ಪವಿತ್ರ ಭೂಮಿ ಯಾತ್ರೆಗೆ ಮರಳಿ ಬನ್ನಿ: ಪವಿತ್ರ ಭೂಮಿಯ ಪಾಲಕರ ಕರೆ
“ಭಯವನ್ನು ಮಾತುಗಳಿಂದ ಜಯಿಸಲು ಸಾಧ್ಯವಿಲ್ಲ; ಸಾಕ್ಷಿಯಿಂದಲೇ ಅದನ್ನು ಗೆಲ್ಲಬಹುದು. ವಿಶ್ವದ ವಿವಿಧ ಭಾಗಗಳಿಂದ ಕ್ರೈಸ್ತರು ಪವಿತ್ರ ಸ್ಥಳಗಳನ್ನು ಭೇಟಿ ಮಾಡಲು ಪವಿತ್ರ ಭೂಮಿಗೆ ಬರುವುದು ಭರವಸೆಯನ್ನು ಹುಟ್ಟುಹಾಕುತ್ತದೆ. ಇದು ಇಲ್ಲಿ ಬರುವ ಕಾರಣವನ್ನು ಬಲಪಡಿಸುತ್ತದೆ—ಸಂಗ್ರಹಾಲಯವನ್ನು ನೋಡಲು ಅಲ್ಲ, ಜೀವಂತ ಧರ್ಮಸಭೆಯನ್ನು ಅನುಭವಿಸಲು,” ಎಂದು ವಂ. ಗುರು ಫ್ರಾನ್ಸೆಸ್ಕೋ ಇಯೆಲ್ಪೊ ಅವರು ಜನವರಿ 7ರಂದು ಹೇಳಿದರು. ಈ ದಿನವು ಭರವಸೆಯ ಜ್ಯೂಬಿಲಿಯ ಅಂತ್ಯದ ಮುಂದಿನ ದಿನವಾಗಿತ್ತು.
ಜೆರುಸಲೇಮ್‌ನ ಹಳೆಯ ನಗರದಲ್ಲಿರುವ ಫ್ರಾನ್ಸಿಸ್ಕನ್ ಕೇಂದ್ರ ಕಚೇರಿಯಲ್ಲಿ ರೋಮ್‌ನಿಂದ ಬಂದ ಯಾತ್ರಿಕರ ಗುಂಪಿನೊಂದಿಗೆ ಅವರು ಮಾತನಾಡಿದರು.
ರೋಮ್ ಪ್ರಾಂತ್ಯ ಕಚೇರಿಯಾದ ಓಪೆರಾ ರೊಮಾನಾ ಪೆಲ್ಲೆಗ್ರಿನಾಜ್ಜಿ ನೇತೃತ್ವದಲ್ಲಿ ಸುಮಾರು ಮೂವತ್ತು ಗುರುಗಳು, ಧರ್ಮಕ್ಷೇತ್ರ ಅಧಿಕಾರಿಗಳು, ಪತ್ರಕರ್ತರು ಮತ್ತು ಸಂವಹಕರು ಪವಿತ್ರ ನಗರಕ್ಕೆ ಬಂದಿದ್ದರು. ಅಕ್ಟೋಬರ್ 7, 2023ರ ನಂತರ ಯಾತ್ರೆಗಳು ಹೇಗೆ ಬದಲಾಗಿದೆ ಮತ್ತು ಪವಿತ್ರ ಭೂಮಿಗೆ ಭೇಟಿ ನೀಡುವುದು ಈಗ ಏಕೆ ಅತ್ಯಂತ ಅಗತ್ಯ ಎಂಬುದನ್ನು ವಿವರಿಸುವುದು ಅವರ ಉದ್ದೇಶವಾಗಿತ್ತು.
ಕ್ರೈಸ್ತರ ವಲಸೆ ತಡೆಯುವುದು
“ಈ ಭೂಮಿಗೂ ಇಲ್ಲಿನ ಜನರಿಗೂ ಸಹಾಯ ಮಾಡಲು ನಾವು ಏನು ಮಾಡಬಹುದು?” ಎಂಬ ಪ್ರಶ್ನೆಯನ್ನು ಇತ್ತೀಚಿನ ತಿಂಗಳುಗಳಲ್ಲಿ ವಂ. ಗುರು ಇಯೆಲ್ಪೊ ಅವರಿಗೆ ಹೆಚ್ಚಾಗಿ ಕೇಳಲಾಗಿದೆ.
