ಯೆಹೂದ್ಯ ಸಮುದಾಯದ ಮೇಲೆ ನಡೆದ ದಾಳಿ ನಮ್ಮೆಲ್ಲರ ಮೇಲಿನ ದಾಳಿ: ಸಿಡ್ನಿಯ ಮಹಾಧರ್ಮಾಧ್ಯಕ್ಷರ ಹೇಳಿಕೆ
ಡಿಸೆಂಬರ್ 14ರ ಸಂಜೆ, ಹನುಕ್ಕಾ ಹಬ್ಬದ ಅಂಗವಾಗಿ ಆಯೋಜಿಸಿದ್ದ ಸಮುದಾಯ ಕಾರ್ಯಕ್ರಮವು ದುರಂತದ ರೂಪ ಪಡೆದಿತು. ಬಾಂಡಿ ಬೀಚ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ 16 ಮಂದಿ ಸಾವನ್ನಪ್ಪಿದ್ದು, ಅವರಲ್ಲಿ ಒಂದು ಪುಟ್ಟ ಮಗು ಕೂಡ ಸೇರಿದೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಘಟನೆಗೆ ಸಂಬಂಧಿಸಿ ವ್ಯಾಟಿಕನ್ ಸುದ್ದಿ ಸಂಸ್ಥೆಯ ಕ್ರಿಸ್ಟೊಫರ್ ವೆಲ್ಸ್ ಅವರೊಂದಿಗೆ ಮಾತನಾಡಿದ ಬಾಂಡಿ ಬೀಚ್‌ನ ಸೈಂಟ್ ಆ್ಯನ್ ಮತ್ತು ಸೈಂಟ್ ಪ್ಯಾಟ್ರಿಕ್ ಧರ್ಮಕೇಂದ್ರಗಳ ಗುರು ಫಾದರ್ ಅಂಥೋನಿ ರಾಬಿ, ದಾಳಿ ನಡೆದ ಸುದ್ದಿ ತಿಳಿದ ಕ್ಷಣವನ್ನು “ತೀವ್ರ ಆಘಾತ ಮತ್ತು ಮನೋವ್ಯಥೆಯ ಕ್ಷಣ” ಎಂದು ವಿವರಿಸಿದರು.
ಸಿಡ್ನಿಯ ಬಹುಪಾಲು ಜನಸಂಖ್ಯೆ ಯುವಕರಾಗಿರುವುದರಿಂದ, ಆ ಸಮಯದಲ್ಲಿ ಬೀಚ್‌ನಲ್ಲಿ ಇದ್ದ ಯುವಕರ ಬಗ್ಗೆ ತಮಗೆ ಹೆಚ್ಚಿನ ಆತಂಕವಿತ್ತು ಎಂದು ಅವರು ಹೇಳಿದರು. ದಾಳಿಯಿಂದ ಪಾರಾಗುತ್ತಿದ್ದ ಒಬ್ಬ ಧರ್ಮಕೇಂದ್ರದ ಭಕ್ತರೊಂದಿಗೆ ತಾವು ನೇರವಾಗಿ ಮಾತನಾಡಿದ್ದಾಗಿ ಗುರು ರಾಬಿ ನೆನಪಿಸಿಕೊಂಡರು.
ಈ ದಾಳಿ ಹಲವರಿಗೆ ಕಳೆದ ಏಪ್ರಿಲ್‌ನಲ್ಲಿ ಬಾಂಡಿ ಜಂಕ್ಷನ್‌ನಲ್ಲಿ ನಡೆದ ಮತ್ತೊಂದು ಹಿಂಸಾಚಾರದ ನೆನಪನ್ನು ಮತ್ತೆ ಜೀವಂತಗೊಳಿಸಿತು. ಆ ಘಟನೆಯಲ್ಲಿ ಆರು ಮಂದಿ ಸಾವನ್ನಪ್ಪಿದ್ದರು. ಇಂತಹ ದಾಳಿಗಳು ಸಾಮಾನ್ಯವಾಗಿಬಿಡುವವೆಯೇ ಎಂಬ ಭಯ ಸಮುದಾಯದಲ್ಲಿ ಮನೆ ಮಾಡುತ್ತಿದೆ ಎಂದು ಗುರು ರಾಬಿ ಅಭಿಪ್ರಾಯಪಟ್ಟರು.
ಪ್ರಾರ್ಥನೆ ಮತ್ತು ಐಕ್ಯತೆಯ ಪ್ರತಿಕ್ರಿಯೆ
ಗುರು ರಾಬಿ ಅವರ ಪ್ರಕಾರ, ಸ್ಥಳೀಯ ಕಥೋಲಿಕ ಧರ್ಮಸಭೆ ಯೆಹೂದ್ಯ ಸಮುದಾಯದೊಂದಿಗೆ ಐಕ್ಯತೆಯನ್ನು ವ್ಯಕ್ತಪಡಿಸುತ್ತಿದ್ದು, ಆಧ್ಯಾತ್ಮಿಕ ಮತ್ತು ಮಾನಸಿಕ ಬೆಂಬಲವನ್ನು ನೀಡುತ್ತಿದೆ. ಬಾಂಡಿ ಬೀಚ್‌ನ ಕಥೋಲಿಕ ಧರ್ಮಕೇಂದ್ರಗಳು ದಿನವಿಡೀ ತೆರೆಯಲ್ಪಟ್ಟಿದ್ದು, ದಾಳಿಯ ನಂತರದ ದಿನಗಳಲ್ಲಿ ಅನೇಕರು ಪ್ರಾರ್ಥನೆಗಾಗಿ ಅಲ್ಲಿ ಸೇರಿದರು.
