ಗಾಜಾದಲ್ಲಿ ಶಾಂತಿ ಸ್ಥಾಪನೆಗೆ ಸಾಧ್ಯವಿರುವ ಎಲ್ಲವನ್ನೂ ನಾವು ಮಾಡುತ್ತೇವೆ: ಕಾರ್ಡಿನಲ್ ಪಿಜ್ಜಬಲ್ಲಾ
ಗಾಜಾ ಪಟ್ಟಣಕ್ಕೆ ಭೇಟಿ ನೀಡಿ ಮರಳಿದ ಮರುದಿನವೇ ಕಾರ್ಡಿನಲ್ ಪಿಜ್ಜಬಲ್ಲಾ ಮಾಧ್ಯಮಗಳನ್ನು ಭೇಟಿಯಾಗಿ ಮಾತನಾಡಿದರು. ಈ ಭೇಟಿಯ ಮೂಲಕ ಅವರು ಗಾಜಾದ ಜನರಿಗೆ ತಮ್ಮ ವೈಯಕ್ತಿಕ ಬೆಂಬಲವನ್ನಷ್ಟೇ ಅಲ್ಲ, ಸಂಪೂರ್ಣ ಧರ್ಮಸಭೆಯ ಬೆಂಬಲವನ್ನೂ ವ್ಯಕ್ತಪಡಿಸಿದರು. ಎರಡು ವರ್ಷಕ್ಕಿಂತ ಹೆಚ್ಚು ಕಾಲದ ಯುದ್ಧದಿಂದ ತೀವ್ರವಾಗಿ ಕುಗ್ಗಿಹೋಗಿರುವ ಗಾಜಾದ ಜನರಿಗೆ ಈ ಭೇಟಿ ಮಹತ್ವದ ಧೈರ್ಯ ನೀಡಿತು. ಯುದ್ಧ ವಿರಾಮದ ನಂತರ ಜೆರುಸಲೇಮ್‌ನ ಲ್ಯಾಟಿನ್ ಕಥೋಲಿಕ ಸಭೆಯ ಪ್ರಧಾನ ಧರ್ಮಾಧ್ಯಕ್ಷರಿಂದ ನಡೆದ ಮೊದಲ ಭೇಟಿ ಇದಾಗಿತ್ತು.
ಕಾರ್ಡಿನಲ್ ಪಿಜ್ಜಬಲ್ಲಾ ಅವರ ಮೌಲ್ಯಮಾಪನ ಗಂಭೀರವಾಗಿದೆ. ಗಾಜಾದಲ್ಲಿ ಶೇ.80ರಷ್ಟು ಮೂಲಸೌಕರ್ಯ ಸಂಪೂರ್ಣವಾಗಿ ನಾಶವಾಗಿದೆ. ಇನ್ನೂ ಉಳಿದಿರುವ ಕಟ್ಟಡಗಳೂ ಕೂಡ ಕುಸಿಯುವ ಹಂತದಲ್ಲಿದ್ದು, ವಾಸಿಸಲು ಅಸಾಧ್ಯವಾದ ಸ್ಥಿತಿಯಲ್ಲಿವೆ. ಆದರೂ, ಈ ಪರಿಸ್ಥಿತಿಯ ನಡುವೆಯೂ ಕೆಲ ಕುಟುಂಬಗಳು ತಮ್ಮ ಮನೆಗಳಿಗೆ ಮರಳಲು ಪ್ರಯತ್ನಿಸುತ್ತಿವೆ.
