ಪವಿತ್ರ ಭೂಮಿಯಲ್ಲಿ ಶಾಂತಿಗಾಗಿ ಜೋರ್ಡಾನ್ ನದಿಯ ತಟದಲ್ಲಿ ಪ್ರಾರ್ಥನೆ
ಬೆಥನಿ ಬಿಯಾಂಡ್ ದಿ ಜೋರ್ಡನ್
ಈ ಆಚರಣೆ ಜೋರ್ಡಾನ್ ನದಿಯ ಪೂರ್ವ ದಂಡೆಯಲ್ಲಿರುವ “ಪ್ರಭುವಿನ ಸ್ನಾನದೀಕ್ಷೆಯ” ದೇವಾಲಯದಲ್ಲಿ ನಡೆಯಿತು. ಇದೇ ಸ್ಥಳದ ಸಮೀಪ ಸ್ನಾನಿಕ ಯೋವಾನ್ನರಿಂದ ಪ್ರಭುಯೇಸು ಸ್ನಾನದೀಕ್ಷೆಯ ಪಡೆದಿದ್ದರು. ಈ ದೇವಾಲಯವನ್ನು ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೋ ಪ್ಯಾರೊಲಿನ್ ಅವರು ಜನವರಿ 2025ರಲ್ಲಿ ಉದ್ಘಾಟಿಸಿದ್ದರು.
ಒಂದು ವರ್ಷದ ನಂತರ, ಕ್ರಿಸ್ತನ ಸೇವೆಯ ಆರಂಭವನ್ನು ಸ್ಮರಿಸಲು 5,000ಕ್ಕಿಂತ ಹೆಚ್ಚು ಜನರು ಈ ಪವಿತ್ರ ಸ್ಥಳದಲ್ಲಿ ಸೇರಿದ್ದರು. 10 ದೇಶಗಳ ರಾಜತಾಂತ್ರಿಕರು ಹಾಗೂ ಮೆಲ್ಕೈಟ್ ಗ್ರೀಕ್, ಮೆರೋನೈಟ್, ಕಾಲ್ದಿಯನ್, ಸಿರಿಯಕ್ ಮತ್ತು ಅರ್ಮೇನಿಯನ್ ಕಥೋಲಿಕ ಧರ್ಮಸಭೆಗಳ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಹಾಜರಿದ್ದರು. ಜೋರ್ಡಾನ್‌ನ ಲ್ಯಾಟಿನ್ ಪ್ರೇಷಿತ ಪ್ರತಿನಿಧಿಯಾದ ಪೂಜ್ಯ ಧರ್ಮಾಧ್ಯಕ್ಷ ಇಯಾದ್ ಟ್ವಾಲ್ ಅವರು ಬಲಿಪೂಜೆಯ ಅಧ್ಯಕ್ಷತೆ ವಹಿಸಿದರು. ಜೋರ್ಡಾನ್‌ನ ಪ್ರೇಷಿತ ರಾಯಭಾರಿಯಾದ ಪೂಜ್ಯ ಮಹಾಧರ್ಮಾಧ್ಯಕ್ಷ ಜಿಯೋವಾನಿ ಪಿಯೆತ್ರೋ ಡಾಲ್ ಟೋಸೊ ಅವರು ಸಹ ಬಲಿಪೂಜೆ ಅರ್ಪಿಸಿದರು.
ಬಲಿಪೂಜೆಗೆ ಮೊದಲು ಜೋರ್ಡಾನ್ ನದಿಯಿಂದ ಸಂಗ್ರಹಿಸಿದ ಪವಿತ್ರ ನೀರನ್ನು ಭಕ್ತರ ಮೇಲೆ ಪ್ರೋಕ್ಷಿಸಲಾಯಿತು. ವಿವಿಧ ಸ್ಥಳಗಳಿಂದ ಆಗಮಿಸಿದವರಿಗೆ ಇದು ವಿಶೇಷ ಮಹತ್ವದ ಕ್ಷಣವಾಗಿತ್ತು.
