ಬೆಂಗಳೂರು ಮಹಾಧರ್ಮಕ್ಷೇತ್ರದಲ್ಲಿ ಪೋಪ್ ಫ್ರಾನ್ಸಿಸ್ ವಲಸಿಗರ ಕೇಂದ್ರದ ಉದ್ಘಾಟನೆ
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಫ್ರಾನ್ಸಿಸ್ ವಲಸಿಗರ ಕೇಂದ್ರ ಹಾಗೂ ಅಲ್ಪಾವಧಿ ವಸತಿ ಗೃಹವು ಧಾರ್ಮಿಕ ಸೇವೆ, ಆಪ್ತ ಸಮಾಲೋಚನೆ, ಕಾನೂನು ನೆರವು, ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ ಹಾಗೂ ತುರ್ತು ಸೇವೆಗಳನ್ನು ಒದಗಿಸಲಿದೆ.
ಭಾರತದ ಬೆಂಗಳೂರು ಮಹಾಧರ್ಮಕ್ಷೇತ್ರವು ಮತ್ತೀಕರೆ ಸಮೀಪ ಹೊಸ ಕೇಂದ್ರವನ್ನು ಸ್ಥಾಪಿಸುವ ಮೂಲಕ ವಲಸಿಗ ಕುಟುಂಬಗಳಿಗಾಗಿ ತನ್ನ ಸೇವೆಯನ್ನು ವಿಸ್ತರಿಸಿದೆ.
ಸ್ಕಲಾಬ್ರೀನಿಯನ್ ಮಿಷನರಿಗಳ ಸಹಭಾಗಿತ್ವದಲ್ಲಿ ಬೆಂಗಳೂರು ಮಹಾಧರ್ಮಕ್ಷೇತ್ರವು ಮತ್ತೀಕೆರೆಯಲ್ಲಿ ಪೋಪ್ ಫ್ರಾನ್ಸಿಸ್ ವಲಸಿಗರ ಕೇಂದ್ರವನ್ನು ಸ್ಥಾಪಿಸಿದೆ. ಪೋಪ್ ಫ್ರಾನ್ಸಿಸ್ ವಲಸಿಗರ ಕೇಂದ್ರ ಹಾಗೂ ಅಲ್ಪಾವಧಿ ವಸತಿ ಗೃಹವು ಧಾರ್ಮಿಕ ಸೇವೆ, ಆಪ್ತ ಸಮಾಲೋಚನೆ, ಕಾನೂನು ನೆರವು, ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ ಹಾಗೂ ತುರ್ತು ಸೇವೆಗಳನ್ನು ಒದಗಿಸಲಿದೆ.
ನೂತನವಾಗಿ ನಿರ್ಮಾಣಗೊಂಡಿರುವ ಈ ಕೇಂದ್ರವನ್ನು ಕಾರ್ಡಿನಲ್ ಸಿಲ್ವಾನೋ ತೊಮಾಸ್ಸಿ ಸಿ.ಎಸ್. ಅವರು ಬೆಂಗಳೂರಿನ ಮಹಾಧರ್ಮಾಧ್ಯಕ್ಷರಾದ ಅತಿ ವಂ. ಡಾ. ಪೀಟರ್ ಮಚಾದೊ ಅವರೊಂದಿಗೆ ಉದ್ಘಾಟಿಸಿ, ಆಶೀರ್ವದಿಸಿದರು.
ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ, ಧರ್ಮಸಭೆಯ ಜೀವಾಳವಾದ ನಿರಂತರ ಸೇವಾ ನಿಲುವಿನ ಕುರಿತು ಧಾರ್ಮಿಕ ಸೇವಾ ದೃಷ್ಠಿಯಿಂದ ಮಾತನಾಡಿದ ಕಾರ್ಡಿನಲ್ ತೋಮಾಸಿಯವರು, “ವಲಸಿಗರ ಸೇವೆಗಾಗಿ ಆರಂಭಿಸಿರುವ ಈ ಕಾರ್ಯದಲ್ಲೂ ಹಾಗೂ ಈ ರೀತಿಯ ಪ್ರತಿ ಸೇವೆಯಲ್ಲೂ ಧರ್ಮಸಭೆ ಜೀವ ಪಡೆಯುತ್ತದೆ ಮತ್ತು ಪರಸ್ಪರ ಸ್ವೀಕಾರದ ಪ್ರತಿ ಕಾರ್ಯವೂ ಜೀವಂತ ಸುವಾರ್ತೆಯಾಗಿದೆ” ಎಂದು ನುಡಿದರು.