ಪ್ರಸ್ತುತ ಪವಿತ್ರ ಕುಟುಂಬ ಧರ್ಮಕೇಂದ್ರದ ಆವರಣದಲ್ಲಿ, ವಂ. ಗುರು ಗ್ಯಾಬ್ರಿಯೇಲ್ ರೊಮನೆಲ್ಲಿ ಅವರ ನೇತೃತ್ವದಲ್ಲಿ, ಸುಮಾರು ನಾಲ್ಕು ನೂರು ಜನರು ಆಶ್ರಯ ಪಡೆದಿದ್ದಾರೆ. ಆದರೆ ಗಾಜಾದ ಬಹುಪಾಲು ನಿವಾಸಿಗಳು ಇನ್ನೂ ಗುಡಾರಗಳಲ್ಲಿ ವಾಸಿಸುತ್ತಿದ್ದಾರೆ. “ಇಲ್ಲಿ ತುಂಬಾ ಚಳಿ ಇದೆ. ನಾನು ಸ್ವತಃ ಅದನ್ನು ಅನುಭವಿಸಿದೆ. ಮಕ್ಕಳ ಸ್ಥಿತಿಯನ್ನು ಕಲ್ಪಿಸಿ ನೋಡಿ,” ಎಂದು ಕಾರ್ಡಿನಲ್ ಹೇಳಿದರು.
ಈ ಎಲ್ಲ ಕಷ್ಟಗಳ ನಡುವೆಯೂ, “ಜನರಲ್ಲಿ ಮತ್ತೆ ಜೀವನಕ್ಕೆ ಮರಳಬೇಕೆಂಬ ಬಯಕೆಯನ್ನು ನಾನು ಕಂಡೆ,” ಎಂದು ಅವರು ಹೇಳಿದರು. ಅಂಗಡಿಗಳು ಇನ್ನೂ ಮುಚ್ಚಿರುವುದಾದರೂ, ಪರಿಸ್ಥಿತಿಯ ಸವಾಲುಗಳು ಅಪಾರವಾಗಿದ್ದರೂ, ಕೆಲವು ಗುಡಾರಗಳಲ್ಲಿ ಸಣ್ಣ ಮಟ್ಟದ ವ್ಯಾಪಾರ ಮಳಿಗೆಗಳು ಆರಂಭವಾಗಿದ್ದು, ಹಣ್ಣು-ತರಕಾರಿಗಳು ಅಲ್ಲಿ ಲಭ್ಯವಾಗುತ್ತಿವೆ.
“ಹಸಿವಿನ ತೀವ್ರ ಪರಿಸ್ಥಿತಿ ಈಗ ಹಿಂದೆ ಸರಿದಿದೆ,” ಎಂದು ಕಾರ್ಡಿನಲ್ ಪಿಜ್ಜಬಲ್ಲಾ ತಿಳಿಸಿದರು. ಆದರೆ ಗಾಜಾದ ಬಹುಜನರಿಗೆ ಆಹಾರ ಖರೀದಿಸಲು ಅಗತ್ಯವಾದ ಹಣವೇ ಇಲ್ಲ. ಉದ್ಯೋಗವೂ ಇಲ್ಲ, ಆದಾಯವೂ ಇಲ್ಲದ ಕಾರಣ, ಹೆಚ್ಚಿನವರು ಸಂಪೂರ್ಣವಾಗಿ ಮಾನವೀಯ ನೆರವಿನ ಮೇಲೆಯೇ ಅವಲಂಬಿತರಾಗಿದ್ದಾರೆ. ಅಂತರರಾಷ್ಟ್ರೀಯ ನೆರವು ಸಂಸ್ಥೆಗಳ ಸಹಕಾರದಿಂದ ಇದೀಗ ಆ ಸಹಾಯ ನಿಧಾನವಾಗಿ ಗಾಜಾಕ್ಕೆ ತಲುಪತೊಡಗಿದೆ.
