Taybeh Cisgiordania - panoramica villaggio Taybeh Cisgiordania - panoramica villaggio 

ಪಶ್ಚಿಮ ತೀರದ ಕ್ರೈಸ್ತ ಗ್ರಾಮದಲ್ಲಿ ಭವಿಷ್ಯದ ಭೀತಿಯನ್ನು ಕೊಂಚ ಶಮನಮಾಡಿದ ಕ್ರಿಸ್ತಜಯಂತಿ ಸಂಭ್ರಮ

ಪಶ್ಚಿಮ ತೀರದಲ್ಲಿರುವ ಸಂಪೂರ್ಣವಾಗಿ ಕ್ರೈಸ್ತರಿಂದ ಮಾತ್ರ ವಾಸವಾಗಿರುವ ಏಕೈಕ ಗ್ರಾಮವು, ಪ್ರಭುವಿನ ಆಗಮನವನ್ನು ಆಚರಿಸಲು ಸಿದ್ಧಗೊಳ್ಳುತ್ತಿದೆ. ಈ ಕ್ರಿಸ್ತಜಯಂತಿ ಆಚರಣೆ ಒಂದು ಕಡೆ ಹಬ್ಬದ ಆನಂದವನ್ನು ಹೊತ್ತಿದ್ದರೆ, ಮತ್ತೊಂದು ಕಡೆ ಇಸ್ರಾಯೇಲಿ ವಸಾಹತುದಾರರಿಂದ ಸಂಭವಿಸಬಹುದಾದ ಹೊಸ ದಾಳಿಗಳ ಭೀತಿಯ ನೆರಳಲ್ಲೇ ನಡೆಯುತ್ತಿದೆ.

ಕ್ರಿಸ್ತಜಯಂತಿಗೆ ಕೆಲವೇ ದಿನಗಳು ಬಾಕಿ ಇರುವ ಸಂದರ್ಭದಲ್ಲಿ ಪಶ್ಚಿಮ ತೀರದಲ್ಲಿ ಉದ್ವಿಗ್ನತೆ ಹೆಚ್ಚಳ

ಕ್ರಿಸ್ತಜಯಂತಿಗೆ ಕೆಲವೇ ದಿನಗಳು ಬಾಕಿ ಇರುವ ವೇಳೆಯಲ್ಲಿ, ಇಸ್ರಾಯೇಲಿ ಅಧಿಕಾರಿಗಳು ಪಶ್ಚಿಮ ತೀರದಲ್ಲಿ 19 ಹೊಸ ವಸಾಹತುಗಳನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಪ್ಯಾಲೆಸ್ಟೀನಿಯನ್ ಉಗ್ರ ರಾಜ್ಯದ ಸ್ಥಾಪನೆಯನ್ನು ತಡೆಯುವ ಉದ್ದೇಶದಿಂದ ಈ ಕ್ರಮವನ್ನು ಇಸ್ರಾಯೇಲಿ ಸರ್ಕಾರ ಕೈಗೊಂಡಿದೆ ಎಂದು ತಿಳಿಸಲಾಗಿದೆ.

ಅಕ್ಟೋಬರ್ 7ರಂದು ಗಾಜಾ ಪ್ರದೇಶದ ಸಮೀಪ ಹಮಾಸ್ ದಾಳಿ ನಡೆದ ಬಳಿಕ, ಪಶ್ಚಿಮ ತೀರದಲ್ಲಿ ವಸಾಹತುಕರಣದ ಪ್ರಮಾಣವು ತೀವ್ರವಾಗಿ ಹೆಚ್ಚಾಗಿದೆ. ಕಳೆದ ಮೂರು ವರ್ಷಗಳಲ್ಲಿ ಮಾತ್ರವೇ ಪಶ್ಚಿಮ ತೀರದಲ್ಲಿ 69 ವಸಾಹತುಗಳು ಸ್ಥಾಪನೆಯಾಗಿವೆ.

