ಹುಡುಕಿ

LEBANON-RELIGION-DAILY LIFE LEBANON-RELIGION-DAILY LIFE  (AFP or licensors)

ಲೆಬನಾನಿನಲ್ಲಿಯೇ ವಾಸಿಸಲು ಲೆಬನಾನಿನ ಕ್ರೈಸ್ತರಿಗೆ ಪ್ರೋತ್ಸಾಹ

ಉತ್ತರದಿಂದ ದಕ್ಷಿಣದವರೆಗೆ ಎಸಿಎನ್(ಏಡ್ ಫಾರ್ ಚರ್ಚ್ ಇನ್ ನೀಡ್) ಸೇವಾ ಸಂಸ್ಥೆಯ ತಂಡವೊಂದು ದೇವದಾರು ವೃಕ್ಷಗಳ ನಾಡಿನಲ್ಲಿ ಕ್ರೈಸ್ತರಿಗೆ ಶಾಶ್ವತ ನೆಲೆ ದೊರಕಿಸಲು ಶ್ರಮಿಸುತ್ತಿದೆ. ಧಾರ್ಮಿಕ ಸೇವೆ ಮತ್ತು ಶಿಕ್ಷಣ ಸೇವಾ ಸಂಸ್ಥೆಯ ಪ್ರಮುಖ ಧ್ಯೇಯಗಳಾಗಿವೆ. ವಿಶ್ವಾದ್ಯಂತ ಕಿರುಕುಳ ಮತ್ತು ದೌರ್ಜನ್ಯಕ್ಕೊಳಗಾದ ಕ್ರೈಸ್ತರನ್ನು ಬೆಂಬಲಿಸುವ ಧ್ಯೇಯದೊಂದಿಗೆ ಏಯ್ಡ್ ಟು ದಿ ಚರ್ಚ್ ಇನ್ ನೀಡ್ (ACN) ಕಾರ್ಯನಿರ್ವಹಿಸುತ್ತದೆ.

ಲೆಬನಾನಿನಲ್ಲಿ ಎಸಿಎನ್ ಸಂಸ್ಥೆಯ ಪುಟ್ಟ ತಂಡದ ಸದಸ್ಯರಾಗಿರುವ ಮರಿಯಲ್, ಚಾರ್ಲೆಟ್ ಹಾಗೂ ಫಾವೂದ್, ದೇಶಾದ್ಯಂತ ಇರುವ ಎಲ್ಲಾ ಧರ್ಮಕ್ಷೇತ್ರಗಳನ್ನು ಮತ್ತು  ಧರ್ಮಾಧ್ಯಕ್ಷರುಗಳನ್ನು ಸಂಧಿಸಿ ವಿವಿಧ ಯೋಜನೆಗಳ ಕುರಿತು  ಅಧ್ಯಯಿಸುತ್ತಿದ್ದಾರೆ. 2019ರಲ್ಲಿ ಸಂಭವಿಸಿದ ಆರ್ಥಿಕ ಬಿಕ್ಕಟ್ಟು ಲೆಬನೋನಿನ ಕುಟುಂಬಗಳಲ್ಲಿ ಮಾತ್ರವಲ್ಲದೆ ಧಾರ್ಮಿಕ ಸಂಸ್ಥೆಗಳಲ್ಲೂ ಆರ್ಥಿಕ ಪರಿಸ್ಥಿತಿಯನ್ನು ಹದಗೆಡಿಸಿದೆ. ಆದರೂ ಧರ್ಮಕೇಂದ್ರಗಳು, ಶಾಲೆಗಳು ಮತ್ತು ಧರ್ಮಕ್ಷೇತ್ರಗಳು ತಮ್ಮ ಸಿಬ್ಬಂದಿಗೆ ಪ್ರಾಮಾಣಿಕವಾಗಿ ವೇತನ ನೀಡುತ್ತಾ ಬಂದಿವೆ.

