ಆಸ್ಟ್ರೇಲಿಯಾದ ಪ್ರಸ್ತುತ ಪರಿಸ್ಥಿತಿಯ ಮಧ್ಯೆ 59ನೆಯ ವಿಶ್ವ ಶಾಂತಿ ದಿನದ ಸಂದೇಶ ಸ್ವೀಕಾರ
ಆಸ್ಟ್ರೇಲಿಯಾದಲ್ಲಿ ನಾವು ಜಗದ್ಗುರುಗಳಾದ ಪೂಜ್ಯ 14ನೇ ಲಿಯೋ ಅವರ 59ನೇ ವಿಶ್ವ ಶಾಂತಿ ದಿನದ ಸಂದೇಶವನ್ನು (1 ಜನವರಿ 2026) ಮನನ ಮಾಡಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ, ಬೆಳಕು ಮತ್ತು ಅಂಧಕಾರ, ಸೌಮ್ಯತೆ ಮತ್ತು ಕ್ರೂರತೆ, ಸತ್ಪ್ರವೃತ್ತಿ ಮತ್ತು ದುಷ್ಟತೆಯ ನಡುವೆ ನಡೆಯುತ್ತಿರುವ ಜಾಗತಿಕ ಹೋರಾಟದ ಮಧ್ಯೆ ನಿಂತಿದ್ದೇವೆ.
ಇತ್ತೀಚಿನವರೆಗೂ, ಸುಡಾನ್, ಉಕ್ರೇನ್ ಹಾಗೂ ಮಧ್ಯಪೂರ್ವದಂತಹ ಪ್ರದೇಶಗಳಲ್ಲಿ ನಡೆಯುತ್ತಿರುವ ಯುದ್ಧ, ಭಯೋತ್ಪಾದನೆ, ಅತಿಯಾದ ಹಿಂಸಾಚಾರ ಮತ್ತು ವಿನಾಶವು ನಮ್ಮಿಂದ ದೂರದಲ್ಲಿರುವಂತೆಯೇ ಕಂಡುಬಂದಿತ್ತು. ಆ ಭೀಕರ ವಾಸ್ತವಗಳು ಸುದ್ದಿಗಳಲ್ಲಿ ಮತ್ತು ಚಿತ್ರಗಳಲ್ಲಿ ಮಾತ್ರ ಕಾಣುತ್ತಿದ್ದವು; ಅವು ನಮ್ಮ ದೈನಂದಿನ ಬದುಕನ್ನು ನೇರವಾಗಿ ತಟ್ಟಿದಂತಿರಲಿಲ್ಲ.
ಆದರೆ 2025ರ ಡಿಸೆಂಬರ್ 14ರ ಭಾನುವಾರ, ಆ ಸ್ಥಿತಿ ಸಂಪೂರ್ಣವಾಗಿ ಬದಲಾಗಿತು.ಆಸ್ಟ್ರೇಲಿಯಾದ ಅತ್ಯಂತ ಪ್ರಸಿದ್ಧ ಕಡಲತೀರವಾಗಿರುವ ಸಿಡ್ನಿಯ ಬಾಂಡಿ ಬೀಚ್‌ನಲ್ಲಿ, ಯೆಹೂದ್ಯ ಸಮುದಾಯದ ನೂರಾರು ಸದಸ್ಯರು ಹನುಕ್ಕಾ ಹಬ್ಬದ ಮೊದಲ ರಾತ್ರಿ ಆಚರಿಸಲು ಸೇರಿದ್ದರು. ಎಂಟು ದಿನಗಳ ಕಾಲ ನಡೆಯುವ ಈ ಯೆಹೂದ್ಯರ “ಬೆಳಕಿನ ಹಬ್ಬ”, ಆಶೆ, ಸ್ಮರಣೆ ಮತ್ತು ನಂಬಿಕೆಯ ಸಂಕೇತವಾಗಿದೆ. ಆದರೆ ಆ ಪವಿತ್ರ ಸಂಭ್ರಮದ ಮಧ್ಯೆ ಗುಂಡಿನ ಸದ್ದು ಮೊಳಗಿತು; ಸಂತೋಷವು ಭೀತಿಯಾಗಿ, ಬೆಳಕು ಅಂಧಕಾರವಾಗಿ ಪರಿವರ್ತಿತವಾಯಿತು.
