ಹುಡುಕಿ

2025.12.11 Suor Mumbi Kigutha CPPS in un seminario con le religiose africane 2025.12.11 Suor Mumbi Kigutha CPPS in un seminario con le religiose africane 

‘ಲಿವಿಂಗ್ ಆನ್ಸೆಸ್ಟರ್ಸ್(ಜೀವಂತ ಪೂರ್ವಜರು): ಆಫ್ರಿಕಾದ ಸಹೋದರಿಯರ ಧೈರ್ಯದ ಜೀವಂತ ಸಾಕ್ಷ್ಯ

ಅನೇಕ ಧೈರ್ಯಮಯ ಕಥೆಗಳು ಮೌನದಲ್ಲೇ ಉಳಿದಿವೆ. ಆದರೆ ‘ಲಿವಿಂಗ್ ಆನ್ಸೆಸ್ಟರ್ಸ್’ ಎಂಬ ಪುಸ್ತಕವು, ದಶಕಗಳ ಕಾಲ ಧಾರ್ಮಿಕ ಸೇವೆಯಲ್ಲಿ ತೊಡಗಿಸಿಕೊಂಡು ಆಫ್ರಿಕಾದ ಆಧ್ಯಾತ್ಮಿಕ ಹಾಗೂ ಸಾಮಾಜಿಕ ವಾತಾವರಣವನ್ನು ರೂಪಿಸಿದ, ಕಾಣದ–ಕೇಳದ ಮಹಿಳೆಯರ ಧ್ವನಿಯಾಗಿ ಹೊರಹೊಮ್ಮಿದೆ. ಈ ಅಪೂರ್ವ ಕೃತಿ ಅಮೂಲ್ಯ ರಕ್ತದ (ಪ್ರೆಷಿಯಸ್ ಬ್ಲಡ್ ) ಸಹೋದರಿಯರಾದ (CPPS) ವಂ. ಸಹೋದರಿ. ಮುಂಬಿ ಕಿಗುತ ಅವರಿಂದ ಜೀವಂತಗೊಂಡಿದೆ. ಅವರು ಅಮೇರಿಕಾದ ಡೇಟನ್, ಓಹಿಯೊದಲ್ಲಿರುವ ಅಮೂಲ್ಯ ರಕ್ತದ ಸಹೋದರಿಯರ ಸಂಘಕ್ಕೆ ಸೇರಿದ್ದಾರೆ. ಈ ಕೃತಿ ಅವರ ಜೀವನಾನುಭವಗಳ ಅಪರೂಪದ ಒಳನೋಟವನ್ನು ನೀಡುತ್ತದೆ.

ಕೀನ್ಯಾದಲ್ಲಿ ಜನಿಸಿ, ಈಗ ಅಮೆರಿಕದಲ್ಲಿ ಸೇವೆ ಸಲ್ಲಿಸುತ್ತಿರುವ ಸಹೋದರಿ ಮುಂಬಿ, ದಕ್ಷಿಣ ಸುಡಾನ್‌ನಲ್ಲಿ ಕಾರ್ಯನಿರ್ವಹಿಸುವ ಕಥೋಲಿಕ ಸೇವಾ ಸಂಸ್ಥೆಯಾದ ಫ್ರೆಂಡ್ಸ್ ಇನ್ ಸಾಲಿಡಾರಿಟಿಯ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಫ್ರಿಕಾದ ಸಹೋದರಿಯರ ಧ್ವನಿಯನ್ನು ಎತ್ತಿ ಹಿಡಿಯುವ ಗಾಢ ಆಸಕ್ತಿ ಇವರಿಗಿದೆ. ತ್ಯಾಗ, ನಂಬಿಕೆ ಮತ್ತು ದೇವರು ಹಾಗೂ ಮಾನವತೆಯ ಮೇಲಿನ ಅಚಲ ನಿಷ್ಠೆಯಿಂದ ನೆಯ್ದ ಅವರ ಜೀವನಗಳು ಬಹುಪಾಲು ಸಾರ್ವಜನಿಕ ಗಮನದಿಂದ ದೂರವಾಗಿಯೇ ಉಳಿದಿವೆ.