ಪ್ರಾರ್ಥನೆಯ ನಂತರ, ಪವಿತ್ರ ಭೂಮಿಗೆ ಸಹಾಯ ಮಾಡುವ ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ “ಯಾತ್ರಿಕರಾಗಿ ಈ ಭೂಮಿಗೆ ಮರಳಿ ಬರುವುದು” ಎಂದು ಅವರು ಹೇಳಿದರು.
ಯಾತ್ರೆಗಳು “ಮುಖ್ಯ ಆರ್ಥಿಕ ಬೆಂಬಲದ ಮೂಲಗಳಲ್ಲೊಂದು—ಪ್ರಮುಖವಾಗಿ, ಸ್ಥಳೀಯ ಕ್ರೈಸ್ತ ಸಮುದಾಯಕ್ಕೆ,” ಎಂದು ಅವರು ವಿವರಿಸಿದರು.
ಇಸ್ರಾಯೇಲ್ ಮತ್ತು ಪ್ಯಾಲೆಸ್ಟೈನ್ ಪ್ರದೇಶಗಳಲ್ಲಿ ಸುಮಾರು 50,000 ಕ್ರೈಸ್ತರು ಇದ್ದಾರೆ. ಇವರಲ್ಲಿ ಸುಮಾರು 6,000 ಮಂದಿ ಜೆರುಸಲೇಮ್‌ನಲ್ಲಿ ವಾಸಿಸುತ್ತಾರೆ. ಈ ಆರ್ಥಿಕ ಬೆಂಬಲ ಇಲ್ಲದಿದ್ದರೆ, ಪವಿತ್ರ ಭೂಮಿಯಲ್ಲಿ ಜನಸಂಖ್ಯೆ ನಿಧಾನವಾಗಿ ಕಡಿಮೆಯಾಗುವ ಅಪಾಯವಿದೆ.
“ಕ್ರೈಸ್ತರು ಮಾತ್ರವಲ್ಲದೆ, ಯಹೂದ್ಯರೂ ಕೂಡ ಕುಟುಂಬ ಸಮೇತ ವಲಸೆ ಹೋಗುತ್ತಿರುವುದನ್ನು ನಾವುನೋಡುತ್ತಿದ್ದೇವೆ—,” ಎಂದು ವಂ. ಗುರು ಇಯೆಲ್ಪೊ ಹೇಳಿದರು. ಯಾತ್ರೆಗಳು ಭರವಸೆಯ ಮೂಲವಾಗುವುದರ ಜೊತೆಗೆ, ಸಕಾರಾತ್ಮಕ ಕಾರ್ಯಗಳಿಗೆ ಕಾರಣವಾಗಬಹುದು.
ಸಕಾರಾತ್ಮಕ ಲಕ್ಷಣಗಳು
ಯಾತ್ರಿಕರು ಭರವಸೆಯನ್ನು ತರುತ್ತಾರೆ ಎಂದು ವಂ. ಗುರು ಇಯೆಲ್ಪೊ ಮತ್ತೊಮ್ಮೆ ಹೇಳಿದರು. ಜ್ಯೂಬಿಲಿಯ ಅಂತ್ಯದಲ್ಲಿ ಇದರ ಅರ್ಥವೆಂದರೆ “ಎಲ್ಲವೂ ಇದ್ದರೂ ನಾವು ತ್ಯಜಿಸಲ್ಪಟ್ಟಿಲ್ಲ ಎಂಬುದನ್ನು ನೋಡಲು ಬರುವುದು.”
“ನಮ್ಮನ್ನು ನೆನಪಿಸಿಕೊಂಡಿರುವ ಧರ್ಮಸಭೆ ವಿವಿಧ ರೀತಿಗಳಲ್ಲಿ ಯಾವಾಗಲೂ ನಮ್ಮೊಂದಿಗೆ ಇದ್ದೇ ಇದೆ,” ಎಂದು ಅವರು ಹೇಳಿದರು. “ಭರವಸೆಯ ಯಾತ್ರಿಕರು ಎಂದರೆ, ಕತ್ತಲೆಯ ಸಮಯದಲ್ಲೂ ಮತ್ತೆ ಆರಂಭಿಸಬಹುದಾದ ಒಂದು ಬಿಂದು ಇದ್ದೇ ಇದೆ ಎಂಬುದಾಗಿದೆ.”