ಆಸ್ಟ್ರೇಲಿಯಾದ ಶಾಂತಿ ಭಂಗಗೊಂಡಿತು. ತಂದೆ ಮತ್ತು ಮಗ ಶಸ್ತ್ರಸಜ್ಜಿತರಾಗಿ ದಾಳಿಕೋರರು ನಡೆಸಿದ ಗುಂಡಿನ ದಾಳಿಯಲ್ಲಿ 15 ಮಂದಿ ಪ್ರಾಣ ಕಳೆದುಕೊಂಡರು, 40ಕ್ಕೂ ಹೆಚ್ಚು ಜನ ಗಾಯಗೊಂಡರು, ಮತ್ತು ಗುರಿಯಾಗಿದ್ದ ಯೆಹೂದ್ಯ ಸಮುದಾಯವು ತೀವ್ರ ಆಘಾತ ಮತ್ತು ಭೀತಿಗೆ ಒಳಗಾಯಿತು. ಈ ಘಟನೆ ಸಂಪೂರ್ಣ ಆಸ್ಟ್ರೇಲಿಯಾವನ್ನು ಬೆಚ್ಚಿಬೀಳುವಂತೆ ಮಾಡಿತು; ದೇಶವು ಶೋಕ, ಆಘಾತ ಮತ್ತು ಅಚ್ಚರಿಯಲ್ಲಿ ಮುಳುಗಿತು.
ಈ ಘಟನೆ, ಯುದ್ಧ ಮತ್ತು ಹಿಂಸಾಚಾರವು ದೂರದ ದೇಶಗಳ ಸಮಸ್ಯೆಯಲ್ಲ; ಅದು ಯಾವುದೇ ಸಮಾಜದ ಬಾಗಿಲನ್ನೂ ತಟ್ಟಬಲ್ಲದು ಎಂಬ ಕಠೋರ ಸತ್ಯವನ್ನು ಆಸ್ಟ್ರೇಲಿಯಾಕ್ಕೆ ನೆನಪಿಸಿತು. ಶಾಂತಿಯನ್ನು ಸಹಜವೆಂದು ಭಾವಿಸುವ ದೇಶವೊಂದರಲ್ಲಿ, ಅಸಹಿಷ್ಣುತೆ ಮತ್ತು ದ್ವೇಷವು ಹೇಗೆ ಹಠಾತ್ತನೆ ಪ್ರಾಣಹಾನಿಗೆ ದಾರಿ ಮಾಡಿಕೊಡಬಹುದು ಎಂಬುದನ್ನು ಈ ದುರಂತವು ತೋರಿಸಿತು.