ಭೀಕರ ಆರ್ಥಿಕ ಸ್ಥಿತಿ
ಗಾಜಾದಲ್ಲಿ ಆರ್ಥಿಕ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಪರಿಸ್ಥಿತಿಯನ್ನು ವಿವರಿಸುತ್ತಾ ಕಾರ್ಡಿನಲ್ ಪಿಜ್ಜಬಲ್ಲಾ ಇದನ್ನು “ಭೀಕರ ಸ್ಥಿತಿ” ಎಂದು ವರ್ಣಿಸಿದರು. ಅದೇ ಸಮಯದಲ್ಲಿ, ಜನರಲ್ಲಿ ಪುನರುತ್ಥಾನದ ಆಸೆ ಮತ್ತು ವಿಶೇಷವಾಗಿ ಕಥೋಲಿಕ ಭಕ್ತವಿಶ್ವಾಸಿಗಳಲ್ಲಿ ಕ್ರಿಸ್ತಜನ್ಮೋತ್ಸವವನ್ನು ಆಚರಿಸಬೇಕೆಂಬ ಆಕಾಂಕ್ಷೆಯನ್ನು ಅವರು ಗಮನಿಸಿದರು.
ಕ್ರಿಸ್ತಜನ್ಮೋತ್ಸವವು ಮಕ್ಕಳ ಹಬ್ಬವಾಗಿರುವುದರಿಂದ, ಮಕ್ಕಳನ್ನು ಗಮನದಲ್ಲಿಟ್ಟುಕೊಂಡು, “ನಿಶ್ಚಿತವಾಗಿಯೂ ನಾವು ಮಕ್ಕಳ ಬಗ್ಗೆ ಮತ್ತು ಅವರ ಭವಿಷ್ಯದ ಬಗ್ಗೆ ಆತಂಕದಲ್ಲಿದ್ದೇವೆ,” ಎಂದು ಅವರು ಹೇಳಿದರು. “ರಸ್ತೆಪಾಲಾಗಿರುವ ಮಕ್ಕಳ ಸಂಖ್ಯೆ ನನಗೆ ತೀವ್ರವಾಗಿ ದುಃಖ ತಂದಿದೆ,” ಎಂದು ಕಾರ್ಡಿನಲ್ ಹೇಳಿದರು. “ಅವರು ಶಾಲೆಯಲ್ಲಿ ಇರಬೇಕಾದವರು.” ಲ್ಯಾಟಿನ್ ಕಥೋಲಿಕ ಸಭೆಯ ಪ್ರಮುಖ ಆದ್ಯತೆಗಳಲ್ಲಿ ಒಂದು, ಶಾಲಾ ತರಗತಿಗಳನ್ನು ಮರುಆರಂಭಿಸುವುದು ಎಂದು ಅವರು ಹೇಳಿದರು.
ಗಾಜಾದಲ್ಲಿ ತಾನು ಕಂಡದ್ದು “ಒಂದು ಪಾಠ”ವಾಗಿತ್ತು. ಮಕ್ಕಳ ಉತ್ಸಾಹ, ಅವರೊಳಗಿನ ಜೀವಂತಿಕೆ ಮತ್ತು ಆನಂದ ಅವರನ್ನು ಆಳವಾಗಿ ಸ್ಪರ್ಶಿಸಿತು. “ಅವರು ಸಂತೋಷದಿಂದ ತುಂಬಿದ್ದಾರೆ, ಜೀವದಿಂದ ತುಂಬಿದ್ದಾರೆ. ನಮ್ಮ ಸಮುದಾಯಗಳನ್ನು ರಕ್ಷಿಸುವವರು ಇವರೇ. ನಾನು ಇದನ್ನು ನಂಬುತ್ತೇನೆ,” ಎಂದು ಕಾರ್ಡಿನಲ್ ಪಿಜ್ಜಬಲ್ಲಾ ನುಡಿದಿದ್ದಾರೆ.
ಕ್ರಿಸ್ತಜನ್ಮದ ನಿರೀಕ್ಷೆಯ ಸಾಕ್ಷಿ
“ಪುನರ್‌ನಿರ್ಮಾಣ ಯಾವಾಗ ಆರಂಭವಾಗಬಹುದು ಎಂಬ ಪ್ರಶ್ನೆಯೂ ನಮ್ಮನ್ನು ಕಾಡುತ್ತದೆ. ಯುದ್ಧ ನಿಂತಿದ್ದರೂ, ಸಂಘರ್ಷ ಇನ್ನೂ ಜೀವಂತವಾಗಿದೆ,” ಎಂದು ಕಾರ್ಡಿನಲ್ ಪಿಜ್ಜಬಲ್ಲಾ ವಿಷಾದಭರಿತವಾಗಿ ಅಭಿಪ್ರಾಯಪಟ್ಟರು.
