ಹುಡುಕಿ

2018.10.13 Natività, adorazione dei Magi 2018.10.13 Natività, adorazione dei Magi  (©zatletic - stock.adobe.com)

ಪ್ರಭುವಿನ ದಿನದ ಚಿಂತನೆ: ನೀತಿವಂತ ಜೋಸೆಫರು

ಧರ್ಮಸಭೆ ಆಗಮನದ ನಾಲ್ಕನೇ ಭಾನುವಾರವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ಅಬಾಟ್ ಮೇರಿಯನ್ ನ್ಗುಯೆನ್ "ತೀರ್ಪು ಇಲ್ಲದ ನ್ಯಾಯ: ಜೋಸೆಫ್‌ನ ಸದಾಚಾರ" ಎಂಬ ವಿಷಯದ ಕುರಿತು ಚಿಂತಿಸುತ್ತಾರೆ

ಕ್ರಿಸ್ತಜಯಂತಿ ಸಮೀಪಿಸುತ್ತಿರುವಾಗ, ಧರ್ಮಸಭೆ ನಮ್ಮ ಮುಂದಿಟ್ಟಿರುವ ವ್ಯಕ್ತಿ ಜೋಸೆಫರು. ಪವಿತ್ರ ಗ್ರಂಥ ನೀತಿವಂತನೆಂಬ ಒಂದೇ ಮಾತಿನಲ್ಲಿ ಜೋಸೆಫರನ್ನು ನಮಗೆ ಪರಿಚಯಿಸುತ್ತದೆ. ಸತ್ಯದ ಬಗ್ಗೆ, ವಾಸ್ತವದ ಬಗ್ಗೆ, ಇತರರ ಬಗ್ಗೆ ಮತ್ತು ನಮ್ಮದೇ ಸ್ವಭಾವದ ಬಗ್ಗೆ ಗೊಂದಲದಿಂದ ಕೂಡಿರುವ ಇಂದಿನ ಯುಗದಲ್ಲಿ, ಜೋಸೆಫರ ಮೌನವೇ ಗಂಭೀರವಾದ ಸಂದೇಶವಾಗಿ ಮಾತನಾಡುತ್ತದೆ.

ನಮ್ಮ ಕಾಲದ ಹೋರಾಟ ಕೇವಲ ನೈತಿಕವಲ್ಲ; ಅದು ಸತ್ಯವನ್ನು ಅರಿಯುವ ಹೋರಾಟ. ಬಹಳಷ್ಟು ಜನ ವಾಸ್ತವವನ್ನು ಅದರಂತೆಯೇ ಸಹನೆಯಿಂದ ಒಪ್ಪಿಕೊಳ್ಳುವುದಿಲ್ಲ. ಕೆಲವರು ಭಾಗಶಃ ತಿಳುವಳಿಕೆಯನ್ನು ಪೂರ್ಣ ಸತ್ಯವೆಂದು ಭ್ರಮಿಸುವ ಅತಿಯಾದ ಆತ್ಮವಿಶ್ವಾಸಕ್ಕೆ ಬೀಳುತ್ತಾರೆ; ಇನ್ನು ಕೆಲವರು ವಿಫಲತೆಯ ಭಯದಿಂದಲೇ ಯಾವ ಕ್ರಮವನ್ನೂ ತೆಗೆದುಕೊಳ್ಳಲಾಗದ ಅತಿಯಾದ ಸಂಶಯಕ್ಕೆ ಸಿಲುಕುತ್ತಾರೆ.

ಸತ್ಯದಲ್ಲಿ ನೆಲೆಯಿಲ್ಲದಾಗ, ನಮ್ಮ ಸ್ವಯಂಅರಿವು ಈ ಎರಡು ಅತಿರೇಕಗಳ ನಡುವೆ ತೂಗಾಡುತ್ತದೆ. ಮಾನಸಿಕವಾಗಿ ಹೇಳುವುದಾದರೆ, ನಾವು ಡನ್ನಿಂಗ್–ಕ್ರೂಗರ್ ಪರಿಣಾಮ (ಅರಿವಿನ ಪಕ್ಷಪಾತ) ಮತ್ತು ನಕಲಿ ಭಾವನೆ (ಇಂಪೋಸ್ಟರ್ ಸಿಂಡ್ರೋಮ್) ಮಧ್ಯೆ ತೂಗಾಡುತ್ತೇವೆ. ಆತ್ಮೀಯವಾಗಿ ನೋಡಿದರೆ, ಎರಡೂ ವಿನಯದ ಮತ್ತು ಸತ್ಯದ ವೈಫಲ್ಯಗಳೇ. ಇಂತಹ ಮಧ್ಯಬಿಂದುದಲ್ಲಿ ಜೋಸೆಫರು ಮೌನವಾಗಿ ನಿಂತಿದ್ದಾರೆ.

