ಪ್ರಭುವಿನ ದಿನದ ಚಿಂತನೆ: ದೀಕ್ಷಾಸ್ನಾನದ ಕೃಪೆಯಲ್ಲಿ ಬದುಕುವುದು
ಪ್ರಭುವಿನ ದೀಕ್ಷಾಸ್ನಾನದ ಈ ಹಬ್ಬದಂದು, ಧರ್ಮಸಭೆ ನಮ್ಮನ್ನು ಮತ್ತೆ ಜೋರ್ಡಾನ್ ನದಿಯ ಬಳಿಗೆ ಯೇಸುವಿಗೆ ಹಿಂದೆ ನಡೆದ ಘಟನೆಯನ್ನು ನೆನಪಿಸುವುದಕ್ಕೆ ಮಾತ್ರವಲ್ಲ ಬದಲಿಗೆ ನಮ್ಮ ಜೀವನದಲ್ಲಿ ಏನು ನಡೆದಿದೆ ಎಂಬುದನ್ನು ಮರುಅರ್ಥಮಾಡಿಕೊಳ್ಳಲು ಕರೆದುಕೊಂಡು ಹೋಗುತ್ತದೆ. ಈ ಹಬ್ಬ ಯೇಸುವಿನ ದೀಕ್ಷಾಸ್ನಾನವು ಕೇವಲ ಪಾಪಕ್ಷಮೆ ಅಥವಾ ಸದಸ್ಯತ್ವವಲ್ಲದೆ ಪರಿಶುದ್ಧ ಆತ್ಮದಲ್ಲಿ ಜೀವನ, ಈಗಲೇ ಸ್ವರ್ಗದ ಅನುಭವದ ಆರಂಭವನ್ನು ನೀಡುತ್ತದೆ ಎಂಬುದನ್ನು ತೋರಿಸುತ್ತದೆ.
ಯೇಸು ನೀರಿನಿಂದ ಹೊರಬರುವಾಗ, ಪರಿಶುದ್ಧ ಆತ್ಮರು ಅವರ ಮೇಲೆ ಇಳಿದು ಉಳಿಯುತ್ತಾರೆ. ಆತ್ಮರು ಯೇಸುವನ್ನು ಸ್ಪರ್ಶಿಸಿ ಹಿಂತಿರುಗುವುದಿಲ್ಲ; ಅವರೊಂದಿಗೆ ವಾಸಿಸುತ್ತಾರೆ. ಯೇಸುವಿನ ಸಾರ್ವಜನಿಕ ಜೀವನದಲ್ಲಿ ನಡೆದ ಎಲ್ಲವೂ ಈ ಕ್ಷಣದಿಂದಲೇ ಆರಂಭವಾಗುತ್ತದೆ. ಅದಕ್ಕಾಗಿ ನಾವು ಅವರನ್ನು ಕೇವಲ ಯೇಸು ಎಂದು ಅಲ್ಲ, ಪ್ರಭುಯೇಸು ಕ್ರಿಸ್ತ ಎಂದು ಕರೆಯುತ್ತೇವೆ — ಅಂದರೆ ಅಭಿಷಿಕ್ತರಾದ ಯೇಸು. ಅಪೋಸ್ತಲರ ಕೃತ್ಯಗಳಲ್ಲಿ ಪೇತ್ರರು ಈ ಘಟನೆಯನ್ನು ನೆನಪಿಸಿಕೊಂಡು ಯೇಸುವಿನ ಸಂಪೂರ್ಣ ಸೇವೆಯನ್ನು ಹೀಗೆ ಸಾರುತ್ತಾರೆ:
“ದೇವರುಅವರಿಗೆ ಪರಿಶುದ್ಧ ಆತ್ಮ ಮತ್ತು ಶಕ್ತಿಯಿಂದ ಅಭಿಷೇಕ ಮಾಡಿದರು; ಅವರುಸತ್ಕಾರ್ಯಗಳನ್ನು ಮಾಡುತ್ತಾ ಸಂಚರಿಸಿದರು.”
