ಹುಡುಕಿ

Epiphany Day procession in Poland Epiphany Day procession in Poland  (ANSA)

ಪೋಲ್ಯಾಂಡ್: ದೈವ ದರ್ಶನದ ಹಬ್ಬದಂದು ಸಾವಿರಾರು ಜನರ ಮೂರು ರಾಯರ ಮೆರವಣಿಗೆಗೆ ಪೂಜ್ಯ ಜಗದ್ಗುರುಗಳ ಆಶೀರ್ವಾದ

ದೈವ ದರ್ಶನದ ಹಬ್ಬದಂದು ಪೋಲ್ಯಾಂಡ್‌ನ ವಾರ್ಸಾ ನಗರದಲ್ಲಿ ನಡೆಯುವ ವಿಶ್ವದ ಅತಿದೊಡ್ಡ ಬೀದಿ ಕ್ರಿಸ್ತಜನನ ಪ್ರದರ್ಶನವಾದ ಮೂರು ರಾಯರ ಮೆರವಣಿಗೆಗೆ ಪೂಜ್ಯ ಜಗದ್ಗುರುಗಳಾದ 14ನೆಯ ಲಿಯೋ ಅವರು ತಮ್ಮ ಅಪೋಸ್ತೋಲಿಕ ಆಶೀರ್ವಾದವನ್ನು ನೀಡಿದ್ದಾರೆ. ಈ ವರ್ಷ ವಾರ್ಸಾ ನಗರದ ರಾಜಮಾರ್ಗದಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಪೋಲ್ಯಾಂಡ್ ಹಾಗೂ ವಿಶ್ವದಾದ್ಯಂತ ಸುಮಾರು 1,000 ಸ್ಥಳಗಳಲ್ಲಿ ಇಂತಹ ಮೆರವಣಿಗೆಗಳು ನಡೆದವು. ವಾರ್ಸಾ – ಕರೋಲ್ ಡಾರ್ಮೊರೋಸ್

ಪವಿತ್ರ ಸಿಂಹಾಸನದ ರಾಜ್ಯಕಾರ್ಯದರ್ಶಿ ಇಲಾಖೆಯ ಸಾಮಾನ್ಯ ವ್ಯವಹಾರಗಳ ಪ್ರತಿನಿಧಿ, ಈ ಆಶೀರ್ವಾದದ ಪತ್ರವನ್ನು ಮೂರು ರಾಯರ ಮೆರವಣಿಗೆ ಪ್ರತಿಷ್ಠಾನದ ಅಧ್ಯಕ್ಷ ಪಿಯೊತ್ರ್ ಗಿಯರ್ಟಿಕ್ ಅವರಿಗೆ ಕಳುಹಿಸಿದರು. ಈ ಪ್ರತಿಷ್ಠಾನವೇ ಈ ಮೆರವಣಿಗೆಗಳನ್ನು ಆಯೋಜಿಸುತ್ತದೆ.

ಪತ್ರದಲ್ಲಿ ಪೂಜ್ಯ ಜಗದ್ಗುರುಗಳಾದ  14ನೆಯ ಲಿಯೋ  ಅವರು, ವಿಶ್ವದ ವಿವಿಧ ಭಾಗಗಳಲ್ಲಿ ನಡೆಯುವ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಎಲ್ಲರಿಗೂ ತಮ್ಮ ಆತ್ಮೀಯ ಬೆಂಬಲವನ್ನು ವ್ಯಕ್ತಪಡಿಸಿದರು.

2009ರಿಂದ ಪೋಲ್ಯಾಂಡ್ ಹಾಗೂ ಇತರೆ ದೇಶಗಳಲ್ಲಿ ದೈವ ದರ್ಶನದ ಹಬ್ಬದಂದು ನಡೆಯುತ್ತಿರುವ ಮೂರು ರಾಯರ ಮೆರವಣಿಗೆಯ ಉದ್ದೇಶವನ್ನು ಅವರು ಸ್ಮರಿಸಿದರು. ನಗರಗಳು ಮತ್ತು ಹಳ್ಳಿಗಳ ಬೀದಿಗಳಲ್ಲಿ ಕ್ರಿಸ್ತನಿಗೆ ಸಾಕ್ಷಿಯಾಗುವ ಎಲ್ಲರೊಂದಿಗೆ ಆತ್ಮೀಯವಾಗಿ ಒಂದಾಗಿರುವುದಾಗಿ ಅವರು ಹೇಳಿದರು.