ಲೆಬನಾನ್‌ನ ಉತ್ತರದಲ್ಲಿನ ಸಿರಿಯದ ಗಡಿಯ ಬಳಿಯಿರುವ ಕೊಬಾಯೆಟ್ ಪ್ರಾಂತ್ಯದ ಶಾಲೆಗಳ ಮತ್ತು ಧ್ಯಾನ ಕೇಂದ್ರದ ಮೇಲ್ವಿಚಾರಕರಾಗಿರುವ ವಂ. ಗುರು ರೇಮಂಡ್ ಅಬ್ಡೊರವರು "ಕುಟುಂಬಗಳಿಗೆ ನೆರವು ನೀಡುವುದೇ ನಮ್ಮ ಮುಖ್ಯ ಧ್ಯೇಯ" ಎಂದು ತಿಳಿಸಿದ್ದಾರೆ. ಬೈರುತ್ತಿನ ಪೂರ್ವ ಪ್ರಾಂತ್ಯಾಧಿಕಾರಿಯಾಗಿದ್ದ ಗುರುಗಳು, ಕಾರ್ಮೆಲ್ ಸಭೆಗೆ ಸೇರಿದವರಾಗಿದ್ದಾರೆ. ಭಕ್ತ ವಿಶ್ವಾಸಿಗಳ ಉದಾರ ಕಾಣಿಕೆ ಮತ್ತು ಜರ್ಮನಿ, ಆಸ್ಟ್ರಿಯಾ, ಪೋಲೆಂಡ್, ಫ್ರಾನ್ಸ್ ದೇಶಗಳಿಂದ ಬರುತ್ತಿರುವ ನೆರವಿನಿಂದ ಶಾಲೆಗಳನ್ನು ನಡೆಸಲು ಸಹಾಯವಾಗುತ್ತಿದೆ ಎಂದು ತಿಳಿಸಿದ್ದಾರೆ.

ಎಸಿಎನ್ ಸಂಸ್ಥೆಯ  ಆದ್ಯತಾ ಪಟ್ಟಿಯಲ್ಲಿ ಲೆಬನಾನ್

ಜಗತ್ತಿನ 140 ದೇಶಗಳಿಂದ ಸಂಗ್ರಹವಾಗುವ ದೇಣಿಗೆಯನ್ನು ಹಲವು ಸೇವಾ ಯೋಜನೆಗಳಿಗೆ ಹಂಚುವ Aid to the Church in Need (ACN) ಸಂಸ್ಥೆಯ ಮುಖ್ಯ ಕಚೇರಿ ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿ ಇದೆ.

ಲೆಬನಾನ್‌ ದೇಶದಲ್ಲಿ ಕ್ರೈಸ್ತರ ಜೀವನ ಅಸ್ಥಿರಗೊಂಡಿರುವ ಈ ಸಮಯದಲ್ಲಿ, ಶಾಲೆಗಳ ದುರ್ಗತಿ, ರಾಜಕೀಯ ಗೊಂದಲ ಮತ್ತು ಸುರಕ್ಷತೆಯ ಕೊರತೆ—ಇವುಗಳ ನಡುವೆ ಕ್ರೈಸ್ತ ಸಮುದಾಯ ನೆಲ ಕಚ್ಚಿಕೊಳ್ಳದಂತೆ ನೋಡಿಕೊಳ್ಳುವುದು ACNನ ಪ್ರಮುಖ ಆದ್ಯತೆಯಾಗಿದೆ. ದಕ್ಷಿಣ ಲೆಬನಾನ್ ಮತ್ತು ಬೆಕ್ಕಾ ಕಣಿವೆಯಲ್ಲಿನ ಇಸ್ರೇಲ್–ಹೆಜ್ಬೊಲ್ಲಾ ಸಂಘರ್ಷ, ಆರ್ಥಿಕ ಕುಸಿತ, ಕೋಮುಗಲಭೆಗಳ ಕಾರಣ ಅನೇಕರು ದೇಶ ತೊರೆದಿದ್ದಾರೆ.

ಡೂರಿಸ್‌ನಲ್ಲಿ ಒಂದೇ ಸ್ಫೋಟ ಎರಡು ಕುಟುಂಬಗಳಿಗೆ ಹಾನಿ

ಬಕ್ಕಾ ಕಣಿವೆಯ ಡೂರಿಸ್ ಎಂಬ ಊರಿನಲ್ಲಿ 2024ರ ಸೆಪ್ಟೆಂಬರ್–ನವೆಂಬರ್ ಅವಧಿಯಲ್ಲಿ 186 ಸ್ಫೋಟಗಳು ದಾಖಲಾಗಿವೆ. ಒಂದು ಸ್ಪೋಟಕ ಹೆಜ್ಬೊಲ್ಲಾ ಶಸ್ತ್ರಾಸ್ತ್ರ ಸಂಗ್ರಹಣಾ ಸ್ಥಳವಾಗಿ ಬಳಸಲಾಗುತ್ತಿದ್ದ ಗ್ಯಾರೇಜ್‌ ಮೇಲೆ ಬಿದ್ದು, ಸುತ್ತಮುತ್ತಲಿನ ಮನೆಗಳನ್ನು ಧ್ವಂಸಮಾಡಿತು. ಆ ಗ್ಯಾರೇಜ್ ಎದುರಿನ ಮನೆಯಲ್ಲಿ ವಾಸಿಸುವ ನಿವೃತ್ತ ಸೈನಿಕ ಅಬ್ದೋ ಸ್ಫೋಟದ ಹೊಡೆತಕ್ಕೆ ಮನೆ ಒಳಗೇ ಹಾರಿಹೋಗಿದ್ದರು. ಅವಶೇಷಗಳ ಅಡಿಯಲ್ಲಿ, ಭಯಭೀತಳಾಗಿ ಮತ್ತು ತೀವ್ರವಾಗಿ ಗಾಯಗೊಂಡು ನಡುಗುತ್ತಿದ್ದ ತಮ್ಮ ಮಗಳನ್ನು ಅವರು ಕಷ್ಟಪಟ್ಟು ಹೊರತೆಗೆದರು. ಮಗು ಐದು ದಿನ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯಬೇಕಾಯಿತು ಆ ಎಲ್ಲಾ ವೆಚ್ಚವನ್ನು ACN ಹೊತ್ತಿದೆ.  ಮಗಳ ದೇಹ ಚೇತರಿಸಿಕೊಂಡರೂ, ಮನಸ್ಸಿನ ಭಯ ಇನ್ನೂ ಕಡಿಮೆಯಾಗಿಲ್ಲ.ಸೆಪ್ಟೆಂಬರ್ 25ರ ಘಟನೆಯನ್ನು ಮರೆಯಲಾಗದು,” ಎನ್ನುತ್ತಾರೆ ಅಬ್ದೋ. ಆಗ ತಾನೇ ನವೀಕರಿಸಿದ್ದ ಮನೆಯನ್ನು ಮರುನಿರ್ಮಿಸಬೇಕಾದ ಪರಿಸ್ಥಿತಿ ಅಬ್ದೋರವರದು.

