ಇಂಡೋನೇಷ್ಯಾ: ಯುವಜನರ ಸಬಲೀಕರಣಕ್ಕೆ ಸಂತ ಬ್ರಿಗಿಟ್ಟಾ ಕಲಿಕಾ ಕೇಂದ್ರ
ದಕ್ಷಿಣ ಮಲುಕು ಪ್ರದೇಶದ ಕೇಯ್ ಬೆಸಾರ್ ದ್ವೀಪದಲ್ಲಿ, ಧರ್ಮಸಭೆ ನಡೆಸುವ ಈ ಕಲಿಕಾ ಕೇಂದ್ರವು ವೈದ್ಯಕೀಯ ಸೇವೆ ಮತ್ತು ಧಾರ್ಮಿಕ ಕಾರ್ಯಗಳಿಂದ ರೂಪುಗೊಂಡ ಅನಿರೀಕ್ಷಿತ ಜೀವನ ಮಾರ್ಗಗಳ ಸಂಗಮದಿಂದ ಆರಂಭವಾಯಿತು.
ಎರಡು ವಿಭಿನ್ನ ಜೀವನ ಕಥೆಗಳು ಈ ದ್ವೀಪದಲ್ಲಿ ಒಂದಾಗಿದ್ದು, ಯುವ ಅಭಿವೃದ್ಧಿಗೆ ಕೇಂದ್ರೀಕೃತವಾದ ಈ ಉಪಕ್ರಮಕ್ಕೆ ಕಾರಣವಾಯಿತು.
ಒಬ್ಬರು ಜಕಾರ್ತಾದ ಸಾಮಾನ್ಯ ವೈದ್ಯರಾದ ಡಾ. ಆಂಜೆಲಿನಾ ವೆನೆಸ್ಸ ಇಂಡೋನೇಷ್ಯಾದ ಅತಿ ದೂರದ ಪ್ರದೇಶಗಳಲ್ಲಿ ಒಂದಾದ ದಕ್ಷಿಣ ಮಲುಕು ಜಿಲ್ಲೆಯ ಕೇಯ್ ಬೆಸಾರ್ ದ್ವೀಪದಲ್ಲಿ ಅವರು 12 ವರ್ಷಗಳ ಕಾಲ DoctorShare ಸಂಸ್ಥೆಯಲ್ಲಿ ಕಾರ್ಯಕ್ರಮಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
DoctorShare ಸಂಸ್ಥೆಯನ್ನು ಜರ್ಮನಿಯಲ್ಲಿ ತರಬೇತಿ ಪಡೆದ ಶಸ್ತ್ರಚಿಕಿತ್ಸಕ ಡಾ. ಲೀ ಧರ್ಮವಾನ್ ಸ್ಥಾಪಿಸಿದ್ದಾರೆ. ಈ ಸಂಸ್ಥೆ ‘ಕಪಾಲ್ ಅಪುಂಗ್’ (ತೇಲುವ ಆಸ್ಪತ್ರೆ) ಯೋಜನೆಯ ಮೂಲಕ ಪ್ರಸಿದ್ಧವಾಗಿದೆ. ಈ ಆಸ್ಪತ್ರೆಯ ಹಡಗುಗಳು ಇಂಡೋನೇಷ್ಯಾದ ವಿವಿಧ ದ್ವೀಪಗಳಿಗೆ ತೆರಳಿ, ಆಸ್ಪತ್ರೆ ಅಥವಾ ಶಸ್ತ್ರಚಿಕಿತ್ಸಾ ಸೌಲಭ್ಯಗಳಿಲ್ಲದ ಪ್ರದೇಶಗಳಿಗೆ ವೈದ್ಯಕೀಯ ಸೇವೆ ಒದಗಿಸುತ್ತವೆ.
ಮತ್ತೊಬ್ಬರು ವಂ. ಗುರು ಪಾತ್ರಿಸಿಯಸ್ ಜೆಯುಜನಾನ್, MSC. ಅವರು ಕೇಯ್ ಬೆಸಾರ್ ದ್ವೀಪದ ಬೊಂಬೇ ಗ್ರಾಮಕ್ಕೆ ಸೇರಿದ ಸ್ಥಳೀಯ ಗುರು. COVID-19 ಮಹಾಮಾರಿಯ ಸಮಯದಲ್ಲಿ, ಸರ್ಕಾರದ ಪ್ರಯಾಣ ನಿರ್ಬಂಧಗಳ ಕಾರಣದಿಂದ ಅವರು ಸುಮಾರು ಏಳು ತಿಂಗಳು ದ್ವೀಪದಲ್ಲೇ ಉಳಿಯಬೇಕಾಯಿತು.
