ಹುಡುಕಿ

2026.01.10 Mons. Iyad Twal, vicario del Patriarca latino di Gerusalemme in Giordania 2026.01.10 Mons. Iyad Twal, vicario del Patriarca latino di Gerusalemme in Giordania  (©Don Pawel Rytel-Andrianik)

ಜೋರ್ಡಾನ್‌ನ ಲ್ಯಾಟಿನ್ ಪಿತೃಸ್ಥಾನಿಕ ಪ್ರತಿನಿಧಿ: ಭಿನ್ನತೆಗಳ ಮೇಲೆ ಗಮನಹರಿಸುವುದರಿಂದ ಶಾಂತಿ ಬರದು

ಜೋರ್ಡಾನ್‌ನ ಲ್ಯಾಟಿನ್ ಪಿತೃಸ್ಥಾನಿಕ ಪ್ರತಿನಿಧಿ, ಬಿಷಪ್ ಇಯಾದ್ ಟ್ವಾಲ್ ಅವರು, ಜನವರಿ 9 ಶುಕ್ರವಾರ, ಜೋರ್ಡಾನ್ನ ಬೆಥನಿ ಬಿಯಾಂಡ್ ದ ಜೋರ್ಡಾನ್‌ನಲ್ಲಿರುವ “ಪ್ರಭುವಿನ ದೀಕ್ಷಾಸ್ನಾನ” ದೇವಾಲಯದಲ್ಲಿ ನಡೆದ ಯಾತ್ರೆ ಮತ್ತು ಪ್ರಭುವಿನ ದೀಕ್ಷಾಸ್ನಾನದ ಹಬ್ಬದ ಬಲಿಪೂಜೆ ಸಂದರ್ಭದಲ್ಲಿ ವ್ಯಾಟಿಕನ್ ನ್ಯೂಸ್‌ಗೆ ಮಾತನಾಡಿದರು. ಮಧ್ಯಪ್ರಾಚ್ಯದಲ್ಲಿ ಶಾಂತಿ ಮತ್ತು ನ್ಯಾಯವನ್ನು ಬೆಳೆಸಲು ಧಾರ್ಮಿಕ ಮತ್ತು ಸಾಂಸ್ಕೃತಿಕ ಭಿನ್ನತೆಗಳಿಗೆ ಗೌರವ ಅಗತ್ಯವೆಂದು ಅವರು ಒತ್ತಿಹೇಳಿದರು. ಕ್ಲೌಡಿಯಾ ಟೊರೆಸ್ – ಜೋರ್ಡಾನ್

ಜೋರ್ಡಾನ್‌ನ ಲ್ಯಾಟಿನ್ ಪಿತೃಸ್ಥಾನಿಕ ಪ್ರತಿನಿಧಿ, ಧರ್ಮಾಧ್ಯಕ್ಷ ಪೂಜ್ಯ ಇಯಾದ್ ಟ್ವಾಲ್ ಅವರು, ಜನವರಿ 9 ಶುಕ್ರವಾರ, ಬೆಥನಿ ಬಿಯಾಂಡ್ ದ ಜೋರ್ಡಾನ್ನಲ್ಲಿರುವ “ಪ್ರಭುವಿನ ದೀಕ್ಷಾಸ್ನಾನ” ದೇವಾಲಯದಲ್ಲಿ, ಯಾತ್ರೆ ಮತ್ತು ಪ್ರಭುವಿನ ದೀಕ್ಷಾಸ್ನಾನದ ಹಬ್ಬದ ಬಲಿಪೂಜೆ ಸಂದರ್ಭದಲ್ಲಿ ವ್ಯಾಟಿಕನ್ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದರು.

ಮಧ್ಯಪ್ರಾಚ್ಯದಲ್ಲಿ ಶಾಂತಿ ಮತ್ತು ನ್ಯಾಯವನ್ನು ಬೆಳೆಸಲು ಧಾರ್ಮಿಕ ಮತ್ತು ಸಾಂಸ್ಕೃತಿಕ ಭಿನ್ನತೆಗಳಿಗೆ ಗೌರವ ನೀಡುವುದು ಅತ್ಯಾವಶ್ಯಕವೆಂದು ಧರ್ಮಾಧ್ಯಕ್ಷರು ಒತ್ತಿಹೇಳಿದರು. ಮುಸ್ಲಿಂ ಬಹುಸಂಖ್ಯಾತ ದೇಶವಾಗಿದ್ದರೂ, ಸಕ್ರಿಯ ಕ್ರೈಸ್ತ ಸಮುದಾಯವಿರುವ ಹಶೆಮೈಟ್ ಸಾಮ್ರಾಜ್ಯದ ಜೋರ್ಡಾನ್ ದೇಶವನ್ನು ಸಹಬಾಳ್ವೆಯ ಉದಾಹರಣೆಯಾಗಿ  ಉಲ್ಲೇಖಿಸಿದರು.