ಅದೇ ಗ್ಯಾರೇಜ್ ಎದುರು ವಾಸಿಸುತ್ತಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಜೋಸೆಫ್ ಅವರ ಮನೆಗೂ ಹಾನಿಯಾಗಿದೆ. ಇಬ್ಬರೂ, “ಇದು ಹೆಜ್ಬೊಲ್ಲಾ ಬಳಕೆಯ ಕಟ್ಟಡ ಎಂದು ಗೊತ್ತಿತ್ತು; ಆದರೆ ಶಸ್ತ್ರಾಸ್ತ್ರಗಳ ಸಂಗ್ರಹಕ್ಕೆ ಬಳಸುತ್ತಾರೆ ಎಂಬುದು ತಿಳಿದಿರಲಿಲ್ಲ. ಇಲ್ಲಿ ಯಾವುದೇ ಶಸ್ತ್ರಾಸ್ತ್ರಗಳಿಲ್ಲ ಎಂದು ಹೆಜ್ಬೊಲ್ಲಾ ತಿಳಿಸಿತ್ತು, ಲಾರಿಗಳು ಇಲ್ಲಿ ಬಂದು ಹೋಗುವುದು ಸಾಮಾನ್ಯವಾಗಿತ್ತು” ಎಂದು ಜೋಸೆಫ್ ಮತ್ತು ಅಬ್ದೋ ತಿಳಿಸಿರುತ್ತಾರೆ

ಈ ರೀತಿಯ ತೀವ್ರ ಹಾನಿ ಎದುರಾದಾಗ ACN ಇತರೆ ದತ್ತಿ ಸಂಸ್ಥೆಗಳಂತೆ ತುರ್ತು ಸಹಾಯ ನೀಡುವುದಕ್ಕೆ ಮುಂದಾಗುತ್ತದೆ. ಸ್ಥಳೀಯ ಮೂವರು ಸಿಬ್ಬಂದಿ ಪ್ರತಿಯೊಬ್ಬ ಕುಟುಂಬದ ಪರಿಸ್ಥಿತಿಯನ್ನು ಪರಿಶೀಲಿಸಿ, ವರದಿಯನ್ನು ಫ್ರಾಂಕ್‌ಫರ್ಟ್‌ಗೆ ಕಳುಹಿಸುತ್ತಾರೆ.

ದಕ್ಷಿಣ ಲೆಬನಾನ್‌ನಲ್ಲಿ ಸಂಘರ್ಷದಿಂದ ಬಾಧಿತ ಕ್ರೈಸ್ತ ಕುಟುಂಬಗಳಿಗೆ ಆಹಾರ ಒದಗಿಸುವ ಕಾರ್ಯಕ್ಕೂ ಸಂಸ್ಥೆ ನೆರವಾಗುತ್ತಿದೆ. ಇಸ್ರೇಲಿ ಕಾರ್ಯಾಚರಣೆಗಳು ಶಮನವಾದ ಮೇಲೆ, ಮನೆ–ಮರುನಿರ್ಮಾಣ ಸೇರಿದಂತೆ ದೊಡ್ಡ ಮಟ್ಟದ ಯೋಜನೆಗಳನ್ನು ಆರಂಭಿಸುವ ಯೋಜನೆ ಇದೆ.

