ಹುಡುಕಿ

FILE PHOTO: A general view of Al-Aqsa compound FILE PHOTO: A general view of Al-Aqsa compound 

ಶಾಂತಿ ಮಾಯೆಯಲ್ಲ ಅದು ಜೀವನದ ಆಯ್ಕೆ: ಪವಿತ್ರ ಜೆರುಸಲೇಮಿನಿಂದ ಸಂದೇಶ

ಹಿಂಸೆ ಮರಣ ಮತ್ತು ನಾಶವನ್ನು ಹುಟ್ಟಿಸುತ್ತದೆ; ಪ್ರತೀಕಾರ ದ್ವೇಷ ಮತ್ತು ವೇದನೆಯನ್ನು ಪೋಷಿಸುತ್ತದೆ. ಗಾಜಾ ಹಾಗೂ ಯುದ್ಧದಿಂದ ಛಿದ್ರಗೊಂಡ ಇತರ ಪ್ರದೇಶಗಳಿಂದ ಬರುತ್ತಿರುವ ಸುದ್ದಿಗಳು ಮತ್ತು ಚಿತ್ರಗಳು, ನಿರಪರಾಧಿ ಹಾಗೂ ನಿರಾಯುಧ ಜನರು ಅನುಭವಿಸುತ್ತಿರುವ ದೈಹಿಕ ಮತ್ತು ನೈತಿಕ ಯಾತನೆಯನ್ನು ಸ್ಪಷ್ಟವಾಗಿ ಹೊರಹಾಕುತ್ತಿವೆ.

ಪವಿತ್ರ ಕ್ರಿಸ್ತಜಯಂತಿ ಸಮೀಪಿಸುತ್ತಿದೆ. ಆಗಮನ ಕಾಲವು ನಮಗೆ ಶಾಂತಿಯನ್ನು ತರುವ ಕರ್ತನ ಆಗಮನಕ್ಕೆ ಮನಸ್ಸನ್ನು ಸಿದ್ಧಗೊಳಿಸುವ ಕಾಲವಾಗಿದೆ. ಪವಿತ್ರ ಭೂಮಿಯಲ್ಲಿ ಶಾಂತಿಯ ಕುರಿತಾಗಿ ಆಳವಾದ ನಿರೀಕ್ಷೆ ಇದೆ. ಆ ಶಾಂತಿಯನ್ನು ಸಾಧಿಸುವ ಬಯಕೆ ಇಂದು ಗಂಭೀರ ಉತ್ತರಗಳನ್ನು ಬೇಡುತ್ತದೆ.

ಕಳೆದ ಹಲವು ವರ್ಷಗಳಿಂದ, ವಿಶೇಷವಾಗಿ ಅಕ್ಟೋಬರ್ 7ರ ಬಳಿಕ, ಮರಣ ಮತ್ತು ವಿನಾಶವನ್ನು ಹುಟ್ಟುಹಾಕುವ ಹಿಂಸೆಯ ಕುರಿತು ನಾವು ಮಾತನಾಡುತ್ತಾ, ಬರೆಯುತ್ತಾ ಬಂದಿದ್ದೇವೆ. ಪ್ರತೀಕಾರವು ಹೇಗೆ ದ್ವೇಷ ಮತ್ತು ಯಾತನೆಯನ್ನು ಹೆಚ್ಚಿಸುತ್ತದೆ ಎಂಬುದನ್ನು ಮತ್ತೆಮತ್ತೆ ಅನುಭವಿಸುತ್ತಿದ್ದೇವೆ.

ಹಿಂಸೆ ಒಂದು ದುಷ್ಟ ಚಕ್ರವ್ಯೂಹದಂತೆ ಪರಿಣಮಿಸಿದೆ—ಅಲ್ಲಿ ಮಾನವೀಯತೆಯ ಅತಿಕತ್ತಲೆಯ ಅಂಶಗಳು ಪ್ರಾಬಲ್ಯ ಹೊಂದುತ್ತವೆ. ಈ ದಾರಿ ಪರಸ್ಪರ ಸಹಾನುಭೂತಿ ಮತ್ತು ಅರ್ಥಮಾಡಿಕೊಳ್ಳುವಿಕೆಗೆ ಮುಚ್ಚಲ್ಪಟ್ಟ ದಾರಿಯಾಗಿದ್ದು, ಇನ್ನಷ್ಟು ದುಷ್ಟತೆಯನ್ನು ಹುಟ್ಟುಹಾಕುವ ಸರಪಳಿಯನ್ನು ಮುರಿಯಲು ಅಸಮರ್ಥವಾಗಿದೆ.

