ಹುಡುಕಿ

Canonisation of Carlo Acutis and Pier Giorgio Frassati, at the Vatican Canonisation of Carlo Acutis and Pier Giorgio Frassati, at the Vatican 

ಮಯನ್ಮಾರ್: ಭರವಸೆಯ ಸಂಕೇತವಾಗಿ ಸಂತ ಕಾರ್ಲೊ ಅಕುಟಿಸ್ ಪ್ರತಿಮೆ ಸ್ಥಾಪನೆ

ಮಯನ್ಮಾರಿನಲ್ಲಿ ಸಂತ ಕಾರ್ಲೋ ಅಕುಟಿಸ್ ಅವರ ಪ್ರತಿಮೆಯನ್ನು ಅಧಿಕೃತವಾಗಿ ಅನಾವರಣಗೊಳಿಸಲಾಗಿದೆ. ಈ ಕುರಿತು ಮಾತನಾಡಿದ ಒಬ್ಬ ಧರ್ಮಕ್ಷೇತ್ರದ ವಂದನೀಯ ಗುರು ಜಾನ್ ಆಂಗ್ ಹ್ಟೊಯ್, “ರಾಷ್ಟ್ರವು ಎದುರಿಸುತ್ತಿರುವ ಈ ಕಠಿಣ ಸಮಯದಲ್ಲಿ, ಹೋರಾಟಗಳ ನಡುವೆಯೂ ಯುವಜನರು ಹೇಗೆ ವಿಶ್ವಾಸದಲ್ಲಿ ದೃಢ ವಾಗಿ ಬದುಕಬೇಕು ಎಂಬುದಕ್ಕೆ ಇದು ಒಂದು ಸ್ಪಷ್ಟ ಮಾದರಿಯನ್ನು ನೀಡುತ್ತದೆ” ಎಂದು ತಿಳಿಸಿದ್ದಾರೆ. ಲೇಖಕರು : ಕೀಲ್ಸ್ ಗಸ್ಸಿ

ಮುಂದುವರಿಯುತ್ತಿರುವ ಕಠಿಣ ಅಂತರ್ಯುದ್ಧದ ನೆರಳಿನಲ್ಲಿಯೇ, ಮಯನ್ಮಾರಿನ ಸ್ಥಳೀಯ ಕಥೋಲಿಕ ಧರ್ಮಸಭೆ ಸಾವಿರಾರು ಯುವಜನರ ಮನಸ್ಸಿಗೆ ಭರವಸೆಯ ಕಿರಣವನ್ನು ಬೆಳಗಿಸುವ ಪ್ರಯತ್ನ ಕೈಗೊಂಡಿದೆ.

ಇಟಲಿಯ “ಸ್ನೀಕರ್ಸ್ ಧರಿಸಿದ ಸಂತ” ಎಂದೇ ಜನಪ್ರಿಯರಾಗಿರುವ ಸಂತ ಕಾರ್ಲೊ ಅಕುಟಿಸ್ ಅವರ ಪ್ರತಿಮೆಯನ್ನು, ಕಚಿನ್ ರಾಜ್ಯದ ರಾಜಧಾನಿಯಾದ ಮೈಟ್ಕಿನಾ ಧರ್ಮಪ್ರಾಂತ್ಯದ ಸಂತ ಕೊಲಂಬಾನಸ್ ಪ್ರಧಾನ ದೇವಾಲಯದಲ್ಲಿ ಪ್ರತಿಷ್ಠಾಪಿಸಿ ಅನಾವರಣಗೊಳಿಸಲಾಗಿದೆ.

ಯುದ್ಧಭೂಮಿಯ ಮಧ್ಯೆ ಸಾಕ್ಷಿ—ಜೀವಂತ ಮಾದರಿ

ವ್ಯಾಟಿಕನ್‌ನ ಫೀಡೆಸ್ ಸುದ್ದಿಸಂಸ್ಥೆಯ ವರದಿ ಪ್ರಕಾರ, ಮಯನ್ಮಾರಿನಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಪ್ರತಿಮೆ ಅನಾವರಣ ಕಾರ್ಯಕ್ರಮ ನಡೆಯಿತು. ಇದು ಮೈಟ್ಕಿನಾ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಜಾನ್ ಲಾ ಸ್ಯಾಮ್ ಅವರ ಗುರುಪಟ್ಟಾಭಿಷೇಕದ ಹತ್ತನೇ ವರ್ಷಾಚರಣೆ ಹಾಗೂ ಧರ್ಮಾಧ್ಯಕ್ಷೀಯ ಅಭಿಷೇಕದ ಮೊದಲ ವರ್ಷಾಚರಣೆ ಸಂದರ್ಭದಲ್ಲಿ ನೆರವೇರಿತು.