ಇಂತಹ ಉದ್ವಿಗ್ನ ಹಾಗೂ ಅಶಾಂತ ವಾತಾವರಣದ ನಡುವೆ ಪ್ಯಾಲೆಸ್ಟೀನಿಯನ್ ಕ್ರೈಸ್ತರು ಕ್ರಿಸ್ತಜಯಂತಿ ಆಚರಣೆಗೆ ಸಿದ್ಧಗೊಳ್ಳುತ್ತಿದ್ದಾರೆ.

ಪಶ್ಚಿಮ ತೀರದಲ್ಲಿರುವ ಸಂಪೂರ್ಣವಾಗಿ ಕ್ರೈಸ್ತರಿಂದ ಮಾತ್ರ ವಾಸವಾಗಿರುವ ಏಕೈಕ ಗ್ರಾಮವಾದ ತಯ್ಬೆಹ್‌ನಲ್ಲಿ ವಸಾಹತುದಾರರ ದಾಳಿಗಳು ಸಾಮಾನ್ಯವಾಗಿವೆ. ಕಳೆದ ಕೆಲವು ವಾರಗಳಲ್ಲಿ ಐದು ಕಾರುಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಗ್ರಾಮದ ಲ್ಯಾಟಿನ್ ಕಥೋಲಿಕ ಗುರುಗಳಾದ ವಂ. ಗುರು  ಬಶಾರ್ ಫವಾಡ್ಲೆಹ್ ತಿಳಿಸಿದ್ದಾರೆ.

ಕಳೆದ ಜೂನ್ ತಿಂಗಳಲ್ಲಿ ಭಾರೀ ಅಗ್ನಿ ಅವಘಡವೊಂದು ಕೃಷಿಭೂಮಿಯನ್ನು ಆವರಿಸಿಕೊಂಡಿದ್ದು, ವಸತಿ ಪ್ರದೇಶದ ಸಮೀಪದಲ್ಲಿರುವ ಪುರಾತನ ಮೆಲ್ಕೈಟ್ ಗ್ರೀಕ್ ದೇವಾಲಯದ ಅವಶೇಷಗಳ ಸುತ್ತಲಿನ ಗೋಡೆಗಳು ಕಪ್ಪಾಗಿವೆ.

ಈ ದಾಳಿಗಳ ಹಿಂದೆ ಇರುವವರಿಗೆ ಯಾವುದೇ ಶಿಕ್ಷೆಯಾಗದಿರುವಂತೆಯೇ ಕಾಣುತ್ತಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಭದ್ರತೆಗಾಗಿ ಹೊಣೆವಹಿಸಿರುವ ಇಸ್ರಾಯೇಲಿ ಸೇನೆಯ ಪ್ರತಿಕ್ರಿಯೆಯಲ್ಲಿಯೂ ತಡವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಪರೀಕ್ಷಿತ ಮತ್ತು ಮರುಕಳಿಸುವ ವಿಧಾನ

ಪ್ರತಿ ಹೊಸ ವಸಾಹತು ಸ್ಥಾಪನೆಯೊಡನೆ ಪಶ್ಚಿಮ ತೀರದ ಜನರು ಮತ್ತೆ ಮತ್ತೆ ಅದೇ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಮೊದಲು ಬೆಂಕಿಗಿಡಲಾದ ಕೃಷಿಭೂಮಿಗಳು, ನಂತರ ಹಸು-ಕುರಿಗಳ ಗುಂಪುಗಳು ಪ್ರವೇಶಿಸುವುದು, ಅದರ ಬಳಿಕ ಮೊದಲ ಕಾರವಾನ್‌ಗಳು ಹಾಗೂ ತಾತ್ಕಾಲಿಕ ಮನೆಗಳು ಕಾಣಿಸಿಕೊಳ್ಳುವುದು, ಸ್ಪಷ್ಟವಾಗಿ ಹಾರಾಡುವ ಇಸ್ರಾಯೇಲಿ ಧ್ವಜ, ಮತ್ತು ಕೊನೆಗೆ ಶಾಶ್ವತ ಕಟ್ಟಡಗಳ ನಿರ್ಮಾಣ ಆರಂಭವಾಗುವುದು — ಎಲ್ಲವೂ ಒಂದೇ ಮಾದರಿಯಲ್ಲಿ ನಡೆಯುತ್ತಿದೆ. ಕೆಲವೇ ತಿಂಗಳ ಅವಧಿಯಲ್ಲಿ, ಹೆಚ್ಚಾಗಿ ಬೆಟ್ಟಗಳ ಮೇಲ್ಭಾಗಗಳಲ್ಲಿ ಹೊಸ ವಸಾಹತುಗಳು ಉದ್ಭವಿಸಿ, ನಂತರ ಪ್ಯಾಲೆಸ್ಟೀನಿಯನ್ ಭೂಮಿಯೊಳಗೆ ವಿಸ್ತರಿಸುತ್ತಿವೆ.

