2021.12.15 Gruppo di cristiani che pregano insieme davanti la Bibbia

ಥೈಲ್ಯಾಂಡಿನ ಚಿಯಾಂಗ್ ಮೈನ ಹಳ್ಳಿಗಳಲ್ಲಿ ಕಾರುಣ್ಯಭರಿತ ಸೇವೆ

ಉತ್ತರ ಥೈಲ್ಯಾಂಡಿನ ಭತ್ತದ ಹೊಲಗಳು ಮತ್ತು ದೇವಾಲಯಗಳ ನಡುವಿನ ಗ್ರಾಮಗಳಲ್ಲಿ, ಐಡೆಂಟೆ ಮಿಷನರಿಗಳು ಕುಟುಂಬಗಳ ಜೊತೆಗೆ ಒಂದಾಗಿ ಬದುಕುತ್ತಾ ತಮ್ಮ ದೈನಂದಿನ ಬದುಕನ್ನೇ ಶುಭಸಂದೇಶ ಮತ್ತು ಸ್ಥಳೀಯ ಸಂಪ್ರದಾಯಗಳ ನಡುವೆ ಸೇತುವೆಯಾಗುವ ಸೇವೆಯಾಗಿ ರೂಪಿಸಿದ್ದಾರೆ.

ಸೇವೆಯಲ್ಲಿ ಸಂಖ್ಯೆಯೇ ಮುಖ್ಯವಲ್ಲ ಸೇವೆಯ ಮೌಲ್ಯವನ್ನು ಮಾಡುವವರ ಸಂಖ್ಯೆ ನಿರ್ಧರಿಸುವುದಿಲ್ಲ. ಕೆಲವೊಮ್ಮೆ ಒಬ್ಬರಿಗೆ ಕಿವಿಗೊಡುವುದೇ, ಅನೇಕ ಮಾತುಗಳಿಗಿಂತ ಹೆಚ್ಚು ಬದಲಾವಣೆಯನ್ನು ತರುತ್ತದೆ “ಮನಸಾರೆ ಇತರರ ಕಷ್ಟಗಳನ್ನು ಆಲಿಸಿ, ಅವುಗಳಿಗೆ ಸ್ಪಂದಿಸುವುದೇ ನಿಜವಾದ ಸುವಾರ್ತಾ ಪ್ರಚಾರವಾಗಿದೆ, ಸುವಾರ್ತೆಯನ್ನು ಸಾರುವ ಅತ್ಯಂತ ಅರ್ಥಪೂರ್ಣ ಮಾರ್ಗವಾಗುತ್ತದೆ,” ಎಂದು ಸುವಾರ್ತಾ ಸೇವಕಿ ಯೊತ್ಸಯಾ ಹೇಳಿದ್ದಾರೆ.

ಕರೇನ್, ಲಾಹು, ಅಖಾ, ಹ್ಮೋಂಗ್ ಮತ್ತು ಲಿಸು ಜನಾಂಗಗಳ ಥಾಯಿ ಹಳ್ಳಿಗಳಲ್ಲಿ ನಡೆಯುತ್ತಿರುವ ಐಡೆಂಟೆ ಮಿಷನ್‌ನ ಅನುಭವವನ್ನು ಅವರು ಹಂಚಿಕೊಂಡರು.

ಈ ಹಳ್ಳಿಗಳ ಜೀವನ ದಿನಗೂಲಿ ಕೆಲಸಗಳು ಮತ್ತು ಅಸ್ಥಿರ ಕೃಷಿ ವ್ಯವಸ್ಥೆಯ ಮೇಲೆ ಅವಲಂಬಿತವಾಗಿದೆ. ಅನೇಕ ಯುವಕರು ಶಾಲೆಯನ್ನು ಬೇಗನೆ ತೊರೆಯುತ್ತಾರೆ. ಪರಿಸರ ಮಾಲಿನ್ಯ, ನೆರೆ ಮತ್ತು ಅಸ್ಥಿರ ಜೀವನ ಪರಿಸ್ಥಿತಿಗಳಿಂದಾಗಿ ಮಕ್ಕಳು ಮತ್ತು ಹಿರಿಯರು ಹೆಚ್ಚು ಅಪಾಯಕ್ಕೆ ಒಳಗಾಗುತ್ತಿದ್ದಾರೆ. ಇಂತಹ ಸಂಕಷ್ಟಕರ ಪರಿಸ್ಥಿತಿಗಳ ನಡುವೆ, ಬೌದ್ಧ ಬಹುಸಂಖ್ಯಾತ ದೇಶವಾದ ಥೈಲ್ಯಾಂಡ್‌ನಲ್ಲಿ ಅಲ್ಪಸಂಖ್ಯಾತವಾದ ಕಥೋಲಿಕ ಧರ್ಮಸಭೆ ತನ್ನ ಹಾಜರಾತಿಯನ್ನು ಕಾಳಜಿ ಮತ್ತು ಕರುಣೆಯ ಮೂಲಕ ವ್ಯಕ್ತಪಡಿಸುತ್ತಿದೆ.

