ಸಿಡ್ನಿಯಲ್ಲಿ ಹನುಕ್ಕಾ ಆಚರಣೆಯ ವೇಳೆ ನಡೆದ ದಾಳಿಗೆ ತೀವ್ರ ಖಂಡನೆ ವ್ಯಕ್ತಪಡಿಸಿರುವ ಆಸ್ಟ್ರೇಲಿಯಾದ ಜಗದ್ಗುರುಗಳ ಸೇವಾನಿಯೋಗ
ಫೀಡೆಸ್ ಸುದ್ದಿ ಸಂಸ್ಥೆಯ ಪ್ರಕಾರ, ಆಸ್ಟ್ರೇಲಿಯಾದ ಜಗದ್ಗುರುಗಳ ಸೇವಾನಿಯೋಗದ ಸೇವಾಜಾಲ ಸಾವನ್ನಪ್ಪಿದವರ ಕುಟುಂಬಗಳು, ಗಾಯಗೊಂಡವರು, ದಾಳಿಯ ಸಮಯದಲ್ಲಿ ಬಾಂಡಿಯಲ್ಲಿ ಇದ್ದವರು ಹಾಗೂ ಸಂಪೂರ್ಣ ಆಸ್ಟ್ರೇಲಿಯಾದ ಸಮಾಜದೊಂದಿಗೆ ತಮ್ಮ ಐಕ್ಯತೆಯನ್ನು ವ್ಯಕ್ತಪಡಿಸಿದೆ.
ಡಿಸೆಂಬರ್ 14ರಂದು ನಡೆದ ಈ ದಾಳಿಯಲ್ಲಿ, ಹನುಕ್ಕಾ ಹಬ್ಬದ ಕಾರ್ಯಕ್ರಮವನ್ನು ಗುರಿಯಾಗಿಸಿಕೊಂಡು ಇಬ್ಬರು ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದು, 15 ಮಂದಿ ಮೃತಪಟ್ಟಿದ್ದಾರೆ ಮತ್ತು 25 ಮಂದಿ ಗಾಯಗೊಂಡಿದ್ದಾರೆ. “ಶಾಂತಿ, ಸೌಹಾರ್ದ, ಸಂವಾದ, ಪರಸ್ಪರ ಅರ್ಥಮಾಡಿಕೊಳ್ಳುವಿಕೆ ಮತ್ತು ಗೌರವಕ್ಕಾಗಿ ಕಥೋಲಿಕ ಸೇವಾನಿಯೋಗ ತನ್ನ ಕಾರ್ಯವನ್ನು ಮುಂದುವರಿಸಲಿದೆ,” ಎಂದು ಸಂಸ್ಥೆ ತಿಳಿಸಿದೆ. ಇದೇ ಸಂದರ್ಭದಲ್ಲಿ ವಿಶೇಷ ಪ್ರಾರ್ಥನೆಯನ್ನು ಕೂಡ ಪ್ರಕಟಿಸಿದ್ದು, ಅದು ಸಂಸ್ಥೆಯ ಫೇಸ್‌ಬುಕ್ ಪುಟದಲ್ಲಿ ಲಭ್ಯವಿದೆ.
ಆಸ್ಟ್ರೇಲಿಯಾದ ಧರ್ಮಾಧ್ಯಕ್ಷರ ಪ್ರತಿಕ್ರಿಯೆ
ಆಸ್ಟ್ರೇಲಿಯಾದ ಜಗದ್ಗುರುಗಳ ಸೇವಾನಿಯೋಗದ ಸೇವಾಜಾಲಗಳ ಜಾಲತಾಣವು ಆಸ್ಟ್ರೇಲಿಯಾದ ಧರ್ಮಾಧ್ಯಕ್ಷರ ಸಮಾವೇಶದ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದೆ. ಆ ಹೇಳಿಕೆಯಲ್ಲಿ, “ಹಿಂಸೆ ಮತ್ತು ಭೀತಿಯ ಈ ಘಟನೆ ಆಸ್ಟ್ರೇಲಿಯನ್ನರನ್ನು ಆಳವಾಗಿ ಕದಡಿದೆ. ಅಮಾಯಕರ ಜೀವಗಳ ನಷ್ಟ ಅಳತೆಗತೀತ ದುರಂತ,” ಎಂದು ತಿಳಿಸಲಾಗಿದೆ. ಧರ್ಮಾಧ್ಯಕ್ಷರು ಈ ದಾಳಿಗೆ ಕಾರಣವಾದ ಪ್ರೇರಣೆಗಳು ಯೆಹೂದ್ಯ ವಿರೋಧಿ ದ್ವೇಷದೊಂದಿಗೆ ನೇರವಾಗಿ ಸಂಪರ್ಕ ಹೊಂದಿವೆ ಎಂದು ಹೇಳಿದ್ದಾರೆ.
