ಫಿಲಿಪೈನ್ಸ್: ಪ್ರಯಾಣಿಕರ ಸುರಕ್ಷತೆಗೆ ಕಥೋಲಿಕಾ ಯುವಜನರಿಂದ ಸೈನೋಡಲ್ ಪಯಣ
ಈ ವಿದ್ಯಾರ್ಥಿ ನೇತೃತ್ವದ ಅಭಿಯಾನವು, ಸೈನೋಡಾಲಿಟಿಯ ಸೈನೋಡ್ (Synod on Synodality) ನಲ್ಲಿ ಚರ್ಚಿಸಲಾದ ಸಾಮಾಜಿಕ ಸಮಸ್ಯೆಗಳಿಗೆ ಸ್ಪಷ್ಟವಾದ, ಕಾರ್ಯೋಚಿತ ಉತ್ತರಗಳನ್ನು ರೂಪಿಸುವ ಉದ್ದೇಶ ಹೊಂದಿದೆ. ಶಿಕ್ಷಣ, ಸಾಮಾಜಿಕ ನ್ಯಾಯ, ಸಮುದಾಯ ಅಭಿವೃದ್ಧಿ ಹಾಗೂ ಪರಿಸರ ಚಿಂತನೆಗಳು ಈ ಕಾರ್ಯಕ್ರಮದ ಪ್ರಮುಖ ವಿಷಯಗಳಾಗಿದ್ದವು.
ಪಾಸಾಹೀರೋ ಅಭಿಯಾನದ ಹಿಂದೆ ಇರುವ ವಿದ್ಯಾರ್ಥಿಗಳಲ್ಲಿ ಒಬ್ಬರಾದ ಗ್ಯಾಬ್ ಎಸಿಜಾನ್ ಮಾತನಾಡುತ್ತಾ, “ಈ ಅನುದಾನ ನಮ್ಮ ಪಾಲಿಗೆ ಆಶೀರ್ವಾದವೂ ಹೌದು, ಹೊಣೆಗಾರಿಕೆಯೂ ಹೌದು. ಹಂಚಿಕೊಳ್ಳಬೇಕಾದ ಆಶೀರ್ವಾದ, ಹೊತ್ತುಕೊಳ್ಳಬೇಕಾದ ಜವಾಬ್ದಾರಿ. ಆದರೂ, ಈ ಅನುದಾನ ನಮ್ಮ ತಂಡಕ್ಕೆ ದೊಡ್ಡ ಮೈಲಿಗಲ್ಲಾಗಿದೆ. ಇದರಿಂದ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂಬ ಭಾವನೆ ಹೊಂದುವಂತೆ ಮಾಡುವ ನಮ್ಮ ಹೋರಾಟಕ್ಕೆ ಬಲ ಸಿಕ್ಕಿದೆ,” ಎಂದರು.
ಸೈನೋಡಲ್ ಚಿಂತನೆಯಿಂದ ಹುಟ್ಟಿದ ಯೋಜನೆ ಮಿಷನ್ ಪಾಸಿಬಲ್ ಫಿಲಿಪೈನ್ಸ್ ಕಾರ್ಯಕ್ರಮವನ್ನು ಅಸಂಪ್ಷನ್ ಅಂಟಿಪೊಲೊ ಮತ್ತು ಲಿಕಾಸ್ ನ್ಯೂಸ್ (LiCAS News) ಸಹಯೋಗದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವು ಹ್ಯಾಕಥಾನ್ (Hackathon) ಮಾದರಿಯಲ್ಲಿ ನಡೆದಿದ್ದು, ವಿದ್ಯಾರ್ಥಿಗಳು, ಮಾರ್ಗದರ್ಶಕರು ಮತ್ತು ತರಬೇತುದಾರರು ಒಂದಾಗಿ ವಾರಾಂತ್ಯದ ಅವಧಿಯಲ್ಲಿ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕಾರ್ಯದಲ್ಲಿ ತೊಡಗಿದ್ದರು.