ಗಾಜಾ ಮತ್ತು ಇತರ ಯುದ್ಧಪೀಡಿತ ಪ್ರದೇಶಗಳಿಂದ ಬರುವ ಸುದ್ದಿಗಳು ಹಾಗೂ ದೃಶ್ಯಗಳು ಅನೇಕ ನಿರಪರಾಧ ಮತ್ತು ನಿರಾಶ್ರಿತ ಜನರ ದೈಹಿಕ ಹಾಗೂ ನೈತಿಕ ನೋವನ್ನು ಬಹಿರಂಗಪಡಿಸುತ್ತವೆ. ಈ ದೃಶ್ಯಗಳನ್ನು ಕಂಡಾಗ ಮಾನವಕುಲದ ಬಹುಪಾಲು ಸಹಜವಾಗಿ ಕೋಪ, ನೋವು ಮತ್ತು ತೀವ್ರ ಭಾವನಾತ್ಮಕ ಪ್ರತಿಕ್ರಿಯೆಗಳಿಗೆ ಒಳಗಾಗುತ್ತದೆ.

ಆದರೆ ಆಗಮನ ಕಾಲವು ನಮಗೆ ಇದನ್ನೇ ನೆನಪಿಸುತ್ತದೆ: ಹಿಂಸೆಗಿಂತಲೂ ಶಾಂತಿ, ದ್ವೇಷಕ್ಕಿಂತಲೂ ಸಹಾನುಭೂತಿ, ಪ್ರತೀಕಾರಕ್ಕಿಂತಲೂ ಕ್ಷಮೆಯೇ ನಿಜವಾದ ದಾರಿ. ಈ ನಿರೀಕ್ಷೆಯಲ್ಲಿಯೇ, ಈ ಅಂಧಕಾರದ ಮಧ್ಯೆಯೂ, ಶಾಂತಿಯ ಕರ್ತನ ಆಗಮನಕ್ಕಾಗಿ ಮಾನವ ಹೃದಯ ಕಾಯುತ್ತಿದೆ.

ಅತ್ಯಂತ ನಿರಾಶಾಜನಕ ಸ್ಥಿತಿ

ಸಹನೀಯ ಹಿಂಸೆಯ ಮಿತಿಯನ್ನು ಬಹಳ ಹಿಂದೆಯೇ ದಾಟಲಾಗಿದೆ. ಗಾಜಾದಲ್ಲಿ ಮರಣ ಮತ್ತು ವಿನಾಶಕ್ಕೆ ಕಾರಣವಾಗುವ ಅನೇಕ ಮುಖಗಳನ್ನು ನಾವು ಕಂಡಿದ್ದೇವೆ—ಬಾಂಬ್ ದಾಳಿಗಳು, ಘರ್ಷಣೆಗಳು, ಸ್ಫೋಟಗಳು, ಮತ್ತು ಅಗತ್ಯ ವಸ್ತುಗಳ ಕೊರತೆ. ವೈದ್ಯಕೀಯ ನೆರವು, ಚಿಕಿತ್ಸೆ ಹಾಗೂ ಔಷಧಿಗಳ ಕೊರತೆಯು ಜನರ ನೋವನ್ನು ಇನ್ನಷ್ಟು ತೀವ್ರಗೊಳಿಸಿದೆ.

ಜಗದ್ಗುರುಗಳು ಹಾಗೂ ಇತರ ರಾಷ್ಟ್ರಾಧ್ಯಕ್ಷರು ನಡೆಸಿದ ಅನೇಕ ಮನವಿಗಳು ಮತ್ತು ಮಧ್ಯಸ್ಥಿಕೆ ಪ್ರಯತ್ನಗಳು ಈ ಭೀಕರ ಪರಿಸ್ಥಿತಿಯನ್ನು ಬದಲಾಯಿಸಲು ಅಥವಾ ಪರಿಹರಿಸಲು ಇದುವರೆಗೆ ವಿಫಲವಾಗಿವೆ. ಗಾಜಾಗೆ ತಲುಪಿದ ಮಾನವೀಯ ಸಹಾಯ ಮತ್ತು ತುರ್ತು ವೈದ್ಯಕೀಯ ಚಿಕಿತ್ಸೆಗೆ ಅಗತ್ಯವಿದ್ದ ಕೆಲವರನ್ನು ಹೊರಗೆ ಕರೆದೊಯ್ಯಲು ಸೀಮಿತ ಅವಕಾಶ ದೊರಕಿದ್ದರೂ, ಅದು ಸಮುದ್ರದೊಳಗಿನ ಒಂದು ಹನಿಯಷ್ಟೇ ಆಗಿದೆ.

