ಬೆತ್ಲೆಹೇಮಿನಲ್ಲಿ ಎರಡು ವರ್ಷಗಳ ಬಳಿಕ ಮೊದಲ ಕ್ರಿಸ್ತಜಯಂತಿ ಆಚರಣೆ
ಈ ವರ್ಷ ಮೇಂಜರ್ ಚೌಕದಲ್ಲಿ, ಯೇಸು ಕ್ರಿಸ್ತರು ಜನಿಸಿದ ಸ್ಥಳದ ಎದುರು ಇರುವ ಪವಿತ್ರ ಜನನ ಧರ್ಮಕೇಂದ್ರದ ಮುಂಭಾಗದಲ್ಲಿ, 15 ಮೀಟರ್ ಎತ್ತರದ ಕ್ರಿಸ್ಮಸ್ ಮರ ಬೆಳಗಿದ್ದು, ನಗರಕ್ಕೆ ಹಬ್ಬದ ಬೆಳಕು ಮರಳಿದೆ.
ಗಾಜಾದಲ್ಲಿ ಲಕ್ಷಾಂತರ ಜನರು ಇನ್ನೂ ತಾತ್ಕಾಲಿಕ ಗುಡಾರಗಳಲ್ಲಿ ಚಳಿಗಾಲ ಎದುರಿಸುತ್ತಿದ್ದು, ಮೂಲಭೂತ ನೆರವಿಗೆ ತೀವ್ರ ಅಗತ್ಯವಿರುವ ಸಂದರ್ಭದಲ್ಲಿ, ಬೆತ್ಲೆಹೇಮಿನ ಈ ಆಚರಣೆಗಳು ದುಃಖದ ಮಧ್ಯೆ ಮೂಡುವ ಆಶೆಯ ಸಂಕೇತವಾಗಿವೆ.
ಲ್ಯಾಟಿನ್ ಕಥೋಲಿಕ ಸಭೆಯ ಪ್ರಧಾಾನ ಧರ್ಮಾಧ್ಯಕ್ಷರಾದ ಕಾರ್ಡಿನಲ್ ಪಿಯರ್ಬತ್ತಿಸ್ತಾ ಪಿಜ್ಜಬಲ್ಲಾ ಅವರು, ಗಾಜಾದ ಪವಿತ್ರ ಕುಟುಂಬ ಧರ್ಮಕೇಂದ್ರಕ್ಕೆ ಇತ್ತೀಚೆಗೆ ಭೇಟಿ ನೀಡಿ, ಅಲ್ಲಿನ ಭಕ್ತವಿಶ್ವಾಸಿಗಳಿಗೆ ಸಭೆಯ ಐಕ್ಯತೆ ಮತ್ತು ಬೆಂಬಲವನ್ನು ತಲುಪಿಸಿದ ಬಳಿಕ, ಯೆರೂಸಲೇಮಿನಿಂದ ಬೆತ್ಲೆಹೇಮಿಗೆ ಪಾರಂಪರಿಕ ಮೆರವಣಿಗೆಯ ಮೂಲಕ ಕ್ರಿಸ್ತಜಯಂತಿ ಆಚರಣೆಗಳಿಗೆ ಅಧಿಕೃತವಾಗಿ ಚಾಲನೆ ನೀಡಿದರು.
ಮೇಂಜರ್ ಚೌಕಕ್ಕೆ ಆಗಮಿಸಿದ ಸಂದರ್ಭದಲ್ಲಿ, ಕಾರ್ಡಿನಲ್ ಪಿಜ್ಜಬಲ್ಲಾ ಅವರು ಗಾಜಾದ ಸಣ್ಣ ಕ್ರೈಸ್ತ ಸಮುದಾಯದ ಶುಭಾಶಯಗಳನ್ನು ತಂದುಕೊಟ್ಟಿರುವುದಾಗಿ ತಿಳಿಸಿದರು. ಅವರೆಲ್ಲರಲ್ಲಿ ಬದುಕನ್ನು ಮರುನಿರ್ಮಿಸಬೇಕೆಂಬ ಬಲವಾದ ಆಸೆ ಇದೆ ಎಂದೂ ಅವರು ಹೇಳಿದರು. ಈ ಕ್ರಿಸ್ತಜಯಂತಿ ಬೆಳಕು ಮತ್ತು ಪುನರುತ್ಥಾನದ ಸಂಕೇತವಾಗಬೇಕೆಂದು ಅವರು ಆಶಿಸಿದರು.