ಕ್ರೈಸ್ತರು ದೇಶ ತೊರೆಯದಂತೆ ಮಾಡಲು ಮನೆ ಮತ್ತು ಶಾಲೆ ಎರಡನ್ನೂ ಉಳಿಸುವುದು ಅತ್ಯಂತ ಮುಖ್ಯವೆಂದು ಸಂಸ್ಥೆ ಕಾಣುತ್ತದೆ. ಆದ್ದರಿಂದಲೇ ACN ಖಾಸಗಿ ಕಥೋಲಿಕ ಶಾಲೆಗಳಿಗೂ ಸಹಾಯ ವಿಸ್ತರಿಸಿದೆ.

ACN, ಫ್ರಾನ್ಸ್ ಆಧಾರಿತ ಕಥೋಲಿಕ ದತ್ತಿ ಸಂಸ್ಥೆ ಲರ್ವ್ ಡಿ ಓರಿಯಂಟ್ ಜೊತೆಗೂಡಿ ಕಾರ್ಯನಿರ್ವಹಿಸುತ್ತಿದೆ.

ಈ ಸಹಕಾರದಲ್ಲಿ—

·       ಶಿಕ್ಷಕರಿಗೆ ಪೂರಕ ವೇತನ ನೀಡಿ ಅವರ ಜೀವನೋಪಾಯ ಉಳಿಸಲು ನೆರವಾಗುತ್ತದೆ

·       ಸಂಕಷ್ಟದಿಂದ ಬಾಧಿತ ಮಕ್ಕಳಿಗೆ ಭಾಗಶಃ ಶುಲ್ಕಸಹಾಯ ಒದಗಿಸುತ್ತದೆ

·       ಲರ್ವ್ ಡಿ ಓರಿಯಂಟ್ ಶಾಲಾ ಕಟ್ಟಡಗಳ ನಿರ್ವಹಣೆ ಮತ್ತು ನವೀಕರಣವನ್ನು ನೋಡಿಕೊಳ್ಳುತ್ತದೆ.

ಸ್ಥಳೀಯ ಪರಿಸ್ಥಿತಿಯ ಮಧ್ಯೆ ನೇರವಾಗಿ ಕಾರ್ಯನಿರ್ವಹಿಸುವ ನೆರವಿನ ಜಾಲವಾಗಿ ಈ ಎರಡು ಸಂಸ್ಥೆಗಳು ಪರಸ್ಪರ ಪೂರಕವಾಗಿವೆ.

ಡೊರಿಸ್‌ನ ಧರ್ಮಕೇಂದ್ರದ ವಂ. ಗು. ರೇಮಂಡ್ ಅಬ್ದೋ ಈ ಸಂಸ್ಥೆಗಳ ಸಹಕಾರವನ್ನು ಶ್ಲಾಘಿಸುತ್ತಾ, ತಮ್ಮ ಶಾಲೆಗಳ ದುರಸ್ತಿ ಕಾರ್ಯಗಳಿಗೆ ದೊರೆತ ನೆರವಿಗಾಗಿ ವಂದಿಸಿದರು. “ಕಥೋಲಿಕ ಶಾಲೆಗಳ ಶಿಕ್ಷಣದ ಗುಣಮಟ್ಟದ ಮೇಲೆ ಇಲ್ಲಿನ ಕುಟುಂಬಗಳಿಗೆ ಬಲವಾದ ನಂಬಿಕೆಯಾಗಿರುವುದರಿಂದ, ಅನೇಕ ಮಕ್ಕಳು ಬಹಳ ದೂರದಿಂದ ಪ್ರಯಾಣಿಸಬೇಕಾದರೂ, ಬಸ್‌ಗಳನ್ನು ಬದಲಿಸಬೇಕಾದರೂ, ಈ ಶಾಲೆಗಳನ್ನೇ ಆಯ್ಕೆ ಮಾಡುತ್ತಾರೆ.” ಎಂದು ಗುರುಗಳು ಮಾಹಿತಿ ನೀಡಿದರು.