(ಈ ಕೆಳಗೆ ಸಂದರ್ಶನದ ಲಿಖಿತ ರೂಪವನ್ನು ನೀಡಲಾಗಿದೆ. ಸ್ಪಷ್ಟತೆಯ ಸಲುವಾಗಿ ಸ್ವಲ್ಪ ಬದಲಾವಣೆ ಮಾಡಲಾಗಿದೆ.)

ಪ್ರಶ್ನೆ: ಇಂದು ಜೋರ್ಡಾನ್‌ನಲ್ಲಿ ಯೇಸುವಿನ ದೀಕ್ಷಾಸ್ನಾನ ನಡೆದ ಸ್ಥಳದಲ್ಲಿ ನಡೆದ ಈ ಆಚರಣೆಯ ಮಹತ್ವವನ್ನು ತಿಳಿಸಬಹುದೇ?

ಉತ್ತರ: ನಾವು ಜೋರ್ಡಾನಿಯರು, ಕ್ರೈಸ್ತರು, ಕಥೋಲಿಕರು ಎಂಬುದರ ಬಗ್ಗೆ ಬಹಳ ಸಂತೋಷ ಮತ್ತು ಹೆಮ್ಮೆಯಿದೆ. ಇಂದು, ಪ್ರಭುವಿನ ದೀಕ್ಷಾಸ್ನಾನದ ಹಬ್ಬವು  ರಾಷ್ಟ್ರಮಟ್ಟದಲ್ಲಿಯೂ, ಸ್ಥಳೀಯ ಮಟ್ಟದಲ್ಲಿಯೂ, ಹಾಗೆಯೇ ನಮ್ಮ ಧರ್ಮಸಭೆಗಳಿಗೂ ಬಹಳ ಅರ್ಥಪೂರ್ಣವಾಗಿದೆ. ಉತ್ತರದಿಂದ ದಕ್ಷಿಣದವರೆಗೆ ಎಲ್ಲಾ ಧರ್ಮಕೇಂದ್ರಗಳಿಂದ ನಾವು ಇಲ್ಲಿ ಸೇರಿ ಒಟ್ಟಾಗಿ ಪ್ರಾರ್ಥನೆ ಮಾಡಲು ಬಂದಿದ್ದೇವೆ. ಒಟ್ಟಾಗಿ ಪ್ರಾರ್ಥಿಸುವುದು ನಾವು ಈ ಭೂಮಿಗೆ, ಈ ಪವಿತ್ರ ಭೂಮಿಗೆ ಸೇರಿದವರಾಗಿದ್ದೇವೆ ಎಂಬ ಸಂಕೇತ. ಜೊತೆಗೆ, ನಾವು ಇಲ್ಲಿ ಜೋರ್ಡಾನ್‌ನ, ನಮ್ಮ ಸಮುದಾಯದ ಮತ್ತು ರಾಷ್ಟ್ರದ ಭಾಗವೂ ಹೌದು.

ಪ್ರಭುವಿನ ದೀಕ್ಷಾಸ್ನಾನವು ಆಕಾಶದ ತೆರೆದು, ದೇವರ ಆಶೀರ್ವಾದವು ಎಲ್ಲರ ಮೇಲೂ ಇಳಿಯುವ ಸಂಕೇತವಾಗಿದೆ. ಆದ್ದರಿಂದ ನಾವು ಕ್ರೈಸ್ತರು, ಕಥೋಲಿಕರು, ಜೋರ್ಡಾನಿಯರು ಎಂಬ ಹೆಸರಿನಲ್ಲಿ, ಜೋರ್ಡಾನ್ ಹಾಗೂ ಸಂಪೂರ್ಣ ಮಧ್ಯಪ್ರಾಚ್ಯದಲ್ಲಿ ಶಾಂತಿ ಮತ್ತು ನ್ಯಾಯ ನಿರ್ಮಾಣಕ್ಕೆ ನಮ್ಮ ಸಾಕ್ಷ್ಯದ ಮೂಲಕ ಪಾಲ್ಗೊಳ್ಳಲು ಆಶಿಸುತ್ತೇವೆ.

ಪ್ರಶ್ನೆ: ಪ್ರದೇಶದ ಇಂದಿನ ಪರಿಸ್ಥಿತಿಯನ್ನು ಗಮನಿಸಿದರೆ, ಪವಿತ್ರ ಭೂಮಿಯಲ್ಲಿ ಶಾಂತಿಯ ದಾರಿಯನ್ನು ನೀವು ಎಲ್ಲಲ್ಲಿ ನೋಡುತ್ತೀರಿ?