ಬೆತ್ಲೆಹೇಮಿನಲ್ಲಿ ಕ್ರಿಸ್ತಜಯಂತಿ ಆಚರಣೆಗಳು ಪುನರಾರಂಭವಾಗಿರುವುದಕ್ಕೆ ಹಲವು ಆಯಾಮಗಳಿವೆ. ಒಂದು ಕಡೆ, ಅಮೆರಿಕದ ಬೆಂಬಲದೊಂದಿಗೆ ನಡೆದ ಶಾಂತಿ ಮುಂದಾಳತ್ವದಿಂದ ಘೋಷಿತವಾದ ವಿರಾಮವು ಪ್ಯಾಲೆಸ್ತೀನಿಯರಿಗೆ ಪುನರ್ ನಿರ್ಮಾಣದತ್ತ ಹೆಜ್ಜೆ ಇಡುವ ಅವಕಾಶ ನೀಡಬಹುದು ಎಂಬ ನಿರೀಕ್ಷೆ ಇದೆ. ಇನ್ನೊಂದು ಕಡೆ, ಕಳೆದ ಎರಡು ವರ್ಷಗಳಿಂದ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದ ಪ್ರವಾಸೋದ್ಯಮ ಮತ್ತೆ ಚೇತರಿಸಿಕೊಳ್ಳಬಹುದು ಎಂಬ ಭರವಸೆಯೂ ಮೂಡಿದೆ.
ಬೆತ್ಲೆಹೇಮಿನ ಸುಮಾರು 85 ಶೇಕಡಾ ಕುಟುಂಬಗಳು ಮೂಲಭೂತವಾಗಿ ಅಥವಾ ಪರೋಕ್ಷವಾಗಿ ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿವೆ. ಹೋಟೆಲ್ ಮಾಲೀಕರು, ಸಿಬ್ಬಂದಿಗಳು, ಧಾರ್ಮಿಕ ವಸ್ತುಗಳನ್ನು ಮಾರುವ ವ್ಯಾಪಾರಿಗಳು, ಟ್ಯಾಕ್ಸಿ ಚಾಲಕರು, ಉಪಹಾರ ಗೃಹಗಳ ಮಾಲೀಕರು ಹಾಗೂ ಪ್ರವಾಸ ಮಾರ್ಗದರ್ಶಕರು — ಇವರ ಜೀವನೋಪಾಯವು ಕಳೆದ ಎರಡು ವರ್ಷಗಳಲ್ಲಿ ಬಹುತೇಕ ನಾಶವಾಗಿದೆ.
ಪಶ್ಚಿಮ ತೀರದ ಇತರ ಪ್ರದೇಶಗಳಂತೆ, ಬೆತ್ಲೆಹೇಮೂ ಕೈಗಾರಿಕೆ, ವ್ಯಾಪಾರ ಅಥವಾ ಕೃಷಿಯಲ್ಲಿ ಬಲಿಷ್ಠ ನೆಲೆ ಇಲ್ಲದ ನಗರವಾಗಿದೆ. ಇದಕ್ಕೆ ಜೊತೆಗೆ, ಇಸ್ರಾಯೇಲಿ ಆಡಳಿತವು ತನ್ನ ಪ್ರದೇಶ ಹಾಗೂ ವಸಾಹತುಗಳಿಗೆ ಹೋಗುತ್ತಿದ್ದ ಹೆಚ್ಚಿನ ಪ್ಯಾಲೆಸ್ತೀನಿ ಕಾಲೋಚಿತ ಕಾರ್ಮಿಕರ ಪ್ರವೇಶ ಅನುಮತಿಗಳನ್ನು ರದ್ದುಗೊಳಿಸಿರುವುದು, ಹಾಗೂ ಪ್ಯಾಲೆಸ್ತೀನಿಯ ಉದ್ಯೋಗಿಗಳಿಗೆ ವೇತನವನ್ನು ಭಾಗಶಃ ಮಾತ್ರ ಪಾವತಿಸುವ ಪರಿಸ್ಥಿತಿ — ಈ ಎಲ್ಲಾ ಅಂಶಗಳು ಸಂಕಷ್ಟವನ್ನು ಇನ್ನಷ್ಟು ಗಂಭೀರಗೊಳಿಸಿವೆ. ಈ ಎಲ್ಲ ಸಂಕಟಗಳ ನಡುವೆಯೂ, ಜನರು ತಾಳ್ಮೆ ಮತ್ತು ಭರವಸೆಯನ್ನು ಕಳೆದುಕೊಳ್ಳದೆ ನಿಂತಿದ್ದಾರೆ.