ಬೆಳೆಯುತ್ತಿರುವ ಕಿರು ಧರ್ಮಸಭೆ

ದ್ವಿತೀಯ ಮಹಾಯುದ್ಧದ ನಂತರ ಪ್ರಭು ಯೇಸು ಕ್ರಿಸ್ತರ ಶುಭವಾರ್ತೆ ಉತ್ತರ ಥೈಲ್ಯಾಂಡ್‌ಗೆ ತಲುಪಿತು. ಪರ್ವತ ಪ್ರದೇಶಗಳಲ್ಲಿ ವಾಸಿಸುವ ಜನಾಂಗಗಳ ನಡುವೆ ಅದು ನಿಧಾನವಾಗಿ ಬೇರು ಬಿಟ್ಟಿತು. ಇಂದಿಗೂ ಕಥೋಲಿಕರು ಸಂಖ್ಯೆಯಲ್ಲಿ ಅಲ್ಪಸಂಖ್ಯಾತರಾಗಿದ್ದರೂ, ಧರ್ಮಸಭೆ ತನ್ನ ಸೇವೆಯನ್ನು ಸಂಖ್ಯೆಯ ಆಧಾರದ ಮೇಲೆ ಅಳೆಯದೇ, ಧಾರ್ಮಿಕ ಸೇವೆಯ ಸ್ವರೂಪವನ್ನು ಮುಖ್ಯವಾಗಿ ಪರಿಗಣಿಸಿದೆ.

ಇಲ್ಲಿ ಧರ್ಮಸಭೆಯ ಸೇವೆ ಕೇವಲ ಅಧಿಕೃತ ಧಾರ್ಮಿಕ ಸಂವಾದಗಳಿಗೆ ಸೀಮಿತವಾಗಿಲ್ಲ. ಹಳ್ಳಿಗಳಲ್ಲೂ, ಶಾಲೆಗಳಲ್ಲೂ, ಕೃಷಿ, ಆರೋಗ್ಯ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಸಣ್ಣ ಯೋಜನೆಗಳ ಮೂಲಕ ಅದು ಜನರ ದಿನನಿತ್ಯದ ಜೀವನದ ಭಾಗವಾಗಿಯೇ ರೂಪುಗೊಳ್ಳುತ್ತಿವೆ.

ಧರ್ಮಸಭೆ ಜಾಗೃತವಾಗಿ ಧರ್ಮಪ್ರಚಾರಕ ಧರ್ಮಸಭೆಯಾಗಿ ಬದುಕುತ್ತಿದೆ. ಇತರ ಧರ್ಮಗಳೊಂದಿಗೆ ಇರುವ ಸಂಬಂಧಗಳು ಕೇವಲ ಅಧಿಕೃತ ಭೇಟಿಗಳಲ್ಲೇ ಸೀಮಿತವಾಗಿಲ್ಲ; ಅವು ಹಳ್ಳಿಗಳಲ್ಲೂ, ಶಾಲೆಗಳಲ್ಲೂ ಜೀವಂತವಾಗಿವೆ.  ಸ್ಥಳೀಯ ಹಬ್ಬಗಳು, ಆಚರಣೆಗಳು, ಹಾಡುಗಳು ಮತ್ತು ಸಂಪ್ರದಾಯಗಳಲ್ಲಿ ಧರ್ಮಸಭೆ ಭಾಗವಹಿಸುತ್ತದೆ. ಬದಲಾಯಿಸುವ ಉದ್ದೇಶವಿಲ್ಲದೆ, ಸ್ನೇಹಪೂರ್ಣ ಹಾಜರಾತಿಯ ಮೂಲಕ ಸಮಾಜದ ಏಕತೆಯನ್ನು ಕಾಪಾಡುವ ಹಾಗೂ ಬಲಪಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ.