ವಿಶ್ವಾಸದಲ್ಲಿ ಜೀವಿಸಲು ಸೇವೆಯ ಮೂಲಕ ಸಾಕ್ಷಿ

ಉತ್ತರ ಲೆಬನಾನ್‌ನ ಮೆಂಜೆಜ್ ಎಂಬ ಹಳ್ಳಿಯಲ್ಲಿ ಫಿಲಿಪ್ಪೈನ್ ಮೂಲದ ಫ್ರಾನ್ಸಿಸ್‌ಕನ್ ಮಿಷನರೀಸ್ ಆಫ್ ದ ಸೇಕ್ರೆಡ್ ಹಾರ್ಟ್ ಸನ್ಯಾಸಿನಿಯರು ಒಂದು ಶಾಲೆ ಮತ್ತು ದವಾಖಾನೆ ನಡೆಸುತ್ತಿದ್ದಾರೆ. ಪ್ರತಿ ತಿಂಗಳು 35 ಮಂದಿ ಶಿಕ್ಷಕರು ಮತ್ತು ಆಡಳಿತ ಸಿಬ್ಬಂದಿಗೆ ವೇತನ ನೀಡುವುದು ಅವರ ಮುಖ್ಯ ಹೊಣೆ. ಸ್ವತಃ ಅವರು ಯಾವುದೇ ಸಂಬಳ ಪಡೆಯುವುದಿಲ್ಲ“ನಮಗೆ ಹಣದ ಅಗತ್ಯವಿಲ್ಲ; ಬರುವ ದೇಣಿಗೆಯನ್ನು ಎಲ್ಲಾ ಸಿಬ್ಬಂದಿ ವೇತನಕ್ಕೂ, ದವಾಖಾನೆ ಔಷಧಿಗಳಿಗೂ ಬಳಸುತ್ತೇವೆ,” ಎನ್ನುತ್ತಾರೆ ಸಿಸ್ಟರ್ ಔರೋರ್.

ಮಕ್ಕಳಿಗಾಗಿ ಸುರಕ್ಷಿತ ಸ್ಥಳ ಕಟ್ಟುತ್ತಿರುವ ಸಾಲೇಶಿಯನ್ಸ್

ಎಲ್ ಹೌಸ್ಸಾನ್ ಎಂಬ ಊರಿನಲ್ಲಿ, 82 ವರ್ಷದ ಸಾರ್ದಿನಿಯದ ಮೂಲದ ಸಾಲೇಶಿಯನ್ ಗುರುಗಳಾದ ಮಾರಿಯೋ ಮಕ್ಕಳು ಮತ್ತು ಯುವಕರಿಗಾಗಿ ಬೇಸಿಗೆ ಶಿಬಿರಗಳು, ಆಟಗಳು, ಧರ್ಮೋಪದೇಶ ತರಗತಿಗಳು ಇನ್ನೂ ಮುಂತಾದ  ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.

ಸಾಲೇಶಿಯನ್ ಸಭೆಯ ಜಾಗದಲ್ಲೇ ಒಂದು ಸರ್ಕಾರಿ ಶಾಲೆಯೂ ಇದೆ, ಇದರ ಸುತ್ತಮುತ್ತ ಸಭೆಯು ಮರಗಳನ್ನು ನೆಟ್ಟಿದೆ. ಇದರೊಂದಿಗೆ ಮಕ್ಕಳಿಗಾಗಿ ಕ್ರೀಡಾಂಗಣವನ್ನು ನಿರ್ಮಿಸಿದ್ದಾರೆ, ಸಮೀಪದಲ್ಲೇ ಮಾತೆ ಮರಿಯಾಳ ಗಾವಿಯನ್ನೂ ಕಟ್ಟಿದ್ದಾರೆ. ಇಲ್ಲಿ ಕ್ರೈಸ್ತ ಮತ್ತು ಮುಸ್ಲಿಂ ಸಮುದಾಯದ ಮಕ್ಕಳು ಒಟ್ಟಾಗಿ ಕಲಿಯುತ್ತಿದ್ದಾರೆ.

ಸಾಲೇಶಿಯನ್ ಸಭೆಯು  ಸಮಾಗಮದ ಸಂಸ್ಕೃತಿಯನ್ನು ಬೆಳೆಸುವಲ್ಲಿ ಶ್ರಮಿಸುತ್ತದೆ. ಶಾಂತಿಯುತ ಸಹಬಾಳ್ವೆ, ಶಾಲೆ ಮತ್ತು ಕುಟುಂಬದಿಂದ ಪ್ರಾರಂಭವಾಗುತ್ತದೆ ಎಂಬುದು ವಂ, ಗುರುಗಳಾದ ಮಾರಿಯೋರವರ ಅಭಿಪ್ರಾಯ.

ಪುನರುಜ್ಜೀವನದ ಸಂಕೇತಗಳು

ಕಳೆದ ಎರಡು ವರ್ಷಗಳಿಂದ ಮರೋನೈಟ್ ಹೋಲಿ ಫ್ಯಾಮಿಲಿ ಸನ್ಯಾಸಿನಿಯರ ಸಂಸ್ಥೆಗೆ ಹೊಸದಾಗಿ ಯುವತಿಯರು ಸೇರಲು ಆರಂಭಿಸಿದ್ದಾರೆ. ದೀರ್ಘಕಾಲದ ನಿಶ್ಚಲಾವಸ್ಥೆಯ ನಂತರ ಮತ್ತೆ ಚೈತನ್ಯ ಗೋಚರಿಸುತ್ತಿದೆ.

