ಹುಡುಕಿ

Christmas celebrations at the Church of the Nativity, in Bethlehem Christmas celebrations at the Church of the Nativity, in Bethlehem 

ಭರವಸೆ ಮತ್ತು ಬದಲಾವಣೆ: ಹೈಟಿಯ ಧರ್ಮಾಧ್ಯಕ್ಷರ ಕ್ರಿಸ್ತಜಯಂತಿ ಸಂದೇಶ

ಡಿಸೆಂಬರ್ 8ರಂದು ಹೈಟಿ ಧಾರ್ಮಿಕ ಸಮಾವೇಶ ಬಿಡುಗಡೆ ಮಾಡಿದ ಸಂದೇಶದಲ್ಲಿ ಕ್ರಿಸ್ತ ಜನನ ಸರ್ವರಿಗೂ ಭರವಸೆಯ ಕಿರಣ ಎಂದು ಹೇಳಿದೆ. ಮುಂಬರುವ ಚುನಾವಣೆಯಲ್ಲಿ ಪಕ್ಷೀಯ ಆಸಕ್ತಿಗಳನ್ನು ಮೀರಿ ಮುನ್ನಡೆಯಲು ಕರೆ ನೀಡಿದೆ.

ಕ್ರಿಸ್ತಜಯಂತಿಯ ಅಂಗವಾಗಿ ಅಂಧಕಾರದಲ್ಲಿ ಕ್ರಿಸ್ತನ ಬೆಳಕಿನ ಹೊಳಪು ಎಂಬ ಶೀರ್ಷಿಕೆಯಡಿಯಲ್ಲಿ, ಹೈಟಿ ಧಾರ್ಮಿಕ ಸಮಾವೇಶ ಪ್ರಕಟಿಸಿರುವ ಸಂದೇಶದಲ್ಲಿ, ಧರ್ಮಾಧ್ಯಕ್ಷರುಗಳು  ,ಹೈಟಿಯ ಜನತೆ ನೋವು ಮತ್ತು ಅನಿಶ್ಚಿತತೆಯ ಕತ್ತಲಲ್ಲಿ ಪಯಣಿಸುತ್ತಿದೆ ಎಂದು ತಿಳಿಸಿದ್ದಾರೆ. ಆದರೂ, ಹೈಟಿಯ ಜನರು "ಅನಿರೀಕ್ಷಿತ ಸಾಧನೆಗಳಿಗೆ" ಸಮರ್ಥರಾಗಿದ್ದಾರೆ ಎಂದು  ಸಂದೇಶವು ಸ್ಪಷ್ಟಪಡಿಸುತ್ತದೆ.

ಡಿಸೆಂಬರ್ 8 ರಂದು ಬಿಡುಗಡೆಯಾದ ಸಂದೇಶವು ದಾರಿದ್ರ್ಯದ ನೆರಳಲ್ಲಿ ಜನಿಸಿದ ಯೇಸುಕ್ರಿಸ್ತರ ಜೀವನವನ್ನು ಹೈಟಿಯ ಜನರ ವಾಸ್ತವಿಕ ಜೀವನಕ್ಕೆ ಹೋಲಿಸಿದೆ.ಈ ಭರವಸೆಯ ಜುಬಿಲಿ ವರ್ಷದಲ್ಲಿ ಕ್ರಿಸ್ತಜನನವು ಹೈಟಿಯ ಜನತೆಗೆ ಆಶಾಕಿರಣವಾಗಲಿ ಎಂದು ಆಶಿಸಿದೆ. ಆದಾಗ್ಯೂ, ಈ ಭರವಸೆಯನ್ನು  ಸಮಸ್ಯೆಗಳಿಂದ ದೂರ ಸರಿಸುವ ಸಾಂತ್ವನ ಎಂದೂ,  ನಿರೀಕ್ಷೆಯ ಕಾಲ್ಪನಿಕ ದೃಷ್ಟಿ ಎಂದೂ ವರ್ಗೀಕರಿಸದೆ,ಕ್ರೈಸ್ತೀಯ ಭರವಸೆಯು ಜವಾಬ್ದಾರಿಯುತ, ದೃಢವಾದ ಕ್ರಮಕ್ಕೆ ಒಯ್ಯುವ ಶಕ್ತಿ ಎಂದು ವ್ಯಾಖ್ಯಾನಿಸಿದೆ.

