ವೆನೆಜುವೆಲಾದ ಧರ್ಮಸಭೆಯೊಂದಿಗೆ ಐಕಮತ್ಯ ವ್ಯಕ್ತಪಡಿಸಿದ CELAM
ಪ್ರಭುವಿನ ದೈವ ದರ್ಶನದ (ಎಪಿಫನಿ) ಹಬ್ಬದ ಸಂದರ್ಭದಲ್ಲಿ, ಲ್ಯಾಟಿನ್ ಅಮೆರಿಕಾ ಮತ್ತು ಕೆರಿಬಿಯನ್ ಧರ್ಮಾಧ್ಯಕ್ಷರ ಮಂಡಳಿ (CELAM) ವೆನೆಜುವೆಲಾದ ಧರ್ಮಸಭೆ ಮತ್ತು ಜನರಿಗೆ ಸಮೀಪತೆ ಮತ್ತು ಭರವಸೆಯ ಸಂದೇಶವನ್ನು ಕಳುಹಿಸಿದೆ. ಈ ಸಂದೇಶವು ಶಾಂತಿ ಮತ್ತು ಸಮ್ಮಿಲನದ ಭವಿಷ್ಯದತ್ತ ಕ್ರೈಸ್ತ ಆಶೆ ಮತ್ತು ಬದ್ಧತೆಯನ್ನು ಪ್ರತಿಧ್ವನಿಸುತ್ತದೆ. ಸಂಸ್ಥೆಯ ಅಧ್ಯಕ್ಷ ಮಂಡಳಿಯ ಸದಸ್ಯರು ಸಹಿ ಮಾಡಿದ ಈ ಸಂದೇಶವು ದೇಶ ಎದುರಿಸುತ್ತಿರುವ ಕಷ್ಟಗಳ ಕುರಿತು ಆಳವಾದ ಐಕಮತ್ಯಯನ್ನು ವ್ಯಕ್ತಪಡಿಸುತ್ತದೆ ಮತ್ತು ಕತ್ತಲೆಯ ಕ್ಷಣಗಳಲ್ಲಿ ಜನರೊಂದಿಗೆ ನಡೆಯುವ ದೇವರ ಮೇಲಿನ ನಂಬಿಕೆಯನ್ನು ಪುನರುಜ್ಜೀವನಗೊಳಿಸಲು ಆಹ್ವಾನಿಸುತ್ತದೆ.
ದೇವರು ಜನರ ಹತ್ತಿರ ಇದ್ದಾರೆ.
“ಈ ಸಮಯದಲ್ಲಿ ದೈವ ದರ್ಶನದ ಹಬ್ಬವನ್ನು ಆಚರಿಸುವುದು ಜನರ ಹತ್ತಿರ ಇರುವ, ಅವರೊಂದಿಗೆ ನಡೆಯುವ, ರಾತ್ರಿ ಕತ್ತಲನ್ನು ಬೆಳಗಿಸುವ ಮತ್ತು ಎಲ್ಲವೂ ಅನಿಶ್ಚಿತವಾಗಿ ಕಾಣುವಾಗಲೂ ಹೊಸ ದಾರಿಗಳನ್ನು ತೆರೆದಿಡುವ ದೇವರ ಮೇಲಿನ ನಮ್ಮ ನಂಬಿಕೆಯನ್ನು ಪುನರುಜ್ಜೀವನಗೊಳಿಸುವುದಾಗಿದೆ,” ಎಂದು ಸ್ಪ್ಯಾನಿಷ್ ಭಾಷೆಯಲ್ಲಿ ವೆನೆಜುವೆಲಾದ ಧರ್ಮಸಭೆಗೆ ಉದ್ದೇಶಿಸಿ ಬರೆದ ಪತ್ರದಲ್ಲಿ ಸಂಸ್ಥೆ ಹೇಳಿದೆ. ದೈವ ದರ್ಶನದ ಹಬ್ಬದ ಆಚರಣೆ ಕ್ರಿಸ್ತನು ಲೋಕಕ್ಕೆ ತರುವ ಬೆಳಕನ್ನು ನೆನಪಿಸುತ್ತದೆ; ಆ ಬೆಳಕನ್ನು “ಯಾರೂ ನಾಶಪಡಿಸಲು ಸಾಧ್ಯವಿಲ್ಲ” ಎಂದು ಅವರು ಸ್ಮರಿಸಿದ್ದಾರೆ.