ಐಡೆಂಟೆ ಸಭೆಯ ವಂ.ಗುರುಗಳಾದ ತಿನ್ನಾಕೋರ್ಣ್ ಅವರು ಹೀಗೆ ವಿವರಿಸುತ್ತಾರೆ: “ನಾವು ಬಲಿಪೂಜೆಯನ್ನು ಥಾಯ್ ಭಾಷೆಯಲ್ಲಿ ಆಚರಿಸುತ್ತೇವೆ. ಆದರೆ ಜನರು ತಮ್ಮ ತಮ್ಮ ಭಾಷೆಗಳಲ್ಲಿ ಪ್ರತಿಕ್ರಿಯಿಸುತ್ತಾರೆ. ಭಕ್ತಿಗೀತೆಗಳು ಭಾಷಾಂತರವಿಲ್ಲದೆ ಕೂಡ ಆಧ್ಯಾತ್ಮಿಕ ಅನುಭವವನ್ನು ಹೊತ್ತೊಯ್ಯುತ್ತವೆ.” ಇಲ್ಲಿನ ಬಲಿಪೂಜೆ ಮತ್ತು ಧಾರ್ಮಿಕ ಬೋಧನೆಗಳು ಸ್ಥಳೀಯ ಸಂಸ್ಕೃತಿಗೆ ಹೊಂದಿಕೊಂಡಿವೆ. ಜನಾಂಗೀಯ ಪರಂಪರೆಯನ್ನು ಗೌರವಿಸುತ್ತಾ, ಸ್ಥಳೀಯ ಭಾಷೆಗಳ ಬಳಕೆಯ ಮೂಲಕ ಅವು ಜೀವಂತವಾಗಿವೆ.

ಬಹುತೇಕ ಭಕ್ತ ವಿಶ್ವಾಸಿಗಳು ಕಾರೆನ್, ಲಾಹು, ಅಖಾ, ಹ್ಮಾಂಗ್ ಮತ್ತು ಲಿಸು ಜನಾಂಗಗಳಿಗೆ ಸೇರಿದವರು. ಇವರಲ್ಲಿ ಬಲವಾದ ಸಮುದಾಯ ಭಾವನೆ ಇದೆ. ಅದೇ ಕ್ರೈಸ್ತ ಸಾಕ್ಷಿಗೆ ಫಲವತ್ತಾದ ನೆಲವಾಗಿದೆ. ಆದರೆ ರಾಜಧಾನಿಯಲ್ಲಿ ಧಾರ್ಮಿಕ ಸೇವೆಯ ಸ್ವರೂಪ ಸ್ವಲ್ಪ ವಿಭಿನ್ನವಾಗಿದೆ. ಸಹೋದರಿ  ಕ್ರಿಸ್ಟಿನಾ ಅವರ ಮಾತಿನಲ್ಲಿ, “ಅನೇಕ ಯುವಜನರು ತಮ್ಮ ಕುಟುಂಬದಿಂದ ದೂರವಾಗಿ, ಯಾವುದೇ ಬೆಂಬಲವಿಲ್ಲದೆ ನಗರಕ್ಕೆ ಬರುತ್ತಾರೆ. ಅವರ ಮೊದಲ ಅಗತ್ಯ ಆಹಾರವಲ್ಲ—ಮನಸಾರೆ ಅವರ ಕಥೆ, ಸಂಕಷ್ಟಗಳನ್ನು ಆಲಿಸುವ ಒಬ್ಬ ವ್ಯಕ್ತಿ.” ಅವರ ಪಕ್ಕದಲ್ಲೇ ಕುಳಿತ ಸಹೋದರಿ ಎಸ್ಟರ್ಲಿಸಿಯಾ “ಆಹಾರ ಕಿಟ್‌ಗಳು ಮಾತ್ರ ಸಾಕಾಗುವುದಿಲ್ಲ. ಕಲಿಯುವ, ಬೆಳೆಯುವ ಅವಕಾಶ ನೀಡಿದಾಗಲೇ ವಿಶ್ವಾಸ ಮರುಸ್ಥಾಪನೆಯಾಗುತ್ತದೆ.”ಎಂದು ಹೇಳುತ್ತಾರೆ

