Israeli settlers attacked West Bank village of Taybeh Israeli settlers attacked West Bank village of Taybeh  (ANSA)

ವಸಾಹತುಗಾರರ ದಾಳಿಗಳ ನಡುವೆಯೂ ವಿಶ್ವಾಸದಲ್ಲಿ ದೃಢವಾಗಿರುವ ತೈಬೆಹ್‌ನ ಕ್ರೈಸ್ತರು

ವೆಸ್ಟ್ ಬ್ಯಾಂಕ್‌ನ ಉತ್ತರ ಭಾಗದಲ್ಲಿರುವ ಕ್ರೈಸ್ತ ಹಳ್ಳಿಯಾದ ತೈಬೆಹ್‌ನಲ್ಲಿ ಡಿಸೆಂಬರ್ 4–5ರ ಮಧ್ಯರಾತ್ರಿ ವಸಾಹತುಗಾರರಿಂದ ನಡೆದ ಹಾನಿಯಲ್ಲಿ ಎರಡು ಕಾರುಗಳಿಗೆ ಬೆಂಕಿ ಹಚ್ಚಲ್ಪಟ್ಟಿದ್ದು, ಒಂದು ಖಾಸಗಿ ಕಟ್ಟಡದ ಗೋಡೆ ಮೇಲೆ ಬೆದರಿಕೆ ಬರಹ ಹಾಕಲಾಗಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.

ಇಸ್ರಾಯೇಲೀ ವಸಾಹತುಗಾರರು ನಡೆಸಿದ ಈ ದಾಳಿಯಲ್ಲಿ ಆಸ್ತಿ ಹಾನಿ ಸಂಭವಿಸಿದೆ ಆದರೆ ಯಾವುದೇ ಗಾಯಗಳಾಗಿಲ್ಲ. ತೈಬೆಹ್ ಲ್ಯಾಟಿನ್ ಧರ್ಮಸಭೆಗೆ ಸೇರಿದ ಧರ್ಮಕೇಂದ್ರದ ವಂದನೀಯ ಗುರುಗಳಾದ ಬಶಾರ್ ಫವಾದ್ಲೆ ಅವರು ಘಟನೆಯ ತಕ್ಷಣವೇ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿದರು.

“ಕುಟುಂಬವು ಧರ್ಮಸಭೆಯ ನೆರವಿಗೆ ಧನ್ಯವಾದ ತಿಳಿಸಿದೆ. ಆದರೆ ನಮ್ಮ ಜನರ ಮತ್ತು ನಮ್ಮ ನೆಲದ ರಕ್ಷಣೆಗೆ ಇನ್ನೂ ಬಲವಾದ ಬೆಂಬಲ ಅಗತ್ಯ,” ಎಂದು ಅವರು ಹೇಳಿದರು.

“ತೈಬೆಹ್ ಈ ಭಾಗದಲ್ಲಿ ಉಳಿದಿರುವ ಕೊನೆಯ ಕ್ರೈಸ್ತ ಹಳ್ಳಿ. ನಮ್ಮ ಉಳಿವಿಗೆ ಜಾಗತಿಕ ಸಹಕಾರ ಅಗತ್ಯ,” ಎಂದು ಅವರು ಸೇರಿಸಿದರು.

ಕ್ರಿಸ್ತ ಜಯಂತಿ ಕಾರ್ಯಕ್ರಮದ ಹಿಂದೆಯೇ ದಾಳಿ

ಧರ್ಮಕೇಂದ್ರದ ಕ್ರಿಸ್ತ ಜಯಂತಿ ಕಾರ್ಯಕ್ರಮಗಳು ಉದ್ಘಾಟನೆಯಾದ ಮರುದಿನವೇ ಈ ಹಾನಿ ನಡೆದಿದ್ದು, ಐತಿಹಾಸಿಕವಾಗಿ ಪವಿತ್ರ ಭೂಮಿಗೆ ಸಂಬಂಧಿಸಿದ ಎಂಟು ದೇಶಗಳ ರಾಜತಾಂತ್ರಿಕರು ಹಾಗೂ ರಮಲ್ಲಾ, ಜೆರುಸಲೆಮ್ ಮತ್ತು ಹತ್ತಿರದ ಪಟ್ಟಣಗಳ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅದರ ಹಿಂದೆಯೇ ಮಧ್ಯರಾತ್ರಿಯಲ್ಲಿ ವಸಾಹತುಗಾರರು ಖಾಸಗಿ ಆಸ್ತಿಯನ್ನು ಧ್ವಂಸ ಮಾಡಿ ಕಟ್ಟಡದ ಗೋಡೆ ಮೇಲೆ ಬೆದರಿಕೆ ಸಂದೇಶವನ್ನು ಬರೆದಿದ್ದಾರೆ.