ವ್ಯಾಟಿಕನ್ ರೇಡಿಯೊಗೆ ಮಾತನಾಡಿದ ಬೆತ್ಲೆಹೇಮಿನ ಮೇಯರ್ ಮಹರ್ ನಿಕೋಲಾ ಕನಾವತಿ ಅವರು, ಈ ವರ್ಷದ ಕ್ರಿಸ್ತಜಯಂತಿ ಆಚರಣೆಗಳು ದೀರ್ಘ ಮೌನದ ಬಳಿಕ ಆಶೆಯನ್ನು ಮರಳಿ ತರಲು ಉದ್ದೇಶಿತವಾಗಿವೆ ಎಂದು ಹೇಳಿದರು.
“ಎರಡು ವರ್ಷಗಳ ಮೌನದ ನಂತರ, ನಾವು ಮತ್ತೆ ಕ್ರಿಸ್ತಜಯಂತಿಯ ಆತ್ಮವನ್ನು ಜೀವಂತಗೊಳಿಸಿದ್ದೇವೆ,” ಎಂದು ಅವರು ಹೇಳಿದರು. “ಬೆತ್ಲೆಹೇಮಿನ ಜನರಿಗೆ ಉತ್ತಮ ನಾಳೆಯ ಮೇಲಿನ ಭರವಸೆ ಅಗತ್ಯವಿತ್ತು. ಅದನ್ನೇ ನಾವು ಮತ್ತೆ ಉಜ್ಜೀವನಗೊಳಿಸಿದ್ದೇವೆ.” ಈ ಸಂದೇಶ ಪ್ಯಾಲೆಸ್ತೀನಿಯರಿಗೆ ಮಾತ್ರವಲ್ಲ, ಸಂಪೂರ್ಣ ಜಗತ್ತಿಗೆ ಎಂಬುದನ್ನೂ ಅವರು ಸ್ಪಷ್ಟಪಡಿಸಿದರು
“ಪ್ಯಾಲೆಸ್ತೀನಿ ಜನರು ಶಾಂತಿಗೆ ಸಿದ್ಧರಾಗಿದ್ದಾರೆ. ಬೆತ್ಲೆಹೇಮ್ ಸುರಕ್ಷಿತವಾಗಿದೆ. ಹೋಟೆಲುಗಳು ತೆರೆದಿವೆ. ಎಲ್ಲರನ್ನು ಆತಿಥ್ಯದಿಂದ ಸ್ವಾಗತಿಸಲು ನಾವು ಸಿದ್ಧ.”ಮೇಯರ್ ಕನಾವತಿ ಅವರು ಮತ್ತೊಂದು “ಈ ಹಬ್ಬವು ಕ್ರೈಸ್ತರಿಗೆ ಮಾತ್ರ ಸೀಮಿತವಲ್ಲ. “ಇದು ಎಲ್ಲಾ ಪ್ಯಾಲೆಸ್ತೀನಿಯರ ಹಬ್ಬದಂತಿದೆ — ಕ್ರೈಸ್ತರು, ಮುಸ್ಲಿಮರು ಮತ್ತು ಸಮಾರಿಯರು ಒಟ್ಟಾಗಿ ಆಚರಿಸುತ್ತಿದ್ದಾರೆ. ನಾವು ಒಂದೇ ಜನರು. ನಾವು ಶಾಂತಿಯನ್ನು ಪ್ರೀತಿಸುತ್ತೇವೆ ಮತ್ತು ನ್ಯಾಯಯುತ, ಶಾಶ್ವತ ಶಾಂತಿಗೆ ಸಿದ್ಧರಾಗಿದ್ದೇವೆ” ಎಂಬ ಮಹತ್ವದ ಅಂಶವನ್ನು ಒತ್ತಿ ಹೇಳಿದರು.