ತಯ್ಬೆಹ್ ಗ್ರಾಮದಲ್ಲಿ, ಕ್ರೈಸ್ತ ಧಾರ್ಮಿಕ ನಾಯಕರು ಭಯೋತ್ಪಾದಕ ಕಾರ್ಯಗಳಿಗೆ ಹಿಂಸೆಯಿಂದ ಪ್ರತಿಕ್ರಿಯಿಸಬಾರದೆಂದು ನಿರ್ಧರಿಸಿದ್ದಾರೆ. “ನಾವು ಶಾಂತಿಪೂರ್ಣವಾಗಿ ಪ್ರತಿರೋಧಿಸುತ್ತೇವೆ,” ಎಂದು ತಯ್ಬೆಹ್‌ನ ಮೆಲ್ಕೈಟ್ ಗ್ರೀಕ್ ಧರ್ಮಕೇಂದ್ರದ ಗುರು ಜಾಕ್ ನೋಬಲ್ ಹೇಳಿದ್ದಾರೆ.

ಇಲ್ಲಿವರೆಗೆ ಗ್ರಾಮದಲ್ಲಿ ಯಾರೂ ಸಾವನ್ನಪ್ಪಿಲ್ಲ ಅಥವಾ ಗಾಯಗೊಂಡಿಲ್ಲ. ಆದರೆ ಸಮೀಪದಲ್ಲಿ ಮುಖ್ಯವಾಗಿ ಮುಸ್ಲಿಂ ಗ್ರಾಮಗಳಲ್ಲಿ ಹಿಂಸಾತ್ಮಕ ಘಟನೆಗಳು ಪ್ರಾಣಹಾನಿಗೆ ಕಾರಣವಾಗಿವೆ. ಇದರಿಂದ ತಯ್ಬೆಹ್‌ನಲ್ಲಿಯೂ ಏನಾದರೂ ದುರಂತ ಸಂಭವಿಸಬಹುದೆಂಬ ಭೀತಿ ಎಲ್ಲರಲ್ಲೂ ಮನೆ ಮಾಡಿದೆ.

ಗ್ರಾಮದ ಕಥೋಲಿಕ ಹಾಗೂ ಆರ್ಥಡಾಕ್ಸ್ ಅಧಿಕಾರಿಗಳು, ತಮ್ಮ ಶಾಲೆಗಳ ಮೂಲಕ ಹಿಂಸೆಯ ಮಾರ್ಗವನ್ನು ತಳ್ಳಿಹಾಕುವ ಶಿಕ್ಷಣವನ್ನು ನೀಡಲು ಶ್ರಮಿಸುತ್ತಿದ್ದಾರೆ.  ಮುಂದಿನ ಪೀಳಿಗೆಯವರಿಗೆ ಶಾಂತಿ, ಸಹನೆ ಮತ್ತು ಮಾನವ ಗೌರವವೇ ನಿಜವಾದ ಪ್ರತಿರೋಧದ ಮಾರ್ಗವೆಂಬ ಸಂದೇಶವನ್ನು ಬೋಧಿಸುತ್ತಿದ್ದಾರೆ.