ಪ್ಯಾಲೆಸ್ತಿನಿಗಾಗಿ ಪ್ರಾರ್ಥನೆ
ಬಲಿಪೂಜೆಗೆ ಮೊದಲು ನಡೆದ ಪತ್ರಿಕಾಗೋಷ್ಠಿಯಲ್ಲಿ ಪೂಜ್ಯ ಧರ್ಮಾಧ್ಯಕ್ಷ ಟ್ವಾಲ್ ಅವರು ಸಭಿಕರನ್ನು ಸ್ವಾಗತಿಸಿದರು. ಕ್ರಿಸ್ತನ ದೀಕ್ಷೆಯ ಸ್ಥಳವನ್ನು “ಪವಿತ್ರತೆ ಮತ್ತು ಹೃದಯಸ್ಪರ್ಶಿ ವಾತಾವರಣದಿಂದ ತುಂಬಿರುವ ಸ್ಥಳ” ಎಂದು ಅವರು ಹೇಳಿದರು. ರೋಮಿನಲ್ಲಿ ನಡೆದ ಪರಿಷತ್ತಿನಲ್ಲಿ ಭಾಗವಹಿಸುತ್ತಿದ್ದ ಕಾರಣ ಈ ಆಚರಣೆಗೆ ಹಾಜರಾಗಲು ಸಾಧ್ಯವಾಗದಿದ್ದ ಜೆರುಸಲೇಮ್‌ನ ಲ್ಯಾಟಿನ್ ಮಹಾಧರ್ಮಾಧ್ಯಕ್ಷರಾದ ಕಾರ್ಡಿನಲ್ ಪಿಯರ್‌ಬಟ್ಟಿಸ್ತಾ ಪಿಜ್ಜಬಲ್ಲ ಅವರ ಶುಭಾಶಯಗಳನ್ನು ಅವರು ತಿಳಿಸಿದರು.
ಇತ್ತೀಚೆಗೆ ಗಾಜಾಕ್ಕೆ ಮಾಡಿದ ಭೇಟಿಯ ವೇಳೆ ಕಾರ್ಡಿನಲ್ ಪಿಜ್ಜಬಲ್ಲ ಅವರು “ಹೊಸ ಜೀವನದ ಆರಂಭಕ್ಕೆ ನಿಜವಾದ ದೃಢಸಂಕಲ್ಪ ಮತ್ತು ಈ ವರ್ಷ ಶಾಶ್ವತ, ನ್ಯಾಯಯುತ ಹಾಗೂ ಸಂಪೂರ್ಣ ಶಾಂತಿ ಕಾಣಿಸಿಕೊಳ್ಳಲಿದೆ ಎಂಬ ಆಶೆಯನ್ನು ಅನುಭವಿಸಿದ್ದಾರೆ” ಎಂದು ಪೂಜ್ಯ ಧರ್ಮಾಧ್ಯಕ್ಷ ಟ್ವಾಲ್ ಹೇಳಿದರು. “ಈ ಪವಿತ್ರ ಸ್ಥಳದಿಂದ ನಾವು ಜೆರುಸಲೇಮಿಗಾಗಿ, ಸಂಪೂರ್ಣ ಪ್ಯಾಲೆಸ್ತಿನಿಗಾಗಿ, ಗಾಜಾದ ನಮ್ಮ ಪ್ರಿಯ ಜನರಿಗಾಗಿ ಮತ್ತು ನಮ್ಮ ಸಂಪೂರ್ಣ ಪವಿತ್ರ ಭೂಮಿಗಾಗಿ ಪ್ರಾರ್ಥನೆಯನ್ನು ಅರ್ಪಿಸುತ್ತೇವೆ” ಎಂದು ಅವರು ತಿಳಿಸಿದರು.
ಪವಿತ್ರ ಭೂಮಿಗೆ ಮರಳುವ ಆಹ್ವಾನ
ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ತೀರ್ಥಯಾತ್ರಿಕರು ಪವಿತ್ರ ಭೂಮಿಗೆ ಮರಳುವರೆಂದು ಜೋರ್ಡಾನ್‌ನ ಲ್ಯಾಟಿನ್ ಪ್ರೇಷಿತ ಪ್ರತಿನಿಧಿ ಅವರು ಆಶೆ ವ್ಯಕ್ತಪಡಿಸಿದರು. “ಪವಿತ್ರ ಭೂಮಿಗೆ ಬನ್ನಿ, ಜೋರ್ಡಾನ್ ನದಿಗೆ ಬನ್ನಿ, ಈ ಪವಿತ್ರ ಸ್ಥಳಕ್ಕೆ ಬನ್ನಿ, ಈ ದೇವಾಲಯವನ್ನು ಭೇಟಿ ಮಾಡಿ, ಮತ್ತು ಜೋರ್ಡಾನ್ ನದಿಯ ನೀರಿನಿಂದ ಆಶೀರ್ವಾದ ಪಡೆಯಿರಿ” ಎಂದು ವಿಶ್ವದ ಎಲ್ಲ ಭಾಗಗಳ ತೀರ್ಥಯಾತ್ರಿಕರಿಗೆ ತಮ್ಮ ಪ್ರಾಮಾಣಿಕ ಆಹ್ವಾನ ನೀಡಿದರು
ಈ ತೀರ್ಥಯಾತ್ರೆಯನ್ನು ಸ್ನಾನದೀಕ್ಷಾ ಸ್ಥಳ ಆಡಳಿತ, ಪ್ರವಾಸೋದ್ಯಮ ಸಚಿವಾಲಯ ಹಾಗೂ ಜೋರ್ಡಾನ್ ಪ್ರವಾಸೋದ್ಯಮ ಮಂಡಳಿ ಸಹಯೋಗದಲ್ಲಿ ಆಯೋಜಿಸಲಾಗಿತ್ತು.