ಶಾಂತಿಯ ನಿರ್ಮಾಣದಲ್ಲಿ ಯುವಜನತೆಯ ಪಾತ್ರ ಅತಿ ಮುಖ್ಯ: ದಕ್ಷಿಣ ಸುಡಾನಿನ ಧರ್ಮಾಧ್ಯಕ್ಷರ ಹೇಳಿಕೆ
ಡಿಸೆಂಬರ್ 2ರಿಂದ 3ರವರೆಗೆ "ಶಾಂತಿಯನ್ನು ನಿರ್ಮಿಸುವ ಯುವಜನತೆ, ಭವಿಷ್ಯವನ್ನು ನಿರ್ಮಿಸುತ್ತದೆ" ಎಂಬ ಶೀರ್ಷಿಕೆಯಡಿಯಲ್ಲಿ ನಡೆದ ಕಾರ್ಯಾಗಾರವು, ದಕ್ಷಿಣ ಸುಡಾನ್‌ನ ಪಶ್ಚಿಮ ಈಕ್ವಟೋರಿಯಾ ರಾಜ್ಯದ ಹತ್ತು ಪ್ರಾಂತ್ಯಗಳಿಂದ ಯುವಜನರನ್ನು ಮತ್ತು ವಿವಿಧ ಸಮುದಾಯಗಳ ಮತ್ತು ಬುಡಕಟ್ಟು ಜನಾಂಗಗಳ ಪ್ರತಿನಿಧಿಗಳನ್ನು ಒಟ್ಟುಗೂಡಿಸಿತ್ತು
ದಕ್ಷಿಣ ಸುಡಾನ್‌ನ ಟೊಂಬುರಾ ಯಾಂಬಿಯೊ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಎಡ್ವರ್ಡೊ ಹೈಬೊರೊ ಕುಸ್ಸಲಾರವರು ಯುವಜನತೆ ತಮ್ಮ ಸಮುದಾಯಗಳ ಪ್ರಸ್ತುತ ಹಾಗೂ ಭವಿಷ್ಯಕ್ಕಾಗಿ ಶಾಂತಿಗಾಗಿ ಶ್ರಮಿಸಬೇಕು ಎಂದು ಒತ್ತಿ ಹೇಳಿದರು.
ಯುವಜನತೆಯಿಂದ ಯುವಜನರಿಗಾಗಿ
ವ್ಯಾಟಿಕನ್ ಫೈಡ್ಸ್ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಧರ್ಮಾಧ್ಯಕ್ಷರು, ಶಾಂತಿಯ ಸಂವಾದಗಳು ಈಗಾಗಲೇ ಪ್ರಾರಂಭವಾಗಿವೆ ಆದರೂ ಯುವಜನತೆ ಇಂದಿಗೂ-ಮುಂದಿಗೂ ತಮ್ಮನ್ನು ಮಾತ್ರವಲ್ಲದೆ, ತಮ್ಮ ಮುಂದಿನ ಪೀಳಿಗೆಯನ್ನು ವಿಭಜಿಸುವ ನೀತಿಗಳನ್ನು ಪಾಲಿಸುವುದನ್ನು ತ್ಯಜಿಸಿ ಈಗಾಗಲೇ ತಮ್ಮ ಬಳಿ ಇರುವ ನೀತಿಗಳ ಮೇಲೆ ಗಮನ ಹರಿಸಬೇಕು ಎಂದು ಹೇಳಿದರು.
ಈ ಕಾರ್ಯಾಗಾರವು ಕೇವಲ ಒಂದು ಕಾರ್ಯಕ್ರಮವಲ್ಲ ಬದಲಿಗೆ ಯುವಜನ ನೇತೃತ್ವದ, ಯುವಜನರೇ ಆಧಾರವಾಗಿರುವ, ಹಾಗೂ ನಮ್ಮ ಹಿರಿಯರ ಜ್ಞಾನದಿಂದ ಶ್ರೀಮಂತವಾಗಿರುವ ಒಂದು ಚಳುವಳಿಯಾಗಿದೆ. ಸ್ವಪ್ರೀತಿ, ಸಮುದಾಯ, ಶಾಂತಿಯ ಮುಖೇನ ಅಭಿವೃದ್ಧಿ, ವ್ಯಕ್ತಿ ಗೌರವ, ಅವಕಾಶ ಮತ್ತು ಸಮಾನತೆ ಮುಂತಾದ ಮುಖ್ಯ ಅಂಶಗಳ ಕುರಿತು ಮಾತನಾಡಿದರು.
ದೇಶದಲ್ಲಿ ಶಾಂತಿಯನ್ನು ಸ್ಥಾಪಿಸುವ ಅಗತ್ಯತೆಯನ್ನು ಪ್ರಸ್ತಾವಿಸಿದ ಧರ್ಮಾಧ್ಯಕ್ಷರು "ಹಳೆಯ ಗಾಯಗಳ ಮೇಲೆ ಹೊಸ ಮಾರ್ಗಗಳನ್ನು ಕಟ್ಟಲಾಗದು, ಹಳೆಯ ತಪ್ಪುಗಳನ್ನು ಸರಿಮಾಡಿಕೊಂಡಾಗ ಮಾತ್ರ ದೇಶ ಗುಣಹೊಂದಲು ಸಾಧ್ಯ” ಎಂದರು.