ಸಂದೇಶದಲ್ಲಿ ವಿಶೇಷವಾಗಿ ವೆನೆಜುವೆಲಾದ ಪೋಷಕಿ ಕೊರೊಮೊಟೊದ ಮಾತೆಯನ್ನು (Our Lady of Coromoto) ಸ್ಮರಿಸಲಾಗಿದೆ. ವೆನೆಜುವೆಲಾದ ಜನರಿಗೆ ಶಾಂತಿ ಮತ್ತು ಏಕತೆಯ ಉದ್ದೇಶವನ್ನು ಮಾತೆಯ ಮಧ್ಯಸ್ಥಿಕೆಗೆ ಒಪ್ಪಿಸಲಾಗಿದೆ. “ಈ ಸಮಯ ಮತ್ತು ಈ ಪ್ರಯಾಣವನ್ನು ವೆನೆಜುವೆಲಾದ ಜನರ ತಾಯಿಯಾದ ಕೊರೊಮೊಟೊದ ಮಾತೆಯ (Our Lady of Coromoto) ಪ್ರೀತಿಪೂರ್ಣ ಮಧ್ಯಸ್ಥಿಕೆಗೆ ಒಪ್ಪಿಸುತ್ತೇವೆ,” ಎಂದು ಹೇಳಲಾಗಿದೆ. ಇದು ಜನಪ್ರಿಯ ಭಕ್ತಿಯನ್ನೂ ಹಾಗೂ ರಾಷ್ಟ್ರಕ್ಕೆ ಮಾತೆ ನೀಡುವ ಆತ್ಮೀಯ ಸಾಂತ್ವನವನ್ನು ಸೂಚಿಸುತ್ತದೆ.
ಸಂದೇಶದಲ್ಲಿ ಪೂಜ್ಯ ತಂದೆ ಲಿಯೋ XIV ಅವರ ಮಾತುಗಳನ್ನೂ ಸೇರಿಸಲಾಗಿದೆ. 2026 ಜನವರಿ 4, ಭಾನುವಾರ ನಡೆದ ಆಂಜೆಲಸ್ ಪ್ರಾರ್ಥನೆಯ ನಂತರ ಜನಹಿತವನ್ನು ಎಲ್ಲಕ್ಕಿಂತ ಮೇಲಾದ ಅವಶ್ಯಕತೆಯೆಂದು ಪರಿಗಣಿಸಬೇಕೆಂದು ಜಗದ್ಗುರುಗಳು ಹೇಳಿದ್ದಾರೆ. CELAM ತನ್ನ ಹೇಳಿಕೆಯಲ್ಲಿ ಹಿಂಸೆಯನ್ನು ತ್ಯಜಿಸುವ ಅಗತ್ಯ, ಮಾನವ ಗೌರವ ಮತ್ತು ಸಾಮಾಜಿಕ ನ್ಯಾಯದ ಬದ್ಧತೆಯ ಮಹತ್ವವನ್ನು ಒತ್ತಿ ಹೇಳುತ್ತದೆ.
ಏಕತೆ ಮತ್ತು ಸಮ್ಮಿಲನಕ್ಕಾಗಿ ಕರೆ
ವಿಭಜನೆ ಮತ್ತು ಆಂತರಿಕ ಉದ್ವಿಗ್ನತೆಗಳ ನಡುವೆಯೂ, CELAM ರಾಷ್ಟ್ರೀಯ ಸಮ್ಮಿಲನಕ್ಕಾಗಿ ಸ್ಪಷ್ಟವಾದ ಕರೆಯನ್ನು ನೀಡಿದೆ. “ಧರ್ಮಸಭೆ ಒಂದು ತೆರೆದ ಮನೆ ಆಗಿರಬೇಕು, ಭೇಟಿಗೆ ಅವಕಾಶ ನೀಡುವ ಸ್ಥಳವಾಗಿರಬೇಕು ಮತ್ತು ಕಷ್ಟಗಳ ನಡುವೆಯೂ ಭರವಸೆಯನ್ನು ಉತ್ತೇಜಿಸುವ ಶಾಂತ ಧ್ವನಿಯಾಗಿರಬೇಕು,” ಎಂದು ಸಂದೇಶವು ಒತ್ತಿ ಹೇಳುತ್ತದೆ. “ನೀವು ಒಂಟಿಯಲ್ಲ ಎಂಬುದನ್ನು ನಾವು ಪುನರುಚ್ಚರಿಸಬೇಕು. CELAM ನಿಮ್ಮ ಜೊತೆಗೆ ಮತ್ತು ಎಲ್ಲಾ ವೆನೆಜುವೆಲಾದ ಜನರ ಜೊತೆಗೆ ನಡೆಯುತ್ತಿದೆ. ಸೇತುವೆಗಳನ್ನು ನಿರ್ಮಿಸಲು, ಗಾಯಗಳನ್ನು ಗುಣಪಡಿಸಲು ಮತ್ತು ಯಾರನ್ನೂ ಹೊರತುಪಡಿಸದೆ ಸಮ್ಮಿಲನವನ್ನು ಉತ್ತೇಜಿಸಲು ನಡೆಯುವ ಪ್ರತಿಯೊಂದು ಪ್ರಯತ್ನಕ್ಕೂ ಉತ್ತೇಜನ ನೀಡುತ್ತಿದೆ.”