ಪಶ್ಚಿಮ ಕರಾವಳಿಯ ಇತರ ಸ್ಥಳಗಳಲ್ಲಿ ಕಂಡ ಸಂದೇಶಗಳೇ ಇಲ್ಲಿ ಕೂಡ ಗೋಚರಿಸಿವೆ,” ಎಂದು ಗುರುಗಳು ತಿಳಿಸಿದರು.

“ಈ ವರ್ಷ ತೈಬೆಹ್‌ನಲ್ಲಿ ಈಗಾಗಲೇ ಆರು ದಾಳಿಗಳು ನಡೆದಿವೆ ಆದರೂ ನಾವು ಇಲ್ಲೇ ಇರುತ್ತೇವೆ. ಭದ್ರತೆಯ ಕೊರತೆ ಇದ್ದರೂ ನಮ್ಮ ದೈನಂದಿನ ಜೀವನವನ್ನು ಮುಂದುವರಿಸುತ್ತೇವೆ. ಕ್ರಿಸ್ತ ಜಯಂತಿ ಆಚರಣೆಯನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ,” ಎಂದು ಅವರು ಸ್ಪಷ್ಟಪಡಿಸಿದರು.

ಭಯದ ನಡುವೆಯೂ ಭರವಸೆ

ಪ್ರತಿ ಹೊಸ ದಾಳಿ ಸಮುದಾಯದಲ್ಲಿ ಆತಂಕ ಹೆಚ್ಚಿಸುತ್ತಿದೆ; ಕೆಲವರು ಹಳ್ಳಿ ತೊರೆಯುವ ವಿಚಾರವನ್ನೂ ಯೋಚಿಸುತ್ತಿದ್ದಾರೆ. ಪೂರ್ವ ರಮಲ್ಲಾ ಭಾಗದ ದುರ್ಬಲ ಕ್ರೈಸ್ತ ಸಮುದಾಯಗಳಿಗೆ ಅಂತರರಾಷ್ಟ್ರೀಯ ಗಮನ ಮತ್ತು ರಾಜತಾಂತ್ರಿಕ ಹಸ್ತಕ್ಷೇಪ ಹಾಗೂ ಬೆಂಬಲದ ಅಗತ್ಯವಿದೆ ಎಂದು ವಂದನೀಯ ಗುರುಗಳಾದ ಫವಾದ್ಲೆ ಅಭಿಪ್ರಾಯಪಟ್ಟರು.

“ಈ ದಾಳಿಗಳಿಂದ ನಮ್ಮ ವಿಶ್ವಾಸ ಕುಂದುವುದಿಲ್ಲ, ಈ ವಿಶ್ವಾಸ ಹಾಗೂ ಭರವಸೆಯು ಮರಣದಿಂದ ಎದ್ದು, ಸಮಾಧಿಯನ್ನು ಖಾಲಿ ಇಟ್ಟಿರುವ ಪುನರುತ್ಥಾನದ ಫಲವಾಗಿದೆ” ಎಂದು ಗುರುಗಳು ಸ್ಪಷ್ಟೀಕರಿಸಿದರು

ಜನವರಿಯಿಂದ 1,680 ದಾಳಿಗಳು: ವಿಶ್ವ ಸಂಸ್ಥೆ

ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿಯ ವರದಿ ಪ್ರಕಾರ, ಈ ವರ್ಷ ಜನವರಿಯಿಂದ ಪಶ್ಚಿಮ ಕರಾವಳಿಯ 270ಕ್ಕೂ ಹೆಚ್ಚು ಪ್ಯಾಲಸ್ತೀನ್ ಪ್ರದೇಶಗಳಲ್ಲಿ ದಿನಕ್ಕೆ ಸರಾಸರಿ 5ರಂತೆ 1,680 ದಾಳಿಗಳು ದಾಖಲಾಗಿವೆ.

ಓಲಿವ್ ಬೆಳೆ ತೀವ್ರ ಹಾನಿಗೆ ಗುರಿಯಾಗಿದೆ; ಅಕ್ಟೋಬರ್–ನವೆಂಬರ್ ತಿಂಗಳಲ್ಲಿ ಮಾತ್ರವೇ 88 ಸ್ಥಳಗಳಲ್ಲಿ 178 ಘಟನೆಗಳು ವರದಿಯಾಗಿವೆ.

07 ಡಿಸೆಂಬರ್ 2025, 16:32