“ಸಹಿಷ್ಣುತೆ ಮತ್ತು ಆತಿಥ್ಯಕ್ಕೆ ಹೆಸರಾದ ದೇಶದಲ್ಲಿ ಇಂತಹ ಅಂಧ ದ್ವೇಷವು ಸಮಾಜದ ಮೇಲೆ ಕಪ್ಪು ಚುಕ್ಕೆಯಂತಿದೆ; ಇದು ಯೆಹೂದ್ಯ ಸಹೋದರ–ಸಹೋದರಿಯರಿಗಷ್ಟೇ ಅಲ್ಲ, ನಮ್ಮೆಲ್ಲರಿಗೂ ಅಪಾಯವಾಗಿದೆ,” ಎಂದು ಎಚ್ಚರಿಸಿದ್ದಾರೆ. ಎಲ್ಲಾ ಆಸ್ಟ್ರೇಲಿಯನ್ನರನ್ನು ದ್ವೇಷ ಮತ್ತು ಹಿಂಸೆಯನ್ನು ತಿರಸ್ಕರಿಸಿ, ಕುಟುಂಬಗಳಲ್ಲಿ, ಸ್ನೇಹಿತರ ನಡುವೆ ಮತ್ತು ಸಮಾಜದಲ್ಲಿ ಶಾಂತಿಯ ನಿರ್ಮಾಪಕರಾಗುವಂತೆ ಮನವಿ ಮಾಡಿದ್ದಾರೆ.
ದಾಳಿಯ ಕುರಿತು ಲಭ್ಯವಾದ ಮಾಹಿತಿ
ಅಧಿಕಾರಿಗಳು ಈ ಘಟನೆಯನ್ನು “ಐಸಿಸ್ ಪ್ರೇರಿತ ಭಯೋತ್ಪಾದಕ ದಾಳಿ” ಎಂದು ಗುರುತಿಸಿದ್ದಾರೆ. ಆರೋಪಿಗಳು ತಂದೆ–ಮಗನಾಗಿದ್ದು, ತಂದೆಯನ್ನು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ; ಮಗನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವರದಿಗಳ ಪ್ರಕಾರ, ಕಿರಿಯ ಶಂಕಿತನು ಆಸ್ಟ್ರೇಲಿಯಾದಲ್ಲೇ ಜನಿಸಿದ ನಾಗರಿಕನಾಗಿದ್ದು, 2019ರ ಅಕ್ಟೋಬರ್‌ನಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯಾದ ಗುಪ್ತಚರ ಸಂಸ್ಥೆಗಳ ಗಮನಕ್ಕೆ ಬಂದಿದ್ದಾನೆ ಎಂದು ಪ್ರಧಾನಿ ಆಂಟನಿ ಅಲ್ಬನೀಸ್ ಸೋಮವಾರ ಪತ್ರಕರ್ತರಿಗೆ ತಿಳಿಸಿದ್ದಾರೆ.
ಪ್ರಸ್ತುತ 25 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಲ್ಲಿ 10 ಮಂದಿಯ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳ ಪೈಕಿ ಅಹ್ಮದ್ ಅಲ್ ಅಹ್ಮದ್ ಕೂಡ ಸೇರಿದ್ದು, ಆತ ದಾಳಿಕೋರನೊಬ್ಬನನ್ನು ಎದುರಿಸಿ, ಅವನ ಆಯುಧವನ್ನು ಕಸಿದುಕೊಂಡು, ಅದನ್ನು ನೆಲದ ಮೇಲೆ ಇಡುವ ದೃಶ್ಯ ವಿಡಿಯೋದಲ್ಲಿ ದಾಖಲಾಗಿದೆ. ಮೃತರಲ್ಲಿ ಒಬ್ಬ ರಬ್ಬಿ(ಧರ್ಮಗುರು), ನಾಜೀ ಹತ್ಯಾಕಾಂಡದಿಂದ ಪಾರಾಗಿದ್ದ ಒಬ್ಬರು ಹಾಗೂ 10 ವರ್ಷದ ಬಾಲಕಿ ಸೇರಿದ್ದಾರೆ ಎಂದು ಅಧಿಕಾರಿಗಳು ಮತ್ತು ಮಾಧ್ಯಮ ವರದಿಗಳು ತಿಳಿಸಿವೆ. ಘಟನೆಯ ನಂತರ ಸಾವಿರಾರು ಜನರು ಬಾಂಡಿಗೆ ಆಗಮಿಸಿ, ತಾತ್ಕಾಲಿಕ ಸ್ಮಾರಕದ ಬಳಿ ಹೂವಿಟ್ಟು ಗೌರವ ಸಲ್ಲಿಸಿದ್ದಾರೆ.