ದೇವರ ಪವಿತ್ರ ದಿನದ ಚಿಂತನೆ: ಸ್ನಾನಿಕ ಯೋವಾನ್ನರನ್ನು ಭೇಟಿಯಾದ ಜಾರ್ಜ್ ಬೇಲಿ
ಆಗಮನ ಕಾಲದ ಈ ದಿನಗಳಲ್ಲಿ ನನ್ನ ಅತಿ ಪ್ರಿಯ ಕ್ರಿಸ್ಮಸ್ ಸಂಬಂಧಿತ ಚಲನ ಚಿತ್ರಗಳಲ್ಲಿ ಒಂದಾದ It’s a Wonderul Life(1946) ಎಂಬ ಚಿತ್ರ ನನ್ನ ನೆನಪಿಗೆ ಬರುತ್ತದೆ. ಎಷ್ಟು ಬಾರಿ ವೀಕ್ಷಿಸಿದರೂ ಕಥಾನಾಯಕ ಜಾರ್ಜ್ ಬೇಲಿಯ ಕಥೆ ಆಳವಾದ ಪ್ರಭಾವವನ್ನು ಬೀರುತ್ತದೆ ಹಾಗೂ ಒಳಸತ್ಯವೊಂದನ್ನು ತೋರುತ್ತದೆ. ಬದುಕಿನ ಒತ್ತಡ, ದಣಿವು, ದಿಕ್ಕುತಪ್ಪಿದ ಭಾವ—ಇವೆಲ್ಲದರ ನಡುವೆ ತನ್ನ ಜೀವನಕ್ಕೆ ಮೌಲ್ಯವಿದೆಯೇ ಎಂಬ ಪ್ರಶ್ನೆಯಲ್ಲೇ ಜಾರ್ಜ್ ಸಿಲುಕುತ್ತಾನೆ. ಆದರೆ ಕ್ಲಾರೆನ್ಸ್ ಎಂಬ ಹೆಸರಿನಲ್ಲಿ ದೂತರಾಗಿ ಬಂದ ಸ್ನಾನಿಕ ಯೋವಾನ್ನರ ಮೂಲಕ, ಅವನು ತನ್ನ ಬದುಕಿನ ನಿಜಸ್ವರೂಪವನ್ನು ನೋಡುತ್ತಾನೆ: ತನ್ನಿಂದಾದ ಒಳಿತು-ಕೆಡುಕುಗಳ, ತನ್ನನ್ನು ಸದಾ ಕಾಯ್ದ ಕೃಪೆಯ ಅರಿವು ಅವನಿಗಾಗುತ್ತದೆ. ಚಿತ್ರದ ಅಂತ್ಯದಲ್ಲಿ ಬದಲಾಗುವುದು ಜಾರ್ಜ್‌ನ ಪರಿಸ್ಥಿತಿಗಳಲ್ಲ ಬದಲಿಗೆ ಆತನೇ. ಜೀವನದ ಸತ್ಯ ಮತ್ತು ಮೌಲ್ಯದ ಕುರಿತು ಆತನ ಕಣ್ಣುಗಳು ತೆರೆಯುತ್ತವೆ. ಆಗಮನ ಕಾಲವೂ ಇದೇ ರೀತಿಯಲ್ಲಿ ನಮ್ಮನು ಸತ್ಯದೆಡೆಗೆ ಜಾಗೃತಗೊಳಿಸಿ, ಪುನರ್ನಿರ್ಮಿಸಿ, ದೇವರ ಬೆಳಕಿನಲ್ಲಿ ನಡೆಯಲು ಮಾರ್ಗವಾಗಿದೆ.