ಮರಿಯಮ್ಮನ ಗರ್ಭಧಾರಣೆಯ ಸತ್ಯವನ್ನು ಎದುರಿಸಿದಾಗ, ಜೋಸೆಫ್ ಕಾನೂನಿನ ಭಾರವನ್ನು ಸಂಪೂರ್ಣವಾಗಿ ಅರಿತಿದ್ದರು. ಧರ್ಮಶಾಸ್ತ್ರವು ಸಾರ್ವಜನಿಕ ತೀರ್ಪನ್ನು ಕೇಳುತ್ತಿತ್ತು. ಆದರೆ ಜೋಸೆಫ್ ಕಾನೂನಿನ ಕಠೋರತೆಯನ್ನು ವ್ಯಕ್ತಿಯ ಸತ್ಯಕ್ಕಿಂತ ಮೇಲಾಗಲು ಬಿಡಲಿಲ್ಲ. ಕಣ್ಣಿಗೆ ಕಂಡದ್ದನ್ನೇ ಅಂತಿಮ ಸತ್ಯವೆಂದು ಘೋಷಿಸುವ ಆತುರ ಅವರಿಗೆ ಇರಲಿಲ್ಲ. ಪಾಪದ ಕಾಣಿಕೆಯನ್ನೇ ಪಾಪವೆಂದು ಘನೀಕರಿಸಲು ಅವರು ನಿರಾಕರಿಸಿದರು.

ಮರಿಯಮ್ಮನ ಪಾವಿತ್ರ್ಯವನ್ನು ಅವರು ಅಷ್ಟು ಆಳವಾಗಿ ತಿಳಿದಿದ್ದರು — ಅದೇ ಕಾರಣಕ್ಕೆ ತೀರ್ಪಿಗೆ ಧಾವಿಸಲಿಲ್ಲ. ಜೋಸೆಫರು “ಅವಳ ಶುದ್ಧತೆಯ ಮೇಲೆ ನಂಬಿಕೆಯಿಟ್ಟು, ಏನಾಗಿತ್ತೆಂದು ಅರ್ಥವಾಗದೆ, ವಿವರಿಸಲಾಗದ ಆ ರಹಸ್ಯವನ್ನು ಮೌನದಿಂದ ಮುಚ್ಚಿದನು.” ಇಲ್ಲಿ ಜೋಸೆಫರ ಮಹತ್ವದ ಗುಣ ಮೌನ. ಆ ಮೌನ ದುರ್ಬಲತೆಯಲ್ಲ; ಅದು ಧೈರ್ಯದ ಫಲ.

ಸಂತ ಜೆರೋಮ್ ಹೇಳುವಂತೆ, ಜೋಸೆಫ್ ವಿವರಿಸಲಾಗದ ದೈವಿಕ ರಹಸ್ಯವನ್ನು ಮೌನದಲ್ಲಿ ಮುಚ್ಚಿದರು. ಇದು ಅವರ ಅಂತರಂಗದ ಹುತಾತ್ಮತೆ;. ಸತ್ಯವನ್ನು ಕಾಪಾಡಲು, ಜೋಸೆಫ್ ತಮ್ಮದೇ ಹೆಸರು, ಗೌರವ, ‘ಕಾನೂನುಬದ್ಧ ನೀತಿವಂತ’ ಎಂಬ ಹೆಸರನ್ನೂ ತ್ಯಜಿಸಲು ಸಿದ್ಧರಾದರು. ಲೋಕದ ದೃಷ್ಟಿಯಲ್ಲಿ ಅವರು ತಪ್ಪಿತಸ್ಥರಾಗಿಯೂ ಗೊಂದಲದಲ್ಲಿರುವವರಾಗಿಯೂ ಕಂಡರೇನೋ?