ಉತ್ತರ: ಆ ದಾರಿ ಕಷ್ಟಕರವಾಗಿದೆ, ಆದರೆ ಸ್ಪಷ್ಟವಾಗಿದೆ. ಸಮಸ್ಯೆ ಏನೆಂದರೆ – ನಮಗೆ ಶಾಂತಿ ಬೇಕೆಂದು ನಮಗೆ ತಿಳಿದಿದೆ, ಅದು ಅಗತ್ಯವೆಂದೂ ಗೊತ್ತಿದೆ. ಆದರೆ ಅದನ್ನು ತಲುಪುವುದು ಸುಲಭವಲ್ಲ. ಆದರೂ, ಅದನ್ನು ಸಾಧಿಸಬಹುದು, ಒಳ್ಳೆಯ ಇಚ್ಛಾಶಕ್ತಿ ಇದ್ದರೆ.

ಧಾರ್ಮಿಕ ಗುರುತುಗಳನ್ನು ಹೊರತುಪಡಿಸಿ, ಎಲ್ಲ ಭಿನ್ನತೆಗಳನ್ನೂ ಹೊರಗಿಟ್ಟು ನೋಡಿದರೆ, ಅದು ಸಹಾಯವಾಗುತ್ತದೆ. ನನ್ನ ಅರ್ಥ ಏನೆಂದರೆ, ಎಲ್ಲ ದೇಶಗಳಲ್ಲಿಯೂ ಭಿನ್ನತೆಗಳು ಇರುತ್ತವೆ. ಆದರೆ ನಾವು ಯಾವಾಗಲೂ “ಇತರರು ನನಗಿಂತ ಹೇಗೆ ವಿಭಿನ್ನರು” ಎಂಬುದರ ಮೇಲೆ ಮಾತ್ರ ಗಮನಹರಿಸಿದರೆ, ನಮಗೆ ಬೇಕಾದ ಶಾಂತಿ ಎಂದಿಗೂ ಸಿಗುವುದಿಲ್ಲ.

ನಾವು ಒಪ್ಪಿಕೊಳ್ಳಬೇಕಾದ ಮನೋಭಾವನೆ ಏನೆಂದರೆ – ಧರ್ಮದಲ್ಲಿ, ಸಂಸ್ಕೃತಿಯಲ್ಲಿ, ಪರಂಪರೆಯಲ್ಲಿ ನಾವು ಭಿನ್ನರಾಗಿರಬಹುದು, ಆದರೆ ಪರಸ್ಪರ ಗೌರವ ಇರಬೇಕು. ಮಾನವನ ಘನತೆಗೆ ಗೌರವ ನೀಡಿ, ದೇವರು ಎಲ್ಲರಿಗೂ ಪ್ರೀತಿ ಎಂಬ ನಂಬಿಕೆಯಲ್ಲಿ, ನಾವು ಒಟ್ಟಾಗಿ ಬದುಕಬಹುದು.

ಪ್ರಶ್ನೆ: ಜೋರ್ಡಾನ್‌ನಲ್ಲಿಯೂ ಈ ತೆರೆದ ಮನೋಭಾವನೆ ಕಾಣಿಸುತ್ತದೆಯೇ?

ಉತ್ತರ: ಹೌದು, ಜೋರ್ಡಾನ್‌ನಲ್ಲಿ ಆತಿಥ್ಯ, ಪರಸ್ಪರ ಸ್ವೀಕಾರ ಮತ್ತು ರಾಷ್ಟ್ರಕ್ಕೆ ಸೇರಿದ ಭಾವನೆ ಎಂಬ ಸಂಸ್ಕೃತಿ ಇದೆ. ಹಶೆಮೈಟ್ ಕುಟುಂಬದ ಬಗ್ಗೆ ಹೇಳುವುದಾದರೆ, ರಾಜರು ಮತ್ತು ಅವರ ಕುಟುಂಬ ನಿಜವಾಗಿಯೂ ಏಕತೆಯ ಸಂಕೇತವಾಗಿದೆ.

ಶಿಕ್ಷಣದ ಮೂಲಕ – ಶಾಲೆಗಳು, ಪಾರಿಷ್‌ಗಳು – ನಮ್ಮ ಯುವಜನರಿಗೆ ಈ ಸಹಬಾಳ್ವೆ ಮತ್ತು ಸಾಕ್ಷ್ಯದ ದಾರಿಯನ್ನು ಜೀವಂತವಾಗಿ ಉಳಿಸಿಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ. ಇದು ನಮಗಾಗಿ ಮಾತ್ರವಲ್ಲ, ನಮ್ಮ ಸುತ್ತಲಿನ ಎಲ್ಲರಿಗಾಗಿ ಕೂಡ.

