ಹುಡುಕಿ

2025.12.23 Albero di Natale bruciato a Jenin 2025.12.23 Albero di Natale bruciato a Jenin 

ಕ್ರೈಸ್ತರು ವಿಶ್ವಾಸವನ್ನು ಕಳೆದುಕೊಳ್ಳುವುದಿಲ್ಲ: ಜೆರುಸಲೇಮ್ ಮತ್ತು ಪ್ಯಾಲೆಸ್ಟೈನ್‌ ಪ್ರೇಷಿತ ಪ್ರತಿನಿಧಿ

ಇಸ್ರಾಯೇಲಿನ ಜಗದ್ಗುರುಗಳ ರಾಯಭಾರಿಯಾಗಿರುವ ಹಾಗೂ ಜೆರುಸಲೇಮ್ ಮತ್ತು ಪ್ಯಾಲೆಸ್ಟೈನ್‌ಗೆ ಪ್ರೇಷಿತ ಪ್ರತಿನಿಧಿಯಾಗಿರುವ ಪೂಜ್ಯ ಧರ್ಮಾಧ್ಯಕ್ಷರಾದ ಅಡೋಲ್ಫೊ ಟಿಟೊ ಯಲ್ಲಾನಾ, ಪಶ್ಚಿಮ ತೀರದ ಜೆನಿನ್ ಪಟ್ಟಣದಲ್ಲಿರುವ ಪವಿತ್ರ ರಕ್ಷಕನ ಧರ್ಮಕೇಂದ್ರದಲ್ಲಿ ನಡೆದ ಇತ್ತೀಚಿನ ದುಷ್ಕೃತ್ಯದ ಕುರಿತು ಪ್ರತಿಕ್ರಿಯಿಸಿದ್ದಾರೆ.

ಸೋಮವಾರ, ಡಿಸೆಂಬರ್ 22ರಂದು—ಕ್ರಿಸ್ತಜಯಂತಿಗೆ ಕೆಲವೇ ದಿನಗಳು ಬಾಕಿ ಇರುವಾಗ—ಜೆನಿನ್‌ನ ಪವಿತ್ರ ರಕ್ಷಕರ ಧರ್ಮಕೇಂದ್ರದ ಆವರಣದಲ್ಲಿ ಸ್ಥಾಪಿಸಲಾದ ಕ್ರಿಸ್ಮಸ್ ಮರಕ್ಕೆ ಹಚ್ಚಲಾಗಿದೆ. ಈ ಕೃತ್ಯವನ್ನು ಕೆಲವು ಉಗ್ರ ಮನೋಭಾವದ ಯುವ ಮುಸ್ಲಿಮರು ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆ ಸ್ಥಳೀಯ ಕ್ರೈಸ್ತ ಸಮುದಾಯವನ್ನು ಆಘಾತಕ್ಕೊಳಪಡಿಸಿದೆ.

ಮಂಗಳವಾರ ಮಧ್ಯಾಹ್ನ, ಈ ದುಷ್ಕೃತ್ಯಕ್ಕೆ ಪ್ರತಿಯಾಗಿ ಸ್ಥಳೀಯ ಸಮುದಾಯವು ಹೊಸ ಕ್ರಿಸ್ಮಸ್ ಮರವನ್ನು ಪುನಃ ಸ್ಥಾಪಿಸುವ ನಿರ್ಧಾರ ಕೈಗೊಂಡಿತು. ಈ ಸಂದರ್ಭದಲ್ಲಿ ಜೆರುಸಲೇಮ್‌ನ ಪ್ರಧಾನ ಧರ್ಮಕ್ಷೇತ್ರದ ಪ್ರಧಾನ ಪ್ರತಿನಿಧಿಯಾಗಿರುವ ಪೂಜ್ಯ ಧರ್ಮಾಧ್ಯಕ್ಷ ವಿಲಿಯಂ ಶೋಮಾಲಿ ಹಾಗೂ ಸ್ಥಳೀಯ ಆಡಳಿತಾಧಿಕಾರಿಗಳು ಪಾಲ್ಗೊಂಡರು.

ವಾಟಿಕನ್ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಪೂಜ್ಯ ಧರ್ಮಾಧ್ಯಕ್ಷ ಯಲ್ಲಾನಾ, “ಇದು ನಮ್ಮ ಕ್ರೈಸ್ತ ಸಮುದಾಯಗಳ ಆನಂದದ ಮೇಲೆ ಬಿದ್ದ ಕಪ್ಪು ನೆರಳಾಗಿದೆ. ಎರಡು ವರ್ಷಗಳ ಕಾಲ ಅತಿ ಸರಳವಾಗಿ  ಆಚರಿಸಬೇಕಾದ ಕ್ರಿಸ್ತಜಯಂತಿಯ ಬಳಿಕ, ಈಗ ಮತ್ತೆ ಆನಂದವನ್ನು ಅನುಭವಿಸಲು ಆರಂಭಿಸಿದ್ದೇವೆ. ಇಂತಹ ಸಂದರ್ಭದಲ್ಲಿ ನಡೆದ ಈ ಕೃತ್ಯ ನೋವು ತಂದಿದೆ,” ಎಂದು ಹೇಳಿದರು. ಮುಂದುವರಿದು,“ಇಲ್ಲಿ ನಾವು ಸಹೋದರರಂತೆ ಬದುಕುತ್ತಿದ್ದೇವೆ. ಕಥೋಲಿಕ, ಆರ್ಥಡಾಕ್ಸ್ ಹಾಗೂ ಇತರ ಕ್ರೈಸ್ತ ಸಮುದಾಯಗಳು ಒಟ್ಟಾಗಿ ಕ್ರಿಸ್ತಜಯಂತಿಯನ್ನು ಆಚರಿಸುತ್ತವೆ. ಆದ್ದರಿಂದ ಇಂತಹ ಕೃತ್ಯಗಳನ್ನು ನಾವು ಸಂಪೂರ್ಣವಾಗಿ ಖಂಡಿಸುತ್ತೇವೆ,” ಎಂದರು.