ಜೋಸೆಫರ ನೀತಿ ಇಲ್ಲಿ ಪ್ರಕಟವಾಗುತ್ತದೆ: ತಾನೇ ತೀರ್ಪಿಗೆ ಒಳಗಾಗಲು ಸಿದ್ಧರಾಗಿರುವ ಧೈರ್ಯ, ಆದರೆ ಸಂಪೂರ್ಣ ತಿಳಿಯದ ರಹಸ್ಯವನ್ನು ತೀರ್ಮಾನಿಸದ ವಿನಯ. ಇದು ತೀರ್ಪಿಲ್ಲದ ನ್ಯಾಯ, ಮೌನದ ಮೂಲಕ ವ್ಯಕ್ತವಾಗುವ ನಿಷ್ಠೆ, ಮತ್ತು ದೇವರಿಗೆ ಕೆಲಸ ಮಾಡಲು ಜಾಗ ಕೊಡುವ ಮಾನವೀಯತೆ ಸಂತ ಜೆರೋಮ್ ಇದನ್ನು ಅದ್ಭುತವಾಗಿ ವಿವರಿಸುತ್ತಾರೆ:

ಯಾವುದೇ ಒಂದು ಅತಿರೇಕವೂ ಜೋಸೆಫರಿಗೆ ಒಪ್ಪಿಸಲಾದ ದೈವಿಕ ರಹಸ್ಯವನ್ನು ಚೂರಾಗಿಸಬಹುದಿತ್ತು. ಅವರು ತಮಗೇ ಸಂಪೂರ್ಣ ಸತ್ಯ ಗೊತ್ತೆಂದು ಭಾವಿಸಿದ್ದರೆ, ಮರಿಯಮ್ಮನನ್ನು ತೀರ್ಪಿಗೆ ಒಪ್ಪಿಸಿ ದಂಡಿಸಿಬಿಟ್ಟಿರುತ್ತಿದ್ದರು. ಹಾಗೇನಾದರೂ ಆಗಿದ್ದರೆ ಮಾನವ ತೀರ್ಪೇ ದೇವರ ಅವತಾರವನ್ನು ತಡೆಯುವಂತಾಗುತ್ತಿತ್ತು. ಇನ್ನೊಂದೆಡೆ, ನೀತಿಭ್ರಮೆಯಲ್ಲೋ ಅಥವಾ ಆತ್ಮವಿಶ್ವಾಸ ಕಳೆದುಕೊಂಡ ಗೊಂದಲದಲ್ಲೋ ಅವರು ಮುಳುಗಿದ್ದರೆ, ಹೊಣೆಗಾರಿಕೆಯಿಂದ ವರ್ತಿಸುವುದನ್ನೇ ತ್ಯಜಿಸಿಬಿಟ್ಟಿರುತ್ತಿದ್ದರು.

ಆದರೆ ಜೋಸೆಫ್ ಮೂರನೇ ದಾರಿಯನ್ನು ಆಯ್ಕೆಮಾಡಿದರು. ಇದು ಧೈರ್ಯವಿಲ್ಲದ ತಟಸ್ಥತೆ ಅಲ್ಲ. ಸತ್ಯ ಎಷ್ಟು ಬಹಿರಂಗಗೊಂಡಿದೆಯೋ ಅಷ್ಟರ ಮಟ್ಟಿಗೆ ಆ ಸತ್ಯಕ್ಕೆ ನಿಷ್ಠೆಯಿಂದಿರುವುದು, ಜೊತೆಗೆ ಇನ್ನಷ್ಟು ಬೆಳಕು ದೇವರಿಂದ ಬರಬಹುದೆಂಬ ತೆರೆದ ಮನಸ್ಸು.

ಇದಕ್ಕಾಗಿಯೇ ಜೋಸೆಫರ ನೀತಿ ಕೇವಲ ರಕ್ಷಣಾ ಇತಿಹಾಸಕ್ಕೆ ಮಾತ್ರವಲ್ಲ, ನಮ್ಮ ದೈನಂದಿನ ಜೀವನಕ್ಕೂ ಅತ್ಯಂತ ಅಗತ್ಯ. ಅವರು ವಾಸ್ತವವನ್ನು ಬಲವಂತವಾಗಿ ತಳ್ಳಿಹಾಕಲಿಲ್ಲ. ಯಾರಿಗೂ ಗಾಯ ಮಾಡದೆ ಕ್ರಮ ಕೈಗೊಂಡರು. ಹಿಂತಿರುಗದೆ ಕಾಯುವುದನ್ನು ಕಲಿತರು.

ಈ ಮೌನಮಯ ನಿಷ್ಠೆಯ ಮೂಲಕವೇ ಜೋಸೆಫ್ ದೇವರು ಮಾತನಾಡಲು ಜಾಗ ಸೃಷ್ಟಿಸಿದರು.