ಹೈಟಿ ವಿಶ್ವಸಂಸ್ಥೆಯ ಸಂಯೋಜಿತ ಕಚೇರಿ ವರದಿ ಹೇಳುವಂತೆ ಇದೇ ವರ್ಷದ ಜನವರಿ ಮತ್ತು ಸೆಪ್ಟೆಂಬರ್ ಅವಧಿಯಲ್ಲಿ 4388 ಜನರು ಗುಂಪು ಘರ್ಷಣೆಯಿಂದ ಪ್ರಾಣ ಕಳೆದುಕೊಂಡಿದ್ದಾರೆ.ಸುಮಾರು 1.4 ಮಿಲಿಯನ್ ಜನರು ಸ್ಥಳಾಂತರಗೊಂಡಿದ್ದಾರೆ ಮತ್ತು ಸುಮಾರು 12 ಮಿಲಿಯನ್ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರು ತೀವ್ರ ಆಹಾರ ಅಭದ್ರತೆಯನ್ನು ಎದುರಿಸುತ್ತಿದ್ದಾರೆ.

ವೃತ್ತಿ, ವಯಸ್ಸು ಯಾವುದಾದರೂ ಇರಲಿ ಪ್ರತಿಯೊಬ್ಬ ನಾಗರಿಕನೂ  ಶಾಂತಿ ನಿರ್ಮಾತೃಗಳಾಗುವ ತನ್ನ ಕರ್ತವ್ಯವನ್ನು  ನಿರ್ವಹಿಸಬೇಕೆಂದು ಎಲ್ಲಾ ಧರ್ಮಾಧ್ಯರು ಪ್ರೋತ್ಸಾಹಿಸಿದ್ದಾರೆ.

2026ರ ವಿಶ್ವಕಪ್ ಅರ್ಹತೆಯನ್ನು ಪಡೆದ ದೇಶದ ಫುಟ್‌ಬಾಲ್ ತಂಡವನ್ನು ಶ್ಲಾಘಿಸಿದ ಧರ್ಮಾಧ್ಯಕ್ಷರು ಈ ಸಾಧನೆ  ರಾಷ್ಟ್ರೀಯ ಮನೋಭಾವವನ್ನು ಮತ್ತೆ ಎಬ್ಬಿಸುವ ಸಂಕೇತ. ವಿಭಜನೆ, ಹಿಂಸಾಚಾರ, ನಿರಾಶೆಗಳ ನಡುವೆ ಕೂಡ ಹೈಟಿ ಜನರು ಒಂದಾಗಿ ನಿಲ್ಲುವ ಶಕ್ತಿ ಹೊಂದಿದ್ದಾರೆ ಎಂಬುದನ್ನು ಈ ಸಾಧನೆ ಸ್ಪಷ್ಟಪಡಿಸುತ್ತದೆ ಎಂದು ತಿಳಿಸಿದ್ದಾರೆ.

ಭವಿಷ್ಯ ಬದಲಿಸಲು ಚುನಾವಣೆಗಳಿಗೆ ಹೊಸ ದಿಕ್ಕಿನ ಅಗತ್ಯವಿದೆ: ಹೈಟಿ ಬಿಷಪ್‌ಗಳು

ಹೈಟಿಯಲ್ಲಿನ ನಿರಂತರ ಹಿಂಸಾಚಾರ, ಸಂಸ್ಥೆಗಳ ಕಾರ್ಯಕ್ಷಮತೆಯ ಕುಸಿತ, ಮತ್ತು ಗಂಭೀರ ಭದ್ರತಾ ತುರ್ತುಪರಿಸ್ಥಿತಿಗಳ ಒತ್ತಡಗಳ ನಡುವೆ, ದೇಶದ ರಾಜಕೀಯ ಮತ್ತು ಸಾಮಾಜಿಕ ವಲಯಗಳು ಪಕ್ಷಪಾತದ ಗಡಿಗಳನ್ನು ಮೀರಿ ದೇಶದ ಸಮಗ್ರ ಹಿತಕ್ಕಾಗಿ ಒಂದಾಗಬೇಕು ಎಂದು ಹೈಟಿ ಧಾರ್ಮಿಕ ಸಮಾವೇಶ ತನ್ನ ಕ್ರಿಸ್ಮಸ್‌ ಸಂದೇಶದಲ್ಲಿ ಮನದಟ್ಟು ಮಾಡಿದೆ.