ಹಿಂಸೆಯನ್ನು ಈ ತೀವ್ರಗತಿಗೆ ಮುಂದುವರೆಸಲು ಮಾನವನಿಗೆ ಸಿಗುತ್ತಿರುವ ಕಾರಣವಾದರೂ ಏನು? ನಿಷ್ಕ್ರಿಯತೆ ಮತ್ತು ಅಸಹಾಯತೆಯ ಭಾವನೆಗಳನ್ನು ನಿಜವಾದ ನೆರವು ಮತ್ತು ಐಕ್ಯತೆಯ ಕೃತ್ಯಗಳ ಮೂಲಕ ಹೇಗೆ ಮೀರಿ ಹೋಗಬಹುದು? ಉತ್ತರಗಳನ್ನು ಬೇಡುವಂತೆ, ಅಂತಃಕರಣವನ್ನು ತಟ್ಟುವಂತೆ ಈ ಪ್ರಶ್ನೆಗಳು ನಮ್ಮ ಮುಂದೆ ನಿಂತಿವೆ.

ಅಸಂಖ್ಯಾತ ಮಾತುಗಳು ಮತ್ತು ಅಪಾರ ನೋವಿನ ನಂತರ, ಯುದ್ಧದ ದುಷ್ಟತೆಯ ಕುರಿತು ಜನರಲ್ಲಿ ನಿಧಾನವಾಗಿ ಒಂದು ನಿರ್ಲಕ್ಷ್ಯದ ಭಾವನೆ ಬೆಳೆಯುತ್ತಿರುವಂತೆ ಕಾಣುತ್ತದೆ. ಸಹಾಯ ಮಾಡಲು ಸಾಧ್ಯವಿದ್ದರೂ ಭಯವು ಜನರನ್ನು ತಡೆದು ನಿಲ್ಲಿಸುವಂತೆ ತೋರುತ್ತದೆ.  ಈ ಭಯವೇ ಮೌನತೆಯನ್ನು ಪ್ರಶ್ನಿಸಲೂ ನಮ್ಮನ್ನು ತಡೆಯುತ್ತಿದೆ.ಮಾನವೀಯ ಜವಾಬ್ದಾರಿಯನ್ನು ಮರೆತ ಕುರಿತೂ ಪ್ರಶ್ನಿಸಲೂ ಈ ಭಯವೇ ಅಡ್ಡಿಯಾಗಿದೆ.

ನಮ್ಮ ಭಯವೇ ಮೌನವಾಗಿ, ಈ ಮೌನವೇ ನಮ್ಮನು ಹಿಂಸೆಯ ಸಹಚರರನ್ನಾಗಿಸಿದೆ. ಈ ಸತ್ಯವನ್ನು ಗುರುತಿಸುವುದು ದಿನೇ ದಿನೇ ಕಷ್ಟವಾಗುತ್ತಿದೆ.

ಗಾಜಾ ಮತ್ತು ಪಶ್ಚಿಮ ಕರಾವಳಿಯ ಪ್ಯಾಲೆಸ್ಟೈನ್ ಪ್ರದೇಶಗಳ ಸುತ್ತ ಭೌತಿಕವಾಗಿ ಮತ್ತು ಸ್ಪಷ್ಟವಾಗಿ ಗೋಡೆಗಳನ್ನು ನಿರ್ಮಿಸಲಾಗಿದೆ. ‘ಅಧಿಕೃತವಲ್ಲದವರು’ ಎಂಬ ಹೆಸರಿನಲ್ಲಿ ಮಾನವೀಯ ಕಾರ್ಯಕರ್ತರು, ಸ್ವಯಂಸೇವಕರು, ಪತ್ರಕರ್ತರು ಮತ್ತು ಅಂತರರಾಷ್ಟ್ರೀಯ ವೀಕ್ಷಕರು ಒಳನುಗ್ಗದಂತೆ ತಡೆಯಲಾಗುತ್ತಿದೆ. ಆದರೆ ಪವಿತ್ರ ಭೂಮಿಯ ಯುದ್ಧಭೂಮಿಗಳ ಸುತ್ತ ಕೇವಲ ಗೋಡೆಗಳಷ್ಟೇ ಅಲ್ಲ—ಸತ್ಯದತ್ತ ಹೋಗುವ ದಾರಿಯನ್ನೇ ಮುಚ್ಚುವಂತಹ ಒಂದು ಅಜ್ಞಾತ ಅಡ್ಡಿಯೂ ನಿರ್ಮಾಣಗೊಂಡಂತೆ ಕಾಣುತ್ತದೆ.