“ಹತ್ತು ವರ್ಷಗಳಾದರೂ ಒಬ್ಬ ಹೊಸ ಅಭ್ಯರ್ಥಿನಿಯೂ ಬಂದಿರಲಿಲ್ಲ. ಈಗ ಅವರ ಆಗಮನದಿಂದ ಮಠಕ್ಕೆ ಮತ್ತೆ ಜೀವ ಬಂದಂತೆ ಅನಿಸುತ್ತಿದೆ,” ಎಂದು ಮುಖ್ಯೋಪಾಧ್ಯಾಯರೂ ಹಾಗೂ ಕಾನ್ವೆಂಟಿನ ಮುಖ್ಯ ಸನ್ಯಾಸಿನಿಯಾದ ಸಿಸ್ಟರ್ ಮೇರಿ ಆಂಟೋನೆಟ್ ಸಾದೆ ತಿಳಿಸಿದರು.  ಜಗದ್ಗುರುಗಳಾದ 14ನೇ ಲಿಯೋರವರ ಬೈರುತ್ ಭೇಟಿಯಲ್ಲಿ ಸಮೀಪದಿಂದ ಕಾರ್ಯನಿರ್ವಹಿಸಿದ್ದ ಸಿಸ್ಟರ್ ಮೇರಿ ಆಂಟೋನೆಟ್ ಸಾದೆ, ಹೊಸ ಅಭ್ಯರ್ಥಿಗಳನ್ನು ಆಬ್ರಿನ್ ಮಠದಲ್ಲಿ ಸ್ವೀಕರಿಸುತ್ತಿದ್ದಾರೆ.

ಎಸಿಎನ್ ಸಂಸ್ಥೆಯ ಸಹಕಾರದಿಂದ ಆರು ಯುವತಿಯರ ತರಬೇತಿ ನಡೆಯುತ್ತಿದೆ. ಇವರಲ್ಲಿ ಇಬ್ಬರು ಆಸ್ಟ್ರೇಲಿಯಾದಿಂದ ಬಂದವರಾಗಿದ್ದಾರೆ “ಹಿರಿಯ ಸಹೋದರಿಯರು ನಮ್ಮನ್ನು ನಿಧಾನವಾಗಿ ಅಗಲಲ್ಲಿದ್ದಾರೆ, ಸೇರುವ ಹೊಸಬರ ಸಂಖ್ಯೆ ಅಷ್ಟಿಲ್ಲದಿದ್ದರೂ, ಈ ಸಕಾರಾತ್ಮಕ ಬೆಳವಣಿಗೆ ಸಂತಸ ತಂದಿದೆ” ಎಂದು ಹಂಚಿಕೊಂಡರು

ಬಾಳ್ಬೆಕ್ ಧರ್ಮಪ್ರಾಂತ್ಯದ ಪರ್ವತ ಪ್ರದೇಶಗಳಲ್ಲಿ, ಇಪ್ಪತ್ತು ಸಹೋದರರು ಮತ್ತು ಮೂವರು ಗುರುಗಳು ಶೂನ್ಯದಿಂದಲೇ ಬೈತ್ ಮರೂನ್ ಮಠವನ್ನು ನಿರ್ಮಿಸಿದ್ದಾರೆ. ಇವರಲ್ಲಿ ಹೆಚ್ಚಿನವರು 30ರ ಒಳಗಿನವರು—ವಿಶ್ವವಿದ್ಯಾಲಯ ಶಿಕ್ಷಣದ ನಂತರ ನಿರೀಕ್ಷಿಸಿದ್ದ ಜೀವನ ಮಾರ್ಗವನ್ನು ಬಿಟ್ಟು, ಪೂರ್ಣಕಾಲಿಕ ಸೇವೆಯ ದಾರಿಯನ್ನು ಆರಿಸಿದವರು. ಒಬ್ಬ ಸಹೋದರ ವಾಸ್ತುಶಿಲ್ಪಿ. ಪ್ರಾರ್ಥನಾಲಯ, ಸನ್ಯಾಸಿಗಳ ಕೊಠಡಿಗಳು, ದೇವಾಲಯ—ಎಲ್ಲದರ ವಿನ್ಯಾಸ ಅವರದ್ದು. ಮತ್ತಷ್ಟು ಯುವಕರು ಕಲ್ಲುಗಾರರು, ಬಡಗಿಗಳು, ನಿರ್ಮಾಣಕಾರ್ಮಿಕರಾಗಿ ಇಡೀ ಕಟ್ಟಡವನ್ನೂ ಸ್ವತಃ ತಮ್ಮ ಕೈಯಿಂದ ನಿರ್ಮಿಸಿದ್ದಾರೆ. “ಇಲ್ಲಿ ಏಳುತ್ತಿರುವುದು ಯಾರ ವೈಯಕ್ತಿಕ ಸ್ವತ್ತು ಅಲ್ಲ; ಇದು ದೇವ ಜನರ ಆಸ್ತಿ,” ಎಂದು ಸಹೋದರ ಕ್ರಿಸ್ತೋಫೊರಸ್ ವಿವರಿಸಿದರು.