“ಸ್ವಾರ್ಥಪೂರ್ಣ ಸಿದ್ಧಾಂತಗಳಲ್ಲಿ ದಾರಿ ತಪ್ಪಿದ ಮನೋಭಾವಗಳನ್ನು ನಾವು ಒಪ್ಪಬಾರದು. ಈ ಕೃತ್ಯವನ್ನು ನಾವು ಖಂಡಿಸುತ್ತೇವೆ. ಆದರೆ ಇದರಿಂದ ನಮ್ಮ ಆಂತರಿಕ ಆನಂದವನ್ನು ಕಸಿದುಕೊಳ್ಳಲು ನಾವು ಅವಕಾಶ ನೀಡುವುದಿಲ್ಲ,” ಎಂದು ಅವರು ಸ್ಪಷ್ಟಪಡಿಸಿದರು.

ಜನರನ್ನು ಉಳಿಸುವ ವಿಶ್ವಾಸ

ಎರಡು ವರ್ಷಗಳ ಕತ್ತಲಿನ ಬಳಿಕ ಈಗ ಬೆಳಕು ಮಾತ್ರವಲ್ಲ, ಉಸಿರಾಡುವ ಅವಕಾಶವೂ ಸಿಕ್ಕಂತಾಗಿದೆ. ಕ್ರಿಸ್ತಜಯಂತಿ ನಮಗೆ ತಿಳಿಸುವ ಸಂದೇಶ ಇದೇ—ದೇವರು ನಮ್ಮನ್ನು ಬಿಟ್ಟುಕೊಟ್ಟಿಲ್ಲ, ಮರೆತಿಲ್ಲ, ಆತ ಇನ್ನೂ ನಮ್ಮೊಂದಿಗಿದ್ದಾನೆ. ಈ ಅರಿವೇ ನಮ್ಮ ಆನಂದ. ಈ ಆನಂದಕ್ಕೆ ಮಿತಿ ಇಲ್ಲ; ಇದು ಕ್ರೈಸ್ತರಿಗೆ ಮಾತ್ರ ಸೀಮಿತವಲ್ಲ. ಮುಸ್ಲಿಮರೂ, ನಂಬಿಕೆ ಇಲ್ಲದವರೂ ಈ ಬೆಳಕನ್ನು ಕಾಣುತ್ತಿದ್ದಾರೆ, ಅದರೊಳಗೆ ತಮ್ಮನ್ನೂ ಸೇರಿಸಿಕೊಂಡಿದ್ದಾರೆ,” ಎಂದು ಅವರು ಹೇಳಿದರು.

ಈ ದುಷ್ಕೃತ್ಯವನ್ನು ನಡೆಸಿದವರಿಗಾಗಿ ಪ್ರಾರ್ಥಿಸುವಂತೆ ಅವರು ಕರೆ ನೀಡಿದರು. “ ಅವರ ಮನಸ್ಸನ್ನೂ ಪರಿವರ್ತಿಸಲಿ ಎಂಬುದು ನಮ್ಮ ಆಶೆ,ಇದೇ ನಾವು ನೀಡುವ ಉದಾಹರಣೆ” ಎಂದರು.

ವಿಶ್ವಾಸದ ಕುರಿತು ಮಾತನಾಡಿದ ಅವರು,  ವಿಶ್ವಾಸ ಕೇವಲ ಪದವಲ್ಲ, ಜೀವಂತ ಅನುಭವ ಎಂದು ವಿವರಿಸಿದರು. “ವಿಶ್ವಾಸ ನಾವು ಉಸಿರಾಡುವ ಗಾಳಿಯಂತಿದೆ. ಅದು ನಮ್ಮ ಕುಟುಂಬಗಳಲ್ಲಿ, ನಮ್ಮ ಸಮುದಾಯಗಳಲ್ಲಿ ಕಂಡುಬರುವ ವಾತಾವರಣ. ಅದು ನಮ್ಮ ಚಿಂತನೆಗಳಲ್ಲಿ ಇದೆ, ನಮ್ಮೊಳಗೆ ನೆಲೆಸಿದೆ,” ಎಂದು ಹೇಳಿದರು. “ಆದ್ದರಿಂದಲೇ ಎರಡು ವರ್ಷಗಳ ನೋವಿನ ಬಳಿಕವೂ ನಾವು ಆನಂದವನ್ನು ಮರೆತಿಲ್ಲ. ಆನಂದವು ನಮ್ಮ ಹೃದಯಗಳಲ್ಲಿ ಮತ್ತೆ ಜೀವಂತವಾಗಿದೆ,” ಎಂದು ಪ್ರೇಷಿತ ಪ್ರತಿನಿಧಿ ಯಲ್ಲಾನಾ ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು.

23 ಡಿಸೆಂಬರ್ 2025, 11:05