ಸಂತ್ರಸ್ತರು ಮತ್ತು ಮೃತರ ಗೌರವಾರ್ಥ ಸ್ಮರಣಾರ್ಥ ಬಲಿಪೂಜೆ ಆಯೋಜಿಸಲಾಗಿದ್ದು, ಅದಕ್ಕೆ ಅಪಾರ ಸಂಖ್ಯೆಯಲ್ಲಿ ಜನರು ಹಾಜರಿದ್ದರು. ಬಲಿಪೂಜೆಯ ನಂತರ ಪವಿತ್ರ ಪ್ರಸಾದದ ಆರಾಧನೆಯಲ್ಲಿ ಜನರು ದೀರ್ಘಕಾಲ ತಂಗಿದ್ದರು ಎಂದು ಗುರು ರಾಬಿ ತಿಳಿಸಿದರು.
ಅವರು ಜಗತ್ತಿನಾದ್ಯಂತ ಇರುವ ಜನರಿಂದ ಪ್ರಾರ್ಥನೆಗಳ ಬೆಂಬಲವನ್ನು ಕೋರಿದರು. “ಇಲ್ಲಿ ಇನ್ನೂ ಭಯಭೀತರಾಗಿರುವ ಮತ್ತು ಅಸ್ಥಿರ ಮನಸ್ಥಿತಿಯಲ್ಲಿರುವ ಜನರಿಗೆ ಸಾಂತ್ವನ ಮತ್ತು ಧೈರ್ಯ ಸಿಗಲೆಂದು ಎಲ್ಲರೂ ಪ್ರಾರ್ಥಿಸಬೇಕು” ಎಂದು ವಿನಂತಿಸಿದ್ದಾರೆ
ಯೆಹೂದ್ಯ ವಿರೋಧಕ್ಕೆ ಅಂತ್ಯ ಅಗತ್ಯ
ಈ ದುರಂತದ ಹಿನ್ನೆಲೆಯಲ್ಲಿ ಸಿಡ್ನಿಯ ಕಥೋಲಿಕ ಮಹಾಧರ್ಮಾಧ್ಯಕ್ಷರಾದ ಪೂಜ್ಯ ಅಂಥೋನಿ ಫಿಷರ್ ಅವರು ಪ್ರಕಟಿಸಿದ ಹೇಳಿಕೆಯಲ್ಲಿ, ಈ ಭಯೋತ್ಪಾದಕ ದಾಳಿ “ಮಾನವ ಜೀವದ ಮೇಲಿನ ನಿರ್ದಯ ಮತ್ತು ನಿಸ್ಸಂವೇದನೀಯ ಅವಮಾನ” ಎಂದು ಖಂಡಿಸಿದರು. ಯೆಹೂದ್ಯರ ವಿರುದ್ಧದ ದ್ವೇಷವನ್ನು “ಮಾತಿನಿಂದ ಹೇಳಲಾಗದ ದುಷ್ಟತೆ” ಎಂದು ವರ್ಣಿಸಿ, ಪ್ರತಿಯೊಬ್ಬ ಆಸ್ಟ್ರೇಲಿಯನ್ನರೂ ಇದನ್ನು ತಿರಸ್ಕರಿಸಬೇಕು ಎಂದು ಹೇಳಿದರು.
ಯಾವುದೇ ಒಬ್ಬ ಯೆಹೂದ್ಯನ ಮೇಲೆ ನಡೆಯುವ ದಾಳಿ ಸಂಪೂರ್ಣ ಯೆಹೂದ್ಯ ಸಮುದಾಯದ ಮೇಲಿನ ದಾಳಿ ಎಂದು ಅವರು ಸ್ಪಷ್ಟಪಡಿಸಿದರು. ಇಂತಹ ಕೃತ್ಯಗಳು ಆಸ್ಟ್ರೇಲಿಯ ಜೀವನಶೈಲಿಗೆ ಅವಮಾನವಾಗಿದ್ದು, ಅವನ್ನು ನಿರ್ವಿವಾದವಾಗಿ ಖಂಡಿಸಬೇಕು ಮತ್ತು ಸಂತ್ರಸ್ತರಿಗೆ ಶೀಘ್ರ ನ್ಯಾಯ ದೊರಕಿಸಬೇಕು ಎಂದರು.