ಸ್ವಾಹಿಲಿ ಭಾಷೆಯಲ್ಲಿ ‘ಬೆಳಕಿನ ಪ್ರತಿಷ್ಠಿತ ಮಹಿಳೆಯರು’ ಎಂಬ ಅರ್ಥ ಹೊಂದಿರುವ ವಟಾವಾ ವಾ ತಾ ಎಂಬ ಮುಂದಾಳತ್ವದ ಮೂಲಕ, ಸಹೋದರಿ ಮುಂಬಿ ಆಫ್ರಿಕಾದ ಧಾರ್ಮಿಕ ಮಹಿಳೆಯರಿಗೆ ಪರಸ್ಪರ ಸಂವಾದ, ಪುನಶ್ಚೇತನ ಮತ್ತು ಸಹಭಾಗಿತ್ವಕ್ಕೆ ವೇದಿಕೆ ನಿರ್ಮಿಸಿದ್ದಾರೆ. ಇದೇ ಪ್ರಯತ್ನದಿಂದ ‘ಲಿವಿಂಗ್ ಆನ್ಸೆಸ್ಟರ್ಸ್’ ಪುಸ್ತಕಕ್ಕೆ ಜೀವ ಬಂದಿದೆ.

‘ಲಿವಿಂಗ್ ಆನ್ಸೆಸ್ಟರ್ಸ್’ ಹುಟ್ಟಿದ ಕಥೆ

“ಆಫ್ರಿಕಾದ ಹಿರಿಯ ಸಹೋದರಿಯರ ಕಥೆಗಳನ್ನು ನಾವು ಹೇಳಿದರೆ ಎಷ್ಟು ಚೆನ್ನಾಗಿರುತ್ತದೆ?” ಎಂಬ ಆಳವಾದ ಪ್ರಶ್ನೆಯಿಂದ ಈ ಯೋಜನೆ ಆರಂಭವಾಯಿತು. ಈ ಕೃತಿಯ ಸಹಯೋಗಿಗಳಲ್ಲಿ ಒಬ್ಬರಾದ ಸಹೋದರಿ ಜೇನ್ ವಕಾಹಿಯು ಅವರ ಪ್ರೇರಣೆಯಿಂದ, ಸಹೋದರಿ ಮುಂಬಿ, 30 ವರ್ಷಕ್ಕಿಂತ ಹೆಚ್ಚು ಕಾಲ ಧಾರ್ಮಿಕ ಜೀವನದಲ್ಲಿ ಸೇವೆ ಸಲ್ಲಿಸಿದ ಮಹಿಳೆಯರನ್ನು ತಮ್ಮ ಆಧ್ಯಾತ್ಮಿಕ ಯಾತ್ರೆಯನ್ನು ಧಾರ್ಮಿಕ ದೃಷ್ಟಿಯಿಂದ ಚಿಂತನೆ ಮಾಡಲು ಆಹ್ವಾನಿಸಿದರು.

ಈಗಾಗಲೇ ಪ್ರಕಟವಾದ ಮೊದಲ ಸಂಪುಟದಲ್ಲಿ, ಆಫ್ರಿಕಾದ ವಿವಿಧ ಭಾಗಗಳಿಂದ ಬಂದ 15 ಧಾರ್ಮಿಕ ಮಹಿಳೆಯರ ಜೀವನ ಕಥನಗಳು ಸೇರಿವೆ. ವಿಭಿನ್ನ ಧಾರ್ಮಿಕ ಸಭೆಗಳು, ಸಂಸ್ಕೃತಿಗಳು ಮತ್ತು ಸೇವಾ ಕ್ಷೇತ್ರಗಳಿಂದ ಬಂದಿದ್ದರೂ, ದೇವರ ಕರೆಗೆ ನೀಡಿದ ದೃಢವಾದ “ಹೌದು” ಎಂದು ನೀಡಿದ ಸಮ್ಮತಿಎಲ್ಲರಲ್ಲಿಯೂ ಸಾಮಾನ್ಯವಾಗಿದೆ. “ಈ ಸಹೋದರಿಯರು ಜಗತ್ತಿನ ವಿಭಿನ್ನ ಮೂಲಗಳಲ್ಲಿ ಮೌನವಾಗಿ ಆಳವಾದ ಜೀವನ ನಡೆಸಿದ್ದಾರೆ. ಅವರ ಕಥೆಗಳು ಸ್ವಯಂಶ್ಲಾಘನೆಯಲ್ಲ; ಅವು ಸ್ಥೈರ್ಯ, ನಂಬಿಕೆ ಮತ್ತು ಪ್ರೀತಿಯ ಪವಿತ್ರ ಸಾಕ್ಷ್ಯಗಳು,” ಎಂದು ಸಹೋದರಿ ಮುಂಬಿ ಹೇಳುತ್ತಾರೆ.