ಯೇಸು ಮೊದಲು ಒಳ್ಳೆಯದನ್ನು ಮಾಡಲು ನಿರ್ಧರಿಸಿ ನಂತರ ಶಕ್ತಿಯನ್ನು ಪಡೆದವರಲ್ಲ. ಅವರು ಅಭಿಷಿಕ್ತರಾಗಿದ್ದರಿಂದಲೇ ಒಳ್ಳೆಯತನ ಅವರಿಂದ ಹೊರಹೊಮ್ಮಿತು.
ಕ್ಲೇರೆವೊದ ಸಂತ ಬರ್ನಾರ್ಡ್ ಈ ವಾಕ್ಯದ ಕುರಿತು ತಮ್ಮ ಗೀತಾಗೀತೆಯ ಉಪದೇಶಗಳಲ್ಲಿ ಚಿಂತನೆ ಮಾಡಿ, ಇದು ಪ್ರತಿಯೊಬ್ಬ ದೀಕ್ಷಾಸ್ನಾನ ಪಡೆದ ವ್ಯಕ್ತಿಗೆ ಅನ್ವಯಿಸುವ ಮಾದರಿಯೆಂದು ಹೇಳುತ್ತಾರೆ. ಅವರ ಪ್ರಕಾರ, ಕೃಪೆಯಿಂದ ಅಭಿಷಿಕ್ತರಾಗದೇ ನಿಜವಾದ ಸತ್ಕಾರ್ಯಗಳನ್ನು ಮಾಡಲಾಗದು. ಪ್ರಭುಯೇಸುವೂ ಸಹ ತನ್ನ ಮಾನವ ಸ್ವಭಾವದಲ್ಲಿ ಕೇವಲ ಪ್ರಯತ್ನದಿಂದ ಕಾರ್ಯನಿರ್ವಹಿಸುವುದಿಲ್ಲ; ಅವರುಕ್ರಿಸ್ತನಾಗಿ — ಅಭಿಷಿಕ್ತನಾಗಿ ಕಾರ್ಯನಿರ್ವಹಿಸುತ್ತಾರೆ. ಈ ಆಂತರಿಕ ಅಭಿಷೇಕವಿಲ್ಲದೆ ನಮ್ಮ ಕಾರ್ಯಗಳು ಒಳ್ಳೆಯದಾಗಿದ್ದರೂ, ಅವುಗಳಲ್ಲಿ ಆಳ ಮತ್ತು ಸ್ಥಿರತೆ ಇರದು.
ಬರ್ನಾರ್ಡ್ ಅವರು ಕೃಪೆಯ ಈ ಜೀವನವನ್ನು ಮೂರು “ಅಭಿಷೇಕಗಳು” ಎಂದು ವಿವರಿಸುತ್ತಾರೆ. ದೀಕ್ಷಾಸ್ನಾನವು ನಮ್ಮೊಳಗೆ ಬೆಳೆಯುವ ಮೂರು ಹಂತಗಳಾಗಿ ಅವನ್ನು ವಿವರಿಸುತ್ತಾರೆ.
ಮೊದಲನೆಯದು ಪಶ್ಚಾತ್ತಾಪದ ಅಭಿಷೇಕ. ಇದು ಪಾಪಪರಿಹಾರದ ಸುಗಂಧ. ನಮ್ಮ ಪಾಪಗಳ ಸ್ಮರಣೆ ದುಃಖ ಮತ್ತು ಸತ್ಯತೆಯಿಂದ ಕುಗ್ಗುವಾಗ ಈ ಅಭಿಷೇಕ ರೂಪುಗೊಳ್ಳುತ್ತದೆ. ಇದರ ಅಂಶಗಳು ಕಠಿಣವಾಗಿದ್ದರೂ, ಇದು ವಿನಯವನ್ನು ಉಂಟುಮಾಡುವುದರಿಂದ ದೇವರಿಗೆ ಪ್ರಿಯವಾಗುತ್ತದೆ. ಆದರೆ ಇಲ್ಲಿ ಸದಾಕಾಲ ಉಳಿಯಲಾಗುವುದಿಲ್ಲ ಎಂದು ಬರ್ನಾರ್ಡ್ ಎಚ್ಚರಿಸುತ್ತಾರೆ. ನಿರೀಕ್ಷೆಯಿಲ್ಲದೆ ಪಾಪಗಳಲ್ಲೇ ಮುಳುಗಿರುವುದು ನಿರಾಶೆಗೆ ಕರೆದೊಯ್ಯುತ್ತದೆ.