ಸತ್ಯವೇ ನ್ಯಾಯವನ್ನು ಸಾಧ್ಯವಾಗಿಸಿ, ಜೀವಗಳನ್ನು ಉಳಿಸಿ, ಶ್ರಾಂತಗೊಂಡ ಜನರಿಗೆ ಮಾನವೀಯ ಗೌರವವನ್ನು ಮರಳಿ ನೀಡಬಲ್ಲದು.

ಮಾನವೀಯತೆಯನ್ನು ಏನು ಅಥವಾ ಯಾರು ತಡೆಯುತ್ತಿದ್ದಾರೆ? ಅಮಾನವೀಯ ಪರಿಸ್ಥಿತಿಗಳಲ್ಲಿ ಬದುಕಲು ಬಲವಂತಗೊಳಿಸಲ್ಪಟ್ಟ ನಿರಾಶ್ರಿತ ಜನರಿಗೆ ನೆರವಾಗುವುದನ್ನು ನಮ್ಮಿಂದ ದೂರ ಇಡುತ್ತಿರುವ ದುಷ್ಟ ಶಕ್ತಿ ಯಾವುದು? ಈ ಪ್ರಶ್ನೆಗಳು ಮೌನವನ್ನು ಪ್ರಶ್ನಿಸುವಂತೆ, ಜವಾಬ್ದಾರಿಯನ್ನು ಬೇಡುವಂತೆ ನಮ್ಮ ಅಂತಃಕರಣದ ಮುಂದೆ ನಿಂತಿವೆ.

ಅವರ ದುರ್ಬಲತೆ ನಮಗೆ ಭಯ ಹುಟ್ಟಿಸುವುದಿಲ್ಲವೇ? ಅವರ ನಿರಾಶೆ ನಮ್ಮ ಅಂತರಾತ್ಮವನ್ನು ಕದಡುವುದಿಲ್ಲವೇ?  ಆರ್ಥಿಕ ಲಾಭಗಳಿಗೆ ಪ್ರಾಮುಖ್ಯತೆ ನೀಡುವ ನಿರ್ಧಾರವನ್ನು ಯಾರು ತೆಗೆದುಕೊಳ್ಳುತ್ತಿದ್ದಾರೆ?  ಮರಣ ಮತ್ತು ವಿನಾಶವನ್ನು ತರಿಸುವ ಸೇನಾ ವೆಚ್ಚವನ್ನು ಇನ್ನೂ ಹೆಚ್ಚಿಸುತ್ತಿರುವವರು ಯಾರು?  ದುಃಖದಿಂದ ನೊಂದ ಪುರುಷರು ಮತ್ತು ಮಹಿಳೆಯರು, ಮಕ್ಕಳು, ವೃದ್ಧರು, ಶಕ್ತಿಹೀನರು ಮತ್ತು ರೋಗಿಗಳು—ಇವರನ್ನು ಸುಲಭ ಗುರಿಗಳೆಂದು ನೋಡಿ ಶತ್ರುಗಳಂತೆ ಕಾಣುವ ಮನಸ್ಥಿತಿ ಯಾರದ್ದು?  ಸಂಪನ್ಮೂಲಗಳು ಸಾಕಷ್ಟಿರುವಾಗಲೂ, ಸುಲಭವಾಗಿ ಲಭ್ಯವಿರುವಾಗಲೂ, ಆಹಾರ ನೀಡಲು, ಚಿಕಿತ್ಸೆ ನೀಡಲು, ಉಷ್ಣತೆ ಒದಗಿಸಲು ನಿರಾಕರಿಸುವುದು ಏಕೆ? ಒಂದು ಗಡಿ ದಾಟಿದರೆ ಸಿಗಬಹುದಾದ ಔಷಧಗಳ ಮೇಲೆ ಅವಲಂಬಿತರಾದವರಿಗೆ ಬದುಕುವ ಒಂದು ಅವಕಾಶವನ್ನಾದರೂ ನೀಡದಿರುವುದು ಏಕೆ? ಗಾಜಾದ ಮೂರನೇ ಚಳಿಗಾಲ—ಸಹಾನುಭೂತಿಯ ಉಷ್ಣತೆ ಇಲ್ಲದೆ—ನಮ್ಮ ಹೃದಯಗಳನ್ನು ನಿರ್ಲಕ್ಷ್ಯದ ಹಿಮದಿಂದ ಗಟ್ಟಿಯಾಗಿಸುತ್ತಿದೆಯೇ?