ಫಿಲಿಪೈನ್ಸ್‌ನ ಹನ್ನೆರಡು ಶಾಲೆಗಳ ವಿದ್ಯಾರ್ಥಿಗಳು ಹ್ಯಾಕರ್‌ಗಳು ಎಂಬ ಪಾತ್ರದಲ್ಲಿ ತಂಡಗಳಾಗಿ ಭಾಗವಹಿಸಿದ್ದರು. ಸೈನೋಡಲ್ ಪ್ರಕ್ರಿಯೆಯಲ್ಲಿ ಕೇಳಿಬಂದ ಜನರ ಧ್ವನಿಯನ್ನು ಆಧಾರವಾಗಿ ತೆಗೆದುಕೊಂಡು, ಅವರು ನೈಜ ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರ ರೂಪಿಸಿದರು.
ಪಾಸಾಹೀರೋ ಅಭಿಯಾನದ ತಂತ್ರಜ್ಞಾನ
ಪಾಸಾಹೀರೋ ಅಭಿಯಾನದ ಕೇಂದ್ರಬಿಂದುವಾಗಿರುವುದು ಕಡಿಮೆ ವೆಚ್ಚದ ಸೇಫ್ಟಿಪಿನ್ (SafetyPin) ಸಾಧನ. ಈ ಸಾಧನವನ್ನು ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವವರು ತಮ್ಮ ಬಳಿ ಇಟ್ಟುಕೊಳ್ಳಬಹುದು. ಅಪಾಯಕರ ಅಥವಾ ಅಸುರಕ್ಷಿತ ಪರಿಸ್ಥಿತಿ ಎದುರಾದಾಗ, ಈ ಸಾಧನದ ಮೂಲಕ ಇತರರಿಗೆ ತಕ್ಷಣ ಎಚ್ಚರಿಕೆ ನೀಡುವ ವ್ಯವಸ್ಥೆಯನ್ನು ಈ ಅಭಿಯಾನ ರೂಪಿಸಿದೆ.
ಇದು ಕೇವಲ ತಂತ್ರಜ್ಞಾನ ಆಧಾರಿತ ಪರಿಹಾರವಲ್ಲ. ಇದು ಪರಸ್ಪರ ಜವಾಬ್ದಾರಿ, ಸಮುದಾಯಭಾವ ಮತ್ತು ಒಬ್ಬರ ಸುರಕ್ಷೆಗೆ ಮತ್ತೊಬ್ಬನು ನಿಲ್ಲುವ ಮನೋಭಾವವನ್ನು ಬೆಳೆಸುವ ಪ್ರಯತ್ನವಾಗಿದೆ.
ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುವುದು ಸವಾಲಿನಾಯಕ ಎಂದು ವಿದ್ಯಾರ್ಥಿನಿ ಲೆಕ್ಸಿ ಬೋಕರ್ ಹೇಳಿದರು.
“ಯೋಜನೆಯನ್ನು ನೈಜವಾಗಿ ಜಾರಿಗೆ ತರುವುದು ಸುಲಭವಲ್ಲ. ಅನೇಕ ಸವಾಲುಗಳು ಎದುರಾಗುತ್ತವೆ ಎಂಬುದು ಗೊತ್ತಿದೆ. ಆದರೂ, ನಾವು ನೀಡಿದ ವಾಗ್ದಾನವನ್ನು ನೆರವೇರಿಸಬೇಕೆಂಬ ಒತ್ತಡವೂ ಇದೆ. ಆದರೆ ಎಲ್ಲರಿಗೂ ಸುರಕ್ಷಿತ ಮತ್ತು ಒಳಗೊಳ್ಳುವ ಪ್ರಯಾಣಿಕರ ಜಾಗ ನಿರ್ಮಿಸಬೇಕೆಂಬ ಉದ್ದೇಶ ನಮಗೆ ಉತ್ಸಾಹ ನೀಡುತ್ತದೆ,” ಎಂದರು.
ತಂಡದ ಮತ್ತೊಬ್ಬ ಸದಸ್ಯೆ ಇಯಾನೆ ಲಾಡೊರೆಸ್ ಮಾತನಾಡಿ, “ಅನುದಾನ ಬಂದ ನಂತರ ನನಗೆ ಉತ್ಸಾಹವೂ ಆತಂಕವೂ ಒಂದೇ ಸಮಯದಲ್ಲಿ ಉಂಟಾಯಿತು. ನಮ್ಮ ಕಲ್ಪನೆ ನೈಜವಾಗುತ್ತಿರುವುದು ಅದ್ಭುತವಾದ ಅನುಭವ. ಜನರು ನಮ್ಮ ಉತ್ಪನ್ನವನ್ನು ಬಳಸಲು ಇಚ್ಛಿಸುತ್ತಿದ್ದಾರೆ ಎಂಬ ಮಾತುಗಳು ನನಗೆ ಇನ್ನಷ್ಟು ಪ್ರೇರಣೆ ನೀಡುತ್ತಿವೆ,” ಎಂದರು.