ಎರಡು ವರ್ಷಗಳ ಹಿಂದೆ 3,000 ಮಂದಿ, ಕಳೆದ ವರ್ಷ 5,000 ಮಂದಿ ವಾರ್ಷಿಕ ಧ್ಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಕಠಿಣ ಬಂಡೆಯ ದಾರಿಯನ್ನು ದಾಟಿ ಬರುತ್ತಿರುವ ಜನರನ್ನು ನೋಡಿದರೆ, ಇದು ಕುತೂಹಲದ ಪ್ರಯಾಣವಲ್ಲ; ಆತ್ಮಶಾಂತಿಯ ಹುಡುಕಾಟ ಎಂಬುದು ಸ್ಪಷ್ಟ.

ಸಂತ ಮೆರೋನ್ರಂತೆ ಸರಳ ಜೀವನ ನಡೆಸುತ್ತಿರುವ ಸಹೋದರರು, ಸಂತೋಷವನ್ನು ಸಾಂಕ್ರಾಮಿಕವಾಗಿ ಹರಡುತ್ತಿದ್ದಾರೆ. ಸಹೋದರರಲ್ಲಿ ಇಬ್ಬರು ಆಸ್ಟ್ರೇಲಿಯಾದವರು; ಆಸ್ಟ್ರೇಲಿಯಾದ ಧರ್ಮಸಭೆ ಈ ಯೋಜನೆಗೆ ಪ್ರಮುಖ ಬೆಂಬಲ ನೀಡುತ್ತಿದೆ. ನಿರ್ಮಾಣ ಕಾರ್ಯದ ಅಪಾಯಗಳನ್ನು ಗಮನಿಸಿ, ACN ಸಭೆಯ ಗುರುಗಳು ಹಾಗೂ ಸಹೋದರರಿಗೆ ವಿಮಾ ರಕ್ಷಣೆಯನ್ನು ಒದಗಿಸಿದೆ.

ಚೈತನ್ಯ, ಭರವಸೆ, ಹಾಗೂ ಅಲ್ಲಲ್ಲಿ ಮೂಡುವ ಸಂಶಯ

ಲೆಬನಾನ್‌ನ ಧರ್ಮಸಭೆ ಇನ್ನೂ ಜೀವಂತವಾಗಿದೆ. ಗಾಯಗೊಂಡಿದ್ದರೂ, ಅನೇಕ ಸವಾಲುಗಳ ಮಧ್ಯೆ ತನ್ನ ಸಮುದಾಯವನ್ನು ಗುಣಪಡಿಸುವ ಪ್ರಯತ್ನದಲ್ಲಿ ತೊಡಗಿದೆ. ದೇಶದ ದಕ್ಷಿಣ ಭಾಗ ಹಾಗೂ ಬೆಕಾ ಕಣಿವೆಯಲ್ಲಿ ಕ್ರೈಸ್ತರ ಜೀವನ ಎಂದಿಗೂ ಸುಲಭವಾಗಿಲ್ಲ; ಕೆಲವೊಮ್ಮೆ ಪರಿಸ್ಥಿತಿಯೇ ಅವರ ಉಪಸ್ಥಿತಿಗೆ ಅನುಕೂಲಕರವಲ್ಲ.

ಕ್ರೈಸ್ತರು ಮತ್ತೆ ದೇಶದಲ್ಲಿ ಬಹು ಸಂಖ್ಯೆಯ ಸಮುದಾಯವಾಗಿ ಏರಬಹುದೇ ಎಂಬ ಪ್ರಶ್ನೆಗೆ ದಾರಿ ದೀರ್ಘ—ಮತ್ತು ಅನಿಶ್ಚಿತ. ವಂದನೀಯ ಗುರು ರೇಮಂಡ್ ಅಬ್ದೊ ಅವರ ಪ್ರಕಾರ, ದೇಶವನ್ನು “ಮೂಲದಿಂದಲೇ” ಇಸ್ಲಾಂರಾಷ್ಟ್ರ ಮಾಡಲು ಪ್ರಯತ್ನಿಸುತ್ತಿರುವ ಚಲನೆಗಳು ಗೋಚರವಾಗುತ್ತಿವೆ.