ಮಹಾಧರ್ಮಕ್ಷೇತ್ರ ಮತ್ತು ಸ್ಕಲಾಬ್ರಿನಿಯನ್ ಸಮುದಾಯದ ನಡುವಿನ ಸಹಭಾಗಿತ್ವವನ್ನು ಪ್ರಶಂಸಿಸಿದ ಕಾರ್ಡಿನಲ್ ರವರು, ‘ಈ ಹೊಸ ಕೇಂದ್ರವು ವಿಶ್ವಾಸವನ್ನು ಕಾರ್ಯರೂಪಕ್ಕೆ ತರುವ ಸ್ಪಷ್ಟ ಉದಾಹರಣೆಯಾಗಿದೆ’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಸರ್ಕಾರದ ಇಂಧನ ಇಲಾಖೆಯ ಸಚಿವರಾದ ಶ್ರೀ ಕೆ. ಜೆ. ಜಾರ್ಜ್ ಅವರು ತಮ್ಮ ಕುಟುಂಬದ ಶತಮಾನಗಳ ದೀರ್ಘ ವಲಸೆ ಕಥೆಯನ್ನು ಹಂಚಿಕೊಂಡರು. ಸುಮಾರು 1,600 ವರ್ಷಗಳ ಹಿಂದೆ ಅವರ ಪೂರ್ವಜರು ಸಿರಿಯಾದಿಂದ ಕೇರಳಕ್ಕೆ ವಲಸೆ ಬಂದರೆಂದು ಹಂಚಿಕೊಂಡ ಸಚಿವರು ‘ತಾನೂ ಸಹ ಅವಕಾಶ ಮತ್ತು ಅಭಿವೃದ್ಧಿಗಾಗಿ ಬೆಂಗಳೂರು ನಗರಕ್ಕೆ ಬಂದ ವಲಸಿಗನೇ’ ಎಂದು ಹೇಳಿದರು. “ವಲಸೆ ನನ್ನ ಕುಟುಂಬದ ಕಥೆಯ ಒಂದು ಭಾಗ, “ಮತ್ತೊಮ್ಮೆ ಹೊಸದಾಗಿ ಆರಂಭಿಸುವುದರ ಶ್ರಮ ಮತ್ತು ಅರ್ಥ ನನಗೆ ತಿಳಿದಿದೆ, ಭರವಸೆಯನ್ನು ಹುಡುಕುತ್ತಿರುವ ಪ್ರತಿಯೊಬ್ಬ ವಲಸಿಗರೊಂದಿಗೆ ನಾನೀದ್ದೇನೆ” ಎಂದು ಆಶ್ವಾಸನೆ ನೀಡಿದರು. “ವಲಸಿಗರಾಗಲಿ ಅಥವಾ ಸ್ಥಳೀಯರಾಗಲಿ — ಎಲ್ಲರೂ ಗೌರವ ಮತ್ತು ಆತ್ಮವಿಶ್ವಾಸದೊಂದಿಗೆ ಬದುಕುವಂತಹ ಸಮಾಜವನ್ನು ನಿರ್ಮಿಸಲು ಕಥೋಲಿಕ ಧರ್ಮಸಭೆ ಮಾಡುವ ಎಲ್ಲಾ ಪ್ರಯತ್ನಗಳಿಗೆ ಸರ್ಕಾರ ಸದಾ ಬೆಂಬಲ ನೀಡುತ್ತದೆ” ಎಂದು ಸಚಿವರು ಹೇಳಿದರು.
ವಲಸಿಗರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅನೇಕ ಸೇವಾನಾಯಕರು ತಮ್ಮ ಅಭಿಪ್ರಾಯ ಹಾಗೂ ಅನುಭವಗಳನ್ನು ಹಂಚಿಕೊಂಡರು. “ಯಾವ ವಲಸಿಗರಿಗೂ ತಾನು ಒಂಟಿ ಎಂದುಕೊಳ್ಳಬಾರದು, ಧರ್ಮಸಭೆಯು ಅವರ ತೊಂದರೆಗಳನ್ನು ಆಲಿಸುವ, ಅವರನ್ನು ರಕ್ಷಿಸುವ ಮತ್ತು ಸದಾ ವಲಸಿಗರ ಜೊತೆಯಿರುವ ಆಶ್ರಯವಾಗಬೇಕು” ಎಂದು ಸಿಸಿಬಿಐ ವಲಸಿಗರ ಆಯೋಗದ ಅಧ್ಯಕ್ಷರಾದ ಮಹಾಧರ್ಮಾಧ್ಯಕ್ಷರಾದ ವಿಕ್ಟರ್ ಹೆನ್ರಿ ಠಾಕೂರ್ ಅವರು ನುಡಿದರು.
ವಲಸಿಗರ ಸೇವೆಗೆಂದೇ ತಮ್ಮನ್ನು ಮುಡಿಪಾಗಿಸಿಕೊಂಡಿರುವ ಸ್ಕಲಾಬ್ರಿನಿಯನ್ ಸಭೆಯ ಮುಖ್ಯಸ್ಥರಾದ, ಸುಪೀರಿಯರ್ ಜನರಲ್ ವಂದನೀಯ ಗುರು. ಲಿಯೋನಿರ್ ಚಿಯಾರೆಲ್ಲೋ ಅವರು ಮಾತನಾಡಿ, “130ಕ್ಕೂ ಹೆಚ್ಚು ವರ್ಷಗಳಿಂದ ವಲಸಿಗರನ್ನು ಸಹಾನುಭೂತಿ ಮತ್ತು ವೃತ್ತಿಪರತೆಯಿಂದ ಬೆಂಬಲಿಸುವುದು ನಮ್ಮ ಸಭೆಯ ಮುಖ್ಯ ಧ್ಯೇಯವಾಗಿದೆ, ಈ ಕೇಂದ್ರವೂ ಸಹ, ಇದೇ ನಿಟ್ಟಿನಲ್ಲಿ ಯಾವೊಬ್ಬ ವಲಸಿಗರು ಅವಗಣಿತರಾಗದೆ, ನೆರವು ಪಡೆಯಲು ಶ್ರಮಿಸಲಿದೆ” ಎಂದು ಧೃಡೀಕರಿಸಿದರು.