ಒಗ್ಗಟ್ಟಿನ ರಾಯಭಾರಿಗಳಾಗಿರಲು ಯುವಜನರನ್ನು ಪ್ರೇರೇಪಿಸಿದ ಧರ್ಮಾಧ್ಯಕ್ಷರು, ಶಾಂತಿಯುತ ಭವಿಷ್ಯದ ಸೇತುವೆಗಳಾಗಿರಿ ಎಂದು ಕರೆ ನೀಡಿದರು. “ಪ್ರಸ್ತುತ ಕಾಲದ ಸಂಸ್ಕೃತಿಯಲ್ಲಿರುವ ಕೆಟ್ಟವನ್ನು ಬಿಟ್ಟು ಒಳಿತನ್ನು ಆಯ್ದುಕೊಳ್ಳಿ, ಶಿಕ್ಷಣವೇ ವಂಚನೆಯ ವಿರುದ್ಧದ ಕವಚವಾಗಿದೆ” ಎಂದರು.
ದಕ್ಷಿಣ ಸೂಡಾನಿನ ಪರಿಸ್ಥಿತಿ
ದಕ್ಷಿಣ ಸೂಡಾನಿನಲ್ಲಿ ಆಂತರಿಕ ಸಂಘರ್ಷ ಮತ್ತೆ ತೀವ್ರಗೊಳ್ಳುತ್ತಿದೆ. ನವೆಂಬರ್ 11ರಂದು ವಿಶ್ವಸಂಸ್ಥೆಯ ಹಿರಿಯ ಅಧಿಕಾರಿಗಳು, “ದೇಶವು ರಾಜಕೀಯ ಧ್ರುವೀಕರಣ, ಉಲ್ಬಣಗೊಂಡ ಘರ್ಷಣೆಗಳು ಮತ್ತು ಗಂಭೀರ ಮಾನವೀಯ ಒತ್ತಡದ ಹಂತ”ಕ್ಕೆ ಪ್ರವೇಶಿಸುತ್ತಿದೆ ಎಂದು ಎಚ್ಚರಿಸಿದರು.
ಇತ್ತೀಚಿನ ವಾರಗಳಲ್ಲಿ ಹಲವು ರಾಜ್ಯಗಳಲ್ಲಿ ಸರ್ಕಾರದ ಪರ–ವಿರೋಧಿ ಗುಂಪುಗಳ ನಡುವೆ ಗುಂಡಿನ ಕಾಳಗಗಳು ಹೆಚ್ಚಿದ್ದು, ಸಮಾಧಾನ ಒಪ್ಪಂದ ಉಲ್ಲಂಘನೆಗಳು ಬಹಳಷ್ಟು ದಾಖಲಾಗಿವೆ. ವಿಮಾನ ದಾಳಿಗಳ ವರದಿಗಳೂ ಸಿಕ್ಕಿವೆ.
ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ, ದೇಶದಲ್ಲಿ 7.5 ಮಿಲಿಯನ್ ಜನರು ತೀವ್ರ ಆಹಾರಾಭಾವ ಎದುರಿಸುತ್ತಿದ್ದು, ಇದರಿಂದ ಆಂತರಿಕ ಸಂಘರ್ಷ ಗಳು ಇನ್ನಷ್ಟು ಬಿಗಡಾಯಿಸಿವೆ.
ಉತ್ತರ ಸುಡಾನ್‌ನಲ್ಲಿ ನಡೆಯುತ್ತಿರುವ ಸಂಘರ್ಷವು ದಕ್ಷಿಣ ಸುಡಾನ್ ಮೇಲೆ ಒತ್ತಡವನ್ನು ಹೆಚ್ಚಿಸಿದೆ , 2023ರ ಏಪ್ರಿಲ್‌ನಿಂದ 12 ಲಕ್ಷಕ್ಕೂ ಹೆಚ್ಚು ಜನರು ದಕ್ಷಿಣ ಸೂಡಾನಿನಲ್ಲಿ ಆಶ್ರಯ ಪಡೆದಿದ್ದಾರೆ. ಪ್ರಪಂಚದ ಅತಿ ನೂತನ ದೇಶವಾದ ದಕ್ಷಿಣ ಸುಡಾನಿನಲ್ಲಿ ಸಾಮಾನ್ಯ ಚುನಾವಣೆ 2026ರ ಡಿಸೆಂಬರ್‌ನಲ್ಲಿ ನಡೆಯಲಿದೆ.
ಬಿಷಪ್ ಹೀಬೊರೋ ಅವರ ಪ್ರತಿಕ್ರಿಯೆ
“ಯುವಕರು ಶಾಂತಿಯ ನೈಜ ದಾರಿದೀಪರಾಗಬೇಕು. ಮೌಲ್ಯಗಳ ಮೇಲೆ ನಿಂತು ಬದುಕನ್ನು ಕಟ್ಟಿಕೊಳ್ಳಬೇಕು. ನಾವು ಒಂದಾಗಿ ಪ್ರಾರ್ಥಿಸಿ, ಒಂದಾಗಿ ದುಡಿದು, ಒಂದಾಗಿ ಮುಂದೆ ಸಾಗಬೇಕು”ಎಂದು ಕರೆ ನೀಡಿದ್ದಾರೆ.