ಈ ಅಭಿಷೇಕವನ್ನು ಕ್ರಿಸ್ತನ ಪಾದಗಳಿಗೆ ಹಚ್ಚಲಾಗುತ್ತದೆ. ಇದು ಯಾತ್ರೆಯ ಆರಂಭದಲ್ಲಿ ನಮ್ಮನ್ನು ನೆಲೆಗೊಳಿಸುತ್ತದೆ ಮತ್ತು ಆಂತರಿಕ ಪರಿವರ್ತನೆಯಿಲ್ಲದೆ ಧಾರ್ಮಿಕರಾಗಿ ಕಾಣಿಸಿಕೊಳ್ಳುವ ಅಪಾಯದಿಂದ ಮತ್ತು ಕಪಟತನದಿಂದ ನಮ್ಮನ್ನು ರಕ್ಷಿಸುತ್ತದೆ
ಎರಡನೆಯದು ಭಕ್ತಿಯ ಅಭಿಷೇಕ. ಆತ್ಮ ಗುಣಮುಖವಾಗುತ್ತಾ ಹೋದಂತೆ, ಅದರ ದೃಷ್ಟಿ ತನ್ನ ಮೇಲಿಂದ ದೇವರ ಕಡೆಗೆ ತಿರುಗುತ್ತದೆ. ಈ ಅಭಿಷೇಕವು ದೇವರ ಒಳ್ಳೆಯತನದಿಂದ ರೂಪುಗೊಂಡಿದೆ — ಸೃಷ್ಟಿ, ಸಂರಕ್ಷಣೆ ಮತ್ತು ಮುಖ್ಯವಾಗಿ ವಿಮೋಚನೆ. ಸ್ವಾರ್ಥದ ಜಾಗದಲ್ಲಿ ಕೃತಜ್ಞತೆ ಬರುತ್ತದೆ ಮತ್ತು ಆತ್ಮಿಕ ಆನಂದ ಆರಂಭವಾಗುತ್ತದೆ.
ಬರ್ನಾರ್ಡ್ ಅವರ ಮಾತಿನಂತೆ, ಈ ಅಭಿಷೇಕವನ್ನು ತಲೆಯ ಮೇಲೆ ಸುರಿಯಲಾಗುತ್ತದೆ. ಇದು ಮನಸ್ಸನ್ನು ಮೇಲಕ್ಕೆತ್ತಿ ಕ್ರಿಸ್ತನ ದಯೆ ಮತ್ತು ಸೌಂದರ್ಯವನ್ನು ಧ್ಯಾನಿಸುವಂತೆ ಮಾಡುತ್ತದೆ. ಗರ್ವದಲ್ಲಾಗಲಿ ಅಥವಾ ಮನನೊಂದುಕೊಳ್ಳುವ ಸ್ಥಿತಿಯಲ್ಲಾಗಲಿ, ಕೇವಲ ನಮ್ಮ ಮೇಲೆ ಮಾತ್ರ ಅವಲಂಬಿಸುವುದರಿಂದ ಈ ಅಭಿಷೇಕ ದೂರವಿಡುತ್ತದೆ.