59ನೇ ವಿಶ್ವ ಶಾಂತಿ ದಿನದ ಸಂದೇಶದಲ್ಲಿ, ಜಗದ್ಗುರುಗಳಾದ ಪೂಜ್ಯ 14ನೇ ಲಿಯೋ ಅವರು “ನಾವು ನಮ್ಮ ಇತಿಹಾಸಾತ್ಮಕ ಪರಿಸ್ಥಿತಿಗಳಲ್ಲಿಯೇ ಎದುರಿಸುತ್ತಿರುವ ಎಲ್ಲಾ ಸಂಕಷ್ಟಗಳ ಮಧ್ಯೆ, ಅಂಧಕಾರವನ್ನು ಜಯಿಸಲು ಬೆಳಕನ್ನು ಕಾಣುವುದು ಮತ್ತು ಅದರಲ್ಲಿ ನಂಬಿಕೆ ಇಡುವುದು ಅತ್ಯಾವಶ್ಯಕ.”ಎಂದು ಕರೆ ನೀಡಿದ್ದಾರೆ
ಕ್ರೈಸ್ತರ ನಂಬಿಕೆಯಲ್ಲಿ ಬೆಳಕಿನ ಸಂಕೇತ ಅತ್ಯಂತ ಕೇಂದ್ರಸ್ಥಾನ ಹೊಂದಿದೆ. ಯೇಸು ಕ್ರಿಸ್ತನೇ ಲೋಕದ ಬೆಳಕು. ಅಂಧಕಾರವನ್ನು ಓಡಿಸುವ, ಭಯವನ್ನು ಶಮನಗೊಳಿಸುವ ಮತ್ತು ಮಾನವನಿಗೆ ದಿಕ್ಕು ತೋರಿಸುವ ಬೆಳಕು.
ಆದರೆ ಭಯೋತ್ಪಾದಕರ ಹತ್ಯಾಕಾಂಡದ ಕ್ರೂರ ಕೃತ್ಯಗಳ ಎದುರು, ಆ ಬೆಳಕು ಮತ್ತು ಶಾಂತಿ ಆಸ್ಟ್ರೇಲಿಯಾ ಸಮಾಜದಲ್ಲಿಯೇ ನಾಶವಾಗುವ ಅಪಾಯ ಎದುರಾದಂತೆ ಆಯಿತು. ಭದ್ರತೆ, ನೆಮ್ಮದಿ ಮತ್ತು ಪರಸ್ಪರ ನಂಬಿಕೆಯ ಮೇಲೆ ನಿಂತಿದ್ದ ಸಮಾಜದಲ್ಲಿ, ಹಿಂಸೆ ತನ್ನ ಭೀಕರ ರೂಪವನ್ನು ತೋರಿಸಿತು.
ಆದರೂ, ಆ ಕ್ಷಣದಲ್ಲೇ ಮಾನವೀಯತೆಯ ಇನ್ನೊಂದು ಮುಖವೂ ಪ್ರಕಾಶಿಸಿತು. ಜೀವ ರಕ್ಷಕರು, ತುರ್ತು ವೈದ್ಯಕೀಯ ಸಿಬ್ಬಂದಿ, ಪೊಲೀಸ್ ಅಧಿಕಾರಿಗಳು, ಧೈರ್ಯಶಾಲಿ ಸಾಮಾನ್ಯ ನಾಗರಿಕರು—ಮತ್ತು ಬಾಂಡಿ ದಾಳಿಯಲ್ಲಿ ಗಾಯಗೊಂಡವರು ಬದುಕಬೇಕೆಂದು, ಸುಮಾರು ಒಂದು ಲಕ್ಷ ಮಂದಿ ರಕ್ತ ಮತ್ತು ಪ್ಲಾಸ್ಮಾ ದಾನ ಮಾಡಲು ಮುಂದೆ ಬಂದ ನಾಗರಿಕರು—ಈ ಎಲ್ಲರ ತಕ್ಷಣದ ಪ್ರತಿಕ್ರಿಯೆ, ಅತಿ ಕತ್ತಲೆಯ ಮತ್ತು ಅಪಾಯಕರ ಕ್ಷಣಗಳಲ್ಲಿಯೂ ಮಾನವೀಯತೆ ಹೇಗೆ ಬೆಳಕಾಗಿ ಹೊಳೆಯಬಲ್ಲದು ಎಂಬುದಕ್ಕೆ ಸಾಕ್ಷಿಯಾಯಿತು.