ಈ ಕೃತಿಯಲ್ಲಿ ದೂರದ ಹಳ್ಳಿಗಳ ಶಾಲೆಗಳಲ್ಲಿ ಬೋಧಿಸಿದವರು, ಅಂತರ್ಯುದ್ಧದ ಸಮಯದಲ್ಲಿ ರೋಗಿಗಳನ್ನು ನೋಡಿಕೊಂಡವರು, ಸಂಸ್ಥೆಗಳನ್ನು ಸ್ಥಾಪಿಸಿದವರು ಮತ್ತು ನಂಬಿಕೆಯ ಮೂಲಕ ಸಮುದಾಯವನ್ನು ಬೆಳೆಸಿದ ಮಹಿಳೆಯರನ್ನು ನಾವು ಕಾಣುತ್ತೇವೆ. “ಇವು ಕೇವಲ ನೆನಪುಗಳಲ್ಲ; ಜೀವಂತ ಧಾರ್ಮಿಕ ಚಿಂತನೆಗಳಾಗಿವೆ,” ಎಂದು ಅವರು ಹೇಳಿದ್ದಾರೆ.

ಮೌನದಲ್ಲೇ ನಡೆದ ಮಹತ್ವದ ಸೇವೆ

ಆಫ್ರಿಕಾದ ಧರ್ಮಸಭೆಗೆ ಸಹೋದರಿಯರ ಮೌನ ಸೇವೆ ಸದಾ ಬೆಂಬಲವಾಗಿದೆ. ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲೂ ಆಸ್ಪತ್ರೆ ಗಳಲ್ಲಿ, ಶಾಲೆ ಗಳಲ್ಲಿ, ಅನಾಥಾಲಯ ಗಳಲ್ಲಿ, ಧರ್ಮಕೇಂದ್ರಗಳಲ್ಲಿ ನಿಷ್ಠಾವಂತ ಸೇವೆ ಸಲ್ಲಿಸಿದ್ದಾರೆ. ಆದರೆ ಅವರ ಕಥೆಗಳು ಬಹುಪಾಲು ತಮ್ಮ ದೇಶಗಳ ಹೊರಗೆ ಅಥವಾ ಧಾರ್ಮಿಕ ಸಭೆಗಳಾಚೆ ಅಷ್ಟಾಗಿ ಪರಿಚಿತವಾಗಿಲ್ಲ.

ಲಿವಿಂಗ್ ಆನ್ಸೆಸ್ಟರ್ಸ್ ಕೃತಿ, ಜಗತ್ತಿನ ಕಥೋಲಿಕ ಧರ್ಮಸಭೆಗೆ ಅವರ ಅವಿಭಾಜ್ಯ ಕೊಡುಗೆಯನ್ನು ದೃಢಪಡಿಸಿ, ತಡವಾದ ಗೌರವವನ್ನು ಸಲ್ಲಿಸುತ್ತದೆ. ಈ ಮೂಲಕ, ಹಿರಿಯ–ಕಿರಿಯ ಸಹೋದರಿಯರ ನಡುವಿನ ಅಂತರವನ್ನು ಸೇತುಬಂಧ ಮಾಡಿ, ಕಿರಿಯ ಪೀಳಿಗೆಗೆ ತಮ್ಮ ಬೇರುಗಳ ಅರಿವನ್ನು ನೀಡುತ್ತದೆ.

