ಪ್ರವಾಸದ ಸಂದರ್ಭದಲ್ಲೂ ಜನರು ಪ್ರಾರ್ಥನೆ ಮತ್ತು ಮೌನಕ್ಕೆ ಸಮಯ ಕೊಡುತ್ತಾರೆ. ಪ್ರೊಟೆಸ್ಟೆಂಟ್ ಸಮುದಾಯವೂ ಇಲ್ಲಿ ಸಕ್ರಿಯವಾಗಿದೆ.

ಇಲ್ಲಿ ನಡೆಯುತ್ತಿರುವುದು ವಿಶ್ವವ್ಯಾಪಿ ಅನುಭವದಂತಿದೆ. ಇದು ಧರ್ಮಸಭೆಯ ಒಂದು ಸುಂದರ ಚಿತ್ರ.

ಸಹಾಯ ಮತ್ತು ಒಗ್ಗಟ್ಟಿನ ಕುರಿತು ಏನು ಹೇಳಬಹುದು?

ಇದು ಅತ್ಯವಶ್ಯಕ. ರಾಜಕೀಯ ನಾಯಕರು, ಪೊಲೀಸ್ ಅಧಿಕಾರಿಗಳು, ಆರೋಗ್ಯ ಸಿಬ್ಬಂದಿ ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ.

ಈ ಒಗ್ಗಟ್ಟು ವಾಲೈಸ್ ಅಥವಾ ಸ್ವಿಟ್ಜರ್ಲ್ಯಾಂಡ್‌ಗೆ ಮಾತ್ರ ಸೀಮಿತವಲ್ಲ.

ಗಂಭೀರವಾಗಿ ಗಾಯಗೊಂಡವರನ್ನು ಫ್ರಾನ್ಸ್ ಮತ್ತು ಇಟಲಿಯ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಇದು ಧೈರ್ಯ ನೀಡುವ ಸಂಗತಿ. ಎಲ್ಲವೂ ಸ್ವಾಭಾವಿಕವಾಗಿ ಮತ್ತು ವೃತ್ತಿಪರವಾಗಿ ನಡೆಯುತ್ತಿದೆ.

ಈ ದುರಂತದಿಂದ ಬಾಧಿತ ಕುಟುಂಬಗಳಿಗೆ ನೀವು ಏನು ಹೇಳಲು ಬಯಸುತ್ತೀರಿ?

ಹೊಸ ವರ್ಷದ ಆರಂಭದಲ್ಲಿ, ಈ ಭೀಕರ ನೋವಿನ ನಡುವೆಯೂ, ಭರವಸೆಯ ಸಂದೇಶವನ್ನು ನೀಡಲು ಬಯಸುತ್ತೇನೆ.

ಕತ್ತಲೆ ಮತ್ತು ನೋವಿನ ನಡುವೆಯೂ ಬೆಳಕು ಸಾಧ್ಯವೆಂದು ಕ್ರೈಸ್ತ ಸಂದೇಶ ಹೇಳುತ್ತದೆ. ಕ್ರಿಸ್ತ ಜಯಂತಿ ಮತ್ತು ಎರಡು ದಿನಗಳಲ್ಲಿ ಆಚರಿಸಲಿರುವ ಎಪಿಫನಿಯ ಸಂದೇಶವೂ ಅದೇ.

ನೋವು ಅನುಭವಿಸುತ್ತಿರುವ ಹೃದಯಗಳಲ್ಲಿ ದೇವರು ಪ್ರವೇಶಿಸಬಲ್ಲನು. ಆತನು ದುರ್ಬಲರ ಜೊತೆ ಒಂದಾಗಿ ನಿಂತಿದ್ದಾನೆ. ಕುಟುಂಬಗಳು ಬೆಳಕಿನ ಸಾಧ್ಯತೆಯನ್ನು ನಂಬುವಂತಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ.

03 ಜನವರಿ 2026, 19:42