2026ರ ಫೆಬ್ರವರಿ 7ರಂದು ನಡೆಯಲಿರುವ ಚುನಾವಣೆಗಳ ಹಿನ್ನಲೆಯಲ್ಲಿ, 1987ರ ಸಂವಿಧಾನವೇ “ಕಾನೂನುಗಳ ಮೂಲಕಾನೂನು” ಎಂದು ಉಲ್ಲೇಖಿಸಿದೆ. ಇದೇ ದಿನವು ತಾತ್ಕಾಲಿಕ ಅಧ್ಯಕ್ಷೀಯ ಪರಿಷತ್ತಿನ ಅಧಿಕಾರಾವಧಿ ಅಂತ್ಯಗೊಳ್ಳುವ ದಿನವಾಗಿರುವುದರಿಂದ, ಅರಾಜಕತೆ ತಪ್ಪಿಸಲು ಸಂವಿಧಾನವೇ ಮಾರ್ಗದರ್ಶಕವಾಗಿರಬೇಕು ಎಂದು ಧರ್ಮಾಧ್ಯಕ್ಷರು ಸೂಚಿಸಿದ್ದಾರೆ. ಚುನಾವಣೆಗಳು “ಪ್ರಜಾಪ್ರಭುತ್ವ, ಸಮಾಗಮ ಮತ್ತು ಪಾರದರ್ಶಕತೆ” ಎಂಬ ಮೌಲ್ಯಗಳನ್ನು ಹೊಂದಬೇಕಾದರೆ, ದೇಶದಲ್ಲಿ ನಿಜವಾದ ಭದ್ರತಾ ವಾತಾವರಣ ನಿರ್ಮಾಣವಾಗಬೇಕು. ಆ ಹೊಣೆ ರಾಷ್ಟ್ರೀಯ ಅಧಿಕಾರಿಗಳ ಮೇಲಿದೆ ಎಂದು ಧರ್ಮಾಧ್ಯಕ್ಷರುಗಳು ಒತ್ತಿ ಹೇಳಿದ್ದಾರೆ.

ಹೈಟಿ ಮುಂದಕ್ಕೆ ಸಾಗಲು ಸದಾಚಾರಿ, ಸೇವಾಭಿಮಾನಿ, ಸ್ವಾರ್ಥರಹಿತ ಮತ್ತು ವೈಯಕ್ತಿಕ ಲಾಭಗಳ ತ್ಯಾಗಕ್ಕೆ ಧೈರ್ಯವಿರುವ ನಾಯಕರು ಬೇಕು. ದೇಶಕ್ಕೆ ಭ್ರಷ್ಟಾಚಾರದ ವಿರುದ್ಧ ಹೋರಾಡುವ, ಕುತಂತ್ರಗಳಿಗೆ ಬಲಿಯಾಗದ ಮತ್ತು ಎಲ್ಲರ ಸರ್ವತೋಮುಖ ಅಭಿವೃದ್ದಿಗಾಗಿ ದುಡಿಯುವ ದಿಟ್ಟ ನಾಯಕರ ಅಗತ್ಯವಿದೆ ಎಂದು ಹೈಟಿಯ ಧರ್ಮಾಧ್ಯಕ್ಷರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ

ಸಂದೇಶದ ಅಂತ್ಯದಲ್ಲಿ, ಶಾಂತಿಯ ಪ್ರಭು ಕ್ರಿಸ್ತ ಯೇಸುವಿನ ರಕ್ಷಣೆಗೂ, ಮಾತೆ  ಮರಿಯಳ ಬಿನ್ನಹಕ್ಕೂ ದೇಶವನ್ನು ಒಪ್ಪಿಸಿಕೊಡುತ್ತಾ, 2026ಕ್ಕೆ ದಾರಿ ಮಾಡಿಕೊಡುವ ಈ ಕ್ರಿಸ್ತ ಜಯಂತಿಯ ಕಾಲವು ಹೊಸ ಭರವಸೆಯ ಕಿಡಿ ಹಚ್ಚಲಿ ಎಂಬ ಆತ್ಮೀಯ ಆಶೆಯನ್ನು ಧರ್ಮಾಧ್ಯಕ್ಷರುಗಳು ವ್ಯಕ್ತಪಡಿಸಿದ್ದಾರೆ. ಹೈಟಿಯ ರಾಜಧಾನಿ ಪೋರ್ಟ್-ಔ-ಪ್ರಿನ್ಸ್‌ನಲ್ಲಿ ಈ ಸಂದೇಶಕ್ಕೆ ಸಹಿ ಹಾಕಲಾಯಿತು. ಹೈಟಿ ಧಾರ್ಮಿಕ ಸಮಾವೇಶದ ಸಭೆಯಲ್ಲಿ ಸರ್ವ ಸದಸ್ಯರೂ ಒಗ್ಗೂಡಿದ್ದರು.

10 ಡಿಸೆಂಬರ್ 2025, 16:39