ಇಲ್ಲಿ ಬರ್ನಾರ್ಡ್ ಅವರು ಕಾಲುವೆ ಮತ್ತು ಜಲಾಶಯ ಉದಾಹರಣೆಯೊಂದಿಗೆ ಒಂದು ಎಚ್ಚರಿಕೆ ನೀಡುತ್ತಾರೆ. ಕಾಲುವೆ ನೀರನ್ನು ಪಡೆದ ತಕ್ಷಣ ಹರಿದುಬಿಡುತ್ತದೆ ಮತ್ತು ತಾನೇ ಒಣಗಿರುತ್ತದೆ. ಜಲಾಶಯವು ಮೊದಲು ತುಂಬುತ್ತದೆ, ನಂತರ ಉಕ್ಕಿ ಹರಿಯುತ್ತದೆ. ದೀಕ್ಷಾಸ್ನಾನದಲ್ಲಿ ಪಶ್ಚಾತ್ತಾಪ ಮತ್ತು ಭಕ್ತಿ ನಮ್ಮನ್ನು ತುಂಬುತ್ತವೆ. ತುಂಬುವ ಮುನ್ನ ಸೇವೆಗೆ ಧಾವಿಸಿದರೆ, ನಾವು ಒಳಗೆ ಖಾಲಿಯಾಗುತ್ತೇವೆ. ಜಲಾಶಯದಂತೆ ಬದುಕುವುದೇ ಪರಿಶುದ್ಧ ಆತ್ಮದಿಂದ ಕಾರ್ಯನಿರ್ವಹಿಸುವು ದಾಗಿದೆ.
ಅದಾದ ನಂತರ ಬರುವುದೇ ಮೂರನೇಯ ಅಭಿಷೇಕ ಅದೇ ಕರುಣೆಯ ಅಭಿಷೇಕ. ಇದು ಅಪೋಸ್ತಲರ ಕೃತ್ಯಗಳಲ್ಲಿ ಪೇತ್ರನು ಹೇಳುವ ಅಭಿಷೇಕ — ಹೊರಗೆ ಕಾರ್ಯರೂಪದಲ್ಲಿ ತೋರಿಸುವ ದಯೆ. ಇದರ ಅಂಶಗಳು ಇತರರ ಅಗತ್ಯಗಳು ಮತ್ತು ಅವರ ನೋವುಗಳು. ಮೊದಲ ಎರಡು ಅಭಿಷೇಕಗಳು ಮುಖ್ಯವಾಗಿ ಅಭಿಷೇಕ ಹೊಂದಿದ ವ್ಯಕ್ತಿಯನ್ನು ಗುಣಪಡಿಸುತ್ತವೆ. ಆದರೆ ಈ ಮೂರನೇದು ಹಾಗಲ್ಲ. ಇದು ಹರಿದು ಹೋಗುವ ಅಭಿಷೇಕ. ಇದು ಇತರರಿಗಾಗಿ ಕೊಡುವುದಕ್ಕೆ ಇರುವದು. ಬರ್ನಾರ್ಡ್ ಹೇಳುವಂತೆ, ಆತ್ಮವು ದೇವರ ಕೃಪೆಯಿಂದ ಸಾಕಷ್ಟು ತುಂಬಿಕೊಂಡಾಗ, ಪ್ರೀತಿ ಸ್ವಾಭಾವಿಕವಾಗಿ ಹೊರಹೊಮ್ಮುತ್ತದೆ. ಇದು ವಧು ವರರು ಒಂದಾಗುವಂತಹ ಸಮರ್ಪಣೆ. ಒತ್ತಡದಿಂದ ಅಥವಾ ಕರ್ತವ್ಯದ ಭಾವದಿಂದಲ್ಲ, ಪ್ರೀತಿಯಿಂದ ಸೇವಿಸುವ ಸ್ಥಿತಿ.