ಡೊರಿಸ್ ಪ್ರದೇಶದಲ್ಲಿ ಮನೆ ಹಾನಿಗೊಳಗಾದ ಜೋಸೆಫ್ ಮತ್ತು ಅಬ್ದೊ ಅವರ ಅನುಭವವೂ ಇದಕ್ಕೆ ಉದಾಹರಣೆ. ಸ್ಫೋಟದ ನಂತರ ಮುಸ್ಲಿಂ ಕುಟುಂಬಗಳ ಮನೆಗಳನ್ನು ಹೆಜ್ಬೊಲ್ಲಾ ಸಂಪೂರ್ಣವಾಗಿ ಪುನರ್‌ನಿರ್ಮಿಸಿತು; ಆದರೆ ಕ್ರೈಸ್ತ ಕುಟುಂಬಗಳಿಗೆ ಕೆಲವು ನೂರರಷ್ಟು ಡಾಲರ್ ಮಾತ್ರ ಸಿಕ್ಕಿತು. ದೊರಕಿದ್ದು ಕೆಲವೇ ನೂರು ಡಾಲರ್ ಮಾತ್ರ. ಇಲ್ಲಿನಿಂದ ಕ್ರೈಸ್ತರನ್ನು ಕತ್ತುಹಿಡಿದು ನೇರವಾಗಿ ತಳ್ಳದಿದ್ದರೂ, ಜೇವಿಸಲು ಇಕ್ಕಟ್ಟಾದ ಪರಿಸ್ಥಿತಿಯನ್ನು ಹೆಜ್ಬೊಲ್ಲಾ ನಿರ್ಮಿಸುತ್ತಿದೆ

ಬಾಳ್ಬೆಕ್–ಡೆರ್ ಅಲ್-ಅಹ್ಮರ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ವಂದನೀಯ ಹನ್ನಾ ರಹ್ಮೆ, ಪರಿಸ್ಥಿತಿಯ ಸವಾಲುಗಳಿದ್ದರೂ ಮುಸ್ಲಿಂ ನೆರೆಹೊರೆಯವರ ಜೊತೆ ಸಂವಾದವನ್ನು ಜೀವಂತವಾಗಿರಿಸಿದ್ದಾರೆ “ನಾವು ಒಟ್ಟಿಗೆ ಬದುಕುವುದಲ್ಲದೆ ಬೇರೆ ಮಾರ್ಗ ಇಲ್ಲ,” ಎಂದು ಅವರು ಹೇಳುತ್ತಾರೆ.

ಆದಾಗ್ಯೂ, ಇಸ್ರೇಲ್ ಜೊತೆಗಿನ ತೀವ್ರ ಉದ್ವಿಗ್ನತೆ ಸಂವಾದವನ್ನು ಕಷ್ಟಕರವಾಗಿಸಿದೆ. 2024ರ ಕೊನೆಯ ಘರ್ಷಣೆಯ ವೇಳೆ ಅವರು ಧರ್ಮಪ್ರಾಂತ್ಯದ ಭೂಮಿಯಲ್ಲಿ ಕೆಲವು ಮುಸ್ಲಿಂ ಕುಟುಂಬಗಳಿಗೆ ಆಶ್ರಯ ಒದಗಿಸಿದ್ದರು. ಆದರೆ, ಅವರು ಆಶ್ರಯ ನೀಡುತ್ತಿದ್ದ ಕುಟುಂಬಗಳು ಇಸ್ರೇಲಿ ದಾಳಿಗಳ ಗುರಿಯಾಗಬಾರದೆಂದು, ಹೆಜ್ಬೊಲ್ಲಾದಲ್ಲಿ ಸಕ್ರಿಯವಾಗಿದ್ದ ಕೆಲವು ಸದಸ್ಯರನ್ನು ಹೊರ ಹೋಗುವಂತೆ ಕೇಳಬೇಕಾಯಿತು.

ನಾವು ಧರ್ಮಾಧ್ಯಕ್ಷರನ್ನು ಭೇಟಿಯಾದ ಸಂಧರ್ಭಲ್ಲಿ ಮೇಲೆ ಇಸ್ರೇಲಿ ಡ್ರೋನ್‌ಗಳು ಹಾರುತ್ತಿದ್ದವು, ಇದರ ಬಗ್ಗೆ ಕೇಳಿದಾಗ "ಜಗದ್ಗುರುಗಳ ಭೇಟಿಯ ದಿನಗಳಲ್ಲಿ ಇವು ಇರಲಿಲ್ಲ, ಜಗದ್ಗುರುಗಳು ಹಿಂತಿರುಗಿದ ಹಿಂದೆಯೇ ಮತ್ತೆ ಹಾರಾಟ ಆರಂಭವಾಗಿದೆ” ಎಂದು ಕಳವಳ ವ್ಯಕ್ತ ಪಡಿಸಿದರು. ಸಮರ ಮತ್ತೆ ಯಾವ ಕ್ಷಣದಲ್ಲಾದರೂ ಪ್ರಾರಂಭವಾಗಬಹುದೆಂಬ ಭೀತಿ ಲೆಬನಾನಿನ ಜನರಲ್ಲಿದೆ.

 

10 ಡಿಸೆಂಬರ್ 2025, 16:34