ಈ ಐತಿಹಾಸಿಕ ಕ್ಷಣದ ಹಿಂದಿರುವ ಆಶಯವನ್ನು ಧರ್ಮಕ್ಷೇತ್ರದ ವಂದನೀಯ ಗುರು ಜಾನ್ ಆಂಗ್ ಹ್ಟೊಯ್ ವಿವರಿಸುತ್ತಾ “ತಮ್ಮ ಜೀವನದ ಹೋರಾಟಗಳಲ್ಲಿ, ವಿಶೇಷವಾಗಿ ರಾಷ್ಟ್ರ ಎದುರಿಸುತ್ತಿರುವ ಈ ಕಠಿಣ ಕಾಲಘಟ್ಟದಲ್ಲಿ, ತಮ್ಮ ಬದುಕಿನಲ್ಲಿಯೇ ನಂಬಿಕೆಯ ಸಾಕ್ಷಿಯಾಗುವುದು ಹೇಗೆ ಎಂಬುದನ್ನು  ಸಂತ ಕಾರ್ಲೊ ಅಕುಟಿಸ್ ಅವರು ಯುವಜನರಿಗೆ ಕಲಿಸುತ್ತಾರೆ, ಇದೇ ಈ ಪ್ರತಿಮೆಯ ಅನಾವರಣದ ಉದ್ದೇಶ” ಎಂದು ಹೇಳಿದರು.

ಮಯನ್ಮಾರಿನಲ್ಲಿ ಯುವಜನರು ತಮ್ಮ ನಂಬಿಕೆಯನ್ನು ಬದುಕಿನಲ್ಲಿ ಉಳಿಸಿಕೊಂಡು ಸಾಗಲು, ಅಂತರಜಾಲ ಹಾಗೂ ಸಾಮಾಜಿಕ ಮಾಧ್ಯಮಗಳನ್ನು ಶಿಸ್ತುಬದ್ಧವಾಗಿ ಮತ್ತು ವಿವೇಕದಿಂದ ಬಳಸುವ ಜವಾಬ್ದಾರಿಯ ಪ್ರತೀಕವಾಗಿ ಈ ಪ್ರತಿಮೆ ನಿಲ್ಲಬೇಕೆಂದು ಧರ್ಮಸಭೆ ಆಶಿಸುತ್ತದೆ.

ಸಂತ ಕಾರ್ಲೊ ಅಕುಟಿಸ್ ಅವರನ್ನು “ಅಂತರಜಾಲದ ಪಾಲಕ ಸಂತ” ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಅಂತರ್ಯುದ್ಧದಿಂದ ಚೂರಾಗಿ ಹರಿದುಹೋದ ದೇಶದ ಸಂಕಷ್ಟದ ನಡುವೆ ಬದುಕು ಕಟ್ಟಿಕೊಳ್ಳಬೇಕಾದ ಯುವಜನರಿಗೆ, ಅವರು ದಾರಿದೀಪವಾಗಿ ಕಾಣಬೇಕು ಎಂದು ವಂದನೀಯ ಗುರು ಹ್ಟೊಯ್ ಹೇಳಿದರು.

ಅವರು ಯುವಜನರು ಎದುರಿಸುತ್ತಿರುವ ಹಿಂಸೆ, ಅಪರಾಧ, ಮಾದಕವಸ್ತುಗಳ ಹಾವಳಿ, ಕುಟುಂಬ ವ್ಯವಸ್ಥೆಯ ಸಡಿಲಿಕೆ, ಹಾಗೂ ಕಾನೂನು ರಕ್ಷಣೆಯಿಲ್ಲದೆ ಹರಡುತ್ತಿರುವ ಸಾಮಾಜಿಕ ಮಾಧ್ಯಮಗಳ ದುರುಪಯೋಗಗಳಂತಹ “ಸಾಮಾಜಿಕ ಹಾಗೂ ನೈತಿಕ ಅಪಾಯಗಳ” ಮೇಲೂ ಬೆಳಕು ಚೆಲ್ಲಿದರು.

ಇಂತಹ ಸ್ಥಿತಿಯಲ್ಲಿಯೇ ಯುವಜನರು ಧರ್ಮಸಭೆ ಮತ್ತು ಅದರ ಬೋಧನೆಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಆ ಬೋಧನೆಗಳು ಕ್ರಿಸ್ತನ ಮಾರ್ಗದಲ್ಲಿ ಬದುಕನ್ನು ಕಟ್ಟಿಕೊಳ್ಳಲು ದೃಢ ಅಡಿಪಾಯ ನೀಡುತ್ತವೆ ಎಂದು ಅವರು ಹೇಳಿದರು.