ಈ ಒಳಗಿನ ಅಭಿಷೇಕದಿಂದ ಮಾಡುವ ಕಾರ್ಯಗಳಿಗೆ ಒಂದು ವಿಶೇಷ ಗುಣ ಇರುತ್ತದೆ ಎಂದು ಬರ್ನಾರ್ಡ್ ಹೇಳುತ್ತಾರೆ — ಅದು ಕ್ರಿಸ್ತನಿಂದ ಬರುವ ಗುಣ. ಅನೇಕ ಬಾರಿ ಮಾನವನ ಒಳ್ಳೆಯತನ ಮೇಲ್ಮೈಯಲ್ಲಿ ಮಾತ್ರ ಇರುತ್ತದೆ. ಅದು ಹೊರಗೆ ಕಾಣುತ್ತದೆ, ಆದರೆ ಒಳಗೆ ತಲುಪುವುದಿಲ್ಲ. ಆದರೆ ಪವಿತ್ರಾತ್ಮನಿಂದ ಬರುವ ಒಳ್ಳೆಯತನ ಆಳಕ್ಕೆ ಹೋಗುತ್ತದೆ. ಅದು ವ್ಯಕ್ತಿಯನ್ನು ನಿಜವಾಗಿ ಸ್ಪರ್ಶಿಸುತ್ತದೆ. ಇದು ಕೇವಲ ಒಂದು ಕೆಲಸ ಮುಗಿಸಿದಂತಲ್ಲ; ಒಬ್ಬ ವ್ಯಕ್ತಿಯನ್ನು ನಿಜವಾಗಿ ಪ್ರೀತಿಸಿದಂತಾಗಿದೆ. ಈ ಗುಣ ದೀಕ್ಷಾಸ್ನಾನದ ಮೂಲಕ ಆತ್ಮದಲ್ಲಿ ನೆಲಸಿರುವ ಪವಿತ್ರಾತ್ಮನಿಂದ ಬರುತ್ತದೆ. ಆದ್ದರಿಂದ ಆ ಕಾರ್ಯ ಮುಗಿದ ಮೇಲೂ ಅದರ ಪರಿಣಾಮ ಉಳಿಯುತ್ತದೆ. ಅದು ಇನ್ನೊಬ್ಬರ ಹೃದಯವನ್ನು ತಲುಪುತ್ತದೆ, ಏಕೆಂದರೆ ಅದು ದೇವರ ಹೃದಯದಿಂದಲೇ ಬಂದಿದೆ.
ಈ ಹಬ್ಬದ ಸಂದರ್ಭದಲ್ಲಿ ನಾವು ನಮ್ಮ ದೀಕ್ಷಾಸ್ನಾನದ ಆಳವಾದ ಅರ್ಥವನ್ನು ಮತ್ತೆ ನೆನಪಿಸಿಕೊಳ್ಳಲು ಆಹ್ವಾನಿತರಾಗಿದ್ದೇವೆ. ದೀಕ್ಷಾಸ್ನಾನವನ್ನು ಕೇವಲ ಹೊರಗಿನ ವಿಧಿಯಾಗಿ ಮಾತ್ರ ನೋಡಿದರೆ, ಅದರ ಶಕ್ತಿ ಕಳೆದುಹೋಗುತ್ತದೆ. ಆದರೆ ಅದನ್ನು ಜೀವನದಲ್ಲಿ ಬದುಕಿದಾಗ, ಅದು ನಮಗೆ ನಿರಂತರವಾಗಿ ಅಭಿಷೇಕ ನೀಡುತ್ತದೆ, ನಮ್ಮ ಪ್ರೀತಿಯನ್ನು ಶುದ್ಧಗೊಳಿಸುತ್ತದೆ ಮತ್ತು ನಮಗೆ ಒಕ್ಕೂಟದ ಜೀವನಕ್ಕೆ ಕರೆದೊಯ್ಯುತ್ತದೆ.
ಪವಿತ್ರಾತ್ಮರು ನಮ್ಮೊಳಗೆ ನೆಲೆಸಲು,ನಮ್ಮನ್ನು ಗುಣಪಡಿಸಲು, ಒಳಗಿನ ಸಂತೋಷವನ್ನು ಕೊಡಲು ಮತ್ತು ನಮ್ಮ ಮೂಲಕ ಹೊರಗೆ ಹರಿಯಲು ನಾವು ಅವಕಾಶ ನೀಡಿದರೆ ನಾವು ಕೂಡ ಶಾಂತವಾಗಿ, ನಿಷ್ಠೆಯಿಂದ ಒಳ್ಳೆಯ ಕಾರ್ಯಗಳನ್ನು ಮಾಡುತ್ತಾ ಬದುಕಬಹುದು. ಆ ಮೂಲಕ ಈಗಾಗಲೇ ಆರಂಭವಾದ ಸ್ವರ್ಗದ ಸುವಾಸನೆಯನ್ನು ಈ ಲೋಕಕ್ಕೆ ತರುತ್ತೇವೆ.