ಧರ್ಮಸಭೆ ಮತ್ತು ಶಿಕ್ಷಣದ ಪಾತ್ರ
ಅಸಂಪ್ಷನ್ ಅಂಟಿಪೊಲೊ ಶಾಲೆಯ ನಿರ್ದೇಶಕಿ ಗ್ರೇಸ್ ಮಾಗ್ಟಾಸ್ ಮಾತನಾಡಿ, “ಇದು ಉತ್ಸಾಹಕರವೂ ಹೌದು, ಭಯ ಹುಟ್ಟಿಸುವುದೂ ಹೌದು. ಆದರೆ ಈ ಕಾರ್ಯಕ್ರಮ ನಮ್ಮ ವಿದ್ಯಾರ್ಥಿಗಳಿಗೆ ಧೈರ್ಯವಂತ ಕಲ್ಪನೆಗಳನ್ನು ನೈಜ ಸಾಮಾಜಿಕ ಬದಲಾವಣೆಯಾಗಿ ರೂಪಿಸುವ ಅಪರೂಪದ ಅವಕಾಶ ನೀಡಿದೆ. ಪಾಸಾಹೀರೋ ಅಭಿಯಾನವನ್ನು ಕಾರ್ಯಗತಗೊಳಿಸಲು ನಾವು ಕಾಯುತ್ತಿದ್ದೇವೆ,” ಎಂದರು.
ಲಿಕಾಸ್ ನ್ಯೂಸ್‌ನ ಮಿಷನ್ ಪಾಸಿಬಲ್ ಯೋಜನಾ ಮುಖ್ಯಸ್ಥೆ ಜೂನ್ ನತ್ತಾ ನುಚ್ಸುವಾನ್ ಮಾತನಾಡಿ, “ಹ್ಯಾಕಥಾನ್ ವಾರಾಂತ್ಯವು ಅತ್ಯಂತ ಪ್ರೇರಣಾದಾಯಕ ಆರಂಭವಾಗಿತ್ತು. ಆದರೆ ಇದು ಕೇವಲ ಆರಂಭ. ಈ ವಿದ್ಯಾರ್ಥಿಗಳು ತಮ್ಮ ಸಮುದಾಯದಲ್ಲಿ ನೈಜ ಬದಲಾವಣೆ ತರುವ ದೀರ್ಘ ಪಯಣಕ್ಕೆ ಈಗ ಕಾಲಿಟ್ಟಿದ್ದಾರೆ,” ಎಂದರು.
ಸೈನೋಡಲ್ ಧರ್ಮಸಭೆಯ ಜೀವಂತ ಸಾಕ್ಷಿ
ಈ ಅಭಿಯಾನವು ಕಥೋಲಿಕ ಧರ್ಮಸಭೆ (Church) ಯುವಜನರನ್ನು ಕೇವಲ ಕೇಳುವವರಾಗಿ ಅಲ್ಲ, ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯಕರ್ತರಾಗಿ ರೂಪಿಸುವ ಸೈನೋಡಲ್ ದೃಷ್ಟಿಕೋನದ ಸ್ಪಷ್ಟ ಸಾಕ್ಷಿಯಾಗಿದೆ. ಯುವಜನರು ತಮ್ಮ ಸಮುದಾಯದ ಧ್ವನಿಯನ್ನು ಕೇಳಿ, ಅದಕ್ಕೆ ಪ್ರಾಯೋಗಿಕ ಉತ್ತರ ನೀಡುವ ಈ ಪ್ರಯತ್ನವು ಧರ್ಮಸಭೆಯ ಜೀವಂತ ಕಾರ್ಯವನ್ನು ಪ್ರತಿಬಿಂಬಿಸುತ್ತದೆ.