ಕಳೆದ ಎರಡು ವರ್ಷಗಳಿಂದ ಸಾರ್ವಜನಿಕ ವಲಯದಲ್ಲಿ ಯೆಹೂದ್ಯ ವಿರೋಧಿ ವಾತಾವರಣ ತೀವ್ರಗೊಂಡಿದ್ದು, ಭಯೋತ್ಪಾದನೆ, ವಿಭಜನೆ ಮತ್ತು ಉಗ್ರ ಭಾಷೆಯ ಸಾಮಾನ್ಯೀಕರಣಕ್ಕೆ ಕಾರಣವಾಗಿದೆ ಎಂದು ಮಹಾಧರ್ಮಾಧ್ಯಕ್ಷರು ಎಚ್ಚರಿಸಿದರು. “ಇದು ನಿಲ್ಲಲೇಬೇಕು” ಎಂದು ಅವರು ತಾಕೀತು ಮಾಡಿದರು.
ಈ ದಾಳಿ ತಮ್ಮ ವೈಯಕ್ತಿಕ ಬದುಕನ್ನೂ ತಟ್ಟಿದೆ ಎಂದು ಹೇಳಿದ ಮಹಾಧರ್ಮಾಧ್ಯಕ್ಷರು, ತಮ್ಮ ಅಜ್ಜಿ ಯಹೂದಿ ಸಮುದಾಯಕ್ಕೆ ಸೇರಿದವರಾಗಿದ್ದರು ಎಂದು ನೆನಪಿಸಿಕೊಂಡರು. ಆದರೆ ಇದು ಕೇವಲ ವೈಯಕ್ತಿಕ ವಿಚಾರವಲ್ಲ; ಎಲ್ಲ ಕ್ರೈಸ್ತರಿಗೂ ಇದು ಸಂಬಂಧಿಸಿದೆ ಎಂದರು.“ನಾವು ಯೆಹೂದ್ಯರ ಮಕ್ಕಳೇ. ಆದ್ದರಿಂದ ಯೆಹೂದ್ಯರ ಮೇಲೆ ದಾಳಿ ಎಂದರೆ ನಮ್ಮೆಲ್ಲರ ಮೇಲಿನ ದಾಳಿ,” ಎಂದು ಅವರು ಹೇಳಿದರು.
ಕಥೋಲಿಕ ಸಮುದಾಯಕ್ಕೆ ಸವಾಲು
ಈ ದುರ್ಘಟನೆಯ ನಡುವೆಯೂ, ಪೊಲೀಸರು, ಆಂಬ್ಯುಲೆನ್ಸ್ ಸಿಬ್ಬಂದಿ, ಜೀವರಕ್ಷಕರು ಮತ್ತು ಸಹಾಯ ಮಾಡಿದ ಸಾಮಾನ್ಯ ನಾಗರಿಕರ ಧೈರ್ಯ ಮತ್ತು ಮಾನವೀಯತೆ “ಒಳ್ಳೆಯತನದ ಚಿಹ್ನೆ” ಎಂದು ಮಹಾಧರ್ಮಾಧ್ಯಕ್ಷರು ಹೇಳಿದರು.
ಯೆಹೂದ್ಯ ಸಮುದಾಯಕ್ಕೆ ತಮ್ಮ ಆಳವಾದ ಸಂತಾಪವನ್ನು ವ್ಯಕ್ತಪಡಿಸಿದ ಅವರು, “ನಾವು ನಮ್ಮ ಯೆಹೂದ್ಯ ನೆರೆಯವರನ್ನು ಮತ್ತು ಸ್ನೇಹಿತರನ್ನು ಪ್ರೀತಿಸುತ್ತೇವೆ. ಅವರನ್ನು ಸುರಕ್ಷಿತವಾಗಿರಿಸಲು ಅವಶ್ಯಕವಾದುದೆಲ್ಲವನ್ನೂ ಮಾಡಬೇಕು” ಎಂದು ಹೇಳಿದರು.
ಹನುಕ್ಕಾ ಮತ್ತು ಕ್ರಿಸ್ಮಸ್ ಎರಡೂ ಒಂದೇ ಸಮಯದಲ್ಲಿ ಆಚರಿಸಲ್ಪಡುವ ಹಬ್ಬಗಳಾಗಿದ್ದು, ನಂಬಿಕೆ, ಕುಟುಂಬ, ಬೆಳಕು ಮತ್ತು ದಾನವನ್ನು ಕೇಂದ್ರವಾಗಿಟ್ಟುಕೊಂಡಿವೆ ಎಂದು ಅವರು ಸ್ಮರಿಸಿದರು. ದೇವರು ನಮ್ಮ ನಾಯಕರಿಗೆ ಜ್ಞಾನವನ್ನು ದಯಪಾಲಿಸಿ, ಈ ಸಮಯದಲ್ಲಿ ಸಮುದಾಯವನ್ನು ಗುಣಪಡಿಸಲಿ ಮತ್ತು ನಿರೀಕ್ಷೆಯನ್ನು ನೀಡಲಿ ಎಂದು ಪ್ರಾರ್ಥಿಸಿದರು.