ಸಂತ ಬ್ರಿಗಿಟ್ಟಾ ಕಲಿಕಾ ಕೇಂದ್ರದ ಉದಯ
ಒಂದೇ ದ್ವೀಪದಲ್ಲಿ ಕೆಲಸಮಾಡುತ್ತಾ ವಾಸಿಸುತ್ತಿದ್ದ ಡಾ. ವೆನೆಸ್ಸ ಮತ್ತು ವಂ. ಗುರು ಪಾತ್ರಿಸಿಯಸ್ ಸ್ಥಳೀಯ ಮಕ್ಕಳ ಹಾಗೂ ಯುವಜನರ ಭವಿಷ್ಯದ ಕುರಿತು ಅನೇಕ ಚರ್ಚೆಗಳನ್ನು ನಡೆಸಿದರು.
ಅಂತಿಮವಾಗಿ, ಇಬ್ಬರೂ ಒಂದೇ ಚಿಂತೆಯನ್ನು ಹಂಚಿಕೊಂಡರು: ಕೇಯ್ ಬೆಸಾರ್ ದ್ವೀಪದ ಯುವಜನರಿಗೆ ಕೇವಲ ಔಪಚಾರಿಕ ಶಿಕ್ಷಣಕ್ಕಿಂತ ಹೆಚ್ಚು ಅವಕಾಶಗಳು ಬೇಕು. ಅವರು ಪ್ರಾಯೋಗಿಕ ಕೌಶಲ್ಯಗಳು, ಶಿಸ್ತು, ಆತ್ಮವಿಶ್ವಾಸ ಮತ್ತು ವಿಶ್ವಾಸದಲ್ಲಿ ಬೆಳೆಯುವ ಸ್ಥಳಗಳ ಅಗತ್ಯವಿದೆ.
ಆ ಸಾಮಾನ್ಯ ದೃಷ್ಟಿಕೋನದಿಂದಲೇ ಸಂತ ಬ್ರಿಗಿಟ್ಟಾ ಕಲಿಕಾ ಕೇಂದ್ರ ಉದಯವಾಯಿತು. ಈ ಉಪಕ್ರಮವು ಸ್ಥಳೀಯ ಮಕ್ಕಳು ಮತ್ತು ಕಿಶೋರರನ್ನು ಹೆಚ್ಚು ಆತ್ಮವಿಶ್ವಾಸ ಹೊಂದಿದ ಮತ್ತು ಉತ್ಪಾದಕ ವ್ಯಕ್ತಿಗಳಾಗಿ ರೂಪಿಸುವುದಕ್ಕೆ ಕೇಂದ್ರೀಕೃತವಾಗಿದೆ.
ಕಾರ್ಯಕ್ರಮದಲ್ಲಿ ಸಂಗೀತ, ಶಿಸ್ತು, ಇಂಗ್ಲಿಷ್ ಭಾಷಾ ಕೌಶಲ್ಯ, ಸಾರ್ವಜನಿಕ ಭಾಷಣ ಮತ್ತು ಕ್ರೈಸ್ತ ವಿಶ್ವಾಸದ ಬಲಪಡಿಸುವಿಕೆಗೆ ಮಹತ್ವ ನೀಡಲಾಗಿದೆ. ಬಹುಪಾಲು ಜನರು ಕಥೋಲಿಕರಿರುವ ಈ ಸಮುದಾಯದಲ್ಲಿ ಇದು ವಿಶೇಷ ಅರ್ಥ ಹೊಂದಿದೆ.
ಈ ಕಲಿಕಾ ಕೇಂದ್ರವು ಎತ್ತರದ ಪ್ರದೇಶದಲ್ಲಿದ್ದು, ಹೊಸದಾಗಿ ನಿರ್ಮಿಸಲಾದ ಬಹುಉದ್ದೇಶ ಸಭಾಂಗಣವನ್ನು ಹೊಂದಿದೆ. ಇದನ್ನು ತರಗತಿಗಳಾಗಿ ಬಳಸಲಾಗುತ್ತದೆ. ಅಗತ್ಯವಿದ್ದಾಗ ಅತಿಥಿಗಳಿಗೆ ಊಟದ ಸ್ಥಳವಾಗಿಯೂ ಬಳಸಲಾಗುತ್ತದೆ. ಮೇಲ್ಮಹಡಿಯಲ್ಲಿ ಸರಳ ವಸತಿ ಸೌಲಭ್ಯಗಳಿರುವ ಕೊಠಡಿಗಳು ಅತಿಥಿಗಳು ಮತ್ತು ಸ್ವಯಂಸೇವಕರಿಗಾಗಿ ವ್ಯವಸ್ಥೆ ಮಾಡಲಾಗಿದೆ.