ಸವಾಲುಗಳು ಮತ್ತು ದೃಷ್ಟಿಕೋನ

“ಪ್ರತಿ ಯಶಸ್ಸಿನ ಹಿಂದೆ ಸವಾಲುಗಳಿವೆ,” ಎಂದು ಸಹೋದರಿ ಮುಂಬಿ ಹೇಳುತ್ತಾರೆ. ಭಾಷಾ ಮತ್ತು ಮೂಲಸೌಕರ್ಯದ ಅಡಚಣೆಗಳು ಪ್ರಮುಖವಾಗಿದ್ದವು. ವಸಾಹತುಶಾಹಿಯ ಇತಿಹಾಸದಿಂದಾಗಿ ಆಫ್ರಿಕಾದಲ್ಲಿ ಇಂಗ್ಲಿಷ್, ಫ್ರೆಂಚ್ ಮತ್ತು ಪೋರ್ಚುಗೀಸ್ ಭಾಷಾ ವಿಭಜನೆ ಇದೆ. ಕೆಲ ಸಂದರ್ಭಗಳಲ್ಲಿ ಅವರು ಅನುವಾದ ತಂತ್ರಾಂಶಗಳನ್ನೇ ಅವಲಂಬಿಸಬೇಕಾಯಿತು. “ಆದರೂ ಪವಿತ್ರಾತ್ಮರು ಸದಾ ಜೊತೆಗಿದ್ದು ನಡೆಸಿದರು,” ಎಂದು ಅವರು ಹೇಳುತ್ತಾರೆ.

ಹಲವು ಸಹೋದರಿಯರು ಮೊದಲ ಬಾರಿಗೆ ವೈಯಕ್ತಿಕ ಚಿಂತನೆಗಳನ್ನು ಬರೆಯುತ್ತಿದ್ದ ಕಾರಣ, ಅವರ ವಿಶ್ವಾಸ ಗಳಿಸುವುದೂ ಒಂದು ಸವಾಲಾಗಿತ್ತು. “ನಾನು ಕೇಳುತ್ತಿದ್ದ ಕಥೆಗಳು ಪವಿತ್ರ ಕಥೆಗಳು,” ಎಂದು ಅವರು ಹೇಳುತ್ತಾರೆ.

ಭವಿಷ್ಯದಲ್ಲಿ ಕನಿಷ್ಠ ಹತ್ತು ಸಂಪುಟಗಳನ್ನು ಪ್ರಕಟಿಸುವ ಕನಸು ಸಹೋದರಿ ಮುಂಬಿಯದು—ಪ್ರತಿ ಆಫ್ರಿಕಾ ದೇಶದಿಂದ ಕನಿಷ್ಠ ಒಬ್ಬ ಸಹೋದರಿಯ ಕಥೆ. ಜೊತೆಗೆ, ಧಾರ್ಮಿಕ ಜೀವನ, ನಾಯಕತ್ವ, ಸಮಗ್ರ ಆರೋಗ್ಯ ಕುರಿತ ವಿಚಾರ ಘೋಷ್ಠಿಗಳು ಹಾಗೂ ಮಾನಸಿಕ ಆರೋಗ್ಯ, ಪೌಷ್ಠಿಕತೆ ಮತ್ತು ಆಧ್ಯಾತ್ಮಿಕತೆ ಕುರಿತ ಕಾರ್ಯಕ್ರಮಗಳನ್ನೂ ಅವರು ಯೋಜಿಸಿದ್ದಾರೆ.

ಜಾಗತಿಕ ಸಹೋದರತ್ವ ಮತ್ತು ಜೀವಂತ ಪವಿತ್ರತೆ

ಆಫ್ರಿಕಾದ ನೆಲೆಯಲ್ಲಿ ಬೇರೂರಿದರೂ, ಲಿವಿಂಗ್ ಆನ್ಸೆಸ್ಟರ್ಸ್ ಕೃತಿಗೆ ಜಾಗತಿಕ ಮಹತ್ವವಿದೆ. “ಆಫ್ರಿಕಾದ ಸಹೋದರಿಯರು ಜಾಗತಿಕ ಸಹೋದರತ್ವದ ಭಾಗ,” ಎಂದು ಸಹೋದರಿ ಮುಂಬಿ ಹೇಳುತ್ತಾರೆ. ತಮ್ಮ ಸನ್ನಿವೇಶ, ಹೋರಾಟ ಮತ್ತು ಇತಿಹಾಸವನ್ನು ಆಧಾರವಾಗಿಸಿಕೊಂಡು ಅವರು ಧರ್ಮಸಭೆಯನ್ನು ಬಲಪಡಿಸುತ್ತಿದ್ದಾರೆ.