ಯುವಜನರನ್ನು ಜೊತೆಯಲ್ಲಿ ನಡೆಸಲು, ದೇಶದ ವಿವಿಧ ಧರ್ಮಕ್ಷೇತ್ರಗಳು ಯುವ ಶಿಬಿರಗಳು, ನಂಬಿಕೆ ರೂಪಿಸುವ ಕಾರ್ಯಕ್ರಮಗಳು, ಹಾಗೂ ಶೈಕ್ಷಣಿಕ ಚಟುವಟಿಕೆಗಳು ಮೂಲಕ ನಿರಂತರ ಮಾರ್ಗದರ್ಶನ ನೀಡುತ್ತಿವೆ ಎಂದು ವಂದನೀಯ ಗುರು ಹ್ಟೊಯ್ ವಿವರಿಸಿದರು.

“ಕಳೆದುಹೋದ ಪೀಳಿಗೆ” ಆಗುವ ಭೀತಿ

“ಮಯನ್ಮಾರಿನ  ಇಂದಿನ  ಯುವಜನರಿಗೆ ಅರ್ಥಮಾಡಿಕೊಳ್ಳುವ ಮನಸ್ಸು, ಮಾರ್ಗದರ್ಶನ, ಮತ್ತು ವಿಶ್ವಾಸ ಅತ್ಯಂತ ಅಗತ್ಯ,” ಎಂದು ವಂದನೀಯ ಗುರು ಒತ್ತಿ ಹೇಳಿದರು. ಅದೇ ವೇಳೆ, ತಮ್ಮ ನಡೆ-ನುಡಿಗಳ ಹೊಣೆಗಾರಿಕೆಯನ್ನು ಯುವಜನರು ತಾವೇ ವಹಿಸಿಕೊಳ್ಳಬೇಕೆಂದೂ ಅವರು ಹೇಳಿದರು. “ಯುವಜನರು ನಾಳೆಯ ಭವಿಷ್ಯದ ಅತ್ಯಮೂಲ್ಯ ಸಂಪತ್ತು. ಆದ್ದರಿಂದ ಅವರನ್ನು ಕಾಪಾಡುವುದು ನಮ್ಮ ಕರ್ತವ್ಯ,” ಎಂದು ಅವರು ಸ್ಪಷ್ಟಪಡಿಸಿದರು.

ಮಯನ್ಮಾರಿನಾದ್ಯಂತ ವಿಶೇಷವಾಗಿ ಸಂಘರ್ಷ ಮತ್ತು ಹಿಂಸೆ ಮುಂದುವರಿಯುತ್ತಿರುವ ಪ್ರದೇಶಗಳಲ್ಲಿ—ಯುವಜನರು ಅತ್ಯಂತ ಅಸುರಕ್ಷಿತ ವರ್ಗವಾಗಿ ಉಳಿದಿದ್ದಾರೆ. ಅನೇಕರು ಗೃಹರಹಿತರಾಗಿದ್ದಾರೆ; ಅನಾಥರಾಗಿದ್ದಾರೆ; ಅಥವಾ ಕುಟುಂಬ ಬೆಂಬಲವಿಲ್ಲದೆ ಉಳಿದಿದ್ದಾರೆ. ಇದರಿಂದ ಅವರು “ಕಳೆದುಹೋದ ಪೀಳಿಗೆ”ಯಾಗುವ ಅಪಾಯದ ಅಂಚಿನಲ್ಲಿ ನಿಂತಿದ್ದಾರೆ.

ಈ ಸವಾಲುಗಳಿಗೆ ಎದುರಾಗಿ, ಮಂಡಲೇ ಮಹಾಧರ್ಮಕ್ಷೇತ್ರದಲ್ಲಿ 2014ರಲ್ಲಿ ಸ್ಥಾಪನೆಯಾದ “ಡಾನ್ ಬೊಸ್ಕೊ” ಯುವ ಕೇಂದ್ರವು, ಕಷ್ಟಕರ ಹಿನ್ನೆಲೆಯ ಸುಮಾರು 60 ಯುವಜನರಿಗೆ ಆಶ್ರಯವಾಗಿದೆ—ಅದರಲ್ಲೂ ಅನಾಥರು ಮತ್ತು ಬೀದಿಯಲ್ಲಿ ಬದುಕುತ್ತಿದ್ದವರು ಹೆಚ್ಚಾಗಿದ್ದಾರೆ.