ಸಂಗೀತ ಮತ್ತು ಹಾಡಿನೊಂದಿಗೆ ಆರಂಭ
ಕೆಲವು ಜನಾಂಗಗಳಿಗೆ ಸಹಜವಾಗಿ ಸಂಗೀತ ಮತ್ತು ಹಾಡಿನಲ್ಲಿ ಪ್ರತಿಭೆ ಇರುತ್ತದೆ ಎಂಬುದು ಇಂಡೋನೇಷ್ಯಾದಲ್ಲಿ ಸಾಮಾನ್ಯ ನಂಬಿಕೆ. ಕೇಯ್ ಬೆಸಾರ್ ಮತ್ತು ಕೇಯ್ ಕಿಚಿಲ್ ದ್ವೀಪಗಳು ಇದಕ್ಕೆ ಹೊರತಲ್ಲ. ಮಲುಕು ಪ್ರದೇಶದ ಜನರು ಸಂಗೀತದಲ್ಲಿ ನಿಪುಣರೆಂದು ಪರಿಗಣಿಸಲಾಗುತ್ತಾರೆ.
ಡಿಸೆಂಬರ್ 22ರಂದು ಜಕಾರ್ತಾದಿಂದ ವೈದ್ಯರು, ಶಿಕ್ಷಕರು ಮತ್ತು ಯುವ ಸ್ವಯಂಸೇವಕರ ಸಣ್ಣ ತಂಡ ದ್ವೀಪಕ್ಕೆ ಸೇವಾ ಕಾರ್ಯಕ್ಕಾಗಿ ಬಂದಾಗ, ಸಂತ ಬ್ರಿಗಿಟ್ಟಾ ಕಲಿಕಾ ಕೇಂದ್ರದ ವಿದ್ಯಾರ್ಥಿಗಳು ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಕೇಂದ್ರಕ್ಕೆ ಹೋಗುವ ಕಲ್ಲಿನ ಮೆಟ್ಟಿಲುಗಳ ಬಳಿ ನಿಂತು, ಯುವಜನರು ಗಿಟಾರ್ ವಾದ್ಯ ನುಡಿಸಿ ಸ್ಥಳೀಯ ಹಾಡುಗಳನ್ನು ಹಾಡಿದರು. ಅದು ಕೇವಲ ಆರಂಭ ಮಾತ್ರವಾಗಿತ್ತು.
ಭೇಟಿಯ ಅವಧಿಯಲ್ಲಿ, ವಿದ್ಯಾರ್ಥಿಗಳು ಕಥೆ ಹೇಳುವ ಅಧಿವೇಶನಗಳನ್ನು ನಡೆಸಿದರು, ಚರ್ಚೆಗಳಲ್ಲಿ ಭಾಗವಹಿಸಿದರು ಮತ್ತು ಸಾಂಪ್ರದಾಯಿಕ ನೃತ್ಯಗಳನ್ನು ಪ್ರದರ್ಶಿಸಿದರು.
ಇವು ಸಮರ್ಪಿತ ಶಿಕ್ಷಕರು ಮತ್ತು ಸ್ಥಳೀಯ ಸ್ವಯಂಸೇವಕರ ಮಾರ್ಗದರ್ಶನದಲ್ಲಿ ನಡೆದ ಅನೌಪಚಾರಿಕ ಶಿಕ್ಷಣದ ಫಲಿತಾಂಶವಾಗಿದ್ದು, ಯುವಜನರ ಸಾರ್ವಜನಿಕ ಭಾಷಣ ಮತ್ತು ಅಭಿವ್ಯಕ್ತಿ ಕೌಶಲ್ಯವನ್ನು ಬೆಳೆಸಿದೆ.