ಡಿಸೆಂಬರ್ 21ರಂದು, ಆ ಭೀಕರ ಘಟನೆ ನಡೆದ ಸರಿಯಾಗಿ ಒಂದು ವಾರದ ನಂತರ, ಮತ್ತು ಹನುಕ್ಕಾ ಹಬ್ಬದ ಕೊನೆಯ ಪೂರ್ಣ ದಿನದಲ್ಲಿ, ಬಾಂಡಿ ಬೀಚ್‌ನಲ್ಲಿ “ಅಂಧಕಾರದ ಮೇಲೆ ಬೆಳಕು: ಏಕತೆಯ ರಾತ್ರಿ” ಎಂಬ ರಾಷ್ಟ್ರೀಯ ಚಿಂತನಾ ದಿನಾಚರಣೆ ನಡೆಯಿತು. ಈ ಕಾರ್ಯಕ್ರಮವನ್ನು ಯೆಹೂದ್ಯ ಸಮುದಾಯವೇ ಮುನ್ನಡೆಸಿತು.
ಎಲ್ಲಾ ಆಸ್ಟ್ರೇಲಿಯನ್ನರಿಗೂ ಸಂಜೆ 6:47ಕ್ಕೆ—ಹತ್ಯಾಕಾಂಡ ನಡೆದ ಅದೇ ಕ್ಷಣದಲ್ಲಿ—ಒಂದು ದೀಪ ಬೆಳಗಿಸಲು ಆಹ್ವಾನ ನೀಡಲಾಯಿತು. ನಂತರ ಒಂದು ನಿಮಿಷದ ಮೌನಾಚರಣೆ ನಡೆಯಿತು. ಇದು ಪ್ರಾಣ ಕಳೆದುಕೊಂಡ 15 ಮಂದಿಗೆ, ಗಂಭೀರವಾಗಿ ಗಾಯಗೊಂಡವರಿಗೆ, ಮತ್ತು ಈ ದುರಂತದಿಂದ ಪ್ರಭಾವಿತರಾದ ಎಲ್ಲರಿಗೂ ಸಲ್ಲಿಸಿದ ಸ್ಮರಣಾರ್ಥ ಗೌರವವಾಗಿತ್ತು.
ಈ ಆಹ್ವಾನವು ಯೆಹೂದ್ಯ ಸಮುದಾಯದೊಂದಿಗೆ ನಿಲ್ಲುವ, ಅವರ ದುಃಖವನ್ನು ಹಂಚಿಕೊಳ್ಳುವ ಮತ್ತು ದ್ವೇಷ ಹಾಗೂ ಹಿಂಸಾಚಾರವು ಆಸ್ಟ್ರೇಲಿಯಾ ಜನರ ಗುರುತಾಗುವುದಿಲ್ಲ ಎಂಬುದನ್ನು ಘೋಷಿಸುವ ಒಂದು ನೈತಿಕ ಸಂಕಲ್ಪವಾಗಿತ್ತು.
ಆದರೆ ಈ ಕಾರ್ಯಕ್ರಮದ ವೇಳೆ, ಕೋಪ ಮತ್ತು ವೈರತ್ವವುo ಈ ದುರಂತದ ಪ್ರತಿಕ್ರಿಯೆಯನ್ನು ಇನ್ನಷ್ಟು ಧ್ರುವೀಕರಿಸುವ ಅಪಾಯದಲ್ಲಿದೆ ಎಂಬುದೂ ಸ್ಪಷ್ಟವಾಯಿತು.