ಇದೇ ಕರೆಯನ್ನು ಸ್ನಾನಿಕ ಯೋವಾನ್ನರು ಈ ಭಾನುವಾರದ ಶುಭಸಂದೇಶದಲ್ಲಿ ನಮಗೆ ನೀಡುತ್ತಾರೆ. ಜುದೇಯ ಪ್ರಾಂತ್ಯದಲ್ಲಿ "ಬೆಂಗಾಡಿನಲ್ಲಿ ಕೂಗುವವನ ಧ್ವನಿಯಾಗಿ ಬಂದ ಸ್ನಾನಿಕ ಯೋವಾನ್ನರು, “ಪಶ್ಚಾತ್ತಾಪ ಪಡಿರಿ, ಸ್ವರ್ಗ ಸಾಮ್ರಾಜ್ಯ ಸಮೀಪವಾಗಿದೆ” ಎಂದು ಗಂಭೀರವಾಗಿ ಎಚ್ಚರಿಸುತ್ತಾರೆ. ಇದು ಕೇವಲ ಒಂದು ಹಬ್ಬದ ಸಂದೇಶವಲ್ಲ—ಆಧ್ಯಾತ್ಮಿಕ ಎಚ್ಚರಿಕೆಯ ಕರೆಗಂಟೆ. ಯೋವಾನ್ನರು ನಿಂತಿದ್ದ ಮರಳುಗಾಡು ನಮ್ಮೊಳಗಿನ ಗೊಂದಲ, ದಣಿವು, ಭಯ, ದಿಕ್ಕುತೋಚದ ಕ್ಷಣಗಳನ್ನು ನೆನಪಿಸುತ್ತದೆ. ನಮ್ಮ ಮನಸ್ಸಿನ ಬತ್ತಿದ ಸೀಳುಗಳ ಮಧ್ಯೆ, ಯೋವಾನ್ನರ “ನಿಮ್ಮ ಹೃದಯಗಳನ್ನು ಸಿದ್ಧಪಡಿಸಿ, ದೇವರಿಗೆ ಮಾರ್ಗವನ್ನುಅಣಿಮಾಡಿ” ಎಂಬ ಸಂದೇಶ ತೀಕ್ಷ್ಣವಾಗಿ ಮಾರ್ದನಿಸುತ್ತದೆ.
ಕ್ರೈಸ್ತ ಜೀವನದಲ್ಲಿ “ಸಿದ್ಧತೆ” ಎನ್ನುವುದು ಕೇವಲ ಅಭ್ಯಾಸಗಳನ್ನು ಸರಿಪಡಿಸುಕೊಳ್ಳುವುದಲ್ಲ ಬದಲಿಗೆ ನಮ್ಮ ಹೃದಯವನ್ನು ದೇವರಿಗೆ ಪುನಃ ಒಪ್ಪಿಸುವುದು. ನಮ್ಮೊಳಗೆ ಕಠಿಣವಾಗಿರುವುದನ್ನು ದೇವರ ಕೃಪೆ ಮೃದುಗೊಳಿಸಲು ಬಿಡುವುದು, ನೋವು-ಬೇಸರ ನೆಲೆ ಮಾಡಿಕೊಂಡಿರುವ ಜಾಗಗಳನ್ನು ಸ್ವಚ್ಛಗೊಳಿಸುವುದು, ಫಲಕೊಡದ ಅಭ್ಯಾಸಗಳನ್ನು ಬಿಡುವುದು—ಇವೆಲ್ಲವೂ ಸಿದ್ಧತೆಯೇ. ಸ್ನಾನಿಕ ಯೋವಾನ್ನರ ಕರೆ ಕಠಿಣವಾಗಿದ್ದರೂ ಅದು ಪ್ರಾಮಾಣಿಕ ಕರೆ. ದೇವರು ನಮ್ಮನ್ನು ರೂಪಿಸಲು ಸ್ವಇಚ್ಛೆಯಿಂದ ನಾವು ಮಾಡುವ ಸಮರ್ಪಣೆ.
ಆಗಮನ ಕಾಲದ ಎರಡನೆಯ ವಾರವು ಮಾತೆ ಮರಿಯಮ್ಮನವರ ಹಬ್ಬಗಳಿಂದ ಕೂಡಿದೆ. ಸೋಮವಾರ ಆಚರಿಸಲ್ಪಡುತ್ತಿರುವ ಅಮಲೋದ್ಭವ ಮಾತೆಯ ಹಬ್ಬವು ವಿಮೋಚನೆ ಕೃಪೆಯಿಂದ ಆರಂಭವಾಗುತ್ತದೆ ಎಂಬುದನ್ನು ತಿಳಿಸುವುದರೊಂದಿಗೆ ಮಾತೆ ಮರಿಯ ನಿಷ್ಕಳಂಕಳಾಗಿ ಗರ್ಭ ಧರಿಸಿದ್ದು, ದೇವರನ್ನು ಪರಿಪೂರ್ಣರಾಗಿ ಸ್ವೀಕರಿಸುವುದನ್ನು ಕಲಿಸುತ್ತದೆ. ಯೋವಾನ್ನರು ಮನಪರಿವರ್ತನೆಯ ಮಾರ್ಗವನ್ನು ತೋರಿಸಿದರೆ ಮಾತೆ ಮರಿಯ ಭಗವಂತನಿಗೆ ಸಂಪೂರ್ಣವಾಗಿ ತೆರೆದಿರುವ ಹೃದಯದ ಸೌಂದರ್ಯವನ್ನು ತೋರಿಸುತ್ತಾರೆ.