ಸಂತ ಜಾನ್ ಕ್ಯಾಸಿಯನ್ ತಮ್ಮ ಹದಿಮೂರನೇ ಸಂವಾದದ ಉಪದೇಶ ದಲ್ಲಿ, ಜೋಸೆಫರ ಒಳಗಿನ ಮನೋಭಾವವನ್ನು ಸ್ಪಷ್ಟವಾಗಿ ಬೆಳಗಿಸುತ್ತದೆ. ಜೋಸೆಫ್ ಮೊದಲು ಆತ್ಮಸಾಕ್ಷಿಯ ಮೂಲಕ ದೇವರ ಧ್ವನಿಯನ್ನು ಕೇಳುತ್ತಾರೆ. ಸುಳ್ಳು ಸಾಕ್ಷಿಗೂ, ಅನ್ಯಾಯಕರ ಆರೋಪಕ್ಕೂ ಅವರು ಸ್ಥಳ ನೀಡುವುದಿಲ್ಲ. ನಂತರ, ತಮ್ಮ ಮುಂದೆ ಇಟ್ಟಿರುವ ವಾಸ್ತವಿಕ ಪರಿಸ್ಥಿತಿಯನ್ನು ಅವರು ನಿರಾಕರಿಸುವುದಿಲ್ಲ; ಸಂಭವಿಸಿದ ಸಂಗತಿಗಳನ್ನು ಯಥಾರ್ಥವಾಗಿ ಸ್ವೀಕರಿಸುತ್ತಾರೆ.

ಮತ್ತೆ, ಗರ್ವದಿಂದಲೂ ನಿರಾಶೆಯಿಂದಲೂ ಮೌನವನ್ನು ತುಂಬಿಸದೆ ಕಾಯುವ ಮೂಲಕ, ಅವರು ಇನ್ನೊಬ್ಬರ ಮೂಲಕ ಅಂದರೆ, ದೈವಿಕ ಸತ್ಯವನ್ನು ಪ್ರಕಟಿಸುವ ದೂತನ ಮೂಲಕ  ದೇವರ ಮಾತನ್ನು ಕೇಳಲು ಸಿದ್ಧರಾಗುತ್ತಾರೆ. ಈ ರೀತಿ, ಮತ್ತಾಯ 1:24ರಲ್ಲಿ ನಾವು ಓದುವ “ಪ್ರಭುವಿನ ದೂತನು ಆಜ್ಞಾಪಿಸಿದಂತೆ ಜೋಸೆಫ್ ಮಾಡಿದನು” ವಾಕ್ಯದಂತೆವಿವೇಚನೆ ಅಂತಿಮವಾಗಿ ವಿಧೇಯತೆಯಲ್ಲಿ ಪೂರ್ಣಗೊಳ್ಳುತ್ತದೆ.

ಜೋಸೆಫರ ನೀತಿವಂತತೆ ಕೇವಲ ಅವತಾರವನ್ನು ರಕ್ಷಿಸುವ ಮಟ್ಟಕ್ಕೆ ಸೀಮಿತವಾಗಿಲ್ಲ; ಅದನ್ನು ಸಾಧ್ಯವಾಗಿಸುವ ನೆಲೆಯನ್ನು ಸಿದ್ಧಪಡಿಸುತ್ತದೆ. ಸಂಪೂರ್ಣವಾಗಿ ಸ್ಪಷ್ಟವಾಗಿರದ, ಬೆಲೆಯನ್ನೇ ಬೇಡುವ, ಇನ್ನೂ ಉತ್ತರ ಕಾಣದ ಸತ್ಯಕ್ಕೆ ಸಹನಶೀಲವಾಗಿ ನಿಷ್ಠ ರಾ ಗಿ ಉಳಿದ ಜೋಸೆಫ್, ದೇವರು ಇತಿಹಾಸದಲ್ಲಿ ಮಾನವನಾಗಿ ರೂಪುಗೊಳ್ಳಲು ಅವಕಾಶ ನೀಡುತ್ತಾರೆ.

ಶುಭಸಂದೇಶವು ಇಲ್ಲಿ ಮೌನವಾಗಿ ಒಂದು ಆಳವಾದ ಸತ್ಯವನ್ನು ಸೂಚಿಸುತ್ತದೆ: ಸತ್ಯಕ್ಕೆ ದೃಢವಾಗಿ ಅಂಟಿಕೊಂಡು ಬದುಕುವುದು ಎಂದರೆ, ಜೋಸೇಫರಂತೆ ಬದುಕುವುದು.ಮತ್ತು ಜೋಸೆಫ್‌ನಂತೆ ಬದುಕುವುದು ಎಂದರೆ, ಯೋಹಾನ 14:6 ರಲ್ಲಿ ಹೇಳುವ “ನಾನೇ ಮಾರ್ಗ, ನಾನೇ ಸತ್ಯ, ನಾನೇ ಜೀವ” ಎಂಬ  ವಾಕ್ಯದಂತೆ  ದೇವರು ನಮ್ಮೊಳಗೂ ಜೀವಂತವಾಗಿ ಅವತರಿಸಲು ಅವಕಾಶ ನೀಡುವುದು .