ಇಂತಹ ಸಂದರ್ಭದಲ್ಲೇ, “ಸಂವಾದದ ಮೂಲಕ ವೈರವನ್ನು ಹೇಗೆ ಶಮನಗೊಳಿಸಬಹುದು” ಎಂಬ ಪ್ರಶ್ನೆಯನ್ನು ಉದ್ದೇಶಿಸಿ, ಜಗದ್ಗುರುಗಳಾದ ಪೂಜ್ಯ 14ನೇ ಲಿಯೋ ಅವರ ಸಂದೇಶವು ಎಲ್ಲಾ ಧರ್ಮಗಳಿಗೆ ಶಾಂತಿ ಸ್ಥಾಪಕರ ಪಾತ್ರವನ್ನು ಒತ್ತಿ ಹೇಳುತ್ತದೆ.” ಚಿಂತನೆಗಳನ್ನೂ, ಪದಗಳನ್ನೂ ಆಯುಧಗಳಾಗಿ ಬಳಸುವ ಬೆಳೆಯುತ್ತಿರುವ ಪ್ರಲೋಭನದಿಂದ ದೂರವಿರಬೇಕು” ಎಂಬ ಕರೆಯನ್ನು ಈ ಸಂದೇಶ ನೀಡುತ್ತದೆ.
ರಕ್ತಸಂಬಂಧಗಳು ಅಥವಾ ಜಾತಿ–ವಂಶದ ಗಡಿಗಳನ್ನು ಮೀರಿಸಿ ನೋಡುವುದನ್ನು; ತಮಗೆ ಹೋಲುವವರನ್ನಷ್ಟೇ ಸ್ವೀಕರಿಸಿ, ಭಿನ್ನತೆಯನ್ನು ತಳ್ಳಿಹಾಕುವ ಮನೋಭಾವವನ್ನು ತ್ಯಜಿಸುವುದನ್ನು ಮಹಾನ್ ಆಧ್ಯಾತ್ಮಿಕ ಪರಂಪರೆಗಳೂ ಹಾಗೆಯೇ ಯುಕ್ತಿವಾದವೂ ನಮಗೆ ಕಲಿಸುತ್ತವೆ.ಈ ಸಭೆಯಲ್ಲಿ ಆಹ್ವಾನಿತ ಭಾಷಣಕಾರರಲ್ಲಿ ರಾಜ್ಯದ ಮುಖ್ಯಮಂತ್ರಿಯಾದ ಕ್ರಿಸ್ ಮಿನ್ಸ್ ಕೂಡ ಇದ್ದರು. ತಮ್ಮ ಭಾಷಣದಲ್ಲಿ, ಕಥೋಲಿಕ್ ಧರ್ಮಕ್ಕೆ ಸೇರಿದವರಾದ ಮುಖ್ಯಮಂತ್ರಿಗಳು ಕೀರ್ತನೆ 34ನ್ನು ಉಲ್ಲೇಖಿಸಿ“ಈ ಕೀರ್ತನೆ ಸರ್ಕಾರದ ಹೊಣೆಗಾರಿಕೆಯಲ್ಲಿ ಮಾತ್ರ ಮುಗಿಯುವುದಿಲ್ಲ,”
‘ಶಾಂತಿಯನ್ನು ಹುಡುಕಿ, ಅದನ್ನು ಹಿಂಬಾಲಿಸಿರಿ’ ಎಂಬ ಕರೆ ಎಲ್ಲರಿಗೂ ಅನ್ವಯಿಸುತ್ತದೆ. ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಶಾಂತಿ ಯಾದೃಚ್ಛಿಕವಾಗಿ ಸಂಭವಿಸುವುದಿಲ್ಲ. ಅದು ಕರುಣೆ, ದಯೆ ಮತ್ತು ನೈತಿಕ ಧೈರ್ಯದ ಮೂಲಕ ಉದ್ದೇಶಪೂರ್ವಕವಾಗಿ ಬೆಳೆಸಬೇಕಾದದ್ದು. ಸರ್ಕಾರ ಇದನ್ನು ಪ್ರೋತ್ಸಾಹಿಸಬಹುದು, ಬೆಂಬಲಿಸಬಹುದು; ಆದರೆ ಜನರು ಅದನ್ನು ಬದುಕಿನಲ್ಲಿ ಜಾರಿಗೊಳಿಸಬೇಕಾಗುತ್ತದೆ.”