ಬುಧವಾರ ಆಚರಿಸಲ್ಪಡುವ ಲೊರೆಟೊ ಮಾತೆಯ ಹಬ್ಬವು ವಿನಮ್ರತೆಯ ಪ್ರತೀಕವಾಗಿದೆ. ಲೊರೇಟೋದ ಪುಟ್ಟ ಮನೆಯು ವಿಧೇಯತೆಯ ಗುರುತಾಗಿಯೂ, ಪ್ರಭುವಿನ ಮಾನವಾತಾರದ ಮೂಲ ನೆಲೆಯಾಗಿಯೂ ನಿಂತಿದೆ. ಲೊರೆಟೊ, ದೇವರು ನಮ್ಮ ಜೀವನದ ಸಾಮಾನ್ಯ ಭಾಗಗಳಾದ ನಮ್ಮ ಮನೆಗಳಲ್ಲಿ, ಸಂಭಾಷಣೆಗಳಲ್ಲಿ ಮತ್ತು ದೈನಂದಿನ ಕಾರ್ಯಗಳಲ್ಲಿ ಜೊತೆಯಿರುತ್ತಾರೆ ಎಂಬುದಕ್ಕೆ ಪ್ರತೀಕವಾಗಿದೆ. ಯೋವಾನ್ನರು "ಮಾರ್ಗವನ್ನು ಸಿದ್ಧಮಾಡಿ" ಎಂದು ಕರೆ ಕೊಡುತ್ತಾರೆ, ಲೊರೆಟೊ ಆ ಮಾರ್ಗ ಎಲ್ಲಿ ಆರಂಭವಾ ಗು ತ್ತದೆ ಎಂಬುದನ್ನು ತೋರಿಸುತ್ತದೆ.
ಶುಕ್ರವಾರ ಸ್ಮರಿಸುವ ಅಮೆರಿಕನ್ನರ ತಾಯಿಯಾದ ಗ್ವಾಡಲೂಪೆಯ ಮಾತೆ, ಬಡವರ ಹಾಗೂ ನೊಂದವರ ಸಾಂತ್ವನವಾಗಿ ನಿಲ್ಲುತ್ತಾರೆ. ನಿಮ್ಮ ತಾಯಿಯಾದ ನಾನು ಇಲ್ಲಿಲ್ಲವೇ ಎಂದು ಸಂತ ಜುವಾನ್ ಡಿಯೆಗೊರವರಿಗೆ ನುಡಿದ ಮಾತು, ದೇವರ ಸಾಮೀಪ್ಯದ ಮಧುರತೆಯನ್ನು ತೋರಿಸುತ್ತದೆ. ಯೋವಾನ್ನರ ಮಾತುಗಳು ಮಾನವ ಮಾರ್ಗಗಳಿಗೆ ಸವಾಲೆಸೆದರೆ, ಮಾತೆಯ ಮಾತುಗಳು ಸಾಂತ್ವನವಾಗಿವೆ.
ಒಟ್ಟಾಗಿ, ಸ್ನಾನಿಕ ಯೋವಾನ್ನರೂ, ಮಾತೆ ಮರಿಯಮ್ಮನವರೂ ಈ ಆಗಮನ ಕಾಲದಲ್ಲಿ ಮನಪರಿವರ್ತನೆಯ ಕರೆಯಾಗಿಯೂ, ದೇವರು ನಮ್ಮೊಡನಿರುವರು ಎಂಬುದಕ್ಕೆ ಸಾಕ್ಷಿಗಳಾಗಿಯೂ ನಿಂತಿದ್ದಾರೆ.
ಈ ಪವಿತ್ರ ಕಾಲದ ಪಯಣದಲ್ಲಿರುವ ನಮ್ಮನ್ನು ಸ್ನಾನಿಕ ಯೋವಾನ್ನರ ಕರೆಯು ಎಚ್ಚರಿಸಲಿ, ಮಾತೆ ಮರಿಯಮ್ಮನವರು ಜೊತೆ ನಡೆಯಲಿ ಹಾಗೂ ಪ್ರಭು ಯೇಸುವು ತೆರೆದ ನಮ್ಮ ಹೃದಯೊಳಗೆ ಆಗಮಿಸಲಿ.