ಭರವಸೆಯ ಮೆರವಣಿಗೆ

ಮೂರು ರಾಯರ ಮೆರವಣಿಗೆ ಪವಿತ್ರ ಗ್ರಂಥದಲ್ಲಿ ಬೆತ್ಲೆಹೇಮಿನ ಬಂದ ಮೂರು ರಾಯರ ಕಥೆಯಿಂದ ಪ್ರೇರಿತವಾದ ಕುಟುಂಬ ಕೇಂದ್ರಿತ ಮೆರವಣಿಗೆಯಾಗಿದೆ.

ಮಕ್ಕಳು, ಕುಟುಂಬಗಳು ಮತ್ತು ಸ್ವಯಂಸೇವಕರು ರಾಯರು, ಕುರಿಗಾಹಿಗಳು, ದೇವದೂತರು ಮೊದಲಾದ ಪಾತ್ರಗಳನ್ನು ವಹಿಸುತ್ತಾರೆ. ಇದು ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವ ಹೊಂದಿದ್ದು, ಸಾರ್ವಜನಿಕವಾಗಿ ವಿಶ್ವಾಸಕ್ಕೆ ಸಾಕ್ಷಿಯಾಗುವ ಒಂದು ಸಂದರ್ಭವಾಗಿದೆ.

ಈ ವರ್ಷದ ಮೆರವಣಿಗೆ “ಭರವಸೆಯಲ್ಲಿ ಆನಂದಿಸೋಣ” ಎಂಬ ಘೋಷಣೆಯೊಂದಿಗೆ ನಡೆಯಿತು. ಮೂರು ರಾಯರ ನಂಬಿಕೆ ಮತ್ತು ಸಹನಶೀಲತೆ ಇಂದಿನ ಕ್ರೈಸ್ತರಿಗೆ ಸಹ ಪ್ರಾಸಂಗಿಕ ಸಂದೇಶವನ್ನು ನೀಡುತ್ತದೆ ಎಂದು ಒತ್ತಿಹೇಳಲಾಯಿತು. ಈ ಮೆರವಣಿಗೆ ಎಲ್ಲರನ್ನೂ ಚಿಹ್ನಾತ್ಮಕವಾಗಿ ಬೆತ್ಲೆಹೇಮಿನ ಪವಿತ್ರ ಕುಟುಂಬದ ಕಡೆಗೆ ಮುಖಮಾಡುವಂತೆ ಆಹ್ವಾನಿಸುತ್ತದೆ.

ಪ್ರಾರ್ಥನೆ ಮತ್ತು ಧರ್ಮಸಭೆಯ ಧರ್ಮಾಧ್ಯಕ್ಷರ ಸಂದೇಶ

ವಾರ್ಸಾದ ಮೆರವಣಿಗೆ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಈ ಪ್ರಾರ್ಥನೆಯನ್ನು ವಾರ್ಸಾದ ಮಹಾಧರ್ಮಾಧ್ಯಕ್ಷರಾದ ಅಡ್ರಿಯನ್ ಗಾಲ್ಬಾಸ್ ಅವರು ನೇತೃತ್ವ ವಹಿಸಿದರು.

ಇತ್ತೀಚೆಗೆ ಮುಕ್ತಾಯವಾದ ಜುಬಿಲಿ ವರ್ಷವನ್ನು “ಭರವಸೆಯ ಯಾತ್ರಿಕರು” ಎಂಬ ಮನೋಭಾವದಲ್ಲಿ ಆಚರಿಸಲಾಗಿದೆ ಎಂದು ಅವರು ನೆನಪಿಸಿದರು. ಆ ಯಾತ್ರೆ ಈಗ ಮೆರವಣಿಗೆಯ ಮೂಲಕ ಮುಂದುವರಿಯುತ್ತಿದೆ ಎಂದು ಹೇಳಿದರು.

ಹಬ್ಬದ ದಿನಗಳಲ್ಲಿ ಮಾತ್ರವಲ್ಲದೆ ದೈನಂದಿನ ಜೀವನದಲ್ಲಿಯೂ ಕ್ರೈಸ್ತ ಜೀವನಕ್ಕೆ ಸಾಕ್ಷಿಯಾಗಬೇಕೆಂದು ಅವರು ವಿಶ್ವಾಸಿಗಳನ್ನು ಪ್ರೋತ್ಸಾಹಿಸಿದರು.