ಸಮಸ್ಯೆಗಳು ಎಲ್ಲೆಡೆ ಇವೆ. ಪಶ್ಚಿಮ ತಟದಲ್ಲಿನ ಪರಿಸ್ಥಿತಿ ಮತ್ತು ಪ್ಯಾಲೆಸ್ತೀನ ಗ್ರಾಮಗಳು ಹಾಗೂ ಇಸ್ರಾಯೇಲಿ ವಸತಿಗಳ ನಡುವೆ ಮುಂದುವರಿಯುತ್ತಿರುವ ಉದ್ವಿಗ್ನತೆಯನ್ನೂ ಅವರು ಉಲ್ಲೇಖಿಸಿದರು. “ಈ ಪರಿಸ್ಥಿತಿಯಲ್ಲಿ ನಿರೀಕ್ಷೆಯ ಕುರಿತು ಮಾತನಾಡುವುದು ಕಷ್ಟವಾಗಬಹುದು. ಆದರೂ, ಈ ಕ್ರಿಸ್ತಜನ್ಮೋತ್ಸವದ ಕಾಲದಲ್ಲಿ ನಿರೀಕ್ಷೆಯ ಸಂದೇಶವನ್ನು ಸಾರುವುದು ನಮ್ಮ ಕರ್ತವ್ಯವಾಗಿದೆ,” ಎಂದು ಅವರು ಹೇಳಿದರು.
ಯುದ್ಧದ ಹೊರೆ ಕ್ರೈಸ್ತ ಸಮುದಾಯಗಳ ಮೇಲೆ ಗಾಢವಾಗಿ ಬಿದ್ದಿದೆ. “ಅವರು ಯುದ್ಧದಿಂದ ದಣಿದಿದ್ದಾರೆ,” ಎಂದರು. ಪ್ರಭು ಕ್ರಿಸ್ತರ ಜನನವೂ ಇಕ್ಕಟ್ಟಾದ ಪರಿಸ್ಥಿತಿಗಳ ನಡುವೆ ಆಯಿತು. “ಇಂದು ಮತ್ತೊಮ್ಮೆ ನಾವು ಅವರನ್ನು ಹೃದಯದಿಂದ ಸ್ವಾಗತಿಸಬೇಕು. ಕೇವಲ ಮನೆಗಳ ಪುನರ್‌ನಿರ್ಮಾಣಕ್ಕಷ್ಟೇ ಅಲ್ಲ, ನಿರೀಕ್ಷೆಯ ಪುನರ್‌ನಿರ್ಮಾಣಕ್ಕೂ ನಾವು ಕೈಜೋಡಿಸಬೇಕು.”
ಪುನರ್‌ನಿರ್ಮಾಣಕ್ಕಾಗಿ ಸಾಧ್ಯವಿರುವ ಎಲ್ಲವನ್ನೂ ಮಾಡುವ ಸಂಕಲ್ಪ
ಎರಡು ವರ್ಷಗಳಿಗಿಂತ ಹೆಚ್ಚು ಕಾಲ ನಡೆದ ಮಾನವೀಯ ವಿನಾಶದ ನಂತರ, ಭವಿಷ್ಯದತ್ತ ಸಾಧ್ಯವಾದಷ್ಟು ದೂರ ನೋಡುವ ಅಗತ್ಯವಿದೆ ಎಂದು ಕಾರ್ಡಿನಲ್ ಒತ್ತಿಹೇಳಿದರು.