ಭವಿಷ್ಯವಿಲ್ಲದ ಸ್ಥಿತಿಯೇ ನಿಜವಾದ ದುರವಸ್ಥೆ

ಸಹೋ. ಯೋತ್ಸಾಯ 14 ವರ್ಷದ ಒಬ್ಬ ಬಾಲಕಿಯ ಕಥೆಯನ್ನು ಹಂಚಿಕೊಂಡರು— ಓದಬೇಕೆಂಬ ಆಸೆ ಇದ್ದರೂ, ಕುಟುಂಬದ ಪರಿಸ್ಥಿತಿಯ ಸಲುವಾಗಿ, ತಾನು ಶಾಲೆಯನ್ನು ಬಿಡಬೇಕಾಯಿತು.ಇಲ್ಲಿ ನೋವಿನ ಸಂಗತಿ ಎಂದರೆ ಕುಟುಂಬದ ಹೊರೆ ಹೊರುವುದಕ್ಕಾಗಿ, ತನ್ನ ವಿದ್ಯೆಯನ್ನು ನಿಲ್ಲಿಸಬೇಕಾದ ಅನಿವಾರ್ಯತೆಯನ್ನು  ಆ ಪುಟ್ಟ ಬಾಲಕಿ ಅರಿತಿದ್ದಳು.

ಈ ಘಟನೆ, ಬಡತನದ ಅರ್ಥವನ್ನು ಹೊಸದಾಗಿ ಅರ್ಥಮಾಡಿಕೊಟ್ಟಿತು ಎಂದು ಸಹೋ. ಯೋತ್ಸಾಯ ಹೇಳುತ್ತಾರೆ. “ಬಡತನ ಎಂದರೆ ಕೇವಲ ಹಣದ ಕೊರತೆಯಲ್ಲ,” ಎನ್ನುತ್ತಾರೆ ಅವರು, “ಅದು ಅವಕಾಶಗಳ ಕೊರತೆ ಮತ್ತು ಮುದುಡಿಹೋದ ಭವಿಷ್ಯ.”

ಇದೇ ನಿಜವಾದ ನೋವು — ಯಾವ ದಾರಿಯೂ ಕಾಣದ ಸ್ಥಿತಿ. ಹಳ್ಳಿಗಳಲ್ಲಿನ ಮಕ್ಕಳು ತಮ್ಮ ಸಿಹಿಗಳನ್ನು ಹಂಚಿಕೊಳ್ಳುತ್ತಾರೆ. ನೆರೆಹೊರೆಯವರು ಒಬ್ಬರಿಗೊಬ್ಬರು ಸಂಕಷ್ಟಗಳಲ್ಲಿ ಸಹಾಯ ಮಾಡುತ್ತಾರೆ. ಆದರೆ ಈ ಸಹಕಾರದ ನಡುವೆಯೂ ಬದುಕಿನ ಅಸ್ಥಿರತೆ ಮುಂದುವರಿಯುತ್ತದೆ. ಅನಿಯಮಿತ ಕೆಲಸ, ಬಲವಂತದ ವಲಸೆ, ಶಾಲೆ ಬಿಟ್ಟುಬಿಡಬೇಕಾದ ಯುವಜನರು, ಮಾಲಿನ್ಯ ಮತ್ತು ಪ್ರಕೃತಿ ವಿಕೋಪಗಳ ಪರಿಣಾಮಗಳನ್ನು ಅನುಭವಿಸುವ ವೃದ್ಧರು ಮತ್ತು ಮಕ್ಕಳು—ಇವೆಲ್ಲವೂ ದಿನನಿತ್ಯದ ವಾಸ್ತವ. ಇಲ್ಲಿ ಬಡತನಕ್ಕೆ ಒಂದು ಸ್ಪಷ್ಟ ಮುಖವಿದೆ. ಕಠಿಣ ಆಯ್ಕೆಗಳ ಮತ್ತು ಸ್ತಬ್ಧವಾಗಿರುವ ಜೀವನಗಳ ಮುಖೇನ ಇಲ್ಲಿನ ಬಡತನ ಅವಕಾಶಗಳಿಗೆ ಅಡ್ಡಗೋಡೆಯಾಗಿದೆ.