ಲ್ಯಾಟಿನ್ ಅಮೆರಿಕಾ ಧರ್ಮಾಧ್ಯಕ್ಷರ ಮಂಡಳಿ ಎಲ್ಲಾ ವೆನೆಜುವೆಲಾದವರಿಗೆ ಗೌರವಪೂರ್ಣ ಭವಿಷ್ಯ ನಿರ್ಮಿಸುವ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ. ಶಾಂತಿಯ ಭವಿಷ್ಯದತ್ತ ಸಾಗಲು ಏಕತೆ, ಪರಸ್ಪರ ಗೌರವ ಮತ್ತು ಐಕಮತ್ಯ ಅತ್ಯಗತ್ಯವೆಂದು ಅವರು ತಿಳಿಸಿದ್ದಾರೆ. “ಒಟ್ಟಾಗಿ ನಡೆಯುವುದು, ಪರಸ್ಪರ ಗೌರವದಿಂದ ಆಲಿಸುವುದು ಮತ್ತು ಸಾಮೂಹಿಕ ಹಿತವನ್ನು ಹುಡುಕುವುದು — ಇವುಗಳೇ ಪ್ರಭು ನಮಗೆ ತೋರಿಸುವ ಮಾರ್ಗ” ಎಂದು ಲ್ಯಾಟಿನ್ ಅಮೆರಿಕಾ ಮತ್ತು ಕೆರಿಬಿಯನ್ ಧರ್ಮಾಧ್ಯಕ್ಷರು ಹೇಳಿದ್ದಾರೆ.
“ಸತ್ಯ, ನ್ಯಾಯ, ಕರುಣೆ ಮತ್ತು ಅತಿದೌರ್ಬಲ್ಯರ ಕಾಳಜಿ ಇರುವ ಎಲ್ಲೆಡೆ ದೇವರು ಬೆತ್ಲೆಹೇಮಿನಲ್ಲಿ ಕಾಣಿಸಿಕೊಂಡಂತೆ ಮತ್ತೆ ಕಾಣಿಸುತ್ತಾನೆ,” ಎಂದು ಅವರು ಅಂತ್ಯಗೊಳಿಸಿದ್ದಾರೆ. 2025 ಅಕ್ಟೋಬರ್ 19 ರಂದು ಸಂತ ಪದವಿ ಪಡೆದ ವೆನೆಜುವೆಲಾದ ಮೊದಲ ಇಬ್ಬರು ಸಂತರು — ಡಾ. ಜೋಸೆ ಗ್ರೆಗೋರಿಯೋ ಹೆರ್ನಾಂಡೆಸ್ ಮತ್ತು ಮದರ್ ಕಾರ್ಮೆನ್ ರೆಂಡಿಲೆಸ್ — ಇವರ ಮಧ್ಯಸ್ಥಿಕೆಗೆ ತಮ್ಮನ್ನು ಒಪ್ಪಿಸುವಂತೆ ಸಮುದಾಯವನ್ನು ಆಹ್ವಾನಿಸಿದ್ದಾರೆ. ಇವರು ದೇಶಕ್ಕೆ ಆಶಾ ದೀಪಗಳಾಗಿ ಮುಂದುವರಿದಿದ್ದಾರೆ.