ಸತ್ಯಕ್ಕೆ ನಿಷ್ಠರಾಗಿರುವುದು ಎಂದರೆ ಕೇವಲ ಒಂದು ಸಿದ್ಧಾಂತವನ್ನು ಅನುಸರಿಸುವುದಲ್ಲ; ಅದು ಒಬ್ಬ ವ್ಯಕ್ತಿಗೆ ನಿಷ್ಠರಾಗಿರುವುದಾಗಿದೆ. ಈ ಸತ್ಯವನ್ನು ಈಗಾಗಲೇ ನಂಬಿರುವವರು ಅರಿಯುತ್ತಾರೆ. ಸತ್ಯಕ್ಕೆ ನಿಷ್ಠರಾಗಿರುವುದು ಎಂದರೆ ಸ್ವತಃ ಪ್ರಭು ಯೇಸು ಕ್ರಿಸ್ತರಿಗೆ ನಿಷ್ಠರಾಗಿರುವುದೇ.

ಆದರೆ ಈ ರಹಸ್ಯವು ಕ್ರೈಸ್ತರಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಧರ್ಮಸಭೆ ಲುಮೆನ್ ಜೆಂಟಿಯಂ 16ರಲ್ಲಿ ಬೋಧಿಸುವಂತೆ, ಕ್ರಿಸ್ತರನ್ನು ಸ್ಪಷ್ಟವಾಗಿ ತಿಳಿಯದವರಾದರೂ, ತಮ್ಮ ಅಂತಃಕರಣ ಮತ್ತು ಸತ್ಯದ ಆಧಾರದಲ್ಲಿ ನೀತಿಯುತವಾಗಿ ಬದುಕುವವರು, ದೇವರ ರಕ್ಷಣಾತ್ಮಕ ಕಾರ್ಯದಲ್ಲಿ ರಹಸ್ಯಮಯವಾಗಿಯೂ ನಿಜವಾಗಿಯೂ ಸಹಕರಿಸುತ್ತಾರೆ. ಅವರೂ ಸಹ, ಸತ್ಯಕ್ಕೆ ನಿಷ್ಠರಾಗಿರುವ ಮೂಲಕ, ವಾಕ್ಯವು ನಮ್ಮ ಮಧ್ಯದಲ್ಲಿ ವಾಸಿಸುವಂತೆ ಮಾಡುವ ಸ್ಥಳವನ್ನು ಸೃಷ್ಟಿಸುತ್ತಾರೆ. ಈ ಕಾರಣದಿಂದಲೇ ನೀತಿವಂತರಾದ ಜೋಸೆಫರು ನಮ್ಮ ಕಾಲಕ್ಕೆ ಬೆಳಕಿನಂತಿರುವ ವ್ಯಕ್ತಿಯಾಗಿ ನಿಂತಿದ್ದಾರೆ.

ಜೋಸೆಫರು ನಮಗೆ ಕಲಿಸುವುದು: ನೀತಿವಂತತೆ ಎಂದರೆ ಗದ್ದಲವೂ ಅಲ್ಲ, ತಕ್ಷಣ ಪ್ರತಿಕ್ರಿಯಿಸುವುದೂ ಅಲ್ಲ, ಸ್ವಯಂನಿಶ್ಚಿತತೆಯಿಂದ ತುಂಬಿರುವುದೂ ಅಲ್ಲ. ನೀತಿವಂತತೆ ಸಹನಶೀಲ, ಸತ್ಯನಿಷ್ಠ, ಮತ್ತು ಕಾಯಲು ತಯಾರಿರುವಷ್ಟು ವಿನಯಶೀಲ.

ಸುಳ್ಳು ನಿಶ್ಚಿತತೆ ಮತ್ತು ಒಳಗೆ ಕೊಳೆಯುವ ಸಂಶಯಗಳಿಂದ ಒಡೆದುಹೋಗಿರುವ ಈ ಲೋಕದಲ್ಲಿ, ಜೋಸೆಫರು ನಮಗೆ ತೋರಿಸುವುದು ಸತ್ಯದ ದಾರಿಯನ್ನು. ಅದು ಎಷ್ಟೇ ಅಪೂರ್ಣವಾಗಿ ಕಾಣಿಸಿದರೂ, ಇಮ್ಮಾನುವೇಲರು ಇನ್ನೂ ವಾಸಿಸಲು ಆಯ್ಕೆಮಾಡುವ ಸ್ಥಳ ಸತ್ಯವೇ ಆಗಿದೆ.

19 ಡಿಸೆಂಬರ್ 2025, 11:37