ಭಯಕ್ಕಿಂತ ಬಲಿಷ್ಠವಾದ ಕ್ರಿಸ್ತಜನ್ಮದ ಆನಂದ

ಈ ಎಲ್ಲಾ ಒತ್ತಡಗಳು ಮತ್ತು ಆತಂಕಗಳ ನಡುವೆಯೂ, ಕ್ರಿಸ್ತಜನ್ಮದ ಆನಂದಕರ ನಿರೀಕ್ಷೆ ತಯ್ಬೆಹ್ ಗ್ರಾಮದಲ್ಲಿ ಮೇಲುಗೈ ಸಾಧಿಸುತ್ತಿದೆ. ಕಳೆದ ಭಾನುವಾರದ ಬಲಿಪೂಜೆಯ ಸಂದರ್ಭದಲ್ಲಿ, ತಯ್ಬೆಹ್‌ನ ಲ್ಯಾಟಿನ್ ಧರ್ಮಕೇಂದ್ರದ ಗುರುಗಳು ಒಂದು ಸಣ್ಣ ಫ್ರೆಂಚ್ ಪ್ರತಿನಿಧಿ ತಂಡವನ್ನು ಆತ್ಮೀಯವಾಗಿ ಸ್ವಾಗತಿಸಿದರು.

“ದಿ ಓವ್ರ್ ದಿ ಓರಿಯಾಂಟ್” ಸಂಸ್ಥೆಯ ನಿರ್ದೇಶಕರಾದ ಪೂಜ್ಯ ಧರ್ಮಾಧ್ಯಕ್ಷರಾದ ವಂ. ಹ್ಯೂಗ್ಸ್ ಡಿ ವೊಯ್ಲೆಮೋಂಟ್, ಅದೇ ಸಂಸ್ಥೆಯ ಅಧ್ಯಕ್ಷರಾದ ಜಾನ್ ಇವ್ಸ್ ಟೋಲೋಟ್, ಹಾಗೂ ಫ್ರಾನ್ಸ್‌ನ ಧರ್ಮಾಧ್ಯಕ್ಷರ ಸಮ್ಮೇಳನದ ಮಹಾಸಚಿವರಾದ ವಂ. ಗುರು ಕ್ರಿಸ್ಟೋಫ್ ಲೆ ಸೂರ್ ಅವರು ತೈಬೆಹ್‌ನ ಕ್ರೈಸ್ತರಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು ಮತ್ತು ಅವರೊಂದಿಗೆ ಸೇರಿ ಪ್ರಭುವಿನ ಜನನೋತ್ಸವವಾದ ಕ್ರಿಸ್ತಜಯಂತಿಯನ್ನು ಆಚರಿಸಿದರು.

ಇತರೆ ಹಲವು ಸಂಘಟನೆಗಳೊಂದಿಗೆ ಸೇರಿ, ದಿ ಓವ್ರ್ ದೋರಿಯಾಂ ಸ್ಥಳೀಯ ಕ್ರೈಸ್ತ ಸಮುದಾಯಗಳ ಉಳಿವು ಮತ್ತು ಸ್ಥಿರತೆಯ ಯೋಜನೆಗಳಿಗೆ ಆರ್ಥಿಕ ನೆರವನ್ನು ಒದಗಿಸುತ್ತಿದೆ.

