ಕ್ರಿಸ್ತಜಯಂತಿಗೆ ಮುನ್ನ ಗಾಜಾಗೆ ಆಗಮಿಸಿದ ಕಾರ್ಡಿನಲ್ ಪಿಜ್ಜಬಲ್ಲಾ
ಈ ಭೇಟಿ, ಸಂಕಷ್ಟಗಳ ನಡುವೆ ಬದುಕುತ್ತಿರುವ ಭಕ್ತವಿಶ್ವಾಸಿಗಳಿಗೆ ಆಶೆ, ಏಕಾತ್ಮತೆ ಮತ್ತು ಪ್ರಾರ್ಥನೆಯ ಮೂಲಕ ಜೊತೆಯಾಗಿರುವುದನ್ನು ಸೂಚಿಸುತ್ತದೆ. ಈ ವರ್ಷವೂ, ಹಿಂದಿನ ವರ್ಷದಂತೆಯೇ, ಕ್ರಿಸ್ತಜಯಂತಿಯ ಸಂದರ್ಭದಲ್ಲಿ ಗಾಜಾದ ಭಕ್ತವಿಶ್ವಾಸಿಗಳಿಗೆ ಕಾರ್ಡಿನಲ್ ಪಿಜ್ಜಬಲ್ಲಾ ಅವರ ಉಪಸ್ಥಿತಿ ಧೈರ್ಯ ಮತ್ತು ಸಾಂತ್ವನ ನೀಡುವ ಸಂಕೇತವಾಗಿದೆ.
ಕಾರ್ಡಿನಲ್ ಪಿಜ್ಜಬಲ್ಲಾ ಅವರು ತಮ್ಮ ಸಹಾಯಕ ಧರ್ಮಾಧ್ಯಕ್ಷರಾದ ಮೋನ್ಸಿಗ್ನರ್ ವಿಲಿಯಂ ಶೊಮಾಲಿ ಹಾಗೂ ಸಣ್ಣ ಪ್ರತಿನಿಧಿ ತಂಡದೊಂದಿಗೆ ಗಾಜಾಗೆ ಆಗಮಿಸಿದ್ದಾರೆ.
ಲ್ಯಾಟಿನ್ ಕಥೋಲಿಕ ಸಭೆಯ ಪ್ರಧಾನ ಧರ್ಮಾಕ್ಷೇತ್ರ ಪ್ರಕಟಿಸಿದ ಪ್ರಕಟಣೆಯಂತೆ, ಕಾರ್ಡಿನಲ್ ಪಿಜ್ಜಬಲ್ಲಾ ಅವರು ಪವಿತ್ರ ಕುಟುಂಬ ಧರ್ಮಕೇಂದ್ರದಲ್ಲಿ ಧಾರ್ಮಿಕ ಭೇಟಿ ನಡೆಸುತ್ತಿದ್ದಾರೆ. ಭಾನುವಾರ ಅವರು ಧರ್ಮಕೇಂದ್ರದಲ್ಲಿ ನಡೆಯುವ ಕ್ರಿಸ್ತಜಯಂತಿ ಬಲಿಪೂಜೆಯನ್ ನೇತೃತ್ವ ವಹಿಸಿ ಆಚರಿಸಲಿದ್ದಾರೆ.
ಈ ಭೇಟಿಯ ಸಂದರ್ಭದಲ್ಲಿ, ಕಾರ್ಡಿನಲ್ ಪಿಜ್ಜಬಲ್ಲಾ ಅವರು ಧರ್ಮಕೇಂದ್ರದ ಇತ್ತೀಚಿನ ಸ್ಥಿತಿ, ಮಾನವೀಯ ನೆರವು ಕಾರ್ಯಗಳು, ಪರಿಹಾರ ಕಾರ್ಯಚಟುವಟಿಕೆಗಳು ಹಾಗೂ ಸಮೀಪ ಭವಿಷ್ಯದ ಸಾಧ್ಯತೆಗಳನ್ನು ಪರಿಶೀಲಿಸಲಿದ್ದಾರೆ. ಅದೇ ವೇಳೆ, ಅವರು ಸ್ಥಳೀಯ ಗುರುಗಳು ಹಾಗೂ ಭಕ್ತವಿಶ್ವಾಸಿಗಳನ್ನು ಭೇಟಿಯಾಗಿ, ಸಮುದಾಯದ ಅಗತ್ಯಗಳು ಮತ್ತು ಈಗಾಗಲೇ ನಡೆಯುತ್ತಿರುವ ಸಹಾಯ ಯೋಜನೆಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದಾಗಿ ತಿಳಿಸಲಾಗಿದೆ.
ಲ್ಯಾಟಿನ್ ಕಥೋಲಿಕ ಸಭೆಯ ಪ್ರಧಾನ ಧರ್ಮಾಕ್ಷೇತ್ರದ ಪ್ರಕಾರ,ಈ ಭೇಟಿ “ನಿರಂತರ ಸಂಕಷ್ಟಗಳನ್ನು ಎದುರಿಸುತ್ತಿರುವ ಸಮುದಾಯದಲ್ಲಿ ಕ್ರಿಸ್ತಜಯಂತಿ ಆಚರಣೆಗಳಿಗೆ ಆರಂಭವನ್ನು ಸೂಚಿಸುವುದರ ಜೊತೆಗೆ, ಗಾಜಾದ ಪವಿತ್ರ ಕುಟುಂಬ ಧರ್ಮಕೇಂದ್ರ ಮತ್ತು ಜೆ ರುಸಲೇಮಿನ ಲ್ಯಾಟಿನ್ ಕಥೋಲಿಕ ಸಭೆಯ ನಡುವೆ ಇರುವ ಗಟ್ಟಿಯಾದ ಸಂಬಂಧವನ್ನು ಮತ್ತೊಮ್ಮೆ ದೃಢಪಡಿಸುತ್ತದೆ.”