ಡಿಸೆಂಬರ್‌ನಲ್ಲಿ ಚೇತರಿಕೆಯ ಕೆಲವು ಸೂಚನೆಗಳು ಕಂಡುಬಂದವು. ಕ್ರಿಸ್ತ ಜಯಂತಿ ಸಮಯದಲ್ಲಿ ಬೆತ್ಲೆಹೇಮ್‌ನ ಎಲ್ಲಾ ಹೋಟೆಲ್‌ಗಳು ಸಂಪೂರ್ಣವಾಗಿ ತುಂಬಿದ್ದವು. ಕೆಲವು ದಿನಗಳವರೆಗೆ ವಸತಿ ಪ್ರಮಾಣವು ಸುಮಾರು 70 ಶೇಕಡಾವರೆಗೆ ಮುಂದುವರಿದಿತ್ತು.
ಇದಕ್ಕೆ ಮುಂಚೆ , ಇಸ್ರಾಯೇಲಿ ಅಧಿಕಾರಿಗಳು ಪ್ಯಾಲೆಸ್ಟೈನೀಯರಿಗೆ ಇಸ್ರೇಲ್‌ಗೆ ಭೇಟಿ ನೀಡಲು 40 ದಿನಗಳ ಅವಧಿಯ 25,000 ಅನುಮತಿಪತ್ರಗಳನ್ನು ನೀಡಿದರು. ಇವರಲ್ಲಿ ಹಲವರಿಗೆ ಇದು ಜೆರುಸಲೇಮ್‌ಗೆ ಮೊದಲ ಭೇಟಿ ಆಗಿತ್ತು.
ಯಹೂದಿ ವಿರೋಧಿ ಭಾವನೆಗಳ ವೃದ್ಧಿಯನ್ನು ಒಪ್ಪಲಾರೆವು
“ಅಕ್ಟೋಬರ್ 7, 2023ರ ನಂತರ ಯಾವುದೂ ಹಿಂದಿನಂತಿಲ್ಲ. ಹಿಂದಿನ ಸ್ಥಿತಿಗೆ ಮರಳಬಹುದು ಎಂದು ಊಹಿಸುವುದೂ ಸರಿಯಲ್ಲ. ಈ ಭೂಮಿ ಬದಲಾಗಿದೆ, ಹಾಗೆಯೇ ಯಾತ್ರೆಗಳ ಸ್ವರೂಪವೂ ಬದಲಾಗುತ್ತದೆ,” ಎಂದು ವಂ. ಗುರು ಇಯೆಲ್ಪೊ ಹೇಳಿದರು. “ಇಲ್ಲಿ ಬರುವವರು ಅನೇಕ ಪ್ರಶ್ನೆಗಳೊಂದಿಗೆ ಮತ್ತು ವಿಶ್ವಾಸದಿಂದ ಪ್ರೇರಿತರಾಗಿ ಬರುತ್ತಾರೆ.”
ಈ ಕಾರಣದಿಂದ, ಗುಂಪುಗಳನ್ನು ಜೊತೆಗೊಳ್ಳುವವರು ಯಾತ್ರಿಕರಿಗೆ “ಪಕ್ಷಪಾತ ತೋರಿಸದೆ, ಧ್ರುವೀಕರಣಕ್ಕೆ ಒಳಗಾಗದಂತೆ ಸಹಾಯ ಮಾಡಬೇಕು. ಅನ್ಯಾಯವನ್ನು ಖಂಡಿಸುವುದು ಒಂದು ವಿಷಯ, ಆ ಅನ್ಯಾಯಕ್ಕೆ ಸಂಪೂರ್ಣ ಜನಾಂಗವನ್ನು ಸಮಾನೀಕರಿಸುವುದು ಮತ್ತೊಂದು,” ಎಂದು ಅವರು ಹೇಳಿದರು.
