ಸೋಲ್ ಮಹಾಧರ್ಮಕ್ಷೇತ್ರದಿಂದ ವಿಶ್ವ ಯುವ ದಿನ (WYD) ಚಿಹ್ನೆಗಳ ದೇಶವ್ಯಾಪಿ ತೀರ್ಥಯಾತ್ರೆ ಆರಂಭ
ಈ 15 ಶಿಲ್ಪಗಳಲ್ಲಿ ಪ್ರತಿಯೊಂದೂ ಕೊರಿಯಾದ ಒಂದೊಂದು ಧರ್ಮಕ್ಷೇತ್ರವನ್ನು ಪ್ರತಿನಿಧಿಸುತ್ತದೆ. ಪ್ರತಿಯೊಂದು ಶಿಲ್ಪದಲ್ಲಿಯೂ ಅದರ ಧರ್ಮಕ್ಷೇತ್ರದ ಹೆಸರು ಅಂಕಿತಗೊಂಡಿದ್ದು, 2025ರ ಡಿಸೆಂಬರ್‌ನಲ್ಲಿ ಚಿಹ್ನೆಗಳು ಕೊರಿಯಾದಿಗೆ ಮರಳಿದ ಬಳಿಕ, WYD ಸೋಲ್ 2027 ಚಿಹ್ನೆಗಳ ದೇಶೀಯ ತೀರ್ಥಯಾತ್ರೆಗೆ ಇದು ಅಧಿಕೃತ ಚಾಲನೆ ನೀಡಿದೆ.
WYD ಪವಿತ್ರ ಶಿಲುಬೆಯ ಚಿಹ್ನೆ ಹಾಗೂ ಮಾತೆ ಮರಿಯಳ ರೋಮ ಜನರ ರಕ್ಷಕಿ (Salus Populi Romani) ಪ್ರತಿಮೆ 2025ರ ಅವಧಿಯಲ್ಲಿ ರೋಮ್ ಸೇರಿದಂತೆ ಒಂಬತ್ತು ದೇಶಗಳನ್ನು ಒಳಗೊಂಡ ಅಂತರರಾಷ್ಟ್ರೀಯ ತೀರ್ಥಯಾತ್ರೆ ನಡೆಸಿದ್ದವು. ಯುವಜನರ ಮಹಾಜುಬಿಲಿಯ ಸಂದರ್ಭದಲ್ಲಿ ಈ ಚಿಹ್ನೆಗಳು ದೇಶದಿಂದ ದೇಶಕ್ಕೆ ಸಂಚರಿಸಿ, ಯುವಜನರ ಪ್ರಾರ್ಥನೆಗಳು ಮತ್ತು ನಿರೀಕ್ಷೆಗಳನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಹೊತ್ತುಕೊಂಡು ಹೋಗಿದ್ದವು.
ಜನವರಿ 20ರಂದು ನಡೆದ ಆಶೀರ್ವಾದ ವಿಧಿವಿಧಾನಕ್ಕೆ ಮಹಾಧರ್ಮಾಧ್ಯಕ್ಷ ಚಂಗ್ ಪೀಟರ್ ಸೂನ್-ತೆಕ್ ಅವರು ಅಧ್ಯಕ್ಷತೆ ವಹಿಸಿದ್ದರು. ವಿಶ್ವ ಯುವ ದಿನದ ಸಿದ್ಧತೆಗಳು ಮುಂದುವರಿಯುತ್ತಿರುವ ಈ ಸಂದರ್ಭದಲ್ಲಿ, ಈ ಶಿಲ್ಪಗಳು “ಸಾಮೂಹಿಕ ಧ್ಯೇಯ ಮತ್ತು ಕೃಪೆಯ” ದೃಶ್ಯ ಸಾಕ್ಷಿಯಾಗಿ ನಿಲ್ಲುತ್ತವೆ ಎಂದು ಅವರು ವಿವರಿಸಿದರು.
“ಪ್ರತಿ ಧರ್ಮಕ್ಷೇತ್ರದ ಹೆಸರನ್ನು ಹೊತ್ತಿರುವ ಈ ಶಿಲ್ಪವು, ಈ ಶ್ರೇಷ್ಠ ಕಾರ್ಯಕ್ರಮದ ಸಿದ್ಧತೆಯಲ್ಲಿ ತೊಡಗಿರುವ ಪ್ರತಿಯೊಬ್ಬರಿಗೂ ತಮ್ಮ ಕರೆಯನ್ನೂ, ತಾವು ಪಡೆದ ಕೃಪೆಯನ್ನೂ ನಿರಂತರವಾಗಿ ನೆನಪಿಸುವುದಾಗಿದೆ” ಎಂದು ಮಹಾಧರ್ಮಾಧ್ಯಕ್ಷ ಚಂಗ್ ಹೇಳಿದರು.