“ನಡೆದದ್ದನ್ನು ನಾವು ಮರೆತುಬಿಡಲಾರದು. ನಾಳೆಯೇ ಶಾಂತಿ ಸ್ಥಾಪಿಸಲ್ಪಡುತ್ತದೆ ಎಂದು ಭ್ರಮೆಗೂ ಒಳಗಾಗಬಾರದು. ಆದರೆ ವಿರೋಧ ಮತ್ತು ಸಂಘರ್ಷದ ಸ್ಥಿತಿಯಿಂದ ನಿರ್ಮಾಣಾತ್ಮಕ ದಾರಿಯತ್ತ ನಾವು ಸಾಗಲೇಬೇಕು,” ಎಂದು ಪೂಜ್ಯರು ಹೇಳಿದರು.
ಜೆರುಸಲೇಮ್‌ನ ಲ್ಯಾಟಿನ್ ಕಥೋಲಿಕ ಸಭೆ ಗಾಜಾದ ಜನರ ಆತ್ಮಿಕ ಮತ್ತು ಭೌತಿಕ ಅಗತ್ಯಗಳಿಗೆ ಸ್ಪಂದಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡಲು ಸಿದ್ಧವಾಗಿದೆ ಎಂದು ಕಾರ್ಡಿನಲ್ ತಿಳಿಸಿದರು. ಪ್ರಸ್ತುತ ಗಾಜಾದಲ್ಲಿ ಔಷಧಿಗಳ ತೀವ್ರ ಕೊರತೆ ಇದೆ. ಆಸ್ಪತ್ರೆಗಳ ಮೂಲಸೌಕರ್ಯ ಭಾರೀ ಪ್ರಮಾಣದಲ್ಲಿ ಹಾನಿಗೊಳಗಾಗಿದೆ. ವೈದ್ಯಕೀಯ ಸಾಧನಗಳನ್ನು ಹೊರಗಿನಿಂದ ತರಬೇಕಾದ ಅಗತ್ಯವಿದೆ.
“ಈ ಪರಿಸ್ಥಿತಿಗೆ ಸ್ಪಂದಿಸಲು ನಾವು ನಿಶ್ಚಲರಾಗಿರಲು ಸಾಧ್ಯವಿಲ್ಲ. ಜನರ ಜೊತೆಗೆ ನಿಲ್ಲಬೇಕು, ಅವರ ಬದುಕಿನ ಪಯಣದಲ್ಲಿ ಅವರಿಗೆ ಸಹಚರರಾಗಬೇಕು,” ಎಂದು ಪ್ರಧಾನ ಧರ್ಮಾಧ್ಯಕ್ಷರು ಹೇಳಿದರು.
ಮುಂದುವರಿದು,“ನಾವು ಧರ್ಮಸಭೆಯಾಗಿ ನಿಲ್ಲಬೇಕು,” ಎಂದು ಹೇಳಿದರು. ಗಾಜಾದ ಜನರಿಗೆ ನಿರಂತರ ಆತ್ಮಿಕ ಮತ್ತು ಧಾರ್ಮಿಕ ಬೆಂಬಲ ನೀಡುವುದು ಧರ್ಮಸಭೆಯ ಕರ್ತವ್ಯವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.ಸಂದರ್ಶನದ ಅಂತ್ಯದಲ್ಲಿ “ಧರ್ಮಸಭೆಯಾಗಿ ನಾವು ಗಾಜಾಕ್ಕೆ ಮತ್ತೆ ಸ್ಥಿರತೆಯನ್ನು ತರಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ. ನಾವು ಸಾಧ್ಯವಾದ ಎಲ್ಲ ಕಡೆಗಳಲ್ಲಿ ಯುದ್ಧದಿಂದ ಬಳಲುತ್ತಿರುವ ಬಡವರ ಧ್ವನಿಯಾಗಿ, ನೋವು ಅನುಭವಿಸುತ್ತಿರುವ ಎಲ್ಲರ ಪರವಾಗಿ ನಿಲ್ಲಬೇಕು.”ಎಂದು ಕರೆ ನೀಡಿದರು