ಸಮರ್ಪಿತ ಶಿಕ್ಷಕರು ಮತ್ತು ಸ್ವಯಂಸೇವಕರು
ಡಾ. ವೆನೆಸ್ಸ ಮತ್ತು ವಂ. ಗುರು ಪಾತ್ರಿಸಿಯಸ್ ಪ್ರಸ್ತುತ ಜಕಾರ್ತಾದಲ್ಲಿ ಕೆಲಸಮಾಡುತ್ತಾ ವಾಸಿಸುತ್ತಿದ್ದರೂ, ಸಂತ ಬ್ರಿಗಿಟ್ಟಾ ಕಲಿಕಾ ಕೇಂದ್ರದ ದಿನನಿತ್ಯದ ಕಾರ್ಯಾಚರಣೆಯನ್ನು ಟಿಯೆನ್ ಜೆಯುಜನಾನ್ ನಿರ್ವಹಿಸುತ್ತಿದ್ದಾರೆ. ಅವರು ವೃತ್ತಿಪರ ಶಿಕ್ಷಕರಾಗಿದ್ದು, ಮನಾಡೋ (ಉತ್ತರ ಸುಲಾವೆಸಿ) ಮತ್ತು ಪಪುವಾದಲ್ಲಿ ಬೋಧನಾ ಅನುಭವ ಹೊಂದಿದ್ದಾರೆ.
ಶ್ರೀಮತಿ ಟಿಯೆನ್ ಉತ್ತಮ ಸಂಗೀತಜ್ಞೆಯೂ ಹೌದು. ಅವರು ವಿವಿಧ ವಾದ್ಯಗಳನ್ನು ವಾದ್ಯ ನುಡಿಸಿ ಹಾಡುತ್ತಾರೆ. ಬೊಂಬೇಯಲ್ಲಿರುವ ಯೇಸುವಿನ ಪವಿತ್ರ ಹೃದಯ ಧರ್ಮಕೇಂದ್ರದಲ್ಲಿ ಆರ್ಗನ್ ವಾದಕನ ಅಗತ್ಯವಿದ್ದಾಗ ಅವರು ಸೇವೆ ನೀಡುತ್ತಾರೆ.
ಅವರೊಂದಿಗೆ ಇಬ್ಬರು ಸಮರ್ಪಿತ ಸ್ವಯಂಸೇವಕರು ಇದ್ದಾರೆ.
ಮಗ್ದಲೇನಾ “ಲೇನಾ” ಜೆಯುಜನಾನ್ ಅವರು ಹಿಂದೆ ಧಾರ್ಮಿಕ ಸಹೋದರಿಯಾಗಿದ್ದು, ಫಿಲಿಪೈನ್ಸ್‌ನಲ್ಲಿ ತರಬೇತಿ ಪಡೆದು, ಇಟಲಿಯಲ್ಲಿ ಎಂಟು ವರ್ಷ ಸೇವೆ ಸಲ್ಲಿಸಿದ್ದಾರೆ. ಅವರು ಇಂಗ್ಲಿಷ್ ಮತ್ತು ಗಾಯನ ಕಲಿಸುತ್ತಾರೆ. ವಿದೇಶಿ ಅತಿಥಿಗಳಿಗೆ ಮಾರ್ಗದರ್ಶಕರಾಗಿಯೂ ಕಾರ್ಯನಿರ್ವಹಿಸುತ್ತಾರೆ. ಹಬ್ಬದ ಬಲಿಪೂಜೆಯಲ್ಲಿ ಅವರು ಗಾಯನ ತಂಡವನ್ನು ಮುನ್ನಡೆಸುತ್ತಾರೆ.
ಮತ್ತೊಬ್ಬ ಸ್ವಯಂಸೇವಕಿ ಮರಿಯಾ ಲಿಸಾ ಡೆಸಿ ತಾಲುಬುನ್ ಅವರು ವಿಶ್ವವಿದ್ಯಾಲಯದ ವಿದ್ಯಾರ್ಥಿನಿ. ಅವರು ಧರ್ಮಕೇಂದ್ರದ ಗಾಯನ ತಂಡದ ನಿರ್ದೇಶಕಿಯಾಗಿಯೂ ಕಾರ್ಯನಿರ್ವಹಿಸುತ್ತಾರೆ ಮತ್ತು ಕಲಿಕಾ ಕೇಂದ್ರದಲ್ಲಿ ಮಕ್ಕಳಿಗೂ ಯುವಜನರಿಗೂ ಬೋಧನೆ ಮಾಡುತ್ತಾರೆ.