“ಪ್ರಿಯ ಸಹೋದರ ಮತ್ತು ಸಹೋದರಿಯರೇ,ಶಾಂತಿಯನ್ನು ಸ್ವಾಗತಿಸೋಣ. ಅದನ್ನು ಅಸಾಧ್ಯವೆಂದು ಅಥವಾ ನಮ್ಮ ಕೈಗೆಟುಕದಂತದ್ದೆಂದು ಭಾವಿಸದೆ, ಅದನ್ನು ಸ್ವೀಕರಿಸೋಣ ಮತ್ತು ಗುರುತಿಸೋಣ.ಶಾಂತಿಯನ್ನು ಕೇವಲ ದೂರದ ಆದರ್ಶವೆಂದು ನೋಡಲಾರಂಭಿಸಿದಾಗ, ಅದು ನಿರಾಕರಿಸಲ್ಪಟ್ಟರೂ ಅಥವಾ ಯುದ್ಧವೇ ಅದರ ಹೆಸರಿನಲ್ಲಿ ನಡೆಯುತ್ತಿದ್ದರೂ, ನಾವು ಅದನ್ನು ಪ್ರಶ್ನಿಸದೇ ಬಿಡುತ್ತೇವೆ.”
ಅದರ ಕಾರಣವೇನೆಂದರೆ, ನಮ್ಮೊಳಗೂ ನಮ್ಮ ಸುತ್ತಲೂ ಶಾಂತಿ ಬಿರುಗಾಳಿಯಲ್ಲಿ ನಲುಗುತ್ತಿರುವ ಸಣ್ಣ ದೀಪದಂತೆ ಅಪಾಯದಲ್ಲಿದ್ದರೂ, ಅದನ್ನು ರಕ್ಷಿಸುವ ಜವಾಬ್ದಾರಿ ನಮ್ಮದಾಗಿದೆ.” ಎಂದು ಜಗದ್ಗುರುಗಳಾದ ಪೂಜ್ಯ 14ನೆಯ ಲಿಯೋ ಸಂದೇಶವಿತ್ತಿದ್ದಾರೆ.
ತಮ್ಮ ಅಧಿಕಾರಾವಧಿಯ ಆರಂಭದಿಂದಲೂ, ತಮ್ಮ ಆಯ್ಕೆಯಾದ ದಿನದ ಸಂಧ್ಯೆಯ ಅಪೋಸ್ತೋಲಿಕ ಆಶೀರ್ವಾದದಿಂದ ಹಿಡಿದು,ಜಗದ್ಗುರು ಲಿಯೋ ಪುನರುತ್ಥಾನದ ನಂತರ ಯೇಸು ತಮ್ಮ ಶಿಷ್ಯರಿಗೆ ಹೇಳಿದ ಮೊದಲ ಮಾತುಗಳನ್ನು ಮರುಮರು ಉಚ್ಚರಿಸಿದ್ದಾರೆ: “ನಿಮಗೆ ಶಾಂತಿ ಇರಲಿ.”
ಈ ಪುರಾತನ ಶುಭಾಶಯವು ಬೈಬಲ್ ಮೂಲಗಳನ್ನು ಹೊಂದಿದ್ದು, ಇತರೆ ಅಬ್ರಹಾಮೀಯ ಧರ್ಮಗಳಲ್ಲಿಯೂ ಹಂಚಿಕೊಂಡಿರುವುದಾಗಿದೆ—
ಯಹೂದ್ಯರಲ್ಲಿ “ಶಾಲೋಮ್ ಅಲೇಖೇಮ್”,
ಇಸ್ಲಾಮಿನಲ್ಲಿ “ಅಸ್ಸಲಾಮು ಅಲೈಕುಂ”.