ಈ ಕೇಂದ್ರದಲ್ಲಿ ಯುವಜನರಿಗೆ ಆರೈಕೆ, ಆಶ್ರಯ, ಆಹಾರ, ಶಾಲಾ ಶಿಕ್ಷಣ, ಆರೋಗ್ಯ ಸೇವೆ ಮತ್ತು ವಿದ್ಯಾಭ್ಯಾಸದ ಜೊತೆಗೆ, ಕ್ರೀಡೆ, ಸಂಗೀತ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನೂ ಒದಗಿಸಲಾಗುತ್ತಿದೆ. ಇದು ಸಲೇಶಿಯನ್ ಮಿಷನರಿಗಳ ಸೇವಾತ್ಮತತ್ತ್ವದ ಭಾಗವಾಗಿದೆ.

ವಂದನೀಯ ಗುರುಗಳ ಪ್ರಕಾರ,“ಯುವಜನರು ಸುರಕ್ಷತೆ, ಮಾನವ ಘನತೆ ಮತ್ತು ಆಶೆಯೊಂದಿಗೆ ಬೆಳೆಯುವಂತೆ ಅವರನ್ನು ಜೊತೆಯಲ್ಲಿ ನಡೆಸುವುದು” ಸಲೇಶಿಯನ್ ಗುರುಗಳ ಧ್ಯೇಯವಾಗಿದೆ.

ದೃಷ್ಟಿಕೋನ ಬದಲಿಸಿದ ಕಾಲದ ತಿರುವು

2021ರಲ್ಲಿ ನಡೆದ ಸೇನಾ ಆಡಳಿತದ ದಂಗೆ (ಕೂಪ್) ಮಯನ್ಮಾರಿನ ಇತಿಹಾಸದಲ್ಲೇ ಮಹತ್ವದ ತಿರುವಾಗಿತ್ತು. ಸುಮಾರು ಒಂದು ದಶಕದ ಕಾಲ ರೂಪುಗೊಳ್ಳುತ್ತಿದ್ದ ಸೂಕ್ಷ್ಮ ಪ್ರಜಾಸತ್ತಾತ್ಮಕ ಪ್ರಕ್ರಿಯೆ ಅದರಿಂದ ಚೂರಾಗಿ ಹೋಯಿತು. ಪ್ರಜಾಪ್ರಭುತ್ವ ಪುನಃಸ್ಥಾಪನೆಗಾಗಿ ಸಾವಿರಾರು ಯುವಜನರು ಶಾಂತಿಯುತವಾಗಿ ಪ್ರತಿಭಟಿಸಿದರು; ಬಳಿಕ ಕೆಲವರು ಸಶಸ್ತ್ರ ಪ್ರತಿರೋಧ ಸಂಘಟನೆಗಳತ್ತ ಹೆಜ್ಜೆ ಹಾಕಿದರು.

ಮೂರು ವರ್ಷಗಳ ಬಳಿಕ, ಸೇನಾ ಆಡಳಿತವು ಕಡ್ಡಾಯ ಸೇನಾ ಸೇವಾ ಕಾಯ್ದೆ ಜಾರಿಗೆ ತಂದು, ಸುಮಾರು 60,000 ಯುವಜನರನ್ನು ಮುಂಚೂಣಿ ಪ್ರದೇಶಗಳಿಗೆ ಕಳುಹಿಸುವಂತೆ ಒತ್ತಾಯಿಸಿತು. ಪರಿಣಾಮವಾಗಿ, ಸುಮಾರು 100,000 ಯುವಜನರು—ಮುಖ್ಯವಾಗಿ ಥೈಲ್ಯಾಂಡ್ ಕಡೆಗೆ—ವಲಸೆ ಹೋಗಿದ್ದಾರೆ ಅಥವಾ ಅಡಗಿಹೋಗಿದ್ದಾರೆ.

15 ರಿಂದ 35 ವರ್ಷದ ಯುವಜನರು ಮಯನ್ಮಾರ್ ಜನಸಂಖ್ಯೆಯ 33% ಆಗಿದ್ದು, ದೇಶದ ಮಧ್ಯಮ ವಯಸ್ಸು 27. ಈ ಪೀಳಿಗೆಯವರಿಗೆ 2021ರ ದಂಗೆ ಕೇವಲ ರಾಜಕೀಯ ಘಟನೆ ಮಾತ್ರವಲ್ಲ—ಯುವಜನರ ವೈಯಕ್ತಿಕ ಸ್ವಾತಂತ್ರ್ಯ, ಹಕ್ಕುಗಳು ಮತ್ತು ಪ್ರಜಾಸತ್ತಾತ್ಮಕ ಅನುಭವವನ್ನೇ ನೇರವಾಗಿ ಗಾಯಗೊಳಿಸಿದ ಸತ್ಯವಾಗಿದೆ.

 

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

21 ಜನವರಿ 2026, 11:40