ಜಗತ್ತಿಗೆ ಇದು, ಧರ್ಮಸಭೆಯನ್ನು ನೆಲೆಗೊಳಿಸಿರುವ ಮತ್ತು ತಮ್ಮ ನಂಬಿಕೆಯ ಮೂಲಕ ಜೀವಂತವಿಟ್ಟಿರುವ ವಿನಯ ಮತ್ತು ಕೃಪೆಯಿಂದ ಸೇವೆ ಸಲ್ಲಿಸುವ ಮಹಿಳೆಯರ ಸಾಕ್ಷಿಯಾಗಿದೆ. ಜಗದ್ಗುರುಗಳಾದ ಪೂಜ್ಯ 14ನೇ ಲಿಯೋರವರು, ದೇವಜನರೊಳಗಿನ ಮಹಿಳೆಯರ ಕೊಡುಗೆಯನ್ನು ಗುರುತಿಸುವ ಅಗತ್ಯವನ್ನು ಪುನಃಪುನಃ ಒತ್ತಿಹೇಳಿದ್ದಾರೆ. ಧರ್ಮಸಭೆಯೇ ಒಂದು ಮಹಿಳೆ — ಮಗಳು, ವಧು ಮತ್ತು ತಾಯಿ — ಎಂದು ನೆನಪಿಸಿದ್ದಾರೆ.

“ಸಹೋದರಿಯರು ಬದುಕಿರುವಾಗಲೇ ಅವರಿಗೆ ಗೌರವ ಸಲ್ಲಿಸಬೇಕು,” ಎಂದು ಸಹೋದರಿ ಮುಂಬಿ ಕರೆ ನೀಡುತ್ತಾರೆ. ಲಿವಿಂಗ್ ಆನ್ಸೆಸ್ಟರ್ಸ್ ಆಫ್ರಿಕಾದ ಆಧುನಿಕ ಧಾರ್ಮಿಕ ಜೀವನವನ್ನು ರೂಪಿಸಿದ ಮಹಿಳೆಯರನ್ನು ಗೌರವಿಸಿ, ಹೊಸ ಪೀಳಿಗೆಯನ್ನು ಪ್ರೇರೇಪಿಸುತ್ತದೆ.

“ಜೀವಂತ ಪೂರ್ವಜರು” ಆಧುನಿಕ ಆಫ್ರಿಕಾದ ಧಾರ್ಮಿಕ ಜೀವನವನ್ನು ರೂಪಿಸಿದ ಮುಂಚೂಣಿ ಮಹಿಳೆಯರನ್ನು ಗೌರವಿಸುತ್ತದೆ ಮತ್ತು ಹೊಸ ಪೀಳಿಗೆಯನ್ನು ಅವರ ಹೆಜ್ಜೆ ಗುರುತುಗಳನ್ನು ಅನುಸರಿಸಲು ಪ್ರೇರೇಪಿಸುತ್ತದೆ. ಅವರ ಪವಿತ್ರತೆ ಕೇವಲ ದೇವಾಲಯಗಳಲ್ಲಿ ಅಥವಾ ಸಂತಪದವಿಗಳಲ್ಲಷ್ಟೇ ಅಲ್ಲ; ಪ್ರತಿದಿನ ಬೋಧಿಸುವ, ಗುಣಪಡಿಸುವ, ಪ್ರಾರ್ಥಿಸುವ ಮತ್ತು ಸೇವಿಸುವ ಮಹಿಳೆಯರ ಸ್ಥೈರ್ಯದಲ್ಲಿಯೇ ಹೊಳೆಯುತ್ತದೆ.

ಈ ಪುಸ್ತಕ ಆನ್‌ಲೈನ್‌ನಲ್ಲಿ ಲಭ್ಯವಿದ್ದು, ಮುಂದಿನ ಸಂಪುಟಗಳಿಗೆ ಆಫ್ರಿಕಾದ ಧಾರ್ಮಿಕ ಮಹಿಳೆಯರನ್ನು ತಮ್ಮ ಕೊಡುಗೆ ನೀಡಲು ಮತ್ತು ‘ವತಾವಾ ವ ತಾಯ’ ನಿರಂತರ ಸಂವಾದಗಳಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ.

16 ಡಿಸೆಂಬರ್ 2025, 08:43