ಖಂಡಗಳನ್ನು ಒಂದಾಗಿಸುವ ಮೆರವಣಿಗೆ

ವಾರ್ಸಾದ ಮೂರು ರಾಯರ ಮೆರವಣಿಗೆಯ ವಿಶೇಷತೆ ಎಂದರೆ ಯುರೋಪ್, ಏಷ್ಯಾ ಮತ್ತು ಆಫ್ರಿಕಾ ಎಂಬ ಮೂರು ಖಂಡಗಳನ್ನು ಪ್ರತಿನಿಧಿಸುವ ಮೂರು ಮೆರವಣಿಗೆಗಳು.

ವಿಭಿನ್ನ ದೇಶಗಳು ಮತ್ತು ಹಿನ್ನೆಲೆಯವರು ಮೂರು ರಾಯರ ಪಾತ್ರ ವಹಿಸಿದ್ದರು. ಇವರೊಂದಿಗೆ ಯೋಧರು, ಮಹಿಳಾ ಸೇವಕರು ಮತ್ತು ಪ್ರಾಣಿಗಳು ಇದ್ದವು. ದೇವದೂತರು ಮತ್ತು ದೈತ್ಯರ ದೃಶ್ಯಗಳು ಒಳಿತು–ಕೆಟ್ಟದ ನಡುವಿನ ಆಧ್ಯಾತ್ಮಿಕ ಹೋರಾಟವನ್ನು ತೋರಿಸಿದವು. ಮೆರವಣಿಗೆಯ ಮುಂಚಿತವಾಗಿ ಯೇಸುವಿನ ಜನನವನ್ನು ಘೋಷಿಸುವ ದೊಡ್ಡ ದೇವದೂತನ ಪ್ರತಿಮೆ ಸಾಗಿತು.

ಪವಿತ್ರ ಕುಟುಂಬದ ಪಾತ್ರವನ್ನು ಮ್ಯಾಗ್ಡಲೆನಾ ಮತ್ತು ಪಾವೆಲ್ ನೋವಿಕ್ಕಿ ಅವರು ತಮ್ಮ ಒಂದು ವರ್ಷದ ಮಗುವಿನೊಂದಿಗೆ ನಿರ್ವಹಿಸಿದರು. ಇದು ಮಕ್ಕಳಿಗೆ ವಿಶ್ವಾಸದ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

ಪೋಲ್ಯಾಂಡ್‌ನ ರಾಷ್ಟ್ರಪತಿಯೂ ಅವರ ಪತ್ನಿಯೂ ಈ ಮೆರವಣಿಗೆಯಲ್ಲಿ ಭಾಗವಹಿಸಿದರು.

ವೇಗವಾಗಿ ಬೆಳೆಯುತ್ತಿರುವ ಯುವ ಪರಂಪರೆ

ವಾರ್ಸಾದ ಮೂರು ರಾಯರ ಮೆರವಣಿಗೆ ಪೋಲ್ಯಾಂಡ್‌ನಲ್ಲೇ ಅತಿ ದೊಡ್ಡದು ಮತ್ತು ಅತ್ಯಂತ ಹಳೆಯದು. ಇದನ್ನು 2009ರಲ್ಲಿ “ಝಾಗ್ಲೆ” ಶಾಲೆ ಆರಂಭಿಸಿತು. ಈಗ ಈ ಕಾರ್ಯಕ್ರಮವನ್ನು ಮೂರು ರಾಯರ ಮೆರವಣಿಗೆ ಪ್ರತಿಷ್ಠಾನ ಆಯೋಜಿಸುತ್ತದೆ.

ಪೋಲ್ಯಾಂಡ್‌ನಲ್ಲಿ ದೈವ ದರ್ಶನದ ಹಬ್ಬವು 2011ರವರೆಗೆ ಸಾರ್ವಜನಿಕ ರಜೆ ಆಗಿರಲಿಲ್ಲ. ರಜೆ ಘೋಷಣೆಯಾದ ನಂತರ ಪೋಲ್ಯಾಂಡ್ ಮತ್ತು ವಿದೇಶಗಳಲ್ಲಿ ಈ ಮೆರವಣಿಗೆಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ.

07 ಜನವರಿ 2026, 14:38