ಮದ್ದಾಗುವ ಗಾಯಗಳು

ಸಹೋ. ಎಸ್ಟರ್ಲಿಸಿಯಾ ಅವರು ಒಂದು ಘಟನೆನ್ನು ವಿವರಿಸಿದರು. “ನಾವು ಇಬ್ಬರು ಮಕ್ಕಳನ್ನೂ ಕಳೆದುಕೊಂಡಿದ್ದ ವೃದ್ಧ ದಂಪತಿಯನ್ನು ಭೇಟಿಯಾದೆವು,” ಎಂದರು. ಆರಂಭದಲ್ಲಿ ಅವರು ಯಾರನ್ನೂ ನೋಡಲು ಇಚ್ಛಿಸಲಿಲ್ಲ. ಆದರೆ ಮರು ಮರು — ಮತ್ತೆ ಮತ್ತೆ ಭೇಟಿ ಆದಂತೆ, ನಿಧಾನವಾಗಿ ಅವರು ಮಾತಿಗೆ ಪ್ರತಿಕ್ರಿಯಿಸಲು ಆರಂಭಿಸಿದರು. ಕಾಲಕ್ರಮೇಣ ಅವರ ಮುಖದಲ್ಲಿ ನಗುವೂ ಮೂಡಿತು.

ಇಂತಹ ಸಂದರ್ಭಗಳಲ್ಲಿ ಧಾರ್ಮಿಕ ಸೇವಕರು ಮೊದಲಿಗೆ ಕೆಲುತ್ತಾರೆ — ಜನರ ನೋವುಗಳನ್ನು ಕೇಳುತ್ತಾರೆ. ಉಪದೇಶಕ್ಕಿಂತ ಮೊದಲು ಅವರು ಹಾಜರಿರುತ್ತಾರೆ — ಸನಿಹದಲ್ಲಿರುತ್ತಾರೆ. ಈ ನಿರಂತರ ಸಾನ್ನಿಧ್ಯವೇ, ನೋವಿನಿಂದ ಕುಗ್ಗಿದ ಬದುಕಿನಲ್ಲಿ ಮತ್ತೆ ಗೌರವ ಮತ್ತು ಧೈರ್ಯವನ್ನು ಮೂಡಿಸುತ್ತದೆ.

ಕರುಣೆಯ ಮನಸ್ಸು

ಚಿಯಾಂಗ್ ಮೈನಲ್ಲಿ ನಡೆಯುತ್ತಿರುವ ಈ ಧಾರ್ಮಿಕ ಸೇವೆ ಸಂಬಂಧಗಳ ಮೇಲೆ ಕೇಂದ್ರೀಕೃತವಾಗಿದೆ. ಇಲ್ಲಿ ಧಾರ್ಮಿಕ ಸೇವೆಯ ಸ್ವರೂಪ ಸ್ವಲ್ಪ ವಿಭಿನ್ನವಾಗಿದೆ. ಬಲಿಪೂಜೆ ಮತ್ತು ಉಪದೇಶಕ್ಕೆ ಮಾತ್ರ ಸೀಮಿತವಾಗದೆ, ಶಾಲೆಗಳು, ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳು, ಕೃಷಿ ಯೋಜನೆಗಳು ಹಾಗೂ ಪರ್ವತ ಪ್ರದೇಶದ ಜನಾಂಗಗಳ ಅಭಿವೃದ್ಧಿ ಕಾರ್ಯಕ್ರಮಗಳೊಂದಿಗೆ ಈ ಸೇವೆ ಜೋಡಣೆಯಾಗಿದೆ.

ಬಡವರು, ವಲಸಿಗರು, ಅಪ್ರಾಪ್ತ ವಯಸ್ಕರು ಹಾಗೂ ಅತೀ ಅಸಹಾಯಕ ಸ್ಥಿತಿಯಲ್ಲಿರುವ ಜನರ ಕಡೆಗೆ ವಿಶೇಷ ಗಮನ ಹರಿಸಲಾಗುತ್ತದೆ. ಇಲ್ಲಿ ಅಂತರಧರ್ಮ ಸಂವಾದ ದಿನನಿತ್ಯದ ಜೀವನದ ಸಹಜ ಭಾಗವಾಗಿದೆ. ಕಥೋಲಿಕರು, ಬೌದ್ಧ ಭಿಕ್ಷುಕರು, ಲಮುಸ್ಲಿಮರು ಹಾಗೂ ಚೇತನವಾದಿ ಸಮುದಾಯಗಳ ನಡುವೆ ನಡೆಯುವ ಈ ಸಂವಾದವು ಪರಿಸರ ಸಂರಕ್ಷಣೆ, ಶಾಂತಿ ಮತ್ತು ಶಿಕ್ಷಣದ ಪರವಾಗಿ ಒಂದಾಗಿ ಕೈಜೋಡಿಸುವ ಕಾರ್ಯಗಳಿಗೆ ದಾರಿ ಮಾಡಿಕೊಡುತ್ತದೆ.