ವಿಶ್ವದ ವಿವಿಧ ಭಾಗಗಳಿಂದ ಆಗಮಿಸುವ ಯುವಜನರನ್ನು ಆತ್ಮೀಯವಾಗಿ ಸ್ವಾಗತಿಸುವ “ಯುವಜನೋತ್ಸವ”ಕ್ಕೆ ಪೂರ್ಣ ಮನಸ್ಸಿನಿಂದ ಸಿದ್ಧರಾಗಬೇಕೆಂದು ಅವರು ವಿಶ್ವಾಸಿಗಳಿಗೆ ಕರೆ ನೀಡಿದರು. ಈ ಶಿಲ್ಪಗಳನ್ನು ನೋಡುವ ಪ್ರತಿಯೊಬ್ಬರೂ ಇನ್ನಷ್ಟು ಪ್ರಭು ಯೇಸು ಕ್ರಿಸ್ತನ ಮಾರ್ಗದಲ್ಲಿ ಬೆಳೆಯಲಿ ಎಂದು ಅವರು ಪ್ರಾರ್ಥಿಸಿದರು.
ವಿಶ್ವ ಯುವ ದಿನದ ಪರಿಸರ ಜವಾಬ್ದಾರಿತನದ ಆದ್ಯತೆಯನ್ನು ಪ್ರತಿಬಿಂಬಿಸುವಂತೆ, ಈ ಶಿಲ್ಪಗಳನ್ನು ಹನಿ-ಕಾಂಬ್ ಬೋರ್ಡ್ (ಜೇನುಗೂಡು ರಚನೆಯ ಹಲಗೆ) ಎಂಬ ಸಂಪೂರ್ಣ ಮರುಬಳಕೆ ಸಾಧ್ಯವಾದ ಕಾಗದ ಆಧಾರಿತ ವಸ್ತುವಿನಿಂದ ತಯಾರಿಸಲಾಗಿದೆ.
ಈ ವಿನ್ಯಾಸವನ್ನು ಯುವ ಸ್ವಯಂಸೇವಕ ಚೋ ಜಂಗ್-ಹೂನ್ ರೂಪಿಸಿದ್ದಾರೆ. ಗಾತ್ರದಲ್ಲಿ ಸ್ವಲ್ಪ ವ್ಯತ್ಯಾಸ ಇದ್ದರೂ, ಪ್ರತಿಯೊಂದು ಶಿಲ್ಪವೂ ಸರಾಸರಿ 1,500 ಮಿಲಿಮೀಟರ್ ಅಗಲ ಮತ್ತು 800 ಮಿಲಿಮೀಟರ್ ಎತ್ತರ ಹೊಂದಿದೆ.
ಈ 15 ಶಿಲ್ಪಗಳನ್ನು ದೇಶದಾದ್ಯಂತ ವಿವಿಧ ಧರ್ಮಕ್ಷೇತ್ರಗಳಿಗೆ ವಿತರಿಸಲಾಗುತ್ತದೆ. ತೀರ್ಥಯಾತ್ರೆಯ ಅವಧಿಯಲ್ಲಿ ಧರ್ಮಕ್ಷೇತ್ರಗಳ ಹಾಗೂ ಧರ್ಮಕೇಂದ್ರಗಳ ಕಾರ್ಯಕ್ರಮಗಳೊಂದಿಗೆ ಇವು ಸಾಗುತ್ತವೆ; ಇದರಿಂದ ಕೊರಿಯಾ ಧರ್ಮಸಭೆಯೊಳಗಿನ ಏಕತೆ ಮತ್ತು ಸಹಭಾಗಿತ್ವದ ಚಿಹ್ನೆಯಾಗಿ ಅವು ಕಾರ್ಯನಿರ್ವಹಿಸಲಿವೆ.
WYD ಶಿಲುಬೆ ಮತ್ತು ಮರಿಯಮ್ಮನ ಪ್ರತಿಮೆಗಳ ದೇಶವ್ಯಾಪಿ ತೀರ್ಥಯಾತ್ರೆ ಜನವರಿ 21ರಂದು ವೋಂಜು ಧರ್ಮಕ್ಷೇತ್ರದಲ್ಲಿ ಆರಂಭಗೊಳ್ಳಲಿದೆ. ಈ ಚಿಹ್ನೆಗಳು ಎಲ್ಲಾ 15 ಧರ್ಮಕ್ಷೇತ್ರಗಳಿಗ ಭೇಟಿ ನೀಡಿ, 2027ರ ಜೂನ್‌ನಲ್ಲಿ ಪುನಃ ಸೋಲ್ ಮಹಾಧರ್ಮಕ್ಷೇತ್ರಕ್ಕೆ ಮರಳಲಿವೆ.
ಈ ಲೇಖನವು ಮೂಲತಃ licas.news ನಲ್ಲಿ ಪ್ರಕಟವಾಗಿದೆ. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಮೂರನೇ ವ್ಯಕ್ತಿಗಳಿಂದ ಅನಧಿಕೃತ ಮರುಪ್ರಕಟಣೆ ಅನುಮತಿಸಲಾಗುವುದಿಲ್ಲ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).