ಸಮಾಧಾನವನ್ನು ತರುವ ಪುನೀತ ಶಿಶು

ಈ ಅಮಾನುಷ ಸ್ಥಿತಿಗೆ ನಾವು ಎಲ್ಲರೂ ಒಂದಲ್ಲೊಂದು ರೀತಿಯಲ್ಲಿ ಹೊಣೆಗಾರರೇ. ಆದ್ದರಿಂದ ಈ ಎಲ್ಲ ಪ್ರಶ್ನೆಗಳನ್ನುತ್ತರಿಸಲು ನಾವು ಬದ್ಧರು. ಆದರೂ, ಒಂದು ಉತ್ತರ ಇದೆ. ಅದು ಚಳಿಯ ಅಂಧಕಾರದಲ್ಲಿ, ಒಂದು ಅಂಗಳದ ಗೋಶಾಲೆಯಲ್ಲಿ, ಬಟ್ಟೆಗಳಲ್ಲಿ ಸುತ್ತಿ ಇಡಲ್ಪಟ್ಟ ಪುನೀತ ಶಿಶು—ಶಾಂತಿ ಇಲ್ಲದ ಹೃದಯಗಳಿಗೆ ಶಾಂತಿಯನ್ನು ತರುವ ಶಿಶು.ಅವನೇ ಸಹೋದರ ಸಹೋದರಿಯರನ್ನು ಸಮಾಧಾನಕ್ಕೆ ಕರೆಯಲು ಬಂದ ಪುನೀತ ಶಿಶು. ಅವನೇ ನಿರಪರಾಧಿಗಳನ್ನೂ ದುರ್ಬಲರನ್ನೂ ಕಾಪಾಡಲು ಬಂದವನು.ಅವನೇ ನೆರೆಯವರ ಮೇಲಿನ ಪ್ರೀತಿ ಮಾತ್ರವೇ ಸತ್ಯವೆಂದು ದೃಢಪಡಿಸಲು ಬಂದವನು.

ಕಂದ ಯೇಸುವಿನ ಜನನದಲ್ಲಿ ನಾವು ಸಂಭ್ರಮಿಸೋಣ.ಕೇವಲ ಕ್ರಿಸ್ತಜಯಂತಿಯ ಕಾಲದಲ್ಲಷ್ಟೇ ಅಲ್ಲ, ಪ್ರತಿದಿನವೂ ಸಂಭ್ರಮಿಸೋಣ. ಬೆತ್ಲೆಹೇಮಿನ ಆ ಗೋಶಾಲೆಯಿಂದ ಹೊರಟ ಸಂದೇಶವನ್ನು, ಎರಡು ಸಾವಿರಕ್ಕೂ ಹೆಚ್ಚು ವರ್ಷಗಳಾದರೂ ತನ್ನ ಸತ್ಯತೆಯನ್ನೂ ಪ್ರಸ್ತುತತೆಯನ್ನೂ ಕಳೆದುಕೊಳ್ಳದ ಸಂದೇಶವನ್ನು ನಾವು ಸ್ಮರಿಸೋಣ. ಶಾಂತಿ ಒಂದು ಮೃಗಮಾಯೆಯಲ್ಲ. ಅದು ಬದುಕನ್ನು ಆಯ್ಕೆಮಾಡುವ ಧೈರ್ಯ.\ ಶಾಂತಿ ಕೇವಲ ಉಚ್ಚರಿಸಿ ಮರೆಯುವ ಪದವಲ್ಲ. 

ಶಾಂತಿ ಎಂದರೆ ಧೈರ್ಯ: ಸಹಾಯ ಮಾಡುವ ಧೈರ್ಯ, ಸಾಕ್ಷ್ಯ ನೀಡುವ ಧೈರ್ಯ, ರಕ್ಷಕರ ಸತ್ಯದ ಪರವಾಗಿ ನಿಲ್ಲುವ ಧೈರ್ಯ.

 

ಫಾದರ್ ಇಬ್ರಾಹಿಂ ಫಾಲ್ಟಾಸ್,

ಪವಿತ್ರ ಭೂಮಿಯ ಫ್ರಾನ್ಸಿಸ್ಕನ್ ಧಾರ್ಮಿಕ ಸೇವಕರು

20 ಡಿಸೆಂಬರ್ 2025, 11:44