ಪ್ರಶ್ನೆ: ಜಗತ್ತಿನ ದೊಡ್ಡ ಧರ್ಮಸಭೆಗೆ ಜೋರ್ಡಾನ್‌ನ ಕಥೋಲಿಕ ಧರ್ಮಸಭೆ ಏನು ಕೊಡುಗೆ ನೀಡಬಹುದು ಎಂದು ನೀವು ಭಾವಿಸುತ್ತೀರಿ?

ಉತ್ತರ: ಜೋರ್ಡಾನ್‌ನ ಕಥೋಲಿಕ ಧರ್ಮಸಭೆ ಬಹಳ ಶ್ರೀಮಂತವಾಗಿದೆ. ಇಲ್ಲಿ ಲ್ಯಾಟಿನ್ ಸಮುದಾಯವಿದೆ, ಜೊತೆಗೆ ಮರೋನೈಟರು, ಮೆಲ್ಕೈಟರು, ಸಿರಿಯನ್ ಕಥೋಲಿಕರು ಮತ್ತು ಅರ್ಮೇನಿಯನ್ ಕಥೋಲಿಕರು ಇದ್ದಾರೆ. ಇದು ಜೋರ್ಡಾನ್‌ನಲ್ಲಿರುವ ಧರ್ಮಸಭೆಯ ವಿಶ್ವವ್ಯಾಪಕತೆಯ ಸಂಕೇತವಾಗಿದೆ, ಮತ್ತು ನಾವು ಒಟ್ಟಾಗಿ ಬದುಕುತ್ತಿದ್ದೇವೆ.

ನಮ್ಮ ಬಳಿ ರಾಜ್ಯದ ಅತಿ ದೊಡ್ಡ ಶಾಲಾ ಜಾಲವಿದೆ – ಶ್ರೀಮಂತರಿಗೂ ಬಡವರಿಗೂ ಸೇವೆ ನೀಡುವ ಶಾಲೆಗಳು. ವಿಶ್ವವಿದ್ಯಾಲಯವೂ ಇದೆ. ಆದ್ದರಿಂದ ನಮ್ಮ ಪಾತ್ರ ಮಹತ್ವದಾಗಿದೆ. ಒಮ್ಮೆ ನಾನು ಪೂಜ್ಯ ಜಗದ್ಗುರುಗಳಾದ ಲಿಯೋ ಅವರೊಂದಿಗೆ ಮಾತನಾಡುವಾಗ, ಎಲ್ಲರೊಂದಿಗೆ ಸೇತುವೆಗಳನ್ನು ಕಟ್ಟುವ ನಮ್ಮ ಪ್ರಯತ್ನಗಳ ಬಗ್ಗೆ ಹೇಳಿದ್ದೆ. ಇದೇ ನಮ್ಮ ಕಥೋಲಿಕ ಧರ್ಮಸಭೆಯ ಧ್ಯೇಯ.

ಸಂಖ್ಯೆಯಲ್ಲಿ ನಾವು ಚಿಕ್ಕವರಾಗಿರಬಹುದು, ಆದರೆ ಜಗತ್ತಿನಾದ್ಯಂತ ಇರುವ ಕಥೋಲಿಕ ಧರ್ಮಸಭೆಯ ಭಾಗವಾಗಿ ನಾವು ಬಹಳ ದೊಡ್ಡವರಾಗಿದ್ದೇವೆ. ಆದ್ದರಿಂದ ನಮ್ಮ ಸಹೋದರ-ಸಹೋದರಿಯರನ್ನು ನಾವು ಆಹ್ವಾನಿಸುತ್ತೇವೆ – ಜೋರ್ಡಾನ್‌ಗೆ ಬನ್ನಿ, ಜೋರ್ಡಾನ್‌ಗೆ ಭೇಟಿ ನೀಡಿ, ನಮ್ಮೊಂದಿಗೆ ಸೇರಿ, ಜೋರ್ಡಾನ್‌ನಲ್ಲಿಯೂ ಮತ್ತು ಎಲ್ಲೆಡೆಯಲ್ಲಿಯೂ ಕಥೋಲಿಕ ಧರ್ಮಸಭೆ ಎಂದರೇನು ಎಂಬುದಕ್ಕೆ ಸಾಕ್ಷಿಯಾಗಿರಿ.

10 ಜನವರಿ 2026, 19:19