“ರಾಜಕೀಯ ನಿರ್ಧಾರಗಳ ಪರಿಣಾಮವಾಗಿ ಯಹೂದಿ ವಿರೋಧಿ ಭಾವನೆಗಳು ಹೆಚ್ಚುತ್ತಿರುವುದನ್ನು ನಾವು ಒಪ್ಪಲಾರೆವು,” ಎಂದು ಪವಿತ್ರ ಭೂಮಿಯ ಕಸ್ಟೋಸ್ ಹೇಳಿದರು.
ಹಮಾಸ್ ದಾಳಿಯ ಮುಂದಿನ ದಿನ, ಪವಿತ್ರ ಭೂಮಿಯ ಪಾಲನೆಗೆ ಸೇರಿದ ಬಹುಧರ್ಮೀಯ ಗಾಯನ ಶಾಲೆಯಲ್ಲಿ ಕೆಲವು ಮುಸ್ಲಿಂ ವಿದ್ಯಾರ್ಥಿಗಳು ತಮ್ಮ ಯಹೂದಿ ಶಿಕ್ಷಕರೊಂದಿಗೆ ತರಗತಿಗಳಿಗೆ ಹಾಜರಾಗಲು ನಿರಾಕರಿಸಿದ್ದರು ಎಂಬ ಘಟನೆಯನ್ನು ಅವರು ವಿವರಿಸಿದರು.
“ನಾನು ಈ ದೇಶದ ಸರ್ಕಾರವಲ್ಲ; ನನಗೆ ಜೆರುಸಲೇಮ್‌ನ ಅತ್ಯುತ್ತಮ ಗಾಯನ ತಂಡವನ್ನು ನಿರ್ಮಿಸಬೇಕಷ್ಟೆ,” ಎಂದು ಆ ಶಿಕ್ಷಕರು ಹೇಳಿದರು. ದೀರ್ಘ ಸಂವಾದದ ನಂತರ ತರಗತಿಗಳು ಮುಂದುವರಿಯಲು ಸಾಧ್ಯವಾಯಿತು.
ಒಳಿತಿನ ಬೀಜಗಳನ್ನು ಬಿತ್ತುವುದು ಮತ್ತು ಭವಿಷ್ಯವನ್ನು ಗುರುತಿಸುವುದು
ಈ ರೀತಿಯ ಉದಾಹರಣೆಗಳೇ ಮುಂದಿನ ಯಾತ್ರೆಗಳ ಆಧಾರವಾಗಬೇಕು ಎಂದು ವಂ. ಗುರು ಇಯೆಲ್ಪೊ ಹೇಳಿದರು. ಯಾತ್ರೆಗಳು ಈಗ ಪವಿತ್ರ ಭೂಮಿಯಲ್ಲಿ ಈಗಾಗಲೇ ಇರುವ ಒಳಿತಿನ ಮತ್ತು ಭವಿಷ್ಯದ ಬೀಜಗಳನ್ನು ಗುರುತಿಸಲು ಸಹಾಯ ಮಾಡುವುದರ ಮೇಲೆ ಹೆಚ್ಚು ಕೇಂದ್ರೀಕೃತವಾಗಬೇಕು.
“ಹಿಂದೆ ಕೆಲವು ಯಾತ್ರೆಗಳು ಸ್ಥಳೀಯ ಕ್ರೈಸ್ತ ಸಮುದಾಯದೊಂದಿಗೆ ಯಾವುದೇ ಸಂಪರ್ಕವಿಲ್ಲದೆ ನಡೆದಿವೆ,” ಎಂದು ಅವರು ಹೇಳಿದರು. “ಈಗ ಸ್ವಲ್ಪ ಕಡಿಮೆ ಸ್ಥಳಗಳನ್ನು ನೋಡಿದರೂ ಹೆಚ್ಚು ಜನರನ್ನು ಸಂಧಿಸಬಹುದು.
ಪವಿತ್ರ ಸ್ಥಳಗಳನ್ನು ನೋಡುವುದು ಮಾತ್ರವಲ್ಲದೆ, ಜನರನ್ನು ಒಂದಾಗಿಸುತ್ತಿರುವ ವಾಸ್ತವಗಳನ್ನು ತಿಳಿದುಕೊಳ್ಳಬಹುದು.”