ಈ ಅನುಭವಗಳ ಬಗ್ಗೆ ಮಾತನಾಡಿದ ಧಿನ್ನಾಕೋರ್ಣ್ ಮತ್ತು ಥನ್ನೌಂಗ್‌ಸಾಕ್ ಅವರು, “ಈ ಸವಾಲುಗಳ ಮಧ್ಯೆ ಬದುಕುತ್ತಾ, ಧಾರ್ಮಿಕ ಜೀವನ ಎಂದರೆ ಕೇವಲ ಬೋಧನೆ ಅಲ್ಲ, ಪ್ರಾಯೋಗಿಕ ಬದುಕನ್ನು ಹಂಚಿಕೊಳ್ಳುವುದೇ ಎಂಬುದನ್ನು ನಾವು ಅರಿತೆವು. ಜನರ ಜೊತೆ ಸಾನಿಹದಲ್ಲಿದ್ದು, ಕರುಣೆಯ ಮನಸ್ಸಿನಿಂದ ಹತ್ತಿರವಾಗಿರುವುದೇ ನಿಜವಾದ ಸೇವೆ,” ಎಂದು ಹೇಳಿದರು.

ಸರಳತೆಯ ಶಕ್ತಿ

ಚಿಯಾಂಗ್ ಮೈಗೆ ಆಗಮಿಸಿ ಈಗ ಇಪ್ಪತ್ತಮೂರು ವರ್ಷಗಳು ಕಳೆದಿದ್ದರೂ, ಐಡೆಂಟೆಸ್ ಮಿಷನರಿಗಳು ಇನ್ನೂ ಕೂಡ ಎಲೆಮರೆಕಾಯಿಗಳಂತೆ  ತಮ್ಮ ಧಾರ್ಮಿಕ ಸೇವೆಯನ್ನು ಮುಂದುವರಿಸುತ್ತಿದ್ದಾರೆ. ದೊಡ್ಡ ಪ್ರದರ್ಶನಗಳಿಲ್ಲದೆ, ಸರಳ ಜೀವನದಲ್ಲೇ ಅವರು ಜನರ ಜೊತೆ ಬದುಕುತ್ತಾ, ಸೇವೆಯ ಅರ್ಥವನ್ನು ವ್ಯಕ್ತಪಡಿಸುತ್ತಿದ್ದಾರೆ.

ಈ ಬಗ್ಗೆ ಮಾತನಾಡಿದ ಧಿನ್ನಾಕೋರ್ಣ್ ಅವರು, “ಸಣ್ಣ ಕಾರ್ಯಗಳಿಗೂ ದೊಡ್ಡ ಮಹತ್ವವಿದೆ. ಏಕೆಂದರೆ ಅವು ಸದಾ ದೀನರ ಬಳಿ ಇರುವ ದೇವರ ಸಾಕ್ಷಿಯಾಗುತ್ತವೆ,” ಎಂದು ಹೇಳಿದರು. ಅವರು ಮತ್ತಷ್ಟು ವಿವರಿಸುತ್ತಾ, “ವಿನಯ ಮತ್ತು ಕರುಣೆಯಿಂದ ತುಂಬಿದ ಮನಸ್ಸು ಹೊಂದಿರುವುದೇ ದೇವರ ಪ್ರೀತಿಯನ್ನು ಅರ್ಥಮಾಡಿಕೊಳ್ಳುವ ದಾರಿಯಾಗಿದೆ. ಅದೇ ಒಂದೇ ದೇವರ ಮಕ್ಕಳಾಗಿ, ಸಹೋದರ–ಸಹೋದರಿಯರಂತೆ ಬದುಕುವ ಮಾರ್ಗವೂ ಹೌದು,” ಎಂದು ಅಭಿಪ್ರಾಯಪಟ್ಟರು.

 

18 ಡಿಸೆಂಬರ್ 2025, 18:20