ಆದರೆ ಕೆಲಸದ ಕೊರತೆ ಮತ್ತು ಭವಿಷ್ಯದ ಅವಕಾಶಗಳ ಅಭಾವದಿಂದ, ಕ್ರೈಸ್ತರು ಗ್ರಾಮವನ್ನು ತೊರೆದು ಹೋಗುವ ಭೀತಿ ದೊಡ್ಡ ಸಮಸ್ಯೆಯಾಗಿ ಉಳಿದಿದೆ. ಕಳೆದ ಎರಡು ವರ್ಷಗಳಲ್ಲಿ, ಉತ್ತಮ ಜೀವನದ ಹುಡುಕಾಟದಲ್ಲಿ 15 ಕುಟುಂಬಗಳು ತಯ್ಬೆಹ್ ಗ್ರಾಮವನ್ನು ತೊರೆದು ವಿದೇಶಗಳಿಗೆ ತೆರಳಿವೆ ಎಂದು ಗುರು ಫವಾದ್ಲೆ ವಿವರಿಸಿದ್ದಾರೆ. ಈ ವರ್ಷಾಂತ್ಯದೊಳಗೆ ಮತ್ತೊಂದು ಮೆಲ್ಕೈಟ್ ಕುಟುಂಬವೂ ಗ್ರಾಮವನ್ನು ತೊರೆಯಲಿದೆ. ಹೀಗಾಗಿ ಸುಮಾರು 1400 ನಿವಾಸಿಗಳನ್ನು ಹೊಂದಿದ್ದ ಈ ಪ್ಯಾಲೆಸ್ಟೀನಿಯನ್ ಕ್ರೈಸ್ತ ಸಮುದಾಯ ಕ್ರಮೇಣ ಕ್ಷೀಣಿಸುತ್ತಿದೆ.

ಕಳೆದ ಭಾನುವಾರ ಬೆಳಿಗ್ಗೆ, ಗ್ರಾಮದ ಲ್ಯಾಟಿನ್ ಧರ್ಮಕೇಂದ್ರದಲ್ಲಿ ನಡೆದ ಪವಿತ್ರ ಬಲಿಪೂಜೆಯ ಆಚರಣೆಯಲ್ಲಿ ಸುಮಾರು ನೂರು ಭಕ್ತವಿಶ್ವಾಸಿಗಳು ಭಾಗವಹಿಸಿದರು.

ಬಲಿಪೀಠದ ಮುಂದೆ ಸ್ಥಾಪಿಸಿರುವ ಪವಿತ್ರ ಗೋದಲಿ,

ಸುಂದರವಾಗಿ ತೂಗುಹಾಕಿರುವ ದೀಪಾಲಂಕಾರಗಳು,

ಭೀತಿ ಮತ್ತು ಅನಿಶ್ಚಿತತೆಯ ನಡುವೆಯೂ ಮೂಡುತ್ತಿರುವ ಸಣ್ಣ ನಗು,

ನೋವಿನ ಮಧ್ಯೆಯೇ ಭರವಸೆಯನ್ನು ಹೊತ್ತ ಕ್ರಿಸ್ತಜಯಂತಿ

ಕ್ರೈಸ್ತರು ಎದುರಿಸುತ್ತಿರುವ ಅನಿಶ್ಚಿತ ಭವಿಷ್ಯ ಮತ್ತು ಭೀತಿಗಳ ನಡುವೆಯೂ, ಈ ಆಚರಣೆಗಳು ಕ್ಷಣಿಕ ಆನಂದ ಮತ್ತು ಧೈರ್ಯವನ್ನು ನೀಡುತ್ತಿವೆ.

ಕ್ರಿಸ್ತಜನ್ಮದ ಈ ಸಮಯದಲ್ಲಿ, ಕ್ರಿಸ್ತನ ಭೂಮಿಯಲ್ಲಿ ಕ್ರೈಸ್ತರ ಭವಿಷ್ಯಕ್ಕೆ ಎದುರಾಗಿರುವ ಬೆದರಿಕೆಗಳನ್ನು ಕೆಲ ಕ್ಷಣ ಮರೆತು, ಆನಂದ, ನಂಬಿಕೆ ಮತ್ತು ಆಶೆಯ ಸಂದೇಶವನ್ನು ಹೃದಯದಲ್ಲಿ ದೃಢಗೊಳಿಸಿಕೊಳ್ಳಲು ಈ ಹಬ್ಬದ ವಾತಾವರಣ ಕರೆನೀಡುತ್ತಿದೆ.

22 ಡಿಸೆಂಬರ್ 2025, 10:22