ಕ್ರೈಸ್ತ ಧರ್ಮದಲ್ಲಿ, ಜಗದ್ಗುರು ಲಿಯೋ ಸ್ಪಷ್ಟಪಡಿಸುವಂತೆ, ಇದು ಪುನರುತ್ಥಾನಿ ಕ್ರಿಸ್ತನ ಶಾಂತಿ— ಆಯುಧರಹಿತ, ಆಯುಧಗಳನ್ನು ತಗ್ಗಿಸುವ ಶಾಂತಿ; ವಿನಯಪೂರ್ಣ, ಸ್ಥೈರ್ಯವಂತ ಶಾಂತಿ; ಅದನ್ನು ಸ್ವೀಕರಿಸುವವರೊಳಗೆ ದೀರ್ಘಕಾಲಿಕ ಪರಿವರ್ತನೆಯನ್ನು ತರುವ ಶಾಂತಿ. ಎಲ್ಲರನ್ನು ನಿರ್ಬಂಧವಿಲ್ಲದೆ ಪ್ರೀತಿಸುವ ದೇವರಿಂದ ಹೊರಹೊಮ್ಮುವ ಶಾಂತಿ.
‘ಆಯುಧರಹಿತ ಶಾಂತಿ’ ಎಂಬ ಕಲ್ಪನೆಯನ್ನು ಪರಿಚಯಿಸುತ್ತಾ, ಪೂಜ್ಯ ತಂದೆ ಯೇಸು ತಮ್ಮ ಬಂಧನ ಮತ್ತು ಮರಣಕ್ಕೂ ಮುನ್ನ ಅಪೋಸ್ತಲರಿಗೆ ನೀಡಿದ ಉಪದೇಶವನ್ನು,ಪೇತ್ರನಿಗೆ ಕತ್ತಿಯನ್ನು ಬದಿಗಿಡುವಂತೆ ಮಾಡಿದ ಆ ಆಜ್ಞೆಯನ್ನು ನೆನಪಿಸುತ್ತಾರೆ.
“ಪುನರುತ್ಥಾನಿ ಯೇಸುವಿನ ಶಾಂತಿ ಆಯುಧರಹಿತವಾಗಿದೆ,
ಏಕೆಂದರೆ ಅವರ ಹೋರಾಟವು ಇತಿಹಾಸಾತ್ಮಕ, ರಾಜಕೀಯ ಮತ್ತು ಸಾಮಾಜಿಕ ವಾಸ್ತವಿಕತೆಯ ಮಧ್ಯೆಯೇ ನಡೆದರೂ ಅದು ಆಯುಧವಿಲ್ಲದ ಹೋರಾಟವಾಗಿತ್ತು. ಈ ಹೊಸತನಕ್ಕೆ ಭೂತಕಾಲದಲ್ಲಿ ತಾವೇ ಎಷ್ಟೊ ಬಾರಿ ನಡೆದ ದುರಂತಗಳಿಗೆ ಸಹಕಾರಿಗಳಾಗಿದ್ದುದನ್ನು ನೆನಪಿಟ್ಟುಕೊಂಡು ಕ್ರೈಸ್ತರು ಪ್ರವಾದಾತ್ಮಕ ಸಾಕ್ಷಿಗಳಾಗಬೇಕು.”
ಈ ಮಾತುಗಳು ಆಸ್ಟ್ರೇಲಿಯಾದ ಸರ್ಕಾರಗಳಿಗೂ ಸ್ಪಷ್ಟವಾಗಿ ಪ್ರತಿಧ್ವನಿಸಬೇಕಾಗಿವೆ—ಬೊಂಡಿ ದುರಂತದ ಹಿನ್ನೆಲೆಯಲ್ಲಿ ಕಠಿಣ ಬಂದೂಕು ಕಾನೂನುಗಳ ಕುರಿತು ಚರ್ಚಿಸುತ್ತಿರುವಾಗಲೂ, ಜಾಗತಿಕ ಶಾಂತಿ ನಿರ್ಮಾಣದ ಹೊಣೆಗಾರಿಕೆಯನ್ನು ಮರುಪರಿಶೀಲಿಸುತ್ತಿರುವಾಗಲೂ. ಈ ಆಳವಾದ ದೃಷ್ಟಿಕೋನವು ದ್ವೀಪ ಪ್ರದೇಶದಲ್ಲಿಯೂ ಹಾಗೂ ವಿಶ್ವಮಟ್ಟದಲ್ಲಿಯೂ ಶಾಂತಿಗೆ ಹೆಚ್ಚು ಪರಿಣಾಮಕಾರಿಯಾದ ಕೊಡುಗೆ ನೀಡುವ ಸಾಮರ್ಥ್ಯವನ್ನು ರೂಪಿಸಬಹುದು.