ಮುಂದುವರಿಯುತ್ತಿರುವ ಧ್ಯೇಯ
ಡಾ. ವೆನೆಸ್ಸ ಮತ್ತು ವಂ. ಗುರು ಪಾತ್ರಿಸಿಯಸ್ ಇಲ್ಲಿಗೇ ನಿಲ್ಲಲು ಉದ್ದೇಶಿಸಿಲ್ಲ.
ಇತ್ತೀಚಿನ ತಿಂಗಳುಗಳಲ್ಲಿ ಅವರು ಸಂತ ಕಾರ್ಲೊ ಅಕುಟಿಸ್ ಶಿಶುವಿಹಾರವನ್ನು ಸ್ಥಾಪಿಸಲು ಮುಂದಾಗಿದ್ದಾರೆ. ಈ ಪ್ರಯತ್ನಕ್ಕೆ ಧರ್ಮಕೇಂದ್ರದ ವಂ. ಗುರು ಅನ್ಸೆಲ್ಮಸ್ ಅಮೋ, MSC ಅವರ ಬಲವಾದ ಬೆಂಬಲವಿದೆ.
ಗುರುಗಳು ಸೇರಿ, ಕಲಿಕಾ ಕೇಂದ್ರದಿಂದ ಸುಮಾರು ಎಂಟು ಕಿಲೋಮೀಟರ್ ದೂರದಲ್ಲಿರುವ ಬುಕ್ಕಿಟ್ ದೋವಾ (ಪ್ರಾರ್ಥನಾ ಬೆಟ್ಟ) ಪ್ರದೇಶದಲ್ಲಿ ಧ್ಯಾನ ಕೇಂದ್ರ ಅಭಿವೃದ್ಧಿಪಡಿಸಲು ಮತ್ತು ಮಿನಿ ಫುಟ್ಬಾಲ್ ಮೈದಾನ ನಿರ್ಮಿಸಲು ಸ್ಥಳೀಯ ಸಮುದಾಯವನ್ನು ಪ್ರೋತ್ಸಾಹಿಸಿದ್ದಾರೆ.
“ಕೇಯ್ ಬೆಸಾರ್ ದ್ವೀಪದಲ್ಲಿ ಸಾರ್ವಜನಿಕ ಕ್ರೀಡಾ ಸೌಲಭ್ಯ ಒದಗಿಸುವುದು ನಮ್ಮ ನೈತಿಕ ಹೊಣೆ,” ಎಂದು ವಂ. ಗುರು ಪಾತ್ರಿಸಿಯಸ್ ಹೇಳಿದರು.
“ಯುವಜನರ ದೈಹಿಕ ಶಕ್ತಿಯನ್ನು ಮಿನಿ ಫುಟ್ಬಾಲ್ ಮುಂತಾದ ಚಟುವಟಿಕೆಗಳ ಮೂಲಕ ಸರಿಯಾಗಿ ಬಳಸಲು ಅವಕಾಶ ಬೇಕು. ಅವರು ಮಧ್ಯಾಹ್ನವಿಡೀ ಮೊಬೈಲ್‌ಗಳಿಗೆ ಅಂಟಿಕೊಂಡು ಡೇಟಾ ಖರ್ಚುಮಾಡಿ, ಸ್ಕ್ರೋಲಿಂಗ್ ವ್ಯಸನಕ್ಕೆ ಒಳಗಾಗಬಾರದು,” ಎಂದು ಅವರು ಹೇಳಿದರು.
ಈ ದೂರದ ದ್ವೀಪದಲ್ಲಿ, ಸಂತ ಬ್ರಿಗಿಟ್ಟಾ ಕಲಿಕಾ ಕೇಂದ್ರ ವೈದ್ಯಕೀಯ ಸೇವೆ, ಧಾರ್ಮಿಕ ಆರೈಕೆ ಮತ್ತು ಸ್ಥಳೀಯ ಬದ್ಧತೆಯ ಸಂಗಮವಾಗಿ, ಸ್ಥಳೀಯ ಮಕ್ಕಳ ಮತ್ತು ಯುವಜನರ ಸಬಲೀಕರಣಕ್ಕೆ ಬೆಂಬಲ ನೀಡುತ್ತಿದೆ.
ಈ ಲೇಖನವು ಮೂಲತಃ https://www.licas.news/ ನಲ್ಲಿ ಪ್ರಕಟವಾಗಿದೆ. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಮೂರನೇ ವ್ಯಕ್ತಿಗಳಿಂದ ಅನಧಿಕೃತ ಮರುಪ್ರಕಟನೆ ಅನುಮತಿಸಲಾಗುವುದಿಲ್ಲ