ಆಧಿಪತ್ಯವನ್ನೇ ಶಕ್ತಿಯೆಂದು ಪರಿಗಣಿಸುವ ಜಗತ್ತಿನಲ್ಲಿ, ಒಳ್ಳೆಯತನವೇ ಆಯುಧಗಳನ್ನು ತಗ್ಗಿಸುವ ಶಕ್ತಿ : ಜಾಗತಿಕ ಶಾಂತಿಗಾಗಿ ಜಗದ್ಗುರು ಲಿಯೋ ಪ್ರಾಯೋಗಿಕ ಮಾರ್ಗಗಳನ್ನು ಸೂಚಿಸುತ್ತಾರೆ:
● ಭರವಸೆಯನ್ನು ಜೀವಂತವಾಗಿಡುವ ಪ್ರತಿಯೊಂದು ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಮುಂದಾಳುತ್ವವನ್ನು ಬೆಂಬಲಿಸುವುದು;
● ಪ್ರಾರ್ಥನೆ, ಆಧ್ಯಾತ್ಮಿಕತೆ, ಏಕ್ಯತೆ ಮತ್ತು ಅಂತರಧರ್ಮ ಸಂವಾದವನ್ನು ಶಾಂತಿಯ ಮಾರ್ಗಗಳಾಗಿ ಬೆಳೆಸುವುದು;
● ಸಾಮಾಜಿಕ ಜಾಗೃತಿಯನ್ನು ಉತ್ತೇಜಿಸುವುದು, ಜವಾಬ್ದಾರಿಯುತ ಸಂಘಟನೆಗಳನ್ನು ರೂಪಿಸುವುದು, ಅಹಿಂಸಾತ್ಮಕ ಭಾಗವಹಿಸುವಿಕೆ ಮತ್ತು ಪುನರ್ ಸ್ಥಾಪನಾ ನ್ಯಾಯದ ಅಭ್ಯಾಸಗಳನ್ನು ಸಣ್ಣಮಟ್ಟದಿಂದ ದೊಡ್ಡಮಟ್ಟದವರೆಗೆ ಅಳವಡಿಸುವುದು.
ಮುಂದಿನ ತಿಂಗಳುಗಳಲ್ಲಿ, ಸಿಡ್ನಿಯ ಭಯಾನಕ ಭಯೋತ್ಪಾದಕ ದಾಳಿಯ ನಂತರ ದೇಶವು ನಿಧಾನವಾಗಿ ಚೇತರಿಸಿಕೊಳ್ಳುವಾಗ, ಆಸ್ಟ್ರೇಲಿಯನ್ನರು ಪರಸ್ಪರ ನಂಬಿಕೆ ಮತ್ತು ಶಾಂತಿಯ ಹೊಸ ಅಭಿವ್ಯಕ್ತಿಗಳನ್ನು ಕಂಡುಕೊಳ್ಳಲು,ಸಮಾಜದಲ್ಲಿ ದೀರ್ಘಕಾಲಿಕ ಸೌಹಾರ್ದತೆಯನ್ನು ನಿರ್ಮಿಸಲು ಒಂದಾಗಿ ಕಾರ್ಯನಿರ